Corruption: ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ; 10 ಅಧಿಕಾರಿಗಳ ಬಲವಂತದ ನಿವೃತ್ತಿಗೆ ಸಚಿವ ಅಶ್ವಿನಿ ವೃಷ್ಣವ್ ಸೂಚನೆ
Forced Retirement; ದೂರಸಂಪರ್ಕ ಇಲಾಖೆಯಲ್ಲಿ ಅಧಿಕಾರಿಗಳ ಬಲವಂತದ ನಿವೃತ್ತಿಗೆ ಸೂಚಿಸಿರುವುದು ಇದೇ ಮೊದಲಾಗಿದೆ. ರೈಲ್ವೆ ಇಲಾಖೆಯ 40 ಮಂದಿ ಅಧಿಕಾರಿಗಳ ಬಲವಂತದ ನಿವೃತ್ತಿಗೆ ಇತ್ತೀಚೆಗೆ ಸೂಚಿಸಲಾಗಿತ್ತು. ಭ್ರಷ್ಟಾಚಾರ ವಿರುದ್ಧದ ಶೂನ್ಯ ಸಹನೆ ನೀತಿಯಡಿ ಈ ಕ್ರಮ ಕೈಗೊಳ್ಳಲಾಗಿದೆ.
ನವದೆಹಲಿ: ಭ್ರಷ್ಟಾಚಾರದ (Corruption) ವಿರುದ್ಧ ಮತ್ತೊಮ್ಮೆ ಕಠಿಣ ಕ್ರಮದ ಸಂದೇಶ ರವಾನಿಸಿರುವ ಕೇಂದ್ರ ಸರ್ಕಾರ, ದೂರಸಂಪರ್ಕ ಇಲಾಖೆಯ (Department of Telecom) 10 ಮಂದಿ ಉನ್ನತ ಅಧಿಕಾರಿಗಳ ಬಲವಂತದ ನಿವೃತ್ತಿಗೆ (Forced Retirement) ಸೂಚಿಸಿದೆ. ಈ ಕುರಿತ ಪ್ರಸ್ತಾವಕ್ಕೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅನುಮೋದನೆ ನೀಡಿದ್ದಾರೆ. ಬಲವಂತದ ನಿವೃತ್ತಿಯಾಗಲಿರುವ ಅಧಿಕಾರಿಗಳಲ್ಲಿ ಜಂಟಿ ಕಾರ್ಯದರ್ಶಿ ಕೂಡ ಸೇರಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ‘ಉತ್ತಮ ಆಡಳಿತ ದಿನ’ದ (Good Governance Day) ಮುನ್ನಾ ದಿನವೇ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ಗಮನಾರ್ಹ.
ದೂರಸಂಪರ್ಕ ಇಲಾಖೆಯಲ್ಲಿ ಅಧಿಕಾರಿಗಳ ಬಲವಂತದ ನಿವೃತ್ತಿಗೆ ಸೂಚಿಸಿರುವುದು ಇದೇ ಮೊದಲಾಗಿದೆ. 1972ರ ಪಿಂಚಣಿ ನಿಯಮದ ಸೆಕ್ಷನ್ 56(ಜೆ) ಹಾಗೂ ಸಿಸಿಎಸ್ ನಿಯಮ 48ರ ಅಡಿಯಲ್ಲಿ ನಿವೃತ್ತಿಗೆ ಸೂಚಿಸಲಾಗಿದೆ.
‘10 ಮಂದಿ ಹಿರಿಯ ಅಧಿಕಾರಿಗಳ ಬಲವಂತದ ನಿವೃತ್ತಿ ಪ್ರಸ್ತಾಪವನ್ನು ದೂರಸಂಪರ್ಕ ಸಚಿವರು ಅನುಮೋದಿಸಿದ್ದಾರೆ. ಸರ್ಕಾರದ ಭ್ರಷ್ಟಾಚಾರ ವಿರುದ್ಧದ ಶೂನ್ಯ ಸಹನೆ ನೀತಿಯಡಿ ಈ ಕ್ರಮ ಕೈಗೊಳ್ಳಲಾಗಿದೆ. 10 ಮಂದಿ ಅಧಿಕಾರಿಗಳ ಪೈಕಿ 9 ಮಂದಿ ನಿರ್ದೇಶಕರ ಮಟ್ಟದ ಅಧಿಕಾರಿಗಳಾಗಿದ್ದಾರೆ. ಒಬ್ಬರು ಜಂಟಿ ಕಾರ್ಯದರ್ಶಿಯಾಗಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Apple iphone: ಬೆಂಗಳೂರಿಗೆ ಬರಲಿದೆ ಅತಿದೊಡ್ಡ ಐಫೋನ್ ಉತ್ಪಾದನಾ ಘಟಕ: ಸಚಿವ ಅಶ್ವಿನಿ ವೈಷ್ಣವ್
ಉತ್ತಮ ಆಡಳಿತ ದಿನದ ಮುನ್ನಾದಿನವೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು (ಡಿಸೆಂಬರ್ 25) ಪ್ರತಿ ವರ್ಷ ಕೇಂದ್ರ ಸರ್ಕಾರ ‘ಉತ್ತಮ ಆಡಳಿತ ದಿನ’ವನ್ನಾಗಿ ಆಚರಿಸುತ್ತಿದೆ.
ಬಿಎಸ್ಎನ್ಎಲ್, ರೈಲ್ವೆ ಅಧಿಕಾರಿಗಳ ಬಲವಂತದ ನಿವೃತ್ತಿ
ಸೆಪ್ಟೆಂಬರ್ನಲ್ಲಿ ಬಿಎಸ್ಎನ್ಎಲ್ ಸಮಗ್ರ ಅಭಿವೃದ್ಧಿಗಾಗಿ 1.64 ಲಕ್ಷ ಕೋಟಿ ಪ್ಯಾಕೇಜ್ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಇದರ ಬೆನ್ನಲ್ಲೇ ಹಿರಿಯ ಅಧಿಕಾರಿಯೊಬ್ಬರಿಗೆ ಬಲವಂತವಾಗಿ ನಿವೃತ್ತಿಯಾಗುವಂತೆ ಸೂಚಿಸಲಾಗಿತ್ತು. ರೈಲ್ವೆ ಇಲಾಖೆಯ ಜವಾಬ್ದಾರಿಯನ್ನೂ ವಹಿಸಿರುವ ವೈಷ್ಣವ್ ಅವರು ಇತ್ತೀಚೆಗಷ್ಟೇ ರೈಲ್ವೆ ಇಲಾಖೆಯ 40 ಮಂದಿ ಅಧಿಕಾರಿಗಳ ಬಲವಂತದ ನಿವೃತ್ತಿಗೆ ಸೂಚಿಸಿದ್ದರು. ಉತ್ತಮ ಕಾರ್ಯನಿರ್ವಹಣೆ ಮಾಡದಿರುವುದು, ಭ್ರಷ್ಟಾಚಾರದ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಹೀಗೆ ನಿವೃತ್ತಿಯಾದವರಲ್ಲಿ ಕಾರ್ಯದರ್ಶಿ ಮಟ್ಟದ ಇಬ್ಬರು ಅಧಿಕಾರಿಗಳು ಮತ್ತು ಇಬ್ಬರು ವಿಶೇಷ ಕಾರ್ಯದರ್ಶಿಗಳೂ ಇದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 pm, Sat, 24 December 22