Home Loan: ಹೋಮ್ ಲೋನ್ಗೆ ಏರಲಿದೆ ಭಾರೀ ಪ್ರಮಾಣದಲ್ಲಿ ಬಡ್ಡಿದರ; ಇಎಂಐ ಪಾವತಿ ನಿಭಾಯಿಸುವುದಕ್ಕೆ ಇಲ್ಲಿದೆ 7 ದಾರಿ
ಹೋಮ್ ಲೋನ್ ಮೇಲೆ ಬಡ್ಡಿ ದರ ಹೆಚ್ಚಳ ಆಗುತ್ತಿರುವ ಕಾಲಘಟ್ಟದಲ್ಲಿ ಇಎಂಐ ಪಾವತಿ ನಿರ್ವಹಿಸುವುದಕ್ಕೆ ಇಲ್ಲಿ 7 ಮಾರ್ಗಗಳಿವೆ.
ಕೇವಲ ಒಂದು ತಿಂಗಳ ಹಿಂದಿನವರೆಗೆ ಕೂಡ ಹೋಮ್ ಲೋನ್ (Home Loan) ಬಡ್ಡಿ ದರ ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿತ್ತು. ಆದರೆ ಆ ದಿನಗಳು ಮುಗಿದಿವೆ. ಯಾವಾಗ ಮೇ ತಿಂಗಳ ಮೊದಲ ವಾರದಲ್ಲಿ ಆರ್ಬಿಐ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ಸ್ ಹೆಚ್ಚಿಸಿತೋ ಅಲ್ಲಿಗೆ ಮುಂಚಿನ ರೀತಿಯಲ್ಲಿ ಕಡಿಮೆ ಬಡ್ಡಿ ದರ ಇಲ್ಲ ಎನ್ನುವುದು ಖಾತ್ರಿ ಆಗಿದೆ. ಮುಂದಿನ ತಿಂಗಳುಗಳಲ್ಲಿ ಇನ್ನೂ ಬಡ್ಡಿ ದರ ಹೆಚ್ಚಳ ಆಗುತ್ತದೆ ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ ಗವರ್ನರ್ ಶಕ್ತಿಕಾಂತ ದಾಸ್. ಆದರೆ ಅದು ಯಾವ ಪ್ರಮಾಣದಲ್ಲಿ ಎಂಬುದನ್ನು ಈಗಲೇ ಹೇಳುವುದಕ್ಕೆ ಆಗಲ್ಲ ಎಂಬ ಮಾತನ್ನೂ ಸೇರಿಸಿದ್ದಾರೆ. ಯಾವಾಗ ಗೃಹ ಸಾಲ ಬಡ್ಡಿ ದರ ಏರಿಕೆ ಆಗುತ್ತದೋ ಖಂಡಿತಾ ಸಾಲ ಪಡೆದವರ ಪಾಲಿಗೆ ಇದು ಹೊರೆಯೇ. ಏಕೆಂದರೆ ಇದು ದೀರ್ಘಾವಧಿಯದ್ದಾಗಿರುತ್ತದೆ. ಯಾವುದೇ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ತೆಗೆದುಕೊಳ್ಳುವಂಥ ಅತಿ ದೊಡ್ಡ ಪ್ರಮಾಣದ ಸಾಲ ಹೋಮ್ ಲೋನ್ ಆಗಿರುತ್ತದೆ.
ಬಹುತೇಕ ಗೃಹಸಾಲವನ್ನು ಬದಲಾಗುವ ಬಡ್ಡಿ ದರದ ಆಧಾರದಲ್ಲೇ ಪಡೆಯಲಾಗಿರುತ್ತದೆ. ಆದ್ದರಿಂದ ಏರುತ್ತಿರುವ ಬಡ್ಡಿ ದರದಿಂದ ತಪ್ಪಿಸಿಕೊಳ್ಳುವುದಕ್ಕೆ ಆಗಲ್ಲ. ಯಾವುದೇ ಬಡ್ಡಿ ದರದ ಲೆಕ್ಕದಲ್ಲಿ (ಅದು ಎಕ್ಸ್ಟರ್ನಲ್ ಬೆಂಚ್ಮಾರ್ಕ್, ಬೇಸ್ ರೇಟ್, ಬಿಪಿಎಲ್ಆರ್ ಅಥವಾ ಎಂಸಿಎಲ್ಆರ್) ತೆಗೆದುಕೊಂಡಿದ್ದರೂ ಕಟ್ಟುತ್ತಿರುವ ಇಎಂಐ ಶೀಘ್ರದಲ್ಲೇ ಹೆಚ್ಚಳ ಆಗುತ್ತದೆ. ಹಾಗಿದ್ದರೆ ಇದರಿಂದ ತಪ್ಪಿಸಿಕೊಳ್ಳಲು ಆಗಲ್ಲವಾ? ಇದಕ್ಕಾಗಿ ಇಲ್ಲಿ 7 ಮಾರ್ಗಗಳನ್ನು ತಿಳಿಸಲಾಗಿದೆ.
1. ಹೈಬ್ರಿಡ್ ಸಾಲ ಪಡೆಯುವುದಕ್ಕೆ ಹೊಸದಾಗಿ ಸಾಲ ಮಾಡುವವರಿಗೆ ಉತ್ತಮ ಸಮಯ
ಹೊಸದಾಗಿ ಸಾಲ ಪಡೆಯುತ್ತಿದ್ದಲ್ಲಿ ಒಂದಿಷ್ಟು ಸಮಯ ತೆಗೆದುಕೊಂಡು, ಹೈಬ್ರಿಡ್ ಸಾಲದ ಮೌಲ್ಯಮಾಪನ ಮಾಡಬೇಕು. ಹೀಗೆ ಮಾಡಿದಲ್ಲಿ ಲ್ಲಿ ಆರಂಭದ ಕೆಲವು ವರ್ಷಗಳ ಕಾಲ ಬಡ್ಡಿ ದರ ಫಿಕ್ಸೆಡ್ ಆಗಿರುತ್ತದೆ. ಆ ನಂತರ ಬದಲಾಗುವ ಬಡ್ಡಿ ದರಕ್ಕೆ ತಕ್ಕಂತೆ ಆಗುತ್ತದೆ. ಆದರೆ ನೆನಪಿಟ್ಟುಕೊಳ್ಳಬೇಕಾದ ಅಂಶ ಏನೆಂದರೆ, ಫಿಕ್ಸೆಡ್ ಬಡ್ಡಿ ದರವು ಬದಲಾಗುವ ಬಡ್ಡಿ ದರಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. “ಸೆಮಿ-ಫಿಕ್ಸೆಡ್ ದರ, ಅಂದರೆ 3 ವರ್ಷಗಳ ಅವಧಿಗೆ ನಿಶ್ಚಿತ ಬಡ್ಡಿ ಇರುತ್ತದೆ ಮತ್ತು ಆ ನಂತರ ಬದಲಾಗುವ ಬಡ್ಡಿ ದರಕ್ಕೆ ಬದಲಾಗುತ್ತದೆ,” ಎನ್ನುತ್ತಾರೆ ವಿಶ್ಲೇಷಕರು.
2. ಹಳೇ ಬಡ್ಡಿ ದರದ ಪದ್ಧತಿಯಲ್ಲೇ ಇದ್ದೀರಾ ಪರಿಶೀಲಿಸಿ
ಒಂದು ವೇಳೆ 2019ರ ಅಕ್ಟೋಬರ್ ಮುಂಚೆ ಗೃಹ ಸಾಲ ಪಡೆದಿದ್ದಲ್ಲಿ ಬಡ್ಡಿ ದರವು ಎಂಸಿಎಲ್ಆರ್ ಅಥವಾ ಬೇಸ್ ರೇಟ್ ಅಥವಾ ಬಿಪಿಎಲ್ಆರ್ ಮೇಲೆ ಆಧಾರವಾಗಿರುತ್ತದೆ. ಎಲ್ಲಿಯ ತನ ಹೊಸ ಪದ್ಧತಿ ಅಡಿ ಬದಲಾಯಿಸುವಂತೆ ಅಪ್ಲೈ ಮಾಡದ ಹೊರತು ಆ ದರ ಬದಲಾಗುವುದಿಲ್ಲ. ಒಂದು ವೇಳೆ ಸಾಲ ಪಡೆದದ್ದು ಬಹಳ ಹಿಂದೆ ಅಂತಾದರೆ ಅದನ್ನು ಪರಿಶೀಲಿಸಿಕೊಳ್ಳಬೇಕು. ಅದು ಇಬಿಆರ್ (ಎಕ್ಸ್ಟರ್ನಲ್ ಬೆಂಚ್ಮಾರ್ಕ್ ರೇಟ್)ಗಿಂತ ಹೆಚ್ಚಿರುತ್ತದೆ. ಸ್ವಲ್ಪ ಮಟ್ಟಿಗೆ ಶುಲ್ಕ ಪಾವತಿಸಿ, ಬದಲಾವಣೆ ಮಾಡಿಕೊಳ್ಳಬಹುದು.
3. ಕಡಿಮೆ ಬಡ್ಡಿ ದರ ಬೇರೆ ಬ್ಯಾಂಕ್ಗಳಲ್ಲಿ ದೊರೆಯುತ್ತದೆಯೇ ಪರಿಶೀಲಿಸಿ
ನೀವು ಸಾಲ ಪಡೆದ ಬ್ಯಾಂಕ್ನಲ್ಲಿ ಎಷ್ಟು ಬಡ್ಡಿ ದರ ವಿಧಿಸಲಾಗುತ್ತಿದೆ ಎಂಬುದನ್ನು ಇತರ ಪ್ರಮುಖ ಬ್ಯಾಂಕ್ಗಳ ಬಡ್ಡಿ ದರವನ್ನು ಹೋಲಿಕೆ ಮಾಡಬೇಕು. ಎಲ್ಲಿ ಸ್ಪರ್ಧಾತ್ಮಕ ಬಡ್ಡಿ ದರ ಇರುತ್ತದೆಯೋ ಅದನ್ನು ಗಮನಿಸಬೇಕು. ಬಡ್ಡಿ ದರ ಹೆಚ್ಚಳದ ನಂತರವೂ ಹಲವು ಬ್ಯಾಂಕ್ಗಳು ಈಗಲೂ ಕಡಿಮೆ ಬಡ್ಡಿ ದರದಲ್ಲಿ ಹೋಮ್ ಲೋನ್ ನೀಡುವಂಥ ಹಣಕಾಸು ಸಂಸ್ಥೆಗಳಿವೆ. ಒಂದು ವೇಳೆ ಈಗ ಪಾವತಿಸುತ್ತಿರುವ ಬಡ್ಡಿಯು ಜಾಸ್ತಿ ಇದ್ದಲ್ಲಿ ಎಲ್ಲಿ ಕಡಿಮೆಯೋ ಅಲ್ಲಿಗೆ ಬದಲಾಗಬಹುದು. ಎಚ್ಡಿಎಫ್ಸಿ, ಎಲ್ಐಸಿ ಹೌಸಿಂಗ್ ಫೈನಾನ್ಸ್ ಈ ಥರದ ಹಣಕಾಸು ಸಾಲ ನೀಡುವ ಸಂಸ್ಥೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಬ್ಯಾಂಕ್ಗಳಿಗೆ ಹೋಲಿಸಿದರೆ ಬಡ್ಡಿ ಹೆಚ್ಚಾಗುತ್ತದೆ. ಒಂದು ವೇಳೆ ಈಗ ಕಟ್ಟುವ ಬಡ್ಡಿ ದರಕ್ಕಿಂತ ಶೇ 0.5ಕ್ಕೂ ಹೆಚ್ಚು ಉಳಿತಾಯ ಆಗುತ್ತದೆ ಎಂದಾದಲ್ಲಿ ಹೊಸ ಸಂಸ್ಥೆಗೆ ಸಾಲವನ್ನು ಬದಲಾಯಿಸಿಕೊಳ್ಳುವುದು ಅನುಕೂಲಕರ.
4. ಹೆಚ್ಚಿನ ಕ್ರೆಡಿಟ್ ಸ್ಕೋರ್ಗೆ ಕಡಿಮೆ ಬಡ್ಡಿ ದರ
ಮರುಪಾವತಿಯಲ್ಲಿ ಶಿಸ್ತನ್ನು ಪಾಲಿಸುತ್ತಿದ್ದಲ್ಲಿ ಅದರ ಫಲಿತಾಂಶ ದೊರೆಯಲಿದೆ. ಈಗಾಗಲೇ’ ಹೌಸಿಂಗ್ ಲೋನ್ ಪಡೆದವರಲ್ಲಿ ಕ್ರೆಡಿಟ್ ಪ್ರೊಫೈಲ್ ಕ್ರೆಡಿಟ್ ಸ್ಕೋರ್ ಸುಧಾರಿಸಿದ್ದಲ್ಲಿ, ಹೋಮ್ ಲೋನ್ ಪಡೆದ ನಂತರ ಆದಾಯ ಅಥವಾ ವೃತ್ತಿಯ ಪ್ರೊಫೈಲ್ನಲ್ಲಿ ಬದಲಾವಣೆ ಆಗಿದ್ದಲ್ಲಿ ಅದನ್ನು ಇಟ್ಟುಕೊಂಡು ಬಡ್ಡಿ ದರದಲ್ಲಿ ಚೌಕಾಸಿ ಮಾಡಬಹುದು. ಗೃಹ ಸಾಲ ವರ್ಗಾವಣೆ ಮೂಲಕ ಬಡ್ಡಿ ದರ ಕಡಿಮೆ ಮಾಡಿಕೊಳ್ಳುವ ಅವಕಾಶ ಇರುತ್ತದೆ.
5. ಅದೇ ಬ್ಯಾಂಕ್ನಲ್ಲಿ ಮರುಪಾವತಿ ಅವಧಿ ವಿಸ್ತರಣೆ ಮಾಡಿಸಬಹುದು
ಕಡಿಮೆ ಬಡ್ಡಿ ದರಿಂದ ಹೆಚ್ಚಳ ಮಾಡಿದ ಮೇಲೆ ಹೆಚ್ಚಿನ ಇಎಂಐ ಪಾವತಿಸುವುದು ಕಷ್ಟವಾಗುತ್ತದೆ. ಅಂಥ ಸನ್ನಿವೇಶದಲ್ಲಿ ಮರುಪಾವತಿ ಅವಧಿ ವಿಸ್ತರಿಸಿ, ಇಎಂಐ ಕಡಿಮೆ ಮಾಡುವಂತೆ ಕೇಳಿಕೊಳ್ಳಬಹುದು. ನಿವೃತ್ತಿ ವಯಸ್ಸಾದ 60-65 ವರ್ಷದ ತನಕ ವಿಸ್ತರಿಸಬಹುದು. ನೀವು ಒಂದು ವೇಳೆ 35 ವರ್ಷ ವಯಸ್ಸಿನವರಾಗಿದ್ದಲ್ಲಿ, 20 ವರ್ಷಗಳ ಅವಧಿಗೆ ಸಾಲ ಪಡೆದಿದ್ದಲ್ಲಿ ಅದನ್ನು 25 ವರ್ಷಕ್ಕೆ ವಿಸ್ತರಿಸುವಂತೆ ಮನವಿ ಮಾಡಬಹುದು. ಮರುಪಾವತಿಯು ನೃತ್ತಿ ವಯಸ್ಸಾದ 60 ವರ್ಷಕ್ಕೆ ಪೂರ್ಣಗೊಳ್ಳುತ್ತದೆ.
6. ಹೋಮ್ ಸೇವರ್ ಆಯ್ಕೆ ಮಾಡಿಕೊಳ್ಳಬಹುದು
ಕೆಲವು ಹೋಮ್ ಲೋನ್ಗಳಲ್ಲಿ ಓವರ್ಡ್ರಾಫ್ಟ್ ರೀತಿಯ ಅನುಕೂಲ ಇರುತ್ತದೆ. ಈಗಾಗಲೇ ಸಾಲ ಪಡೆದವರು ಮತ್ತು ಹೊಸದಾಗಿ ಸಾಲ ಪಡೆಯುವವರು ಈ ಓವರ್ಡ್ರಾಫ್ಟ್ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಈ ವ್ಯವಸ್ಥೆ ಅಡಿಯಲ್ಲಿ ಓವರ್ಡ್ರಾಫ್ಟ್ ಖಾತೆಯನ್ನು ಕರೆಂಟ್ ಅಕೌಂಟ್ ಅಥವಾ ಉಳಿತಾಯ ಖಾತೆ ರೂಪದಲ್ಲಿ ಇರುತ್ತದೆ. ಸಾಲಗಾರರು ತಮ್ಮ ಅಗತ್ಯಕ್ಕೆ ತಕ್ಕಂತೆ ಆ ಖಾತೆಯಲ್ಲಿ ಹಣ ಹಾಕಬಹುದು ಹಾಗೂ ತೆರೆಯಬಹುದು. ಇಂಥ ಸಾಲಗಳನ್ನು ಪಡೆಯುವಾಗ ಎಲ್ಲಿಯ ತನಕ ಸಾಲ ಮರುಪಾವತಿ ಮಾಡುವುದಿಲ್ಲವೋ ಅಲ್ಲಿಯ ತನಕ ಬಡ್ಡಿಯನ್ನು ಪಾವತಿಸಲಾಗುತ್ತದೆ. ಈ ಸೂಪರ್ ಸೇವರ್ ವ್ಯವಸ್ಥೆಯು ಕಡ್ಡಾಯವಾಗಿ ಮರುಪಾವತಿ ಮಾಡಬೇಕಾದ ಒತ್ತಡವನ್ನು ತರುವುದಿಲ್ಲ. ಜತೆಗೆ ತಮಗೆ ಬೇಕಾದ ನಗದು ಅಗತ್ಯವನ್ನು ಪೂರೈಸುತ್ತದೆ. ಆದರೆ ಇಂಥ ಸಾಲದ ಮೇಲಿನ ಬಡ್ಡಿ ದರ ಶೇ 1ರಿಂದ 1.5ರಷ್ಟು ಹೆಚ್ಚಾಗುತ್ತದೆ.
7.ಅವಧಿ ವಿಸ್ತರಣೆ ಸಾಧ್ಯವಿಲ್ಲದಿದ್ದಲ್ಲಿ ಭಾಗಶಃ ಪೂರ್ವಪಾವತಿ ಸಹಾಯ ಮಾಡುತ್ತದೆ
ಒಂದು ವೇಳೆ ಹೋಮ್ ಲೋನ್ ಅವಧಿ ಈಗಾಗಲೇ ಗರಿಷ್ಠ ಅವಧಿಯನ್ನು ಆಯ್ಕೆ ಮಾಡಿಕೊಂಡಾಗಿದೆ ಎಂದಾದಲ್ಲಿ ಇನ್ನಷ್ಟು ಅವಧಿ ವಿಸ್ತರಣೆ ಅವಕಾಶ ಇಲ್ಲ ಎಂದರ್ಥ. ಭಾಗಶಃ ಮರುಪಾವತಿ ಮಾಡುವುದಷ್ಟೇ ಇಎಂಐ ಕಡಿಮೆ ಮಾಡಿಕೊಳ್ಳುವುದಕ್ಕೆ ಇರುವ ದಾರಿ. ಬಹುತೇಕ ರೀಟೇಲ್ ಹೋಮ್ ಲೋನ್ಗಳು ಬದಲಾಗುವ ಬಡ್ಡಿ ದರ ಆಗಿದೆ. ಆದ್ದರಿಂದ ಪೂರ್ವಪಾವತಿಗೆ ಯಾವುದೇ ದಂಡ ಇಲ್ಲ. ಒಂದು ವೇಳೆ ನಿಮ್ಮದು ಎಫ್.ಡಿ. ಇದ್ದು, ತೆರಿಗೆ ನಂತರದಲ್ಲಿ ಅದರ ರಿಟರ್ನ್ಸ್ ಕಡಿಮೆ ಆಗುತ್ತದೆ. ಆದ್ದರಿಂದ ಲೆಕ್ಕ ಗಮನಿಸುವುದಾದರೆ, ಹೋಮ್ ಲೋನ್ ಮುಂಚಿತವಾಗಿ ಪಾವತಿಸಿ, ಇಎಂಐ ಕಡಿಮೆ ಮಾಡಿಕೊಳ್ಳುವುದು ಉತ್ತಮ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Financial Changes: ಎಸ್ಬಿಐ ಹೋಮ್ ಲೋನ್ ದುಬಾರಿಯಿಂದ ಚಿನ್ನದ ಹಾಲ್ ಮಾರ್ಕಿಂಗ್ ತನಕ ಜೂನ್ ತಿಂಗಳ 5 ಪ್ರಮುಖ ಬದಲಾವಣೆಗಳಿವು
Published On - 11:52 am, Sat, 28 May 22