ಕೇಂದ್ರ ಸರ್ಕಾರವು ರಸಗೊಬ್ಬರ ಸಬ್ಸಿಡಿ ಯೋಜನೆಯನ್ನು “ಪ್ರಧಾನಮಂತ್ರಿ ರಸಗೊಬ್ಬರ ಸಬ್ಸಿಡಿ ಯೋಜನೆ” ಎಂದು ಹೆಸರು ಇಡಲು ನಿರ್ಧರಿಸಿದೆ. ಈ ಬಗ್ಗೆ ರಸಗೊಬ್ಬರ ಸಚಿವಾಲಯವು ಬುಧವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ದೇಶದಾದ್ಯಂತ ಲಕ್ಷಾಂತರ ರೈತರು ಖರೀದಿಸಿದ ವಿವಿಧ ಬೆಳೆ ಪೋಷಕಾಂಶಗಳ ಬ್ಯಾಗ್‌ಗಳು ಏಕರೂಪದ ಹೊಸ ಲೋಗೋ ಮತ್ತು ವಿನ್ಯಾಸವನ್ನು ಸಹ ಹೊಂದಿರಲಿದ್ದು, ರಸಗೊಬ್ಬರ ಕಂಪನಿಗಳು ಗೊಬ್ಬರ ಬ್ಯಾಗ್ಗಳಲ್ಲಿ ಹೊಸ ಹೆಸರನ್ನು ಪ್ರದರ್ಶಿಸಲಿವೆ.
ಹೊಸ ಪ್ಯಾಕೇಜಿಂಗ್ ಮಾನದಂಡಗಳ ಪ್ರಕಾರ, ರಸಗೊಬ್ಬರ ಚೀಲದ ಮೇಲಿನ ಅರ್ಧದ ಮೂರನೇ ಎರಡರಷ್ಟು ಪ್ರದೇಶವನ್ನು ಸಬ್ಸಿಡಿ ಕಾರ್ಯಕ್ರಮದ ಅಧಿಕೃತ ಬ್ರ್ಯಾಂಡಿಂಗ್‌ಗಾಗಿ ಪ್ರಧಾನ ಮಂತ್ರಿಯ ಯೋಜನೆಯಾಗಿ ಬಳಸಲಾಗುತ್ತದೆ. ರಸಗೊಬ್ಬರ ಸಂಸ್ಥೆಯು ತನ್ನ ಸ್ವಂತ ಲೋಗೋ ಮತ್ತು ಬ್ರ್ಯಾಂಡಿಂಗ್ ಮತ್ತು ಉತ್ಪನ್ನಕ್ಕೆ ಸಂಬಂಧಿಸಿದ ಇತರ ಮಾಹಿತಿಯನ್ನು ಮುದ್ರಿಸಲು ಉಳಿದ ಮೂರನೇ ಒಂದು ಭಾಗವನ್ನು ಬಳಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
“ಯೂರಿಯಾ, ಡಿಎಪಿ, ಎಂಒಪಿ ಮತ್ತು ಎನ್‌ಪಿಕೆ ಇತ್ಯಾದಿಗಳಿಗೆ ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ ಎಂಒಪಿ ಮತ್ತು ಭಾರತ್ ಎನ್‌ಪಿಕೆ ಎಂಬ ಒಂದೇ ಬ್ರಾಂಡ್ ಹೆಸರು ಇರಲಿದೆ. ಗೊಬ್ಬರ ಸಬ್ಸಿಡಿ ಯೋಜನೆಯನ್ನು ಸೂಚಿಸುವ ಲೋಗೋ ಅಂದರೆ ಪ್ರಧಾನಮಂತ್ರಿ ಭಾರತೀಯ ರಸಗೊಬ್ಬರ ಸಬ್ಸಿಡಿ ಯೋಜನೆ ಹೆಸರನ್ನು ರಸಗೊಬ್ಬರ ಚೀಲಗಳಲ್ಲಿ ಬಳಸಲಾಗುವುದು” ಎಂದು ಅಧಿಸೂಚನೆಲ್ಲಿ ತಿಳಿಸಲಾಗಿದೆ.
ಅಧಿಸೂಚನೆಯ ಪ್ರಕಾರ, ಹೊಸ ರಸಗೊಬ್ಬರ ಸಬ್ಸಿಡಿ ಕಾರ್ಯಕ್ರಮವನ್ನು “ಒಂದು ರಾಷ್ಟ್ರ ಒಂದು ರಸಗೊಬ್ಬರಗಳು” ಎಂದು ಕರೆಯಲಾಗುತ್ತದೆ. ಎಲ್ಲಾ ಹಳೆಯ ಪ್ಯಾಕೇಜಿಂಗ್ ಬ್ಯಾಗ್‌ಗಳನ್ನು ಖಾಲಿ ಮಾಡಲು ಕಂಪನಿಗಳಿಗೆ ಡಿಸೆಂಬರ್ 31 ರವರೆಗೆ ಕಾಲಾವಕಾಶ ಇರಲಿದೆ. ಬುಧವಾರ ಹೊರಡಿಸಲಾದ ಅಧಿಸೂಚನೆಯು ಯೂರಿಯಾ, ಡಿಎಪಿ ಮತ್ತು ಎಂಒಪಿಯಂತಹ ವಿವಿಧ ರಸಗೊಬ್ಬರಗಳಿಗೆ ಹೊಸ ಪ್ಯಾಕೇಜಿಂಗ್ ಚೀಲಗಳ ವಿವರವಾದ ಎಸ್‌ಒಪಿಗಳು ಮತ್ತು ಮಾದರಿ ವಿನ್ಯಾಸಗಳನ್ನು ಒಳಗೊಂಡಿದೆ. ಅಕ್ಟೋಬರ್‌ನಲ್ಲಿ ಹೊಸ ಚೀಲಗಳು ಮಾರುಕಟ್ಟೆಗೆ ಬರುವ ಸಾಧ್ಯತದೆ ಇದೆ.
ಫೆಡರಲ್ ಸಬ್ಸಿಡಿ ಕಾರ್ಯಕ್ರಮದ ಅಡಿಯಲ್ಲಿ, ಕೇಂದ್ರ ಸರ್ಕಾರವು ರಸಗೊಬ್ಬರ ಕಂಪನಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಬೆಳೆಗಾರರಿಗೆ ಮಾರಾಟ ಮಾಡಲು ಮರುಪಾವತಿ ಮಾಡುತ್ತದೆ. ಈ ಸಬ್ಸಿಡಿಯು 2021-22ರಲ್ಲಿ 1.62 ಲಕ್ಷ ಕೋಟಿ ರೂ.ನಷ್ಟಿತ್ತು ಮತ್ತು 2022-23ರಲ್ಲಿ ಅಂತಾರಾಷ್ಟ್ರೀಯ ಬೆಲೆಗಳ ಏರಿಕೆಯಿಂದಾಗಿ 2.50 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ. ಡೈ ಅಮೋನಿಯಂ ಫಾಸ್ಫೇಟ್ನಂತಹ ಪ್ರಮುಖ ಬೆಳೆ ಪೋಷಕಾಂಶಗಳ ಬಹುಪಾಲು ದೇಶೀಯ ಬೇಡಿಕೆಯನ್ನು ಪೂರೈಸಲು ಭಾರತವು ಆಮದುಗಳ ಮೇಲೆ ಅವಲಂಬಿತವಾಗಿದೆ.
ಪೂರೈಕೆ ಅಡಚಣೆಯಿಂದಾಗಿ ಜಾಗತಿಕ ರಸಗೊಬ್ಬರ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. ಉಕ್ರೇನ್ ಯುದ್ಧದ ಕಾರಣದಿಂದಾಗಿ ದುಬಾರಿ ಕಚ್ಚಾ ವಸ್ತುಗಳು, ಹೆಚ್ಚಿನ ಸರಕು ಸಾಗಣೆ ಶುಲ್ಕಗಳು ಮತ್ತು ಬಿಗಿಯಾದ ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲ ಪೂರೈಕೆಗಳು ಈ ವರ್ಷ ರಸಗೊಬ್ಬರ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಈ ಆರ್ಥಿಕ ವರ್ಷದಲ್ಲಿ ಈಗಾಗಲೇ ಎರಡು ಬಾರಿ ರಸಗೊಬ್ಬರ ಸಬ್ಸಿಡಿಯನ್ನು ಹೆಚ್ಚಿಸಿದೆ. ಬೇಸಿಗೆ ಬಿತ್ತನೆಯ ಹಂಗಾಮಿಗೆ ಸ್ಥಳೀಯ ರಸಗೊಬ್ಬರಗಳಿಗೆ ಬೆಂಬಲ ಮತ್ತು ಸರಕು ಸಾಗಣೆ ಸಬ್ಸಿಡಿ ಸೇರಿದಂತೆ 60,939.23 ಕೋಟಿ ರೂ. ಸಬ್ಸಿಡಿಯನ್ನು ಸರ್ಕಾರ ಅನುಮೋದಿಸಿದೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:43 pm, Thu, 25 August 22