ಅಮೆರಿಕ ಷೇರುಮಾರುಕಟ್ಟೆ ಭಯಾನಕ ಕುಸಿತ; ಒಂದೇ ದಿನದಲ್ಲಿ 200 ಲಕ್ಷ ಕೋಟಿ ರೂ ನಷ್ಟ
US stock market crash: ಅಮೆರಿಕದ ಷೇರು ಮಾರುಕಟ್ಟೆ ಕಳೆದ ಐದು ವರ್ಷದಲ್ಲೇ ಹೀನಾಯ ಕುಸಿತ ಕಂಡಿದೆ. ಪ್ರಮುಖ 500 ಕಂಪನಿಗಳಿರುವ ಎಸ್ ಅಂಡ್ ಪಿ ಸೂಚ್ಯಂಕ ಒಂದೇ ದಿನದಲ್ಲಿ 2.40 ಟ್ರಿಲಿಯನ್ ಡಾಲರ್ನಷ್ಟು ನಷ್ಟ ಕಂಡಿದೆ. ಅಂದರೆ, ಹೂಡಿಕೆದಾರರ 200 ಲಕ್ಷ ಕೋಟಿ ರೂ ಹಣ ನಷ್ಟವಾಗಿದೆ. ಎಸ್ ಅಂಡ್ ಪಿ ಮಾತ್ರವಲ್ಲ, ಡೌವ್ ಜೋನ್ಸ್ ಮೊದಲಾದ ಇತರ ಸೂಚ್ಯಂಕಗಳು ಕೂಡ ಗಣನೀಯವಾಗಿ ಇಳಿಕೆ ಕಂಡಿವೆ.

ನವದೆಹಲಿ, ಏಪ್ರಿಲ್ 4: ಅಮೆರಿಕದ ಷೇರು ಮಾರುಕಟ್ಟೆ ಭಾರೀ ಕುಸಿತ (US stock market crash) ಕಂಡಿದೆ. ಬಹುತೇಕ ಎಲ್ಲಾ ಸೂಚ್ಯಂಕಗಳು ಗಣನೀಯವಾಗಿ ಇಳಿಕೆ ಆಗಿದೆ. ಡೌವ್ ಜೋನ್ಸ್ ಇಂಡಸ್ಟ್ರಿಯಲ್ ಆ್ಯವರೇಜ್ ಶೇ. 3.98, ಎಸ್ ಅಂಡ್ ಪಿ 500 ಸೂಚ್ಯಂಕ (S&P 500) ಶೇ 4.84 ಯಷ್ಟು ಕುಸಿತ ಕಂಡಿದೆ. ನಾಸ್ಡಾಕ್ ಕಾಂಪೋಸಿಟ್ ಇಂಡೆಕ್ಸ್ ಅಂತೂ ಇನ್ನೂ ಹೆಚ್ಚಿನ ಪ್ರಮಾಣದಷ್ಟು ಕಡಿಮೆ ಆಗಿದೆ. ಕೋವಿಡ್ ಬಳಿಕ ಅಮೆರಿಕ ಷೇರು ಮಾರುಕಟ್ಟೆ ಕಂಡ ಅತಿದೊಡ್ಡ ಕುಸಿತ ಇದು.
ಎಸ್ ಅಂಡ್ ಪಿ 500 ಸೂಚ್ಯಂಕದಲ್ಲಿರುವ ಅತಿದೊಡ್ಡ 500 ಕಂಪನಿಗಳ ಮಾರುಕಟ್ಟೆ ಮೌಲ್ಯ ಒಂದೇ ದಿನದಲ್ಲಿ 2.4 ಟ್ರಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಅಂದರೆ ಬರೋಬ್ಬರಿ 200 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟವನ್ನು ಹೂಡಿಕೆದಾರರು ಅನುಭವಿಸಿದ್ದಾರೆ. ಭಾರತದ ಜಿಡಿಪಿಯ ಅರ್ಧಕ್ಕಿಂತ ಹೆಚ್ಚಿನ ಮೊತ್ತದಷ್ಟು ಹಣವು ಒಂದೇ ದಿನದಲ್ಲಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಇದನ್ನೂ ಓದಿ: ಎಸ್ಜಿಬಿ ಹೂಡಿಕೆದಾರರಿಗೆ ಸರ್ಕಾರ ಕೊಡಬೇಕಾದ ಬಾಕಿ: 12,06,92,00,00,000 ರೂ
ಅಮೆರಿಕ ಷೇರು ಮಾರುಕಟ್ಟೆಯ ಮ್ಯಾಗ್ನಿಫಿಕೆಂಟ್ ಸೆವೆನ್ ಎಂದು ಪರಿಗಣಿಸಲಾದ ಏಳು ಟೆಕ್ನಾಲಜಿ ಕಂಪನಿಗಳ ಷೇರು ಮೌಲ್ಯ ಒಂದೇ ದಿನದಲ್ಲಿ 600 ಬಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಆ್ಯಪಲ್, ಮೈಕ್ರೋಸಾಫ್ಟ್, ಗೂಗಲ್, ಅಮೇಜಾನ್, ನಿವಿಡಿಯಾ, ಟೆಸ್ಲಾ ಮತ್ತು ಮೆಟಾ ಈ ಏಳು ಸಂಸ್ಥೆಗಳ ಷೇರುಗಳು ಎಸ್ ಅಂಡ್ ಪಿ 500 ಸೂಚ್ಯಂಕದ ಮಾರುಕಟ್ಟೆ ಮೌಲ್ಯದಲ್ಲಿ ಶೇ. 37ರಷ್ಟು ಪಾಲು ಹೊಂದಿವೆ. ಆ್ಯಪಲ್ ಮತ್ತು ನಿವಿಡಿಯಾ ಷೇರುಮೌಲ್ಯ ಗಣನೀಯ ಕುಸಿತ ಕಂಡಿವೆ.
ಷೇರು ಮಾರುಕಟ್ಟೆ ಕುಸಿಯಲು ಏನು ಕಾರಣ?
ಡೊನಾಲ್ಡ್ ಟ್ರಂಪ್ ಅವರು ಪ್ರತಿಸುಂಕ ಕ್ರಮ ಘೋಷಣೆ ಮಾಡಿದ್ದು ಸಹಜವಾಗಿ ಮಾರುಕಟ್ಟೆಯನ್ನು ಅಲ್ಲೋಲಕಲ್ಲೋಲಗೊಳಿಸಿದೆ. ಎಲ್ಲಾ ದೇಶಗಳೂ ಕೂಡ ಅಮೆರಿಕದ ವಿರುದ್ಧ ರಿವೆಂಜ್ ಟ್ಯಾಕ್ಸ್ ಹಾಕಿಬಿಟ್ಟರೆ ಟ್ಯಾರಿಫ್ ಮಹಾಯುದ್ಧವೇ ಶುರುವಾಗಿಬಿಡಬಹುದು ಎನ್ನುವ ಭೀತಿ ಇದೆ.
ಹೂಡಿಕೆದಾರರಿಗೆ ಇರುವ ಮತ್ತೊಂದು ಭಯ ಎಂದರೆ, ಅಮೆರಿಕದ ದೊಡ್ಡ ಕಂಪನಿಗಳ ಸರಬರಾಜು ಸರಪಳಿಯ ಹೆಚ್ಚಿನ ಭಾಗವು ವಿದೇಶಗಳಲ್ಲಿದೆ. ಆಮದು ಸುಂಕ ಹೆಚ್ಚಾಗಿ ಬಿಟ್ಟರೆ ಸಪ್ಲೈ ಚೈನ್ನಿಂದ ಬರುವ ಬಿಡಿಭಾಗಗಳು, ಕಚ್ಛಾ ವಸ್ತುಗಳು ಇತ್ಯಾದಿ ಉತ್ಪನ್ನಗಳ ಬೆಲೆ ಹೆಚ್ಚಳವಾಗುತ್ತದೆ. ಇದರಿಂದ ಆಂತರಿಕವಾಗಿ ಬೆಲೆ ಏರಿಕೆ ಆಗುತ್ತದೆ. ಇದು ಕಂಪನಿಗಳ ಬೆಳವಣಿಗೆ ದೃಷ್ಟಿಯಿಂದ ಮಾರಕವಾದುದು ಎಂಬ ಲೆಕ್ಕಾಚಾರ ಇದೆ. ಈ ಕಾರಣಕ್ಕೆ ಹೂಡಿಕೆದಾರರು ಮಾರುಕಟ್ಟೆಯಿಂದ ಹೊರಬೀಳುತ್ತಿರಬಹುದು.
ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ನಿಂದ ಭಾರತದ ಆರ್ಥಿಕತೆಗೆ, ವಿವಿಧ ಸೆಕ್ಟರ್ಗಳಿಗೆ ಎಷ್ಟು ಹಾನಿ? ಇಲ್ಲಿದೆ ಡೀಟೇಲ್ಸ್
ಭಾರತದ ಷೇರು ಮಾರುಕಟ್ಟೆಯೂ ಕುಸಿತ…
ಭಾರತದ ಷೇರು ಮಾರುಕಟ್ಟೆ ಇತ್ತೀಚೆಗೆ ಚೇತರಿಕೆಯ ಹಾದಿಗೆ ಬಂದಿತ್ತು. ಆದರೆ, ಇವತ್ತು ಅಮೆರಿಕ ಮಾರುಕಟ್ಟೆ ರೀತಿಯಲ್ಲಿ ಸೆನ್ಸೆಕ್ಸ್, ನಿಫ್ಟಿ ಕುಸಿತ ಕಾಣುತ್ತಿದೆ. ಈ ಎರಡೂ ಸೂಚ್ಯಂಕಗಳು ಶೇ. 2ರಷ್ಟು ನಷ್ಟ ಕಂಡಿವೆ. ಇದು ಟ್ರಂಪ್ ಟ್ಯಾರಿಫ್ ಪರಿಣಾಮ ಇರಬಹುದು ಎನ್ನುವುದು ಹೆಚ್ಚಿನವರ ಅಂದಾಜು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Fri, 4 April 25