AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

70 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ವಿಮೆ! ಯೋಜನೆ ಕುರಿತಾದ ಮಾಹಿತಿ ಇಲ್ಲಿದೆ

ಆಯುಷ್ಮಾನ್ ವಯ ವಂದನಾ ಕಾರ್ಡ್ 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಅವರ ಆದಾಯ ಅಥವಾ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಉಚಿತ ವೈದ್ಯಕೀಯ ಚಿಕಿತ್ಸೆಗಳನ್ನು ನೀಡುವ ಗುರಿಯನ್ನು ಹೊಂದಿದೆ. ಈ ಉಪಕ್ರಮವು ದೇಶದ ಹಿರಿಯ ನಾಗರಿಕರಿಗೆ ಕೈಗೆಟಕುವ ದರದ ಆರೋಗ್ಯ ಸೇವೆಯನ್ನುನೀಡುವ ಗುರಿಯನ್ನು ಹೊಂದಿದೆ. ಒಂದು ತಿಂಗಳ ಹಿಂದೆ ಈ ಯೋಜನೆ ಪ್ರಾರಂಭವಾಗಿದ್ದು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸುಮಾರು 14 ಲಕ್ಷ ಆಯುಷ್ಮಾನ್ ವಯ ವಂದನಾ ಕಾರ್ಡ್ ಗಳನ್ನು ರಚಿಸಲಾಗಿದೆ. ಈ ಯೋಜನೆಯ ಕುರಿತಾದ ಮಾಹಿತಿ ಇಲ್ಲಿದೆ.

70 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ವಿಮೆ! ಯೋಜನೆ ಕುರಿತಾದ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 30, 2024 | 5:09 PM

ಆಯುಷ್ಮಾನ್ ವಯ ವಂದನಾ ಕಾರ್ಡ್ ಆರೋಗ್ಯ ಕಾರ್ಡ್ ಆಗಿದ್ದು, 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಅವರ ಆದಾಯ ಅಥವಾ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಉಚಿತ ವೈದ್ಯಕೀಯ ಚಿಕಿತ್ಸೆಗಳನ್ನು ನೀಡುವ ಗುರಿಯನ್ನು ಹೊಂದಿದೆ. ಹಾಗಾಗಿ ಈಗ 70 ವರ್ಷಕ್ಕೂ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಆಯುಷ್ಮಾನ್ ವಯ ವಂದನಾ (AVV) ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ. ಈ ಉಪಕ್ರಮವು ದೇಶದ ಹಿರಿಯ ನಾಗರಿಕರಿಗೆ ಕೈಗೆಟಕುವ ದರದ ಆರೋಗ್ಯ ಸೇವೆಯನ್ನು ನೀಡುವ ಗುರಿಯನ್ನು ಹೊಂದಿದೆ. ಒಂದು ತಿಂಗಳ ಹಿಂದೆ ಈ ಯೋಜನೆ ಪ್ರಾರಂಭವಾಗಿದ್ದು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸುಮಾರು 14 ಲಕ್ಷ ಆಯುಷ್ಮಾನ್ ವಯ ವಂದನಾ ಕಾರ್ಡ್ ಗಳನ್ನು ರಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಪ್ರತಾಪರಾವ್ ಜಾಧವ್ ತಿಳಿಸಿದ್ದಾರೆ.

ಅಕ್ಟೋಬರ್ 29 ರಂದು, ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (AB PM-JAY) ವಿಸ್ತರಿತ ಆರೋಗ್ಯ ವಿಮೆ ಯೋಜನೆಯಾಗಿ ಇದನ್ನು ಜಾರಿಗೆ ತಂದಿದೆ. ಇದರಲ್ಲಿ 70 ವರ್ಷ ಮೇಲ್ಪಟ್ಟವರು ರೂ. 5 ಲಕ್ಷದವರೆಗೂ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅರ್ಹರಾಗಿದ್ದಾರೆ. ಇದು ಹಿರಿಯ ನಾಗರಿಕರಿಗೆ ನಗದು ರಹಿತ (Cashless) ಆಸ್ಪತ್ರೆ ಸೌಲಭ್ಯ ಕಲ್ಪಿಸುವ ಮೂಲಕ ಹಣಕಾಸಿನ ಸಮಸ್ಯೆಯಿಲ್ಲದಂತೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಲಿದೆ. ಹಾಗಾಗಿ ವಯಸ್ಸಾದವರು ತಮ್ಮ ಸಾಮಾಜಿಕ- ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

14 ಲಕ್ಷ ಆಯುಷ್ಮಾನ್ ವಯ್ ವಂದನಾ ಕಾರ್ಡ್ ರಚನೆ

ಆಯುಷ್ಮಾನ್ ವಯ ವಂದನಾ ಯೋಜನೆಗೆ ದೇಶಾದ್ಯಂತ 6 ಕೋಟಿ ಹಿರಿಯ ನಾಗರಿಕರು ಅರ್ಹರಾಗಿದ್ದು, 4.5 ಕೋಟಿ ಕುಟುಂಬಗಳಿಗೆ ಸಹಾಯ ಮಾಡುತ್ತದೆ. ನವೆಂಬರ್ 25 ರವರೆಗೆ, 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಈ ಯೋಜನೆಯಡಿ ಸುಮಾರು 14 ಲಕ್ಷ ಆಯುಷ್ಮಾನ್ ವಯ್ ವಂದನಾ ಕಾರ್ಡ್ಗಳನ್ನು ರಚಿಸಲಾಗಿದೆ ಎಂದು ಜಾಧವ್ ಹೇಳಿದ್ದಾರೆ. ಈ ಯೋಜನೆಯ ಅಂದಾಜು ವೆಚ್ಚ 3,437 ಕೋಟಿ ರೂ. ಇದರಲ್ಲಿ 2,165 ಕೋಟಿ ರೂ.ಗಳನ್ನು 2024- 25 ಮತ್ತು 2025- 26ರ ಹಣಕಾಸು ವರ್ಷದಲ್ಲಿ ಕೇಂದ್ರ ಪಾಲಿನ ವೆಚ್ಚವಾಗಿ ಮಾಡುವ ಸಾಧ್ಯತೆಯಿದೆ ಎಂದು ಸಚಿವಾಲಯ ತಿಳಿಸಿದೆ. ಈ ಯೋಜನೆಯಡಿ ಒಟ್ಟು 29,870 ಆಸ್ಪತ್ರೆಗಳನ್ನು ಪಟ್ಟಿ ಮಾಡಲಾಗಿದ್ದು, ಈ ಪೈಕಿ 13,173 ಖಾಸಗಿ ಆಸ್ಪತ್ರೆಗಳಾಗಿವೆ.

ಇದನ್ನೂ ಓದಿ: ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ 10 ಬಿಲಿಯನ್ ಡಾಲರ್ ಮೌಲ್ಯದ ಐಫೋನ್ ತಯಾರಿಕೆ; 10 ಬಿಲಿಯನ್ ಡಾಲರ್​ಗೂ ಅಧಿಕ ಸ್ಮಾರ್ಟ್​ಫೋನ್ ರಫ್ತು

ಯಾವ ರೀತಿಯ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುತ್ತದೆ?

ಆಯುಷ್ಮಾನ್ ಭಾರತ್ ಯೋಜನೆಯು ಸುಮಾರು 1,929 ವೈದ್ಯಕೀಯ ಕಾರ್ಯವಿಧಾನಗಳಿಗೆ ಸಂಬಂಧಿಸಿದ ನಗದು ರಹಿತ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಮಿತಿ ಇಲ್ಲದ ಔಷಧಿಗಳು, ವೈದ್ಯರ ಶುಲ್ಕಗಳು, ಆಸ್ಪತ್ರೆ ಪೂರ್ವ ಮತ್ತು ನಂತರದ ರೋಗನಿರ್ಣಯ ಮತ್ತು ಔಷಧಿಗಳು ಇತ್ಯಾದಿ ಎಲ್ಲಾ ಚಿಕಿತ್ಸೆಯ ಶುಲ್ಕವನ್ನು ಒಳಗೊಂಡಿರುತ್ತದೆ. ಹಾಗಾಗಿ ಮೂಳೆಗಳು, ಹೃದಯ ಮತ್ತು ಕ್ಯಾನ್ಸರ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವ ಎಲ್ಲಾ ವಯಸ್ಸಿನ ಜನರು ಸಹ ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೆ ಹೀಮೋಡಯಾಲಿಸಿಸ್ / ಪೆರಿಟೋನಿಯಲ್ ಡಯಾಲಿಸಿಸ್, ತೀವ್ರವಾದ ಇಸ್ಕೀಮಿಕ್ ಸ್ಟ್ರೋಕ್, ಅಧಿಕ ರಕ್ತದೊತ್ತಡ, ಪಿಟಿಸಿಎ, ಡಯಾಗ್ನೋಸ್ಟಿಕ್ ಆಂಜಿಯೋಗ್ರಾಮ್ ಮುಂತಾದ ಚಿಕಿತ್ಸಾ ಸೇವೆಗಳು ಅರ್ಹ ಹಿರಿಯ ನಾಗರಿಕರಿಗೆ ಲಭ್ಯವಿದೆ ಎಂದು ಸಚಿವಾಲಯ ತಿಳಿಸಿದೆ. ಇದಲ್ಲದೆ, ಸ್ಥಳೀಯ ಸಂದರ್ಭಕ್ಕೆ ಅನುಗುಣವಾಗಿ ಆರೋಗ್ಯ ಪ್ರಯೋಜನಗಳನ್ನು ಮತ್ತಷ್ಟು ಕಸ್ಟಮೈಸ್ ಮಾಡಲು ರಾಜ್ಯಗಳಿಗೆ ಆದೇಶ ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ