DA Hike: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಈ ಬಾರಿ ಶೇ. 4 ಅಲ್ಲ, ಶೇ. 3ರಷ್ಟು ಡಿಎ ಹೆಚ್ಚಳ; ಮೂಲಗಳಿಂದ ಮಾಹಿತಿ
Central Government Employees: ಕೇಂದ್ರ ಸರ್ಕಾರ ತನ್ನ ಇಲಾಖೆಗಳ ಉದ್ಯೋಗಿಗಳಿಗೆ ಈ ಬಾರಿ 3 ಪ್ರತಿಶತದಷ್ಟು ಡಿಎ ಮತ್ತು ಡಿಆರ್ ಅನ್ನು ಹೆಚ್ಚಳ ಮಾಡಬಹುದು ಎಂದು ವರದಿಗಳು ಹೇಳುತ್ತಿವೆ. ಹಿಂದಿನ ಕೆಲ ಸಾರಿಯಂತೆ ಈಗ 4 ಪ್ರತಿಶತದಷ್ಟು ಡಿಎ ಏರಬಹುದು ಎಂಬ ನಿರೀಕ್ಷೆ ಇತ್ತು.

ನವದೆಹಲಿ, ಆಗಸ್ಟ್ 6: ಕೇಂದ್ರ ಸರ್ಕಾರ ಡಿಎ ಮತ್ತು ಡಿಆರ್ (DA and DR) ಅನ್ನು 3 ಪ್ರತಿಶತ ಅಂಕಗಳಷ್ಟು (Percentage Points) ಹೆಚ್ಚಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. ಸದ್ಯ ಶೇ. 42ರಷ್ಟಿರುವ ಡಿಎ ಅಥವಾ ಡಿಯರ್ನೆಸ್ ಅಲೋಯನ್ಸ್ (ತುಟ್ಟಿಭತ್ಯೆ) ಶೇ. 45ಕ್ಕೆ ಹೆಚ್ಚಾಗಬಹುದು. ಡಿಆರ್ ಕೂಡ ಅಷ್ಟೇ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಹಣದುಬ್ಬರದ ಆಧಾರದ ಮೇಲೆ ಡಿಎ ಮತ್ತು ಡಿಆರ್ ಹೆಚ್ಚಳವನ್ನು ನಿರ್ಧರಿಸಲಾಗಿರುವುದು ತಿಳಿದುಬಂದಿದೆ. ಇದರೊಂದಿಗೆ ಒಂದು ಕೋಟಿಗೂ ಹೆಚ್ಚು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಖುಷಿಯ ಸುದ್ದಿ ಸಿಕ್ಕಿದೆ.
ಕಾರ್ಮಿಕ ಸಚಿವಾಲಯದ ಅಡಿಗೆ ಬರುವ ಕಾರ್ಮಿಕ ದಳ ಅಥವಾ ಲೇಬರ್ ಬ್ಯೂರೋ (Labour Bureau) ಪ್ರತೀ ತಿಂಗಳು ಔದ್ಯಮಿಕ ಕಾರ್ಮಿಕರ ಗ್ರಾಹಕ ಬೆಲೆ ಅನುಸೂಚಿ (CPI-IW) ದರಗಳನ್ನು ಬಿಡುಗಡೆ ಮಾಡುತ್ತದೆ. ಇದರ ಆಧಾರದ ಮೇಲೆ ಈ ಬಾರಿಯ ತುಟ್ಟಿಭತ್ಯೆ ಮತ್ತು ತುಟ್ಟಿಪರಿಹಾರದ ಪ್ರಮಾಣವನ್ನು ನಿರ್ಧರಿಸಲಾಗಿದೆ.
ಇದನ್ನೂ ಓದಿ: Air Traffic: ವಿಮಾನ ಹಾರಾಟ ಹೆಚ್ಚಳದಲ್ಲಿ ಭಾರತದಲ್ಲಿ ಬೆಂಗಳೂರು ನಂಬರ್ ಒನ್
ಸರ್ಕಾರ ವರ್ಷಕ್ಕೆ ಎರಡು ಬಾರಿ, ಜನವರಿ ಮತ್ತು ಜುಲೈಗೆ ಅನ್ವಯ ಆಗುವಂತೆ ಡಿಎ ಮತ್ತು ಡಿಆರ್ ಅನ್ನು ಪರಿಷ್ಕರಿಸುತ್ತದೆ. ಹಣದುಬ್ಬರ ಅಥವಾ ಬೆಲೆ ಏರಿಕೆಯ ಬಿಸಿ ತಾಕದಿರಲೆಂದು ಸಂಬಳಕ್ಕೆ ಹೆಚ್ಚುವರಿಯಾಗಿ ಡಿಎ ನೀಡಲಾಗುತ್ತದೆ. ಡಿಎ ಅನ್ನು ಸರ್ಕಾರಿ ಉದ್ಯೋಗಿಗಳಿಗೆ ನೀಡಿದರೆ, ಡಿಆರ್ ಎಂಬುದು ಪಿಂಚಣಿದಾರರಿಗೆ ಸಿಗುವ ಸೌಲಭ್ಯ.
ಇತ್ತೀಚೆಗೆ ಸಾಮಾನ್ಯವಾಗಿ 4 ಪ್ರತಿಶತದಷ್ಟು ಡಿಎ ಮತ್ತು ಡಿಆರ್ ಹೆಚ್ಚಳ ಮಾಡುತ್ತಾ ಬರಲಾಗಿದೆ. ಈ ಬಾರಿಯೂ 4 ಪರ್ಸಂಟೇಜ್ ಪಾಯಿಂಟ್ ಡಿಎ ಹೆಚ್ಚಾಗಬಹುದು ಎಂದು ಸರ್ಕಾರಿ ನೌಕರರು ನಿರೀಕ್ಷಿಸಿದ್ದರು. ಆದರೆ, ಔದ್ಯಮಿಕ ಕಾರ್ಮಿಕರ ಹಣದುಬ್ಬರ ದರದ ಪ್ರಕಾರ ಲೆಕ್ಕ ಮಾಡಲಾಗಿದ್ದು, 3 ಪ್ರತಿಶತದಷ್ಟು ಮಾತ್ರ ಡಿಎ ಮತ್ತು ಡಿಆರ್ ಏರಿಸಲು ಸರ್ಕಾರ ತೀರ್ಮಾನಿಸಿರುವುದು ತಿಳಿದುಬಂದಿದೆ.
ಇದನ್ನೂ ಓದಿ: Rupee: ಭಾರತದೊಂದಿಗೆ ಡಾಲರ್ ಬದಲು ರುಪಾಯಿಯಲ್ಲಿ ವ್ಯವಹಾರ ನಡೆಸುವ 22 ದೇಶಗಳು; ಇಲ್ಲಿದೆ ಇವುಗಳ ಪಟ್ಟಿ
ಈ ತಿಂಗಳೇ ಡಿಎ ಮತ್ತು ಡಿಆರ್ ಏರಿಕೆಯನ್ನು ಸರ್ಕಾರ ಘೋಷಿಸುವ ನಿರೀಕ್ಷೆ ಇದೆ. ಯಾವಾಗ ಘೋಷಿಸಿದರೂ, ದರಗಳು ಜುಲೈ ತಿಂಗಳಿಂದ ಅನ್ವಯ ಆಗುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ