Coca Cola: ಸ್ವಿಗ್ಗಿ, ಜೊಮಾಟೋಗೆ ಸೆಡ್ಡು ಹೊಡೆಯಲು ಬರುತ್ತಿದೆಯಾ ಕೋಕಾ ಕೋಲ? ಥ್ರೈವ್ ಜೊತೆ ನಿಂತ ಕೋಲಾ
Stake In Thrive App: ಆನ್ಲೈನ್ ಫುಡ್ ಡೆಲಿವರಿ ಕಂಪನಿಗಳಾದ ಸ್ವಿಗ್ಗಿ ಮತ್ತು ಜೊಮಾಟೋದ ಪ್ರತಿಸ್ಪರ್ಥಿ ಎನಿಸಿರುವ ಥ್ರೈವ್ ಸಂಸ್ಥೆಯಲ್ಲಿ ಕೋಕಾ ಕೋಲಾ ಪಾಲುದಾರಿಕೆ ಪಡೆದಿದೆ. ಇದು ಕೋಕಾ ಕೋಲಾ ಮತ್ತು ಥ್ರೈವ್ ಈ ಎರಡೂ ಕಂಪನಿಗಳಿಗೂ ಲಾಭದಾಯಕವಾಗಿ ಪರಿಣಮಿಸಬಹುದು. ಅದು ಹೇಗೆ ಎಂಬ ವಿವರ ಇಲ್ಲಿದೆ...
ನವದೆಹಲಿ: ಜಾಗತಿಕ ಪಾನೀಯ ಉತ್ಪನ್ನಗಳ ದೈತ್ಯ ಕೋಕಾ ಕೋಲ (Coca Cola) ಭಾರತದಲ್ಲಿ ಆನ್ಲೈನ್ ಫುಡ್ ಡೆಲಿವರಿ ಕ್ಷೇತ್ರಕ್ಕೆ (Online Food Delivery Platform) ಬರುತ್ತಿರುವಂತೆ ತೋರುತ್ತಿದೆ. ಸ್ವಿಗ್ಗಿ, ಜೊಮಾಟೋ ಜೊತೆ ನೇರ ಪೈಪೋಟಿಗೆ ಬಿದ್ದಿರುವ ಥ್ರೈವ್ (Thrive App) ಎಂಬ ಆನ್ಲೈನ್ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಕಂಪನಿಯ ಒಂದಿಷ್ಟು ಪಾಲನ್ನು ಕೋಕ ಕೋಲಾ ಖರೀದಿಸಿದೆ. ಈ ಬೆಳವಣಿಗೆ ಯಾಕೆ ಮಹತ್ವದ್ದು ಎಂದರೆ, ಕೋಕ ಕೋಲ ಭಾರತದಲ್ಲಿ ಈ ಹಿಂದೆ ಯಾವ ಸ್ಟಾರ್ಟಪ್ಗೂ ಹೂಡಿಕೆ ಮಾಡಿಲ್ಲ. ಕೋಕಾ ಕೋಲಾ ಹೂಡಿಕೆ ಮಾಡುತ್ತಿರುವ ಮೊದಲ ಸ್ಟಾರ್ಟಪ್ ಥ್ರೈವ್. ಗಮನಿಸಬೇಕಾದ ಸಂಗತಿ ಎಂದರೆ ಥ್ರೈವ್ ಕಂಪನಿಯನ್ನು ಕೋಕಾ ಕೋಲಾ ಖರೀದಿಸುತ್ತಿಲ್ಲ. ಅಥವಾ ಹೆಚ್ಚಿನ ಪಾಲು ಪಡೆದು ಅತಿದೊಡ್ಡ ಷೇರುದಾರ ಎನಿಸಲು ಹೊರಟಿಲ್ಲ. ಬದಲಾಗಿ ಶೇ. 15ರಷ್ಟು ಪಾಲನ್ನು ಕೋಕಾ ಕೋಲಾ ಖರೀದಿಸಿದೆ. ಡಾಮಿನೋಸ್ ಪೀಜ್ಜಾ ಮಾಲೀಕ ಜುಬಿಲೆಂಡ್ ಫೂಡ್ವರ್ಕ್ಸ್ ಸಂಸ್ಥೆ 2021ರಲ್ಲಿ ಥ್ರೈವ್ನ ಶೇ. 35ರಷ್ಟು ಪಾಲನ್ನು 24.7 ಕೋಟಿ ರುಪಾಯಿಗೆ ಖರೀದಿ ಮಾಡಿತ್ತು. ಈಗ ಅದರ ಪಾಲು ಶೇ. 29.75ಕ್ಕೆ ಇಳಿದಿದೆ. ಇದೇ ಹೊತ್ತಿನಲ್ಲಿ ಕೋಕಾ ಕೋಲ ಕೂಡ ಥ್ರೈವ್ನ ಪಾಲುದಾರಿಕೆಗೆ ಬಂದಿದೆ.
ಥ್ರೈವ್ ಜೊತೆ ಕೋಕಾ ಕೋಲಾ ಸೇರಿಕೊಂಡರೆ ಭಾರತದ ಆನ್ಲೈನ್ ಫುಡ್ ಡೆಲಿವರಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗುವ ನಿರೀಕ್ಷೆ ಇದೆ. ಥ್ರೈವ್ನ ಸಹ ಸಂಸ್ಥಾಪಕ ಹಾಗೂ ಸಿಇಒ ಕೃಷಿ ಫಾಗ್ವಾನಿ ಕೂಡ ಇದೇ ನಿರೀಕ್ಷೆಯಲ್ಲಿದ್ದಾರೆ. ಭಾರತದ ಕೋಕಾ ಕೋಲಾ ನಾಯಕತ್ವ ತಂಡ ನಮ್ಮ ಗುರಿಗಳಿಗೆ ಉತ್ತಮವಾಗಿ ಸ್ಪಂದಿಸುವಂತಿದೆ. ಥ್ರೈವ್ ಮತ್ತು ಕೋಕಾ ಕೋಲಾ ಸೇರಿದರೆ ಈ ಕ್ಷೇತ್ರದಲ್ಲಿ ಸಕಾರಾತ್ಮಕವಾಗಿ ಮುನ್ನಡೆಯಲು ಸಾಧ್ಯವಾಗಬಹುದು ಎಂದು ಕೃಷಿ ಫಗ್ವಾನಿ ಅಭಿಪ್ರಾಯಪಟ್ಟಿದ್ದಾರೆ.
ಥ್ರೈವ್ ಜೊತೆ ಸೇರಿದರೆ ಕೋಕಾ ಕೋಲಾಗೆ ಏನು ಲಾಭ?
ಕೋಕಾ ಕೋಲಾ ಬಳಿ ಬಹಳಷ್ಟು ಬಂಡವಾಳ ಇದೆ. ಥ್ರೈವ್ ಜೊತೆ ಕೋಕಾ ಕೋಲಾ ಕೆಲ ಪ್ರಮುಖ ವ್ಯಾವಹಾರಿಕ ಹೊಂದಾಣಿಕೆ ಮಾಡಿಕೊಳ್ಳಬಹುದು. ಕೋಕಾ ಕೋಲಾದ ಪ್ರಮುಖ ಉತ್ಪನ್ನಗಳೆಂದರೆ ಕೋಕ್, ಥಮ್ಸ್ ಅಪ್, ಸ್ಪ್ರೈಟ್, ಫಾಂಟಾ, ಮಾಜಾ, ಲಿಮ್ಕಾ, ರಿಮ್ ಝಿಮ್. ಇವುಗಳ ಜೊತೆಗೆ ಮೈನ್ಯೂಟ್ ಮೇಡ್ ಬ್ರ್ಯಾಂಡ್ ಅಡಿಯಲ್ಲಿನ ಹಣ್ಣಿನ ಪೇಯಗಳು, ಜಾರ್ಜಿಯಾ ಕಾಫಿ ಕೂಡ ಇದೆ. ಕಿನ್ಲೇ ಮೊದಲಾದ ಬ್ರ್ಯಾಂಡ್ ಅಡಿಯಲ್ಲಿ ನೀರಿನ ಬಾಟಲಿಗಳೂ ಇವೆ. ಇವುಗಳನ್ನು ಪ್ರತ್ಯೇಕವಾಗಿ ಮಾರುವುದಕ್ಕಿಂತ ಹೆಚ್ಚಾಗಿ ಊಟದ ಒಂದು ಭಾಗವಾಗಿ ಕೊಟ್ಟರೆ ಹೆಚ್ಚು ಸೇಲ್ ಆಗುತ್ತದೆ. ಇದೇ ಆಲೋಚನೆಯಲ್ಲಿ ಥ್ರೈವ್ ಪ್ಲಾಟ್ಫಾರ್ಮ್ ಅನ್ನು ಕೋಕಾ ಕೋಲಾ ಬಳಸಿಕೊಳ್ಳಲು ಹೊರಟಿದೆ.
ಅದು ಹೇಗೆ ಸಾಧ್ಯ? ಥ್ರೈವ್ ಆ್ಯಪ್ನಲ್ಲಿ ಗ್ರಾಹಕರು ಆಹಾರವನ್ನು ಆರ್ಡರ್ ಮಾಡುವಾಗ ಕೋಕಾ ಕೋಲಾ ಪಾನೀಯಗಳನ್ನು ಕೊಳ್ಳುವಂತೆಯೂ ವಿವಿಧ ರೀತಿಯಲ್ಲಿ ಪ್ರೇರೇಪಿಸಬಹುದು. ಇದಕ್ಕಾಗಿ ವಿವಿಧ ರೀತಿಯ ಆಹಾರ ಸಂಯೋಜನೆ, ಲಾಯಲ್ಟಿ ಕೋಡ್, ಪ್ಯಾಕೇಜ್ ಡೀಲ್ ಇತ್ಯಾದಿ ಮಾರ್ಗಗಳನ್ನು ಅನುಸರಿಸಬಹುದು. ಇದಕ್ಕೆ ಜನರು ಸ್ಪಂದಿಸಿದಲ್ಲಿ ಕೋಕಾ ಕೋಲಾ ಉತ್ಪನ್ನಗಳ ಮಾರಾಟ ಪ್ರಮಾಣ ಹೆಚ್ಚಾಗಲಿದೆ.
ಇಂಥದ್ದೇ ರೀತಿಯ ಒಪ್ಪಂದವನ್ನು ಕೋಕಾ ಕೋಲಾ ಮೆಕ್ಡೊನಾಲ್ಡ್ ಜೊತೆ ಮಾಡಿಕೊಂಡಿದೆ. ಫಾಸ್ಟ್ ಫುಡ್ ಚೈನ್ ಆದ ಮೆಕ್ಡೊನಾಲ್ಡ್ನ ಅಂಗಡಿಗಳಲ್ಲಿ ಅದರ ಆಹಾರದ ಜೊತೆಗೆ ಕೋಕಾ ಕೋಲಾದ ಪಾನೀಯಗಳನ್ನು ಮಾತ್ರ ಕಾಣಬಹುದು.
ಸ್ವಿಗ್ಗಿ, ಜೊಮಾಟೋ ಎದುರು ಸ್ಪರ್ಧಿಸಬಲ್ಲುದಾ ಥ್ರೈವ್?
2020ರಲ್ಲಿ ಧ್ರುವ್ ದಿವಾನ್, ಕರಣ್ ಚೇಚಾನಿ ಮತ್ತು ಕೃಷಿ ಫಾಗ್ವಾನಿ ಈ ಮೂವರು ಸೇರಿ ಥ್ರೈವ್ ಎಂಬ ಆನ್ಲೈನ್ ಫುಡ್ ಡೆಲಿವರಿ ಕಂಪನಿ ಸ್ಥಾಪಿಸಿದ್ದು. ಈ ಕ್ಷೇತ್ರದಲ್ಲಿ ಸ್ವಿಗ್ಗಿ ಮತ್ತು ಜೊಮಾಟೋ ಈಗಾಗಲೇ ಪೂರ್ಣ ಪ್ರಾಬಲ್ಯ ಹೊಂದಿವೆ. ಇವುಗಳೆದುರು ಥ್ರೈವ್ ಸೆಣಸಿ ಬದುಕಬಲ್ಲುದಾ?
ಈ ಮಾರುಕಟ್ಟೆಯಲ್ಲಿ ಬೆಳೆಯಲು ಬೇಕಾದ ಕೆಲ ಅಸ್ತ್ರಗಳು ಥ್ರೈವ್ ಬಳಿ ಇವೆ. ದೇಶಾದ್ಯಂತ 14,000 ರೆಸ್ಟೋರೆಂಟ್ಗಳು ಈಗಾಗಲೇ ಥ್ರೈವ್ ಜೊತೆ ಜೋಡಿತವಾಗಿವೆ. 10 ಲಕ್ಷ ರೆಸ್ಟೋರೆಂಟ್ಗಳ ಜೊತೆ ಸಹಭಾಗಿತ್ವ ಹೊಂದಿರುವ ಜೊಮಾಟೋಗೆ ಹೋಲಿಸಿದರೆ ಥ್ರೈವ್ ವಿಸ್ತಾರ ಬಹಳ ಕಡಿಮೆ. ಆದರೆ, ದಿನಗಳೆದಂತೆ ಥ್ರೈವ್ ಜೊತೆ ಪಾರ್ಟ್ನರ್ಶಿಪ್ ಮಾಡಿಕೊಳ್ಳುತ್ತಿರುವ ರೆಸ್ಟೋರೆಂಟ್ಗಳ ಸಂಖ್ಯೆ ಹೆಚ್ಚುತ್ತಿದೆ.
ಒಂದು ರೆಸ್ಟೋರೆಂಟ್ ಜೊಮಾಟೋ ಅಥವಾ ಸ್ವಿಗ್ಗಿ ಮೂಲಕ ಆರ್ಡರ್ ಬಂದರೆ ಶೇ. 18ರಿಂದ 25ರಷ್ಟು ಕಮಿಷನ್ ಕೊಡಬೇಕಾಗುತ್ತದೆ. ಆದರೆ, ಥ್ರೈವ್ ತನ್ನ ಆರಂಭಿಕ ಹೆಜ್ಜೆಯಲ್ಲಿ ಈ ಕಮಿಷನ್ ಮೊತ್ತವನ್ನು ಬಹಳ ಕಡಿಮೆ ಇರಿಸಿದೆ. ಇದು ರೆಸ್ಟೋರೆಂಟ್ಗಳನ್ನು ಆಕರ್ಷಿಸಲು ಅನುಕೂಲವಾಗಿದೆ.
ಥ್ರೈವ್ ಆ್ಯಪ್ನಲ್ಲಿ ಇನ್ನೂ ಒಂದು ವಿಶೇಷತೆ ಇದೆ. ಪಾರ್ಟ್ನರ್ ರೆಸ್ಟೋರೆಂಟ್ಗಳು ಥ್ರೈವ್ ಪ್ಲಾಟ್ಫಾರ್ಮ್ನಲ್ಲಿ ತಮ್ಮದೇ ಸಬ್ ಪೋರ್ಟಲ್ ಸೃಷ್ಟಿಸಿ ನೇರವಾಗಿ ಆನ್ಲೈನ್ ಆರ್ಡರ್ಗಳನ್ನು ಗ್ರಾಹಕರಿಂದ ಪಡೆಯಬಹುದು. ಇದೂ ಕೂಡ ಹೋಟೆಲ್ಗಳು ಥ್ರೈವ್ಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವಂತೆ ಮಾಡಬಹುದು.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:55 pm, Tue, 18 April 23