Closing Bell: ಮೊದಲ ಬಾರಿಗೆ 250 ಲಕ್ಷ ಕೋಟಿ ರೂ. ದಾಟಿದ ಸೆನ್ಸೆಕ್ಸ್ ಮಾರುಕಟ್ಟೆ ಬಂಡವಾಳ ಮೌಲ್ಯ; ನಿಫ್ಟಿ 17000 ಪಾಯಿಂಟ್ಸ್
ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕವಾದ ಬಿಎಸ್ಇ ಸೆನ್ಸೆಕ್ಸ್ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಇದೇ ಮೊದಲ ಬಾರಿಗೆ 250 ಲಕ್ಷ ಕೋಟಿ ರೂಪಾಯಿ ದಾಟಿದೆ. ನಿಫ್ಟಿ 17000 ಪಾಯಿಂಟ್ಸ್ ದಾಟಿದೆ.
ಜಾಗತಿಕ ಮಾರುಕಟ್ಟೆಗಳ ಮಿಶ್ರ ಫಲಿತಾಂಶದ ಮಧ್ಯೆಯೂ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಸತತ ಎರಡನೇ ದಿನವಾದ ಮಂಗಳವಾರ (ಆಗಸ್ಟ್ 31, 2021) ಕೂಡ ದಾಖಲೆಯ ಓಟವನ್ನು ಮುಂದುವರಿಸಿವೆ. ಮಂಗಳವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ 662.63 ಪಾಯಿಂಟ್ಸ್ ಅಥವಾ ಶೇ 1.16ರಷ್ಟು ಮೇಲೇರಿ 57,552.39 ಪಾಯಿಂಟ್ಸ್ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ. ಇನ್ನು ನಿಫ್ಟಿ ಸೂಚ್ಯಂಕವು 201.20 ಪಾಯಿಂಟ್ಸ್ ಅಥವಾ ಶೇ 1.19ರಷ್ಟು ಏರಿಕೆಯಾಗಿ, 17,132.20 ಪಾಯಿಂಟ್ಸ್ನೊಂದಿಗೆ ವಹಿವಾಟು ಮುಗಿಸಿದೆ. ಬಿಎಸ್ಇ- ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ಇದೇ ಮೊದಲ ಬಾರಿಗೆ 250 ಲಕ್ಷ ಕೋಟಿ ರೂಪಾಯಿ ದಾಟಿತು. ಈ ಹಿಂದಿನ ಸೆಷನ್ ಮುಕ್ತಾಯಕ್ಕೆ ಮಾರುಕಟ್ಟೆ ಬಂಡವಾಳವು 247.30 ಲಕ್ಷ ಕೋಟಿ ರೂಪಾಯಿ ಇತ್ತು. 2.68 ಲಕ್ಷ ಕೋಟಿ ರೂಪಾಯಿ ಬಂಡವಾಳ ಮೌಲ್ಯ ಹೆಚ್ಚಳವಾಗಿ, 249.98 ಲಕ್ಷ ಕೋಟಿ ತಲುಪಿತು.
ಬುಲ್ಸ್ಗಳ (ಷೇರುಗಳ ಬೆಲೆ ಏರಿಕೆ ಆಗುತ್ತದೆ ಎಂದು ಹೂಡಿಕೆ ಮಾಡವವರು) ನೇತೃತ್ವದಲ್ಲಿ ದೇಶೀಯ ಮಾರುಕಟ್ಟೆ ಸೂಚ್ಯಂಕಗಳು ದಾಖಲೆಯ ಎತ್ತರವನ್ನು ದಾಟಿವೆ. ಅಮೆರಿಕ ಕೇಂದ್ರೀಯ ಬ್ಯಾಂಕ್ ನೀತಿ ಮತ್ತು ಇಂದು ಜಿಡಿಪಿ ದತ್ತಾಂಶ ಬಿಡುಗಡೆ ಮಾಡುವ ನಿರೀಕ್ಷೆ ಕೂಡ ಸಾಥ್ ನೀಡಿದೆ. ಹಲವು ವಾಣಿಜ್ಯ ಚಟುವಟಿಕೆಗಳು ಮತ್ತೆ ಕೊವಿಡ್ ಹಿಂದಿನ ಮಟ್ಟಕ್ಕೆ ಮರಳಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಜೂನ್ನಿಂದ ಆಗಸ್ಟ್ ತ್ರೈಮಾಸಿಕವು ಶೇ 21.6ರಷ್ಟು ಜಿಡಿಪಿ ಬೆಳವಣಿಗೆ ಕಾಣಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಭಾರ್ತಿ ಏರ್ಟೆಲ್, ಬಜಾಜ್ ಫೈನಾನ್ಸ್, ಐಷರ್ ಮೋಟಾರ್ಸ್, ಹಿಂಡಾಲ್ಕೋ ಇಂಡಸ್ಟ್ರೀಸ್, ಶ್ರೀ ಸಿಮೆಂಟ್ಸ್ ಗಳಿಕೆ ದಾಖಲಿಸಿದ ಪ್ರಮುಖ ಕಂಪೆನಿಯ ಷೇರುಗಳು. ಟಾಟಾ ಮೋಟಾರ್ಸ್, ನೆಸ್ಟ್ಲೆ, ಇಂಡಸ್ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬಿಪಿಸಿಎಲ್ ಇಳಿಕೆ ದಾಖಲಿಸಿದ ಕಂಪೆನಿಗಳು. ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ತಲಾ ಶೇ 0.8ರಷ್ಟು ಇಳಿಕೆ ಕಂಡವು. ಎಲ್ಲ ವಲಯಗಳು ಏರಿಕೆಯಲ್ಲೇ ದಿನಾಂತ್ಯ ಮುಗಿಸಿದರೆ, ಮಾಹಿತಿ ತಂತ್ರಜ್ಞಾನ (ಐ.ಟಿ) ಹಾಗೂ ಲೋಹದ ವಲಯಗಳು ತಲಾ ಶೇ 1ರಷ್ಟು ಏರಿಕೆ ದಾಖಲಿಸಿದವು. ಟಿಸಿಎಸ್, ಜೆಎಸ್ಡಬ್ಲ್ಯು ಎನರ್ಜಿ, ಎಸ್ಆರ್ಎಫ್, ಎಚ್ಯುಎಲ್, ಬಜಾಜ್ ಫಿನ್ಸರ್ವ್ ಸೇರಿದಂತೆ 200ಕ್ಕೂ ಹೆಚ್ಚು ಕಂಪೆನಿಯ ಷೇರುಗಳು ವಾರ್ಷಿಕ ಗರಿಷ್ಠ ಮಟ್ಟವನ್ನು ಮುಟ್ಟಿದವು.
ಇದನ್ನೂ ಓದಿ: Multibagger Stock: ಹೂಡಿಕೆದಾರರ 1 ಲಕ್ಷ ರೂಪಾಯಿ 3 ತಿಂಗಳಲ್ಲಿ 7.62 ಲಕ್ಷ ಮಾಡಿಕೊಟ್ಟಿದೆ ಈ ಷೇರು
(BSE Sensex Market Capitalisation First Time Crossed Rs 250 Lakh Crore Mark Nifty Crossed 17000 Points)
Published On - 5:14 pm, Tue, 31 August 21