ಕಾಸ್ಮೋಸ್ ಕೋ ಆಪರೇಟಿವ್ ಬ್ಯಾಂಕ್ ಭರ್ಜರಿ ಲಾಭ; 2,800 ಉದ್ಯೋಗಿಗಳಿಗೆ ಭರ್ಜರಿ ಬೋನಸ್
Cosmos cooperative bank annonces bonus to employees: ಪುಣೆ ಮೂಲದ ಕಾಸ್ಮೋಸ್ ಸಹಕಾರಿ ಬ್ಯಾಂಕ್ 2023-24ರಲ್ಲಿ ಸಖತ್ ಬಿಸಿನೆಸ್ ಕಂಡಿದೆ. ಅದರ ನಿವ್ವಳ ಲಾಭ 181 ಕೋಟಿ ರೂ ಇದ್ದದ್ದು 384 ಕೋಟಿ ರೂಗೆ ಏರಿದೆ. ಇದರ ಪರಿಣಾಮವಾಗಿ 2,800 ಉದ್ಯೋಗಿಗಳಿಗೆ ಒಂದು ತಿಂಗಳ ಬೋನಸ್ ಅನ್ನು ಕಂಪನಿ ಪ್ರಕಟಿಸಿದೆ. ಕಾಸ್ಮೋಸ್ ಬ್ಯಾಂಕ್ನ ಒಂದು ಶಾಖೆ ಬೆಂಗಳೂರಿನ ಬಸವನಗುಡಿಯಲ್ಲಿ ಇದೆ. 2018ರಲ್ಲಿ ಈ ಬ್ಯಾಂಕ್ಗೆ ಮಾಲ್ವೇರ್ ದಾಳಿಯಾಗಿ, ಹಲವಾರು ಎಟಿಎಂ ಕಾರ್ಡ್ಗಳ ಡೂಪ್ಲಿಕೇಟ್ ಮಾಡಿದ ದೇಶ ವಿದೇಶಗಳಲ್ಲಿ ಸಾವಿರಾರು ಎಟಿಎಂಗಳ ಮೂಲಕ 94 ಕೋಟಿ ರೂ ಹಣವನ್ನು ಕ್ರಿಮಿನಲ್ಗಳು ಲಪಟಾಯಿಸಿದ್ದರು.
ಪುಣೆ, ಮೇ 28: ಭಾರತದ ಅತ್ಯಂತ ಹಳೆಯ ಕೋ ಆಪರೇಟಿವ್ ಬ್ಯಾಂಕ್ಗಳಲ್ಲಿ ಒಂದಾದ ಕಾಸ್ಮೋಸ್ ಬ್ಯಾಂಕ್ (Cosmos Co-operative bank) ತನ್ನ ಉದ್ಯೋಗಿಗಳಿಗೆ ಬೋನಸ್ ಪ್ರಕಟಿಸಿದೆ. 2,800 ಉದ್ಯೋಗಿಗಳಿಗೆ ಒಂದು ತಿಂಗಳ ಬೋನಸ್ ಸಿಗಲಿದೆ. 2023-24ರ ಹಣಕಾಸು ವರ್ಷದಲ್ಲಿ ಉತ್ತಮ ಬಿಸಿನೆಸ್ ಆಗಿರುವ ಕಾರಣಕ್ಕೆ ಬ್ಯಾಂಕ್ನ ಮ್ಯಾನೇಜ್ಮೆಂಟ್ ಈ ನಿರ್ಧಾರ ಕೈಗೊಂಡಿದೆ. ಹಣಕಾಸು ವರ್ಷದಲ್ಲಿ 35,408 ಕೋಟಿ ರೂ ವಹಿವಾಟು ಆಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ. 15.16ರಷ್ಟು ಹೆಚ್ಚು ಬಿಸಿನೆಸ್ ಆಗಿದೆ. 2022-23ರಲ್ಲಿ 181 ಕೋಟಿ ರೂ ಇದ್ದ ಕಾಸ್ಮೋಸ್ ಕೋ ಆಪರೇಟಿವ್ ಬ್ಯಾಂಕ್ನ ನಿವ್ವಳ ಲಾಭ 2023-24ರಲ್ಲಿ 384 ಕೋಟಿ ರೂಗೆ ಏರಿದೆ. ನಿವ್ವಳ ಲಾಭದಲ್ಲಿ ಎರಡು ಪಟ್ಟಿಗೂ ಹೆಚ್ಚು ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಆರು ವರ್ಷಗಳ ಹಿಂದೆ ನಡೆದ ತೀವ್ರವಾದ ಸೈಬರ್ ದಾಳಿಯಲ್ಲಿ 94 ಕೋಟಿ ರೂ ಹಣವನ್ನು ಕಾಸ್ಮೋಸ್ ಬ್ಯಾಂಕ್ ಕಳೆದುಕೊಂಡಿತ್ತು. ಅಂದಿನ ಆ ಅನಿರೀಕ್ಷಿತ ಮತ್ತು ಗಂಭೀರ ಘಟನೆಯು ಬ್ಯಾಂಕ್ನ ಉದ್ಯೋಗಿಗಳನ್ನು ಮಾನಸಿಕವಾಗಿ ಜರ್ಝರಿತಗೊಳಿಸಿತ್ತು. ಆ ಪರಿಸ್ಥಿತಿಯಿಂದ ಇವತ್ತು ಈ ಸಹಕಾರಿ ಬ್ಯಾಂಕ್ ಸಾಕಷ್ಟು ಮೇಲೆ ಬಂದಿದೆ. ಕಹಿಯೆಲ್ಲವನ್ನೂ ಮರೆಸುವಷ್ಟು ಸಿಹಿಯನ್ನು ಕಾಣುತ್ತಿದೆ. ಭರ್ಜರಿ ಬಿಸಿನೆಸ್ ಬರಲು ಕಾರಣರಾದ ಉದ್ಯೋಗಿಗಳಿಗೆ ಒಂದು ತಿಂಗಳ ಬೋನಸ್ ಕೊಡಲಾಗುತ್ತಿದೆ.
ಇದನ್ನೂ ಓದಿ: ಅಂಬಾನಿ ಅಡ್ಡೆಗೆ ಇಳಿಯುತ್ತಾರಾ ಅಡಾನಿ?; ಯುಪಿಐ, ಕ್ರೆಡಿಟ್ ಕಾರ್ಡ್, ಇಕಾಮರ್ಸ್ ಬಿಸಿನೆಸ್ಗೆ ಇಳಿಯಲು ಸಜ್ಜು
ಸೈಬರ್ ದಾಳಿಯಲ್ಲಿ ಆಗಿದ್ದೇನು?
ಮಹಾರಾಷ್ಟ್ರದ ಪುಣೆ ಮೂಲದ ಕಾಸ್ಮೋಸ್ ಸಹಕಾರಿ ಬ್ಯಾಂಕ್ 2018ರ ಆಗಸ್ಟ್ ತಿಂಗಳಲ್ಲಿ ಮಾಲ್ವೇರ್ ದಾಳಿಗೆ ಒಳಗಾಗಿತ್ತು. ಕಾಸ್ಮೋಸ್ ಬ್ಯಾಂಕ್ನ ಹಲವು ಡೆಬಿಟ್ ಕಾರ್ಡ್ಗಳನ್ನು ಕ್ಲೋನ್ ಮಾಡಿ ದೇಶಾದ್ಯಂತ ಹಾಗೂ 28 ಬೇರೆ ಬೇರೆ ದೇಶಗಳಲ್ಲಿ ಸಾವಿರಾರು ಎಟಿಎಂಗಳ ಮೂಲಕ ನಗದು ಹಣವನ್ನು ವಿತ್ಡ್ರಾ ಮಾಡಲಾಗಿತ್ತು. ಖದೀಮರ ಈ ನೆಟ್ವರ್ಕ್ ಮೂರು ದಿನದಲ್ಲಿ 94 ಕೋಟಿ ರೂ ಹಣವನ್ನು ಲಪಟಾಯಿಸಿತ್ತು. ಇದು ಬ್ಯಾಂಕಿಂಗ್ ಇತಿಹಾಸದಲ್ಲೇ ನಡೆದ ದೊಡ್ಡ ಸೈಬರ್ ಕ್ರೈಮ್ ಘಟನೆ.
ಕಾಸ್ಮೋಸ್ ಬ್ಯಾಂಕ್ ಸದ್ಯ ಚಾಲ್ತಿಯಲ್ಲಿರುವ ಅತ್ಯಂತ ಹಳೆಯ ಸಹಕಾರಿ ಬ್ಯಾಂಕ್ ಆಗಿದೆ. ಇದು 1906ರಲ್ಲಿ ಆರಂಭವಾಯಿತು. ಭಾರತದ ಅತ್ಯಂತ ಹಳೆಯ ಸಹಕಾರಿ ಬ್ಯಾಂಕ್ ಎಂದರೆ ಅನ್ಯೋನ್ಯ ಬ್ಯಾಂಕ್. ವಡೋದರಾದಲ್ಲಿ 1886ರಲ್ಲಿ ಇದು ಆರಂಭವಾಯಿತು. 2013ರಲ್ಲಿ ಈ ಬ್ಯಾಂಕ್ ಅಂತ್ಯವಾಯಿತು. ಈಗ ಜೀವಂತ ಉಳಿದಿರುವ ಅತ್ಯಂತ ಹಳೆಯ ಬ್ಯಾಂಕ್ ಎಂಬ ಶ್ರೇಯಸ್ಸು ಕಾಸ್ಮೋಸ್ಗೆ ಇದೆ. ಬೆಂಗಳೂರಿನ ಬಸವನಗುಡಿಯಲ್ಲೂ ಕಾಸ್ಮೋಸ್ ಬ್ಯಾಂಕ್ನ ಒಂದು ಶಾಖೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ