
ನವದೆಹಲಿ, ಏಪ್ರಿಲ್ 7: ಷೇರು ಮಾರುಕಟ್ಟೆಯಲ್ಲಿ ಅಕ್ಷರಶಃ ರಕ್ತದೋಕುಳಿ (stock market blood bath) ಆಗುತ್ತಿದೆ. ಭಾರತದಲ್ಲಿ 23,000 ಗಡಿದಾಟಿ ಗೂಳಿ ಓಟದ (bull run) ಮುನ್ಸೂಚನೆ ನೀಡಿದ್ದ ನಿಫ್ಟಿ ಈಗ ಪ್ರಪಾತಕ್ಕೆ ಜಿಗಿಜಿಗಿದು ಬೀಳುತ್ತಿದೆ. 22,000 ಅಂಕಗಳ ಗಡಿಯೊಳಗೆ ಕಾಲಿಟ್ಟಿದೆ. ಸೆನ್ಸೆಕ್ಸ್ನಲ್ಲೂ ಕೂಡ ರಕ್ತದೋಕುಳಿ ಆಗುತ್ತಿದೆ. ಬೆಳಗ್ಗೆ 11 ಗಂಟೆಯೊಳಗೆ ಶೇ. 3.77ರಷ್ಟು ಕುಸಿತವಾಗಿದೆ. ಬಿಎಸ್ಇ ಮತ್ತು ಎನ್ಎಸ್ಇನ ಬಹುತೇಕ ಎಲ್ಲಾ ಸೂಚ್ಯಂಕಗಳೂ ಕೂಡ ಕೆಂಪು ಬಣ್ಣದಲ್ಲಿವೆ. ಭಾರತ ಮಾತ್ರವಲ್ಲ, ಜಾಗತಿಕವಾಗಿ ಎಲ್ಲಾ ಷೇರು ಮಾರುಕಟ್ಟೆ ಕುಸಿತ ಕಾಣುತ್ತಿವೆ. ಇದು ಬ್ಲ್ಯಾಕ್ ಮಂಡೇ ಎಂದು ಹೂಡಿಕೆದಾರರು ಕನವರಿಸುವಂತಾಗಿದೆ.
ಅಮೆರಿಕ, ಯೂರೋಪ್ ಮತ್ತು ಏಷ್ಯಾದ ಎಲ್ಲಾ ಷೇರು ಮಾರುಕಟ್ಟೆಗಳೂ ಸೋಮವಾರ ತತ್ತರಿಸಿಹೋಗಿವೆ. ಹೂಡಿಕೆದಾರರು ಸಿಕ್ಕಾಪಟ್ಟೆ ನಷ್ಟ ಮಾಡಿಕೊಂಡಿದ್ದಾರೆ. ಬೇರೆ ಜಾಗತಿಕ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತದ ಸೆನ್ಸೆಕ್ಸ್, ನಿಫ್ಟಿ ಅನುಭವಿಸಿದ ನಷ್ಟ ಕಡಿಮೆ ಎಂದನಿಸುವಷ್ಟು ಬ್ಲಡ್ ಬಾತ್ ಆಗಿದೆ.
ಇದನ್ನೂ ಓದಿ: ಚಾಣಕ್ಷ್ಯ ವಾರನ್ ಬಫೆಟ್; ಊರೆಲ್ಲಾ ತೋಪೆದ್ದರೂ ಕರಗಲಿಲ್ಲ ಇವರ ಶ್ರೀಮಂತಿಕೆ; ಇದು ಹೇಗೆ ಸಾಧ್ಯ?
ಮಾರುಕಟ್ಟೆಯ ರಕ್ತದೋಕುಳಿಗೆ ಪ್ರಮುಖ ಕಾರಣ ಎಂದರೆ ಟ್ಯಾರಿಫ್ ವಾರ್. ಅಮೆರಿಕ ಆರಂಭಿಸಿದ ಈ ಸುಂಕ ಸಮರ ಜಾಗತಿಕ ಮಹಾಯುದ್ಧವಾಗಿ ಪರಿಣಮಿಸಿದೆ. ಎಲ್ಲಾ ದೇಶಗಳ ಮೇಲೆ ಅಮೆರಿಕ ಟ್ಯಾರಿಫ್ ಹೇರಿಕೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಬೇರೆ ಬೇರೆ ದೇಶಗಳೂ ಕೂಡ ಅಮೆರಿಕದ ಮೇಲೆ ಪ್ರತಿಸುಂಕ ವಿಧಿಸತೊಡಗಿವೆ. ಚೀನಾ, ಕೆನಡಾ, ಮೆಕ್ಸಿಕೋ, ಈಗ ಯೂರೋಪಿಯನ್ ಯೂನಿಯನ್ ಕೂಡ ಅಮೆರಿಕದ ವಿರುದ್ಧ ಟೊಂಕ ಕಟ್ಟಿ ನಿಂತಿದೆ.
ಇದನ್ನೂ ಓದಿ: ಅಮೆರಿಕ ಷೇರುಮಾರುಕಟ್ಟೆ ಭಯಾನಕ ಕುಸಿತ; ಒಂದೇ ದಿನದಲ್ಲಿ 200 ಲಕ್ಷ ಕೋಟಿ ರೂ ನಷ್ಟ
ಈ ಟ್ಯಾರಿಫ್ ಯುದ್ಧದಲ್ಲಿ ಗೆಲ್ಲುವವರಿರೋದಿಲ್ಲ, ಎಲ್ಲರಿಗೂ ಸೋಲೇ. ಜಾಗತಿಕವಾಗಿ ಮತ್ತೆ ಹಣದುಬ್ಬರ ಏರಿಕೆ ಆಗಲಿದೆ. ಕಾರ್ಪೊರೇಟ್ ಸಂಸ್ಥೆಗಳ ಲಾಭ ಕಡಿಮೆ ಆಗಲಿದೆ. ಬೆಲೆ ಏರಿಕೆಯಿಂದಾಗಿ ಬಡ್ಡಿದರಗಳೂ ಹೆಚ್ಚಾಗಲಿವೆ. ಇದರಿಂದಾಗಿ ಷೇರು ಮಾರುಕಟ್ಟೆಯಿಂದ ಜನರು ಹೊರಬೀಳತೊಡಗಿದ್ದಾರೆ.
ಮೇಲೆ ತಿಳಿಸಿದ ಟ್ಯಾರಿಫ್ ಯುದ್ಧದ ಪರಿಣಾಮ ಭಾರತದ ಮೇಲೂ ಆಗಿದೆ. ಇದರ ಜೊತೆಗೆ, ವಿದೇಶೀ ಹೂಡಿಕೆದಾರರು ಮತ್ತೊಮ್ಮೆ ಹೊರನಡೆಯತೊಡಗಿದ್ದಾರೆ. ಜಾಗತಿಕವಾಗಿ ಎಲ್ಲಾ ಮಾರುಕಟ್ಟೆಗಳೂ ಕುಸಿಯುತ್ತಿರುವುದು ಭಾರತಕ್ಕೂ ಪರಿಣಾಮ ಬೀರಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ