ಲಂಡನ್, ಆಗಸ್ಟ್ 4: ಅಮೆರಿಕದ ಸೆಂಟ್ರಲ್ ಬ್ಯಾಂಕ್ನಿಂದ ಬಡ್ಡಿದರ ಹೆಚ್ಚಳವಾದ ಬೆನ್ನಲ್ಲೇ ಇಂಗ್ಲೆಂಡ್ನ ಕೇಂದ್ರೀಯ ಬ್ಯಾಂಕ್ (Bank of England) ಕೂಡ ಬಡ್ಡಿದರ ಏರಿಸಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ 25 ಮೂಲಾಂಕಗಳಷ್ಟು ಬಡ್ಡಿ ಹೆಚ್ಚಿಸಿದೆ. ಇದರೊಂದಿಗೆ ಇಂಗ್ಲೆಂಡ್ನಲ್ಲಿ ಬ್ಯಾಂಕ್ ಬಡ್ಡಿ ದರ ಶೇ. 5.25ಕ್ಕೆ ಹೋಗಿದೆ. ಹಣದುಬ್ಬರ (Inflation) ಇನ್ನೂ ಮಿತಿಮೀರಿದ ಸ್ಥಿತಿಯಲ್ಲಿರುವುದರಿಂದ ಬ್ಯಾಂಕ್ ಆಫ್ ಇಂಗ್ಲೆಂಡ್ ಬಡ್ಡಿ ದರ ಏರಿಸುವುದು ನಿರೀಕ್ಷಿತವಾಗಿತ್ತು. ಇಂಗ್ಲೆಂಡ್ನ ಈ ಸೆಂಟ್ರಲ್ ಬ್ಯಾಂಕ್ ಸತತ 14ನೇ ಬಾರಿಗೆ ಬಡ್ಡಿದರ ಹೆಚ್ಚಿಸಿರುವುದು. ಅಷ್ಟೇ ಅಲ್ಲ, ಕಳೆದ 14 ವರ್ಷದಲ್ಲೇ ಬಡ್ಡಿದರ ಗರಿಷ್ಠ ಮಟ್ಟಕ್ಕೆ ಹೋಗಿದೆ.
ಬ್ರಿಟನ್ ದೇಶದಲ್ಲಿ 2022ರ ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಹೋಗಿತ್ತು. ಆಗಿನ ಹಣದುಬ್ಬರ ದರ ಶೇ. 11.10ರಷ್ಟು ಇತ್ತು. ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಯಾವುದೇ ಸೆಂಟ್ರಲ್ ಬ್ಯಾಂಕ್ ಕೈಯಲ್ಲಿ ಇರುವ ಪ್ರಮುಖ ಅಸ್ತ್ರವೆಂದರೆ ಅದು ಬಡ್ಡಿದರ ಹೆಚ್ಚಳ. ಭಾರತ, ಅಮೆರಿಕ ಸೇರಿದಂತೆ ಬಹುತೇಕ ಎಲ್ಲಾ ದೇಶಗಳಲ್ಲೂ ಈ ಅಸ್ತ್ರ ಉಪಯೋಗಿಸುವುದು ಸಾಮಾನ್ಯ. ನಿರೀಕ್ಷೆಯಂತೆ ಬ್ಯಾಂಕ್ ಆಫ್ ಇಂಗ್ಲೆಂಡ್ ಸತತ 14 ಬಾರಿ ಬಡ್ಡಿ ದರ ಹೆಚ್ಚಿಸಿದೆ.
ಇದನ್ನೂ ಓದಿ: Development: ಚೀನಾದ್ದು ಆಯಿತು, ಮುಂದೇನಿದ್ದರೂ ಭಾರತದ ಯುಗ; ಕಡಿಮೆ ತಲಾದಾಯವೇ ದೇಶದ ಓಟಕ್ಕೆ ಶಕ್ತಿ- ಮಾರ್ಗನ್ ಸ್ಟಾನ್ಲೀ
ಇದರ ಪರಿಣಾಮವಾಗಿ ಬ್ರಿಟನ್ನಲ್ಲಿ ಈಗ ಹಣದುಬ್ಬರ ಶೇ. 7.9ರಷ್ಟಕ್ಕೆ ಬಂದು ನಿಂತಿದೆ. ಮೇ ತಿಂಗಳಲ್ಲಿ ಶೇ. 8.7ರಷ್ಟಿದ್ದ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ. 7.9ಕ್ಕೆ ಇಳಿದಿರುವುದು ಗಮನಾರ್ಹ. ಆದರೆ, ಬ್ಯಾಂಕ್ ಆಫ್ ಇಂಗ್ಲೆಂಡ್ನ ಹಣದುಬ್ಬರ ಮಿತಿಗೆ ಇಟ್ಟಿರುವ ಗುರಿ ಶೇ. 2ರಷ್ಟು. ಈ ಗುರಿಗಿಂತ ಹಣದುಬ್ಬರ 4 ಪಟ್ಟು ಮೇಲೆಯೇ ಇದೆ. ಇದನ್ನು ಇನ್ನೂ ಇಳಿಸುವ ಪ್ರಯತ್ನ ಮುಂದಿನ ದಿನಗಳಲ್ಲೂ ನಡೆಯಲಿದೆ. ಇದೇ ರೀತಿ ಬಡ್ಡಿ ದರ ಹೆಚ್ಚಿಸುತ್ತಾ ಹೊಗುವ ನಿರೀಕ್ಷೆ ಇದೆ.
ಆದರೆ, ಬ್ಯಾಂಕ್ ಬಡ್ಡಿದರ ಏರಿಕೆಯಿಂದ ಹಣದುಬ್ಬರಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದಾದರೂ, ಅದರ ಸೈಡ್ ಎಫೆಕ್ಟ್ ಆಗಿ ಆರ್ಥಿಕತೆಯ ಬೆಳವಣಿಗೆ ತುಸು ಕುಂಠಿತಗೊಳ್ಳಬಹುದು. ರಿಯಲ್ ಎಸ್ಟೇಟ್, ವಾಹನ ಇತ್ಯಾದಿ ಕ್ಷೇತ್ರಗಳಿಗೆ ಹಿನ್ನಡೆ ತರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ