Credit Card: ಕ್ರೆಡಿಟ್ ಕಾರ್ಡ್ ಸರಿಯಾದ ಮತ್ತು ಸಮರ್ಪಕ ಬಳಕೆ ಹೇಗೆ?
ಅತ್ಯುತ್ತಮ ಸಿಬಿಎಲ್ ಸ್ಕೋರ್ ಹೊಂದಿದ್ದರೆ ನಿಮಗೆ ಸಾಲ ಸೇರಿದಂತೆ ಉಳಿದ ಹಣಕಾಸು ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ.
ಆಧುನಿಕ ಜಗತ್ತಿನಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಸಾಮಾನ್ಯ ಎಂಬ ಸ್ಥಿತಿಗೆ ಬಂದು ತಲುಪಿದ್ದೇವೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತ ನಮ್ಮ ಖರ್ಚು ವೆಚ್ಚಗಳು ಅಧಿಕವಾಗುತ್ತಲೇ ಹೋಗುತ್ತವೆ. ಕ್ರೆಡಿಟ್ ಕಾರ್ಡ್ ಎಷ್ಟು ಲಾಭದಾಯಕವೋ ಅಷ್ಟೇ ಅಪಾಯಗಳನ್ನು ಹೊಂದಿದೆ. ನಿಮ್ಮ ಸಿಬಿಎಲ್ ಸ್ಕೋರ್ ಮೇಲೆ ನೇರವಾದ ಪರಿಣಾಮ ಉಂಟುಮಾಡುತ್ತದೆ.
ಅತ್ಯುತ್ತಮ ಸಿಬಿಎಲ್ ಸ್ಕೋರ್ ಹೊಂದಿದ್ದರೆ ನಿಮಗೆ ಸಾಲ ಸೇರಿದಂತೆ ಉಳಿದ ಹಣಕಾಸು ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ. ನೀವು ಮಾಡುವ ವೆಚ್ಚ ಮತ್ತು ಅದನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಸಿಬಿಎಲ್ ಸ್ಕೋರ್ ನಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ. ಕಡಿಮೆ ಬಡ್ಡಿ ದರದಲ್ಲಿ ಸಾಲ ಬೇಕು ಎಂದಾದರೆ ಅತ್ಯುತ್ತಮ ಸಿಬಿಎಲ್ ಸ್ಕೋರ್ ಹೊಂದಿರಬೇಕು. ಸಿಬಿಎಲ್ ಸ್ಕೋರ್ ಎನ್ನುವುದು ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ನೀಡುವ ಮೂರು ಡಿಜಿಟ್ ಸಂಖ್ಯೆಯಾಗಿದ್ದು ಉತ್ತಮ, ಅತ್ಯುತ್ತಮ, ಮಧ್ಯಮ, ಕಳಪೆ ಮಾದರಿಯಲ್ಲಿ ಇರುತ್ತದೆ. ಹಾಗಾದರೆ ಅತ್ಯುತ್ತಮ ಸಿಬಿಎಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಸಂಪಾದನೆ ಮಾಡಿಕೊಳ್ಳುವುದು ಹೇಗೆ?
ಕ್ರೆಡಿಟ್ ಲಿಮಿಟ್ ಮತ್ತು ಓವರ್ ಲಿಮಿಟ್
ನಿಮಗೆ ಬ್ಯಾಂಕ್ ಅಥವಾ ಸಂಸ್ಥೆ ಕೊಡಮಾಡಿರುವ ಕ್ರೆಡಿಟ್ ಕಾರ್ಡ್ ನಲ್ಲಿ ವೆಚ್ಚ ಮಾಡಬಹುದಾದ ಒಟ್ಟು ಮೊತ್ತವನ್ನು ಕ್ರೆಡಿಟ್ ಲಿಮಿಟ್ ಎಂದು ಕರೆಯಬಹುದಾಗಿದೆ. ನಿಮ್ಮ ಆದಾಯ, ವ್ಯವಹಾರದ ರೀತಿ, ವೆಚ್ಚದ ಆಧಾರ ಮೇಲೆ ಕ್ರೆಡಿಟ್ ಲಿಮಿಟ್ ನೀಡುತ್ತಾರೆ. ಒಬ್ಬರದ್ದು ಒಂದು ಲಕ್ಷ ರೂ ಇದ್ದರೆ ಇನ್ನೊಬ್ಬರದ್ದು ಮೂರು ಲಕ್ಷ ರೂ. ಇರಬಹುದು.
ಬ್ಯಾಂಕ್ ನಿರ್ದಿಷ್ಟಪಡಿಸಿರುವ ಮೊತ್ತಕ್ಕೂ ಹೆಚ್ಚಿನ ವ್ಯವಹಾರ ನಡೆಸಿದಾಗ ಅದನ್ನು ಓವರ್ ಲಿಮಿಟ್ ಎಂದು ಕರೆಯಲಾಗುವುದು. ಈ ರೀತಿ ಹೆಚ್ಚಿನ ಮೊತ್ತ ಬಳಕೆ ಮಾಡುವಾಗ ಕೆಲವೊಂದಷ್ಟು ಷರತ್ತುಗಳಿಗೆ ಒಳಪಡಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಮರುಪಾವತಿ
ಬ್ಯಾಂಕ್ ನೀಡಿದ ಅವಧಿಯಲ್ಲಿ ಮರುಪಾವತಿಯನ್ನು ಸರಿಯಾದ ಸಮಯಕ್ಕೆ ಮಾಡಿದರೆ ಕ್ರೆಡಿಟ್ ಸ್ಕೋರ್ ಉತ್ತಮವಾಗುತ್ತ ಹೋಗುತ್ತದೆ. ಕ್ರೆಡಿಟ್ ಕಾರ್ಡ್ ನ ಶೇ. 35 ಹಣ ಬಳಕೆ ಮಾಡಿಕೊಂಡು ಮರುಪಾವತಿ ಮಾಡುತ್ತಿದ್ದರೆ ಉತ್ತಮ. ಅತ್ಯುತ್ತಮ ಕ್ರೆಡಿಟ್ ಸ್ಕೋರ್ ನಿಮ್ಮದಾಗಬೇಕು ಎಂದರೆ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಲೇಬೇಕು.
ಮಿತಿ ಮೀರಿದ ಕ್ರೆಡಿಟ್ ಕಾರ್ಡ್ ಬಳಕೆ
ನೀಡಿರುವ ಮಿತಿಯಲ್ಲಿ ಶೇ. 70-80 ಹಣ ಬಳಕೆ ಮಾಡಿಕೊಳ್ಳುತ್ತಿದ್ದರೆ ನಿಮ್ಮ ಸಿಬಿಎಲ್ ಸ್ಕೋರ್ ಕಳಪೆಯಾಗಬಹುದು. ಹೆಚ್ಚಿನ ವೆಚ್ಚ ಮಾಡಿದಾಗ ನೀವು ಮರುಪಾವತಿ ತಪ್ಪಿಸುವ ಸಾಧ್ಯತೆಯೂ ಇರುತ್ತದೆ. ನಿಮ್ಮ ಬಾಕಿಗಳನ್ನು ಸಮಯೋಚಿತವಾಗಿ ಮರುಪಾವತಿ ಮಾಡುವುದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿರ್ವಹಿಸಲು ಮತ್ತು ಸುಧಾರಿಸಲು ನಿರ್ಣಾಯಕವಾಗಿದೆ. ಒಂದೇ ಒಂದು ಇಎಂಐ ತಪ್ಪಿಸಿದರೆ ನೀವು ಬಹಳಷ್ಟು ನಷ್ಟ ಮಾಡಿಕೊಳ್ಳಬೇಕಾಗುತ್ತದೆ ಎಂದು ಕ್ರೆಡಿಟ್ ಸ್ಕೋರ್ ಪ್ಲಾನರ್ ಒನ್‌ಸ್ಕೋರ್ ಮತ್ತು ಒನ್‌ಕಾರ್ಡ್‌ನ ಸಹಸಂಸ್ಥಾಪಕ ಮತ್ತು ಸಿಇಒ ಅನುರಾಗ್ ಸಿನ್ಹಾ ಹೇಳುತ್ತಾರೆ.
ಮಿನಿಮಮ್ ಡ್ಯೂಗಿಂತ ಜಾಸ್ತಿ ಮರುಪಾವತಿಸಿ
ಮಿನಿಮಮ್ ಅಮೌಂಟ್ ಡ್ಯೂ ಅಥವಾ ಕನಿಷ್ಠ ಮರುಪಾವತಿ ಎಂದರೆ ನೀವು ವೆಚ್ಚ ಮಾಡಿದ ಹಣಕ್ಕೆ ತಿಂಗಳ ಅಂತ್ಯಕ್ಕೆ ಪಾವತಿ ಮಾಡಬೇಕಾದ ಕನಿಷ್ಠ ಮೊತ್ತ. ಸಾಮಾನ್ಯವಾಗಿ ವೆಚ್ಚ ಮಾಡಿದ ಹಣದ ಶೇ. 5 ರಷ್ಟನ್ನು ಇಲ್ಲಿ ಲೆಕ್ಕ ಹಾಕಿ ನೀಡಲಾಗುತ್ತದೆ. ಇಷ್ಟನ್ನೇ ಪಾವತಿ ಮಾಡಿದರೆ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ವಿನಾ ಬಡ್ಡಿಯಿಂದಲ್ಲ. ಜತೆಗೆ ನಿಮ್ಮ ಕ್ರೆಡಿಟ್ ಸ್ಕೋರ್ ಸಹ ಕಳಪೆಯಾಗುತ್ತದೆ. ಹಾಗಾಗಿ ಸಂಪೂರ್ಣ ಮೊತ್ತ ಭರಿಸುವುದೇ ಜಾಣತನ.
ಕ್ರೆಡಿಟ್ ಕಾರ್ಡ್ ಮಿತಿಯನ್ನು ಮೀರಬೇಡಿ
ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವನ್ನು (CUR) ಸಹ ಮುಖ್ಯವಾಗುತ್ತದೆ. ಉದಾಹರಣೆಗೆ ಒಂದು ಲಕ್ಷ ರೂ. ಮೊತ್ತದ ಕ್ರೆಡಿಟ್ ಕಾರ್ಡ್ ಕೈಯಲ್ಲಿದೆ ಎಂದರೆ 90 ಸಾವಿರ ರೂ. ಬಳಕೆ ಮಾಡಿಕೊಳ್ಳಲು ಹೋಗಬಾರದು. ಹಾಗೆ ಮಾಡಿದಲ್ಲಿ ನೀವು ಶೇ. 90 ಬಳಕೆ ಮಾಡಿಕೊಂಡಂತಾಗುತ್ತದೆ. ಬಳಕೆ ಶೇ. 30ಕ್ಕಿಂತ ಕೆಳಗೆ ಇದ್ದರೆ ಒಳ್ಳೆಯದು. ಹೆಚ್ಚಿನ ಬಳಕೆ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಸ್ವಯಂ ಪೇಮೆಂಟ್ ವ್ಯವಸ್ಥೆ
ಮರುಪಾವತಿ ದಿನಾಂಕ ಮೀರುವುದನ್ನು ತಪ್ಪಿಸಲು ಸ್ವಯಂಚಾಲಿತ ಅಂದರೆ ಆಟೋಮ್ಯಾಟೆಡ್ ಆಯ್ಕೆ ಇಟ್ಟುಕೊಳ್ಳಬಹುದು.
ಇಎಂಐ ಆಯ್ಕೆ
ಎಲ್ಲ ಸಂಸ್ಥೆಗಳು ಇಎಂಐ ಆಯ್ಕೆ ನೀಡಿದ್ದು ಇದನ್ನು ಬಳಕೆ ಮಾಡಿಕೊಂಡರೆ ಪ್ರತಿ ತಿಂಗಳು ಹೊರೆ ಕಡಿಮೆಮಾಡಿಕೊಳ್ಳಬಹುದು. ಮರುಪಾವತಿ ವಿಳಂಬವಾಗಲೂ ಸಾಧ್ಯವಿಲ್ಲ.
ಬಹುಆಯ್ಕೆಯ ಕ್ರೆಡಿಟ್ ಅಪ್ಲಿಕೇಶನ್ ಸಹವಾಸ ಬೇಡ
ವಿವಿಧ ಬ್ಯಾಂಕ್ ಗಳು ಮತ್ತು ಹಲಲಾವರು ಕಂಪನಿಗಳು ಆಫರ್ ಗಳ ಮೂಲಕ ಗಮನ ಸೆಳೆಯುತ್ತವೆ. ಒಂದೇ ಸಮಯಕ್ಕೆ ಹಲವಾರು ಕ್ರೆಡಿಟ್ ಕಾರ್ಡ್ ಗಳ ಮೊರೆ ಹೋದರೆ ನೀವು ಮಾಡುವ ವೆಚ್ಚ ಅಧಿಕವಾಗಿ ಹಣಕಾಸು ವ್ಯವಸ್ಥೆ ಹಾದಿತಪ್ಪಬಹುದು ಎಚ್ಚರ!
ಕ್ರೆಡಿಟ್ ಕಾರ್ಡ್ ಬಳಕೆ ಮಾಡಬಹುದೆ?
ಹೌದು.. ಖಂಡಿತವಾಗಿಯೂ ಬಳಕೆ ಮಾಡಿಕೊಳ್ಳಬಹುದು. ಜಾಣ್ಮೆಯಿಂದ ಬಳಕೆ ಮಾಡಿಕೊಂಡರೆ ಕ್ರೆಡಿಟ್ ಕಾರ್ಡ್ ಅತ್ಯಂತ ಲಾಭದಾಯಕ. ರಿವಾರ್ಡ್ ಪಾಯಿಂಟ್ಸ್, ಇಎಂಐ, ಆನ್ ಲೈನ್ ತಾಣಗಳು ಕೊಡಮಾಡುವ ಹಬ್ಬದ ಆಫರ್ ಗಳ ಲಾಭವೂ ನಿಮ್ಮದಾಗುತ್ತದೆ.
ಮಧುಸೂದನ ಹೆಗಡೆ