COVID-19 In China: ಕೋವಿಡ್ ಹೆಚ್ಚಳ; ಚೀನಾಕ್ಕೆ ಜ್ವರದ ಔಷಧ ರಫ್ತಿಗೆ ಸಿದ್ಧ ಎಂದ ಭಾರತ
ವಿಶ್ವದಲ್ಲೇ ಅತಿಹೆಚ್ಚು ಔಷಧ ತಯಾರಿಸುವ ದೇಶವಾಗಿ ಭಾರತ ಗುರುತಿಸಿಕೊಂಡಿದ್ದು, ಚೀನಾಕ್ಕೆ ಔಷಧ ರಫ್ತು ಮಾಡಲು ಸಿದ್ಧವಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ನವದೆಹಲಿ: ಚೀನಾದಲ್ಲಿ (China) ಕೋವಿಡ್-19 (COVID-19) ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆ ದೇಶಕ್ಕೆ ಜ್ವರದ ಔಷಧಗಳನ್ನು ರಫ್ತು ಮಾಡಲು ಸಿದ್ಧ ಎಂದು ಭಾರತದ ಔಷಧ ರಫ್ತು ಮಂಡಳಿ ತಿಳಿಸಿದೆ. ಚೀನಾದಲ್ಲಿ ಈ ತಿಂಗಳ ಆರಂಭದಲ್ಲಿ ಕೋವಿಡ್ ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡಿದ್ದು, ಜ್ವರದ ಔಷಧಗಳಿಗೆ ಹಾಗೂ ಕೋವಿಡ್ ಪರೀಕ್ಷಾ ಕಿಟ್ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಮೆಡಿಕಲ್ಗಳಲ್ಲಿ ಖರೀದಿಗಳ ಮೇಲೆ ಮಿತಿ ಹೇರಲಾಗಿದ್ದು, ಉತ್ಪಾದನೆ ಹೆಚ್ಚಿಸುವಂತೆ ಔಷಧ ತಯಾರಿಕಾ ಕಂಪನಿಗಳಿಗೆ ಸೂಚಿಸಲಾಗಿತ್ತು.
‘ಐಬ್ರೂಫೇನ್ ಮತ್ತು ಪ್ಯಾರಸಿಟಮೋಲ್ ಔಷಧ ತಯಾರಿಕಾ ಕಂಪನಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಎರಡು ಔಷಧಗಳ ಕೊರತೆ ಚೀನಾದಲ್ಲಿದ್ದು, ಬೇಡಿಕೆ ಹೆಚ್ಚಾಗಿದೆ’ ಎಂದು ಭಾರತೀಯ ಔಷಧ ರಪ್ತು ಉತ್ತೇಜನಾ ಮಂಡಳಿಯ (Pharmexcil) ಅಧ್ಯಕ್ಷ ಶಾಹಿಲ್ ಮುಂಜಲ್ ‘ರಾಯಿಟರ್ಸ್’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಕುರಿತು ನವದೆಹಲಿಯಲ್ಲಿರುವ ಚೀನಾದ ರಾಯಭಾರ ಕಚೇರಿ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ವಿಶ್ವದಲ್ಲೇ ಅತಿಹೆಚ್ಚು ಔಷಧ ತಯಾರಿಸುವ ದೇಶವಾಗಿ ಭಾರತ ಗುರುತಿಸಿಕೊಂಡಿದ್ದು, ಚೀನಾಕ್ಕೆ ಔಷಧ ರಫ್ತು ಮಾಡಲು ಸಿದ್ಧವಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ದಿನಕ್ಕೆ 5 ಸಾವಿರ ಸಾವು, 10 ಲಕ್ಷ ಮಂದಿಗೆ ಸೋಂಕು: ಜಗತ್ತಿನಾದ್ಯಂತ ತಲ್ಲಣ ಹುಟ್ಟಿಸುತ್ತಿದೆ ಚೀನಾದ ಕೊವಿಡ್ ಪರಿಸ್ಥಿತಿ
‘ಚೀನಾದಲ್ಲಿನ ಕೋವಿಡ್ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದೇವೆ. ಔಷಧ ಕ್ಷೇತ್ರದಲ್ಲಿ ನಾವು ಸದಾ ಇತರ ದೇಶಗಳಿಗೆ ನೆರವಾಗಿದ್ದೇವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
2021-22ರಲ್ಲಿ ಭಾರತದ ಒಟ್ಟು ಔಷಧ ರಫ್ತಿನ ಶೇಕಡಾ 1.4ರಷ್ಟು ಮಾತ್ರವೇ ಚೀನಾಕ್ಕೆ ರಫ್ತು ಮಾಡಲಾಗಿದೆ. ಅಮೆರಿಕಕ್ಕೆ ಅತಿಹೆಚ್ಚು ರಫ್ತು ಮಾಡಲಾಗಿದೆ ಎಂಬುದು ಫಾರ್ಮೆಕ್ಸಿಲ್ ಅಂಕಿಅಂಶಗಳಿಂದ ತಿಳಿದುಬಂದಿದೆ. ಕೋವಿಡ್ ಸಾಂಕ್ರಾಮಿಕವು ವಿಶ್ವದ ಹಲವೆಡೆ ಏರಿಕೆ ಕಾಣುತ್ತಿದ್ದಂತೆಯೇ ಕಳೆದ ಕೆಲವು ದಿನಗಳಲ್ಲಿ ಭಾರತದ ಔಷಧ ಕಂಪನಿಗಳ ಷೇರು ಮೌಲ್ಯದಲ್ಲಿಯೂ ವೃದ್ಧಿ ಕಾಣಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ