Centrum Bank- Bharat Pe Takeover: ಪಿಎಂಸಿ ಬ್ಯಾಂಕ್ ಈಗ ಸೆಂಟ್ರಮ್ ತೆಕ್ಕೆಗೆ; ಠೇವಣಿದಾರರ ಹಣ ಮರಳಬಹುದೇ?

ಹಗರಣಕ್ಕೆ ಸಿಲುಕಿಕೊಂಡ ಪಿಎಂಸಿ ಬ್ಯಾಂಕ್ ಅನ್ನು ಸೆಂಟ್ರಮ್ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಇದರಿಂದ ಪಿಎಂಸಿ ಬ್ಯಾಂಕ್ ಹೂಡಿಕೆದಾರರಿಗೆ ಹಣ ವಾಪಸ್ ದೊರೆಯಬಹುದೇ? ಇಲ್ಲಿದೆ ವಿಶ್ಲೇಷಣೆ.

Centrum Bank- Bharat Pe Takeover: ಪಿಎಂಸಿ ಬ್ಯಾಂಕ್ ಈಗ ಸೆಂಟ್ರಮ್ ತೆಕ್ಕೆಗೆ; ಠೇವಣಿದಾರರ ಹಣ ಮರಳಬಹುದೇ?
ಪ್ರಾತಿನಿಧಿಕ ಚಿತ್ರ
Edited By:

Updated on: Jun 19, 2021 | 7:42 PM

ಸಣ್ಣ ಹಣಕಾಸು ಬ್ಯಾಂಕ್ (ಎಸ್‌ಎಫ್‌ಬಿ) ಸ್ಥಾಪಿಸಲು ಸೆಂಟ್ರಮ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ಗೆ (ಸಿಎಫ್‌ಎಸ್ಎಲ್) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ “ತಾತ್ವಿಕವಾಗಿ” ಅನುಮೋದನೆ ನೀಡಿದ್ದು, ಹಗರಣಕ್ಕೆ ಸಿಲುಕಿದ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ (ಪಿಎಮ್‌ಸಿ) ಬ್ಯಾಂಕ್ ಅನ್ನು ಪಾಲುದಾರ ಭಾರತ್‌ಪೇ, ಡಿಜಿಟಲ್ ಪಾವತಿ ಸಂಸ್ಥೆ ಜತೆಗೂಡಿ ಸ್ವಾಧೀನಪಡಿಸಿಕೊಳ್ಳಲು ಇದು ದಾರಿ ಮಾಡಿಕೊಟ್ಟಿದೆ. ಈವರೆಗೆ, ಪಿಎಂಸಿ ಠೇವಣಿದಾರರು ಯೋಜನೆಯ ವಿವರಗಳಿಗಾಗಿ ಕಾಯುತ್ತಿದ್ದಾರೆ ಮತ್ತು ಅಂತಿಮವಾಗಿ ತಮ್ಮ ಹಣ ಮರಳಿ ಪಡೆಯಬಹುದೆಂದು ಭರವಸೆ ಇರಿಸಿದ್ದಾರೆ.

ಪಿಎಂಸಿ ಠೇವಣಿದಾರರು ತಮ್ಮ ಹಣವನ್ನು ಮರಳಿ ಪಡೆಯುತ್ತಾರೆಯೇ?
ಪಿಎಂಸಿ ಬ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಆರ್​ಬಿಐ ಸೆಂಟ್ರಮ್ ಮತ್ತು ಭಾರತ್​ಪೇ ಜಂಟಿ ಉದ್ಯಮಕ್ಕೆ ದಾರಿ ಮಾಡಿಕೊಟ್ಟರೆ, ಪಿಎಂಸಿ ಬ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಯೋಜನೆಗಳ ವಿವರಗಳೊಂದಿಗೆ ಕೇಂದ್ರ ಬ್ಯಾಂಕ್ ಬಂದಿಲ್ಲ. ಬ್ಯಾಂಕ್ ವಿಲೀನಗಳ ಹಿಂದಿನ ಪ್ರಕರಣಗಳಲ್ಲಿ ಆದಂತೆ ಏನಾದರೂ ಆದಲ್ಲಿ ಅಂತಿಮವಾಗಿ ಪಿಎಂಸಿ ಬ್ಯಾಂಕ್ ಠೇವಣಿದಾರರು ಫಿಕ್ಸೆಡ್ ಡೆಪಾಸಿಟ್​ನಲ್ಲಿ ಸಿಲುಕಿಕೊಂಡ ಹಣವನ್ನು ಮರಳಿ ಪಡೆಯುವ ಸಾಧ್ಯತೆಯಿದೆ. ಆದರೂ ಪರಿಣತರು ಹೇಳುವ ಪ್ರಕಾರ, ಅಂತಹ ಸಂದರ್ಭಗಳಲ್ಲಿ ಠೇವಣಿದಾರರ ಭದ್ರತೆ ಖಾತ್ರಿ ಪಡಿಸುವ ಇತಿಹಾಸವನ್ನು ಆರ್‌ಬಿಐ ಹೊಂದಿದ್ದರೆ, ಠೇವಣಿದಾರರಿಗೆ ಮರುಪಾವತಿ ಮಾಡುವ ವಿಚಾರವು ಆರ್‌ಬಿಐ ಮತ್ತು ಸೆಂಟ್ರಮ್-ಭಾರತ್‌ಪೇ ನಡುವಿನ ಒಪ್ಪಂದ ಯೋಜನೆಯ ಮೇಲೆ ಅವಲಂಬಿತವಾಗಿರುತ್ತದೆ.

ಹೊಣೆಗಾರಿಕೆಗಳ (ಠೇವಣಿಗಳು) ಭಾಗವನ್ನು ಈಕ್ವಿಟಿ ಕ್ಯಾಪಿಟಲ್ ಆಗಿ ಪರಿವರ್ತಿಸಲು ಸೆಂಟ್ರಮ್​ಗೆ ಆರ್​ಬಿಐ ಅನುಮತಿಸುತ್ತದೆಯೇ ಅಥವಾ ಹೂಡಿಕೆದಾರರ ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ)ನಲ್ಲಿ ವಿಮೆ ಮಾಡಿದ ಮೊತ್ತವನ್ನು ಮಾತ್ರ ಮರಳಿ ಪಡೆಯುತ್ತಾರೆಯೇ ಎಂಬುದು ಮುಖ್ಯ ಸಮಸ್ಯೆಗಳು. “ಈ ಸ್ವಾಧೀನದ ಅತಿ ಮುಖ್ಯ ಉದ್ದೇಶ ಠೇವಣಿದಾರರ ಹಿತಾಸಕ್ತಿಯನ್ನು ಕಾಪಾಡುವುದು, ಠೇವಣಿದಾರರು ಕೆಲವು ತ್ಯಾಗಗಳನ್ನು ಮಾಡುವ ನಿರೀಕ್ಷೆಯಿದೆ. ಇದು ಎನ್‌ಬಿಎಫ್‌ಸಿ ಬ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಅಪರೂಪದ ಪ್ರಕರಣವಾಗಿದೆ ಆದರೆ ಇದು ಮುಂದಿನ ಏಕೈಕ ಮಾರ್ಗವಾಗಿದೆ ಮತ್ತು ಭವಿಷ್ಯದಲ್ಲಿ ಇಂತಹ ಹಲವು ವಹಿವಾಟುಗಳನ್ನು ನಾನು ನಿರೀಕ್ಷಿಸುತ್ತೇನೆ,” ಎಂದು ಅಶ್ವಿನ್ ಪರೇಖ್ ಸಲಹಾ ಸೇವೆಗಳ (ಎಪಿಎಎಸ್) ವ್ಯವಸ್ಥಾಪಕ ಪಾಲುದಾರ ಅಶ್ವಿನ್ ಪರೇಖ್ ಹೇಳಿದ್ದಾರೆ.

ಈ ಸ್ವಾಧೀನದಿಂದ ಠೇವಣಿದಾರರು ಏನು ನಿರೀಕ್ಷಿಸಬಹುದು?
ಠೇವಣಿದಾರರಿಗೆ ಪಾವತಿಸುವಾಗ ಎರಡು ಸಾಧ್ಯತೆಗಳಿವೆ ಎಂದು ಹಣಕಾಸು ಸೇವೆಗಳ ಪಾಲುದಾರ ಮತ್ತು ರಾಷ್ಟ್ರೀಯ ಮುಖಂಡ ಅಭಿಜರ್ ದಿವಾಂಜಿ ಹೇಳಿದರು. ಠೇವಣಿದಾರರು ಸ್ವಲ್ಪ ಹಣದ ಇಳಿಕೆಯನ್ನು (ಹೇರ್​ಕಟ್) ಒಪ್ಪಿಕೊಳ್ಳಬೇಕಾಗುತ್ತದೆ. ಅಥವಾ ಮುಂದೂಡಲ್ಪಟ್ಟ ಪಾವತಿಯನ್ನು ಸ್ವೀಕರಿಸಬೇಕಾಗುತ್ತದೆ. “ಈ ಸಂದರ್ಭದಲ್ಲಿ ಆರ್‌ಬಿಐ ಮತ್ತು ಸೆಂಟ್ರಮ್-ಭಾರತ್‌ಪೇ ನಡುವಿನ ಮಾತುಕತೆಯ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ. ಮೊದಲು ಬ್ಯಾಂಕಿನ ಇಕ್ವಿಟಿಯನ್ನು ರೈಟ್ ಆಫ್ ಮಾಡಲಾಗುತ್ತದೆ ಮತ್ತು ಈಕ್ವಿಟಿಯನ್ನು ನಿವ್ವಳಗೊಳಿಸಿದ ನಂತರ, ಬ್ಯಾಂಕಿನ ನಿವ್ವಳ ನೈಜ ಆಸ್ತಿಗಳು ನಿವ್ವಳ ಹೊಣೆಗಾರಿಕೆಗಳಿಗಿಂತ ಹೆಚ್ಚಿದ್ದರೆ, ಎಲ್ಲಾ ಠೇವಣಿದಾರರು ಸುರಕ್ಷಿತವಾಗಿರುತ್ತಾರೆ.

ಆದರೆ ಬ್ಯಾಂಕಿನ ನಿವ್ವಳ ಆಸ್ತಿಯು (ಅಸೆಟ್ಸ್) ನಿವ್ವಳ ಹೊಣೆಗಾರಿಕೆಗಳಿಗಿಂತ (ಲಯಾಬಿಲಿಟಿ) ಕಡಿಮೆಯಿದ್ದರೆ, ಠೇವಣಿದಾರರು 5 ಲಕ್ಷ ರೂ.ಗಳ ಡಿಐಜಿಸಿ ಯೋಜನೆಯ ವ್ಯಾಪ್ತಿಗೆ ಸುರಕ್ಷಿತರಾಗುತ್ತಾರೆ. ಆದ್ದರಿಂದ, ಯಾವುದೇ ಠೇವಣಿದಾರರು 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಠೇವಣಿ ಹೊಂದಿದ್ದರೆ, ಅವರು ಬಾಕಿ ಹಣವನ್ನು ರೈಟ್ ಆಫ್ ಮಾಡಬೇಕಾಗಬಹುದು ಅಥವಾ ಆರ್‌ಬಿಐನೊಂದಿಗೆ ಸೆಂಟ್ರಮ್-ಭಾರತ್‌ಪೇ ಮಾತುಕತೆ ನಡೆಸಿದ ಅದರ ಅನುಗುಣವಾಗಿ ಕೆಲವು ಮುಂದೂಡಲ್ಪಟ್ಟ ಪಾವತಿಗಳನ್ನು ಪಡೆಯಬಹುದು ಎಂದು ದಿವಾಂಜಿ ಹೇಳಿದ್ದಾರೆ.

ಇಲ್ಲಿಯವರೆಗೆ, ಅಂತಹ ಸಂದರ್ಭಗಳಲ್ಲಿ ಠೇವಣಿದಾರರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಾಯ್ದುಕೊಳ್ಳುವ ಇತಿಹಾಸವನ್ನು ಆರ್‌ಬಿಐ ಹೊಂದಿದೆ. ಕಳೆದ ವರ್ಷ ಎಸ್‌ಬಿಐ ನೇತೃತ್ವದ ಒಕ್ಕೂಟವು ಯೆಸ್ ಬ್ಯಾಂಕ್‌ಗೆ ಸಂಕಷ್ಟದಿಂದ ಹೊರಬರುವುದಲ್ಲೆ ಹಣಕಾಸು ನೆರವು ನೀಡಿದಾಗ, ಯಾವುದೇ ಠೇವಣಿದಾರರು ತಮ್ಮ ಹಣವನ್ನು ಕಳೆದುಕೊಂಡಿಲ್ಲ. ಪಿಎಂಸಿ ತನ್ನ ಆಸಕ್ತಿಯ ಅಭಿವ್ಯಕ್ತಿಯಲ್ಲಿ (ಇಒಐ) ಏನು ಹೇಳಿದೆ?

ಕಳೆದ ವರ್ಷ ಬ್ಯಾಂಕ್ ಹೊರಡಿಸಿದ ಆಸಕ್ತಿ ವ್ಯಕ್ತಪಡಿಸುವ ಪ್ರಕಾರ, ಸ್ವಾಧೀನಪಡಿಸಿಕೊಳ್ಳಲು ಬಯಸುವ ಹೂಡಿಕೆದಾರರು ಅಪಾಯವನ್ನು ಎದುರಿಸಲು ಅಗತ್ಯವಾದ ಕನಿಷ್ಠ ಬಂಡವಾಳವನ್ನು ಸಾಧಿಸಲು ಬ್ಯಾಂಕಿಗೆ ಅನುವು ಮಾಡಿಕೊಡುವ ಬಂಡವಾಳವನ್ನು ತರಬೇಕಾಗುತ್ತದೆ. ಶೇಕಡಾ 9ರ ಅಪಾಯದ ವೇಯ್ಟೆಡ್ ಆಸ್ತಿ ಅನುಪಾತವನ್ನು (ಸಿಆರ್​ಎಆರ್) ಸಾಧಿಸಬೇಕು. “ಆದರೂ ಹೂಡಿಕೆದಾರರು ಠೇವಣಿ ಹೊಣೆಗಾರಿಕೆಗಳ ಒಂದು ಭಾಗವನ್ನು ಬಂಡವಾಳ/ ಬಂಡವಾಳ ಸಾಧನಗಳಾಗಿ ಪುನರ್​ರಚಿಸುವ ಆಯ್ಕೆಯನ್ನು ಅನ್ವೇಷಿಸಬಹುದು. ಠೇವಣಿದಾರರಿಗೆ 5 ಲಕ್ಷ ರೂಪಾಯಿ (ವಿಮೆ ಮಾಡಿದ ಠೇವಣಿ) ಪಾವತಿಸಲು ಬ್ಯಾಂಕ್​ನಿಂದ ಡಿಐಜಿಸಿಯನ್ನು ಬೆಂಬಲಿಸಲು ಕೋರಬಹುದು,” ಎಂದು ಇಒಐನಲ್ಲಿ ತಿಳಿಸಿದೆ.

ಎಕ್ಸ್​ಚೇಂಜ್​ನಲ್ಲಿ ಲಿಸ್ಟಿಂಗ್ ಆಗುವುದಕ್ಕೆ ಕೆಲವು ವರ್ಷಗಳು
ಠೇವಣಿದಾರರಿಗೆ ಈ ನಿಯಮ ಹಾಗೂ ನಿಬಂಧನೆ ಬಗ್ಗೆ ಆತಂಕ ಇದೆ. ಒಂದು ವೇಳೆ ಹೊಸ ಮಾಲೀಕರು ಠೇವಣಿಯನ್ನು ಬಂಡವಾಳವಾಗಿ ಬದಲಾಯಿಸಿ, ಡಿಐಸಿಜಿಸಿ ಜತೆ ಇನ್ಷೂರೆನ್ಸ್ ಮಾಡಿಸಿರುವ 5 ಲಕ್ಷ ರೂಪಾಯಿಯೊಳಗಿನ ಮೊತ್ತ ಮಾತ್ರ ಹಿಂತಿರುಗಿಸಿದರೆ ಎಂಬ ಆತಂಕ ಇದೆ. ಆಗ ಠೇವಣಿದಾರರು ಹಣ ಕಳೆದುಕೊಳ್ಳುತ್ತಾರೆ. ಹೊಸ ಸ್ಮಾಲ್ ಫೈನಾನ್ಸ್ ಬ್ಯಾಂಕ್​ ಎಕ್ಸ್​ಚೇಂಜ್​ನಲ್ಲಿ ಲಿಸ್ಟಿಂಗ್ ಆಗುವುದಕ್ಕೆ ಕೆಲವು ವರ್ಷಗಳೇ ಬೇಕಾಗುತ್ತದೆ.

ಪಿಎಂಸಿ ಬ್ಯಾಂಕ್ ಒಟ್ಟು ಠೇವಣಿ 10,727.12 ಕೋಟಿ ರೂಪಾಯಿ ಮತ್ತು ಒಟ್ಟು ಮುಂಗಡ 4472.78 ಕೋಟಿ ರೂಪಾಯಿ ಇದೆ. ಸಗಟು ಅನುತ್ಪಾದಕ ಆಸ್ತಿಗಳು (ಎನ್‌ಪಿಎ) ಮಾರ್ಚ್ 31, 2020ರ ವೇಳೆಗೆ 3518.89 ಕೋಟಿ ರೂಪಾಯಿ ಇದ್ದರೆ, ಬ್ಯಾಂಕಿನ ಷೇರು ಬಂಡವಾಳ 292.94 ಕೋಟಿ ರೂಪಾಯಿ ಇದೆ. ಆದರೆ 2019-20ರಲ್ಲಿ ಬ್ಯಾಂಕ್ 6,835 ಕೋಟಿ ರೂ. ನಿವ್ವಳ ನಷ್ಟವನ್ನು ನಕಾರಾತ್ಮಕ ನಿವ್ವಳ ಮೌಲ್ಯ 5850.61 ಕೋಟಿ ರೂಪಾಯಿ ಇದೆ. ಆರ್‌ಬಿಐ 2019 ರಲ್ಲಿ ಪಿಎಮ್‌ಸಿ ಬ್ಯಾಂಕಿನ ಮಂಡಳಿಯನ್ನು ವಜಾಗೊಳಿಸಿದಾಗ, ಆರಂಭದಲ್ಲಿ ಅದು ಪ್ರತಿ ಖಾತೆಗೆ 1,000 ರೂಪಾಯಿಗಳ ಠೇವಣಿ ವಾಪಸಾತಿ ನಿರ್ಬಂಧ ಹಾಕಿತು. ಆ ನಂತರ ಅದನ್ನು 50,000 ರೂಪಾಯಿಗಳಿಗೆ ಹೆಚ್ಚಿಸಲಾಯಿತು. ಅಂದಿನಿಂದ ಸುಮಾರು ಶೇ 78 ಠೇವಣಿದಾರರು ತಮ್ಮ ಠೇವಣಿಗಳನ್ನು 50,000 ರೂಪಾಯಿ ವಾಪಸಾತಿ ಮಿತಿಯೊಳಗೆ ಹಿಂಪಡೆಯಲು ಅನುಮತಿಸಲಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಈ ಮಿತಿಯನ್ನು 1 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದ್ದರೂ, ದೊಡ್ಡ ಮೊತ್ತವನ್ನು ಬ್ಯಾಂಕಿನಲ್ಲಿ ಇಟ್ಟಿರುವ ಅನೇಕ ಠೇವಣಿದಾರರು ಇನ್ನೂ ತಮ್ಮ ಹಣವನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: Bank deposit insurance: ಬ್ಯಾಂಕ್​ ಠೇವಣಿ ಮೇಲೆ ಗರಿಷ್ಠ ಇನ್ಷೂರೆನ್ಸ್ 5 ಲಕ್ಷ ರೂ.; ಅದಕ್ಕೂ ಹೆಚ್ಚು ಮೊತ್ತಕ್ಕೆ ಕವರೇಜ್ ಹೇಗೆ?

(RBI Friday allowed Centrum bank to take over PMC bank. Will depositors get their money back? Explained here)

Published On - 7:36 pm, Sat, 19 June 21

Follow Us