ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಪ್ರಕಟ ಆಗುವ ನಕಲಿ ವಿಮರ್ಶೆಗಳಿಗೆ ಕಡಿವಾಣ ಹಾಕುವ ಬಗ್ಗೆ ಕೇಂದ್ರ ಸರ್ಕಾರ ಶನಿವಾರ ಘೋಷಣೆ ಮಾಡಿದೆ. ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಈ ಚೌಕಟ್ಟನ್ನು ರೂಪಿಸುವ ಬಗ್ಗೆ ಹೇಳಲಾಗಿದೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಜತೆಗೆ ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ (ASCI) ವರ್ಚುವಲ್ ಸಭೆ ನಡೆದಿದೆ. ಇದರಲ್ಲಿ ವಿವಿಧ ಕ್ಷೇತ್ರದವರು ಸಹ ಭಾಗಿ ಆಗಿದ್ದಾರೆ. ವೆಬ್ಸೈಟ್ನಲ್ಲಿ ನಕಲಿ ವಿಮರ್ಶೆಗಳನ್ನು ಹಾಕುವುದರಿಂದ ಹೇಗೆ ಪರಿಣಾಮ ಆಗುತ್ತದೆ, ಆನ್ಲೈನ್ ಉತ್ಪನ್ನಗಳು ಮತ್ತು ಸೇವೆಗಳ ಖರೀದಿಸುವಂತೆ ಹೇಗೆ ಇವುಗಳ ಬಳಕೆ ಆಗುತ್ತಿದೆ ಎಂಬುದರ ಚರ್ಚೆಯಾಗಿದೆ. ಆನ್ಲೈನ್ ಗ್ರಾಹಕರು ಇ-ಕಾಮರ್ಸ್ (e-commerce) ವೆಬ್ಸೈಟ್ನಲ್ಲಿನ ಪ್ರಕಟವಾಗಿರುವ ಅಭಿಪ್ರಾಯಗಳ ಮೇಲೆ ಅವಲಂಬಿತರಾಗಿರುತ್ತಾರೆ.
ಏಕೆಂದರೆ ಭೌತಿಕವಾಗಿ ಆ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಪರಿಶೀಲನೆ ಮಾಡುವುದಕ್ಕೆ ಸಾಧ್ಯವಾಗಲ್ಲ. ಆ ಕಾರಣಕ್ಕೆ ಈಗಾಗಲೇ ಆ ಉತ್ಪನ್ನವನ್ನೋ ಸೇವೆಯನ್ನೋ ಪಡೆದಂಥ ಗ್ರಾಹಕರ ಅಭಿಪ್ರಾಯ ಮುಖ್ಯವಾಗಿ, ನಕಲಿ ವಿಮರ್ಶೆಗಳಿಗೆ ಬಲಿಪಶುವಾಗುವಂಥ ಪರಿಸ್ಥಿತಿ ಬಂದಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿರುವಂತೆ, ಗ್ರಾಹಕ ವ್ಯವಹಾರಗಳ ಇಲಾಖೆಯು ಜಾಗತಿಕ ಮಟ್ಟದಲ್ಲಿ ಇರುವ ಅತ್ಯುತ್ತಮ ಅಭ್ಯಾಸಗಳು, ಭಾರತದಲ್ಲಿ ಇ-ಕಾಮರ್ಸ್ಗಳು ಅನುಸರಿಸುತ್ತಿರುವ ಪದ್ಧತಿಯ ಬಗ್ಗೆ ಅಧ್ಯಯನ ಮಾಡಿದ ನಂತರ ಚೌಕಟ್ಟನ್ನು ರೂಪಿಸುವುದು.
“ವಿಮರ್ಶಕರ ದೃಢೀಕರಣವನ್ನು ಖಚಿತಪಡಿಸಿಕೊಳ್ಳುವ ಮೂಲಕ ಪತ್ತೆಹಚ್ಚುವಿಕೆ ಮತ್ತು ಪ್ಲಾಟ್ಫಾರ್ಮ್ ಸಂಬಂಧಿತ ಹೊಣೆಗಾರಿಕೆ ಈ ಎರಡು ಇಲ್ಲಿ ಪ್ರಮುಖ ಸಮಸ್ಯೆಗಳಾಗಿವೆ. ಇ-ಕಾಮರ್ಸ್ ಕಂಪೆನಿಗಳು ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ಪ್ರದರ್ಶಿಸಲು “ಅತ್ಯಂತ ಸಂಬಂಧಿತ ವಿಮರ್ಶೆಗಳನ್ನು” ಹೇಗೆ ಆರಿಸಿಕೊಳ್ಳುತ್ತಾರೆ ಎಂಬುದನ್ನು ಬಹಿರಂಗಪಡಿಸಬೇಕು,” ಎಂದು DoCA ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಗ್ರಾಹಕರ ವೇದಿಕೆಗಳು, ಕಾನೂನು ವಿಶ್ವವಿದ್ಯಾನಿಲಯಗಳು, ವಕೀಲರು, ಎಫ್ಐಸಿಸಿಐ, ಸಿಐಐ ಮತ್ತು ಗ್ರಾಹಕ ಹಕ್ಕುಗಳ ಕಾರ್ಯಕರ್ತರು, ಇತರರು ಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ವೆಬ್‌ಸೈಟ್‌ಗಳಲ್ಲಿ ನಕಲಿ ವಿಮರ್ಶೆಗಳ ಮಾರ್ಗಸೂಚಿಯನ್ನು ಚರ್ಚಿಸಿದ್ದಾರೆ. ಈ ಸಮಸ್ಯೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಅರ್ಹವಾಗಿದೆ ಮತ್ತು ನಕಲಿ ವಿಮರ್ಶೆಗಳನ್ನು ನಿಯಂತ್ರಿಸುವ ಸೂಕ್ತ ಚೌಕಟ್ಟನ್ನು ಅಭಿವೃದ್ಧಿಪಡಿಸಬಹುದು ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಇ-ಕಾಮರ್ಸ್ ಕಂಪೆನಿಗಳ ಮಧ್ಯಸ್ಥಗಾರರು ತಾವು ನಕಲಿ ವಿಮರ್ಶೆಗಳನ್ನು ಮೇಲ್ವಿಚಾರಣೆ ಮಾಡುವ ಚೌಕಟ್ಟುಗಳನ್ನು ಹೊಂದಿದ್ದೇವೆ ಮತ್ತು ಈ ವಿಷಯದ ಕುರಿತು ಕಾನೂನು ಚೌಕಟ್ಟನ್ನು ಅಭಿವೃದ್ಧಿಪಡಿಸುವಲ್ಲಿ ಭಾಗವಹಿಸಲು ಸಂತೋಷಪಡುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Tata Neu: ಬರುತ್ತಿದೆ ಹೊಸ ಇ ಕಾಮರ್ಸ್ ತಾಣ: ಬೆಚ್ಚಿಬಿದ್ದ ಅಮೆಜಾನ್, ಫ್ಲಿಪ್ಕಾರ್ಟ್