
ವಾಷಿಂಗ್ಟನ್, ಮೇ 22: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ (Jeff Bezos) ಅವರು ಅಮೆರಿಕದ ತೆರಿಗೆ ವ್ಯವಸ್ಥೆಯಲ್ಲಿ (Federal Tax system) ಪ್ರಮುಖ ಬದಲಾವಣೆ ತರಲು ಪ್ರಸ್ತಾಪಿಸಿದ್ದಾರೆ. ಕಡಿಮೆ ಆದಾಯ ಗಳಿಸುವ ಶೇ. 50 ರಷ್ಟು ಜನರಿಗೆ (Bottom half of earners) ಫೆಡರಲ್ ಆದಾಯ ತೆರಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಸಿಎನ್‌ಬಿಸಿ (CNBC) ವಾಹಿನಿಯ ಆಂಡ್ರ್ಯೂ ರಾಸ್ ಸೋರ್ಕಿನ್ ಅವರೊಂದಿಗೆ ಮಾತನಾಡಿದ ಬೆಜೋಸ್, ಪ್ರಸ್ತುತ ಅಮೆರಿಕದ ಒಟ್ಟು ಆದಾಯ ತೆರಿಗೆಯಲ್ಲಿ (Income Tax) ಕೆಳಹಂತದ ಶೇ. 50 ರಷ್ಟು ಜನರು ಕೇವಲ 3% ರಷ್ಟು ತೆರಿಗೆ ಪಾವತಿಸುತ್ತಿದ್ದಾರಾದರೂ, ಈ ಪ್ರಮಾಣ ಶೂನ್ಯ (0%) ಆಗಬೇಕು ಎಂದು ಹೇಳಿದರು. “ನಾನು ತೆರಿಗೆಯನ್ನು ಕಡಿಮೆ ಮಾಡಲು ಬಯಸುತ್ತಿಲ್ಲ, ಬದಲಿಗೆ ಅದನ್ನು ಸಂಪೂರ್ಣವಾಗಿ ತೆಗೆದುಹಾಕಲು ಬಯಸುತ್ತೇನೆ. ಶೂನ್ಯ ಎಂಬ ಸಂಖ್ಯೆಯಲ್ಲಿ ಒಂದು ದೊಡ್ಡ ಶಕ್ತಿ ಇದೆ” ಎಂದು ಅವರು ತಿಳಿಸಿದ್ದಾರೆ.
“ನಾವು ಕ್ವೀನ್ಸ್‌ನಲ್ಲಿರುವ (ಅಮೆರಿಕದ ಆಸ್ಪತ್ರೆ) ಒಬ್ಬ ದಾದಿ (Nurse) ಅಥವಾ ಆರೋಗ್ಯ ಕಾರ್ಯಕರ್ತೆಯಿಂದ ವಾಷಿಂಗ್ಟನ್‌ಗೆ (ಸರ್ಕಾರಕ್ಕೆ) ತೆರಿಗೆ ಹಣ ಕಳುಹಿಸುವಂತೆ ಕೇಳುವಂತಾಗಬಾರದು. ಬದಲಾಗಿ, ಆಕೆಗೆ ಕ್ಷಮೆ ಕೋರಿಕೆ ಸಲ್ಲಿಸಬೇಕು. ಇವರಿಗೆ ತೆರಿಗೆ ವಿಧಿಸುವುದರಲ್ಲಿ ಅರ್ಥವೇ ಇಲ್ಲ” ಎಂದಿದ್ದಾರೆ ಅಮೇಜಾನ್ ಸಂಸ್ಥಾಪಕರು.
ಇದನ್ನೂ ಓದಿ: ಎರಡನೇ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅವಧಿ 5 ವರ್ಷ ಅಲ್ಲ 12 ವರ್ಷ; ಯಾಕಿದು ಮಹತ್ವ ಗೊತ್ತಾ?
ಕೆಳಹಂತದ ಜನರು ಪಾವತಿಸುವ ತೆರಿಗೆ ಹಣವು ಸರ್ಕಾರಕ್ಕೇನು ದೊಡ್ಡ ಮೊತ್ತವಲ್ಲ. ಅವರಿಗೆ ತೆರಿಗೆ ವಿನಾಯಿತಿ ಕೊಟ್ಟರೆ ಸರ್ಕಾರ ಕಳೆದುಕೊಳ್ಳೋದು ಹೆಚ್ಚೇನಿರಲ್ಲ. ಕಡಿಮೆ ಆದಾಯ ಹೊಂದಿರುವ ಜನರಿಗೆ ತೆರಿಗೆ ವಿನಾಯಿತಿ ಕೊಟ್ಟರೆ ಅದರಿಂದ ಅವರು ತಮ್ಮ ಜೀವನ ನಿರ್ವಹಣೆಗಾಗಿ ಮತ್ತು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಸಹಕಾರಿಯಾಗಲಿದೆ,” ಎಂದು ಜೆಫ್ ಬೆಜೋಸ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದಲ್ಲಿ ಪ್ರಸ್ತುತ ಎರಡು ರೀತಿಯ ಆರ್ಥಿಕತೆ ಕಾಣಿಸುತ್ತಿದೆ, ಒಂದು ವರ್ಗದ ಜನರು ಅತ್ಯಂತ ಶ್ರೀಮಂತರಾಗುತ್ತಿದ್ದರೆ, ಇನ್ನೊಂದು ವರ್ಗದ ಜನರು ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಹಾಗೂ ಇರಾನ್ ಯುದ್ಧದ ಕಾರಣದಿಂದಾಗಿ ಹೆಚ್ಚಾಗಿರುವ ಪೆಟ್ರೋಲ್ ಬೆಲೆಯಿಂದ ತತ್ತರಿಸುತ್ತಿದ್ದಾರೆ. ಕಡಿಮೆ ಸಂಪಾದನೆ ಮಾಡುತ್ತಿರುವವರು ತಮ್ಮ ಆದಾಯದ ಹೆಚ್ಚಿನ ಪ್ರಮಾಣವನ್ನು ಪೆಟ್ರೋಲ್ಗೆ ಬಳಸುತ್ತಾರೆ. ಇದರಿಂದ ತೈಲ ಬಿಕ್ಕಟ್ಟು ಈ ವರ್ಗದ ಜನರಿಗೆ ಹೆಚ್ಚು ಪರಿಣಾಮ ಬೀರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ನೀಡುವುದು ಅತ್ಯಗತ್ಯ ಎಂದು ಜೆಫ್ ಬೇಜೋಸ್ ಅವರು ಪ್ರತಿಪಾದಿಸಿದ್ದಾರೆ.
‘ಟ್ಯಾಕ್ಸ್ ಫೌಂಡೇಶನ್’ ವರದಿಯ ಪ್ರಕಾರ, 2023 ರಲ್ಲಿ ಕೆಳಹಂತದ ಶೇ. 50 ರಷ್ಟು ತೆರಿಗೆದಾರರ ಸರಾಸರಿ ವಾರ್ಷಿಕ ಆದಾಯ ಸುಮಾರು 54,000 ಡಾಲರ್ (ಸುಮಾರು 45 ಲಕ್ಷ ರೂ.) ಆಗಿತ್ತು. ಇವರು ಸರಾಸರಿ 913 ಡಾಲರ್ ತೆರಿಗೆ ಪಾವತಿಸಿದ್ದರು. ಇನ್ನೊಂದೆಡೆ, ಅಮೆರಿಕದ ಟಾಪ್ 1% ಶ್ರೀಮಂತರು ಒಟ್ಟು ತೆರಿಗೆ ಆದಾಯದ ಶೇ. 40 ರಷ್ಟನ್ನು ಪಾವತಿಸುತ್ತಿದ್ದಾರೆ.
ಇದನ್ನೂ ಓದಿ: SpaceXAIಗೆ ಜನ ಬೇಕಿದ್ದಾರೆ; ಎಐ ಪರಿಣತಿ ಬೇಕಿಲ್ಲವಂತೆ; ಇಲಾನ್ ಮಸ್ಕ್ ಬಯಸುತ್ತಿರೋದು ಎಂಥವರನ್ನು?
ವಿಶ್ವದ 4ನೇ ಅತಿ ದೊಡ್ಡ ಶ್ರೀಮಂತರಾಗಿರುವ ಜೆಫ್ ಬೆಜೋಸ್ ಅವರ ಈ ಹೇಳಿಕೆಯು, ಅಮೆರಿಕದ ಹಲವು ಡೆಮಾಕ್ರಟಿಕ್ ರಾಜ್ಯಗಳು ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ (Wealth Tax) ವಿಧಿಸಲು ಕಾನೂನು ತರುತ್ತಿರುವ ಸಮಯದಲ್ಲಿ ಹೊರಬಿದ್ದಿದೆ. ಮತ್ತೊಂದೆಡೆ, ಸೆನೆಟರ್ ಕೋರಿ ಬುಕರ್ ಅವರಂತಹ ನಾಯಕರು ಕೂಡ $75,000 ವರೆಗಿನ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವ ‘ಕೀಪ್ ಯುವರ್ ಪೇ ಆಕ್ಟ್’ (Keep Your Pay Act) ಅನ್ನು ಬೆಂಬಲಿಸುತ್ತಿದ್ದಾರೆ.
ಆದಾಗ್ಯೂ, ಈ ಬೃಹತ್ ತೆರಿಗೆ ಸುಧಾರಣೆಯನ್ನು ಸರ್ಕಾರವು ಪ್ರಾಯೋಗಿಕವಾಗಿ ಹೇಗೆ ಜಾರಿಗೆ ತರಬಹುದು ಎಂಬ ಬಗ್ಗೆ ಬೆಜೋಸ್ ಯಾವುದೇ ನಿರ್ದಿಷ್ಟ ನೀಲನಕ್ಷೆಯನ್ನು ಹಂಚಿಕೊಂಡಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ