Credit Suisse: ಜಾಗತಿಕ ಬ್ಯಾಂಕಿಂಗ್ ದೈತ್ಯ ಕ್ರೆಡಿಟ್ ಸ್ವೀಸ್ ಪತನ ಸಾಧ್ಯತೆ; ಭಾರತಕ್ಕೆ ತಲೆನೋವಾಗುತ್ತಾ ಈ ಸ್ವಿಸ್ ಬ್ಯಾಂಕ್? ವಾಸ್ತವ ಪರಿಸ್ಥಿತಿ ಹೇಗಿದೆ?

|

Updated on: Mar 16, 2023 | 1:24 PM

Swiss Bank Giant's Crisis Effect On India: ಸ್ವಿಟ್ಚರ್​ಲೆಂಡ್ ಮೂಲದ ಕ್ರೆಡಿಟ್ ಸ್ವೀಸ್ ಬ್ಯಾಂಕ್ ಭಾರತದ ಬ್ಯಾಂಕಿಂಗ್ ವಲಯದಲ್ಲಿ 20,700 ರೂ ಮೌಲ್ಯದ ಆಸ್ತಿ ಹೊಂದಿದೆ. ಈಗ ಅದು ಪತನಗೊಂಡರೆ ಭಾರತದ ಹಣಕಾಸು ವಲಯಕ್ಕೆ ಘಾಸಿ ಮಾಡುತ್ತದಾ ಎಂಬುದು ಪ್ರಶ್ನೆ.

Credit Suisse: ಜಾಗತಿಕ ಬ್ಯಾಂಕಿಂಗ್ ದೈತ್ಯ ಕ್ರೆಡಿಟ್ ಸ್ವೀಸ್ ಪತನ ಸಾಧ್ಯತೆ; ಭಾರತಕ್ಕೆ ತಲೆನೋವಾಗುತ್ತಾ ಈ ಸ್ವಿಸ್ ಬ್ಯಾಂಕ್? ವಾಸ್ತವ ಪರಿಸ್ಥಿತಿ ಹೇಗಿದೆ?
ಕ್ರೆಡಿಟ್ ಸ್ವೀಸ್
Follow us on

ನವದೆಹಲಿ: ಅಮೆರಿಕದ ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB- Silicon Valley Bank) ಮತ್ತು ಸಿಗ್ನೇಚರ್ ಬ್ಯಾಂಕ್ (Signature Bank) ದಿಢೀರನೇ ದಿವಾಳಿಯಾಗಿರುವುದು ಜಾಗತಿಕವಾಗಿ ಪರಿಣಾಮ ಬೀರುತ್ತಿರುವಂತಿದೆ. ವಿಶ್ವದ ಅತಿದೊಡ್ಡ ಬ್ಯಾಂಕ್​ಗಳಲ್ಲಿ ಒಂದೆನಿಸಿದ ಸ್ವಿಟ್ಜರ್​ಲೆಂಡ್​ನ ಕ್ರೆಡಿಟ್ ಸ್ವೀಸ್ ಬ್ಯಾಂಕ್​ಗೂ (Credit Suisse Group AG) ಜಾಢ್ಯ ಅಂಟಿಕೊಂಡಂತಿದೆ. ಮಾರ್ಚ್ 15, ಬುಧವಾರದಂದು ಕ್ರೆಡಿಟ್ ಸ್ವೀಸ್ ಬ್ಯಾಂಕ್​ನ ಷೇರು ಮೌಲ್ಯ ಶೇ. 30ರಷ್ಟು ಕುಸಿತ ಕಂಡಿದೆ. ಬಹಳ ಕಾಲದಿಂದ ಕ್ರೆಡಿಟ್ ಸ್ವೀಸ್ ಷೇರು ಮೌಲ್ಯ ಇಳಿಕೆಯಾಗುತ್ತಾ ಬರುತ್ತಿದ್ದರೂ ಒಂದೇ ದಿನದಲ್ಲಿ ಇಷ್ಟು ದೊಡ್ಡ ಮಟ್ಟಕ್ಕೆ ದಿಢೀರ್ ಕುಸಿತ ಕಂಡಿರುವುದು ಸಂಚಲನವನ್ನೇ ಸೃಷ್ಟಿಸಿದೆ. ಈ ಸ್ವಿಸ್ ಬ್ಯಾಂಕ್ ಪ್ರಪಾತಕ್ಕೆ ಬೀಳಲು ಏನು ಕಾರಣ?

ಕ್ರೆಡಿಟ್ ಸ್ವೀಸ್ ಬ್ಯಾಂಕ್ ಕುಸಿತಕ್ಕೆ ಏನು ಕಾರಣ?

ಕ್ರೆಡಿಟ್ ಸ್ವೀಸ್ ಸ್ವಿಟ್ಚರ್​ಲೆಂಡ್​ನ ಎರಡನೇ ಅತಿದೊಡ್ಡ ಬ್ಯಾಂಕ್. ವಿಶ್ವದ 9 ಜಾಗತಿಕ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್​ಗಳಲ್ಲಿ ಒಂದೆನಿಸಿದೆ. ಆದರೆ ಹಿಂದೆಲ್ಲಾ ಈ ಬ್ಯಾಂಕ್ ಹಲವು ಹಗರಣಗಳಿಗೆ ಸಿಲುಕಿಕೊಂಡು ಹೂಡಿಕೆದಾರರ ವಿಶ್ವಾಸ ಘಾಸಿಯಾಗುವಂತಾಗಿತ್ತು. ಹಾಗಾಗಿ ಇದರ ಷೇರುಗಳು ನಿರಂತರವಾಗಿ ಕುಸಿತ ಕಾಣುತ್ತಿದ್ದವು. ಈ ಕುಸಿತದ ವೇಗ ಹೆಚ್ಚಳಕ್ಕೆ ಕಾರಣವಾಗಿದ್ದು ಸೌದಿ ನ್ಯಾಷನಲ್ ಬ್ಯಾಂಕ್​ನ ಒಂದು ನಿರ್ಧಾರ.

ಕ್ರೆಡಿಟ್ ಸ್ವೀಸ್ ಬ್ಯಾಂಕ್​ನ ಅತಿದೊಡ್ಡ ಷೇರುದಾರ ಸೌದಿ ನ್ಯಾಷನಲ್ ಬ್ಯಾಂಕ್ (ಎಸ್​ಎನ್​ಬಿ). ಇದು ಶೇ. 9.88ರಷ್ಟು ಪಾಲುದಾರಿಕೆ ಹೊಂದಿದೆ. ಕ್ರೆಡಿಟ್ ಸ್ವೀಸ್​ನ ಷೇರು ಕುಸಿತ ಮುಂದುವರಿಯುವುದನ್ನು ತಡೆಯಲು ಇನ್ನಷ್ಟು ಷೇರು ಖರೀದಿಸುವಂತೆ ಸೌದಿ ಬ್ಯಾಂಕನ್ನು ಕೇಳಿಕೊಳ್ಳಲಾಗಿತ್ತು. ಆದರೆ, ಸೌದಿ ನ್ಯಾಷನಲ್ ಬ್ಯಾಂಕ್ ಇದಕ್ಕೆ ಒಪ್ಪಲಿಲ್ಲ. ಎಸ್​ಎನ್​ಬಿಯ ಈ ನಿರ್ಧಾರ ಹೊರಬಂದ ಬೆನ್ನಲ್ಲೇ ಕ್ರೆಡಿಟ್ ಸ್ವೀಸ್ ಬ್ಯಾಂಕ್​ನ ಷೇರುಗಳು ಒಂದೇ ದಿನದಲ್ಲಿ ಶೇ. 30ರಷ್ಟು ಕುಸಿದವು.

ಇದನ್ನೂ ಓದಿSVB Bankrupt: ಎರಡೇ ದಿನದಲ್ಲಿ ಅಮೆರಿಕದ ಎಸ್​ವಿಬಿ ದಿವಾಳಿ; ಭಾರತೀಯ ಸ್ಟಾರ್ಟಪ್ಸ್​ಗೆ ಭೀತಿ; ಸಂಬಂಧವೇ ಇಲ್ಲದ ಸಹಕಾರಿ ಬ್ಯಾಂಕ್​ಗೂ ಫಜೀತಿ

ಸ್ವಿಸ್ ನ್ಯಾಷನಲ್ ಬ್ಯಾಂಕ್​ನಿಂದ ಕ್ರೆಡಿಟ್ ಸ್ವೀಸ್​ಗೆ ನೆರವು?

ಈ ಸಂಕಷ್ಟದಿಂದ ಪಾರಾಗಲು ಕ್ರೆಡಿಟ್ ಸ್ವೀಸ್ ಗ್ರೂಪ್ ಎಜಿ ಸಂಸ್ಥೆಗೆ ಸಾಕಷ್ಟು ಬಂಡವಾಳದ ಅವಶ್ಯಕತೆ ಇದೆ. ಸೌದಿ ನ್ಯಾಷನಲ್ ಬ್ಯಾಂಕ್​ನಿಂದ ಮತ್ತಷ್ಟು ಹೂಡಿಕೆ ಬರುವುದಿಲ್ಲ ಎಂದು ಗೊತ್ತಾದಾಗ ಕ್ರೆಡಿಟ್ ಸ್ವೀಸ್ ಬ್ಯಾಂಕ್​ಗೆ ಸ್ವಿಟ್ಚರ್​ಲೆಂಡ್​ನ ಸ್ವಿಸ್ ನ್ಯಾಷನಲ್ ಬ್ಯಾಂಕ್​ನಿಂದ ನೆರವಿನ ಹಸ್ತ ಸಿಕ್ಕುತ್ತಿದೆ. ಸ್ವಿಸ್ ನ್ಯಾಷನಲ್ ಬ್ಯಾಂಕ್​ನಿಂದ ತಾನು 54 ಬಿಲಿಯನ್ ಡಾಲರ್ (ಸುಮಾರು 4.5 ಲಕ್ಷ ಕೋಟಿ ರುಪಾಯಿ) ಹಣವನ್ನು ಸಾಲವಾಗಿ ಪಡೆಯುತ್ತಿರುವುದಾಗಿ ಕ್ರೆಡಿಟ್ ಸ್ವೀಸ್ ಗ್ರೂಪ್ ಎಜಿ ಹೇಳಿದೆ.

ಕ್ರೆಡಿಟ್ ಸ್ವೀಸ್ ಬ್ಯಾಂಕ್ ವಿಶ್ವಾದ್ಯಂತ ಬಹಳಷ್ಟು ಕಂಪನಿಗಳಿಗೆ ಮತ್ತು ಸ್ಟಾರ್ಟಪ್​ಗಳಿಗೆ ಹೂಡಿಕೆ ಒದಗಿಸಿದೆ. ಹೀಗಾಗಿ, ಬ್ಯಾಂಕ್​ನ ಅಸ್ತಿತ್ವ ಉಳಿಯಬೇಕಾದರೆ ಸಾಕಷ್ಟು ಬಂಡವಾಳದ ಅವಶ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಸ್ವಿಸ್ ನ್ಯಾಷನಲ್ ಬ್ಯಾಂಕ್​ನಿಂದ ಕ್ರೆಡಿಟ್ ಸ್ವೀಸ್ ಈ ದೊಡ್ಡ ಮೊತ್ತದ ಹಣವನ್ನು ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿRupee vs Dollar: ಡಾಲರ್​ನ ಜಾಗತಿಕ ಪ್ರಾಬಲ್ಯ ಮುಗಿಯುತ್ತಿದೆಯಾ? ರುಪಾಯಿ ಕೈಹಿಡಿಯುತ್ತಿರುವ ದೇಶಗಳ ಪಟ್ಟಿ ಬೆಳೆಯುತ್ತಿದೆ

ಕ್ರೆಡಿಟ್ ಸ್ವೀಸ್ ಬಿಕ್ಕಟ್ಟಿನಿಂದ ಭಾರತೀಯ ಕಂಪನಿಗಳಿಗೆ ತಲೆನೋವು ಇದೆಯಾ?

ಆಗಲೇ ತಿಳಿಸಿದಂತೆ ಕ್ರೆಡಿಟ್ ಸ್ವೀಸ್ ಗ್ರೂಪ್ ಎಜಿ ಸಂಸ್ಥೆ ವಿಶ್ವದ ನಾನಾ ದೇಶಗಳಲ್ಲಿ ಹೂಡಿಕೆಗಳನ್ನು ಮಾಡಿದೆ. ಭಾರತದಲ್ಲೂ ಇದರ ಹೂಡಿಕೆಗಳಿವೆ. ಭಾರತದಲ್ಲಿರುವ ಅತಿದೊಡ್ಡ ವಿದೇಶೀ ಬ್ಯಾಂಕುಗಳ ಪಟ್ಟಿಯಲ್ಲಿ ಕ್ರೆಡಿಟ್ ಸ್ವೀಸ್ 12ನೇ ಸ್ಥಾನದಲ್ಲಿದೆ. ಒಂದು ವರದಿ ಪ್ರಕಾರ ಭಾರತದಲ್ಲಿ ಕ್ರೆಡಿಟ್ ಸ್ವೀಸ್ 20,000 ಕೋಟಿಗೂ ಹೆಚ್ಚು ಮೊತ್ತದ ಆಸ್ತಿಯನ್ನು ಹೊಂದಿದೆ. ಇದರಲ್ಲಿ ಶೇ. 90ಕ್ಕಿಂತಲೂ ಹೆಚ್ಚು ಮೊತ್ತವು ಸರ್ಕಾರಿ ಬಾಂಡ್ ಇತ್ಯಾದಿ ಜಿಸೆಕ್ ಬಾಂಡ್​ಗಳಲ್ಲಿ ಅಡಕವಾಗಿದೆ. 2-3 ತಿಂಗಳಲ್ಲಿ ಈ ಬಾಂಡ್​ಗಳ ಅವಧಿ ಮುಗಿಯುತ್ತದೆ ಎನ್ನುವುದಷ್ಟೇ ಸದ್ಯ ತಲೆನೋವಾಗಲಿರುವ ಅಂಶ.

ಸಮಾಧಾನಕರ ಸಂಗತಿ ಎಂದರೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕ್ರೆಡಿಟ್ ಸ್ವೀಸ್ ಆಸ್ತಿ ಪಾಲಿರುವುದು ಶೇ. 0.1ರಷ್ಟು ಮಾತ್ರ. ಹೀಗಾಗಿ, ಕ್ರೆಡಿಟ್ ಸ್ವೀಸ್ ಬ್ಯಾಂಕ್​ನ ಬಾಕಿಯನ್ನು ಚುಕ್ತಾ ಮಾಡುವುದು ಕಷ್ಟವೇನಲ್ಲ. ಆದರೆ, ಕ್ರೆಡಿಟ್ ಸ್ವೀಸ್ ಎದುರಿಸುತ್ತಿರುವ ಬಿಕ್ಕಟ್ಟು ಇತರ ಪ್ರಮುಖ ವಿದೇಶೀ ಬ್ಯಾಂಕುಗಳಿಗೂ ಅಂಟಿದರೆ ಆಗ ಭಾರತಕ್ಕೆ ತುಸು ಕಷ್ಟವಾಗಬಹುದು.

ಇದನ್ನೂ ಓದಿಇನ್ಷೂರೆನ್ಸ್ ಕ್ಲೈಮ್​ಗೆ ಆಸ್ಪತ್ರೆಗೆ ದಾಖಲಾಗಲೇಬೇಕಾ? ಗ್ರಾಹಕರ ವೇದಿಕೆ ಕೊಟ್ಟ ತೀರ್ಪಿದು

ಭಾರತದಲ್ಲಿರುವ ಅತಿದೊಡ್ಡ ವಿದೇಶೀ ಬ್ಯಾಂಕ್ ಎಂದರೆ ಎಚ್​ಎಸ್​ಬಿಸಿ. ನಂತರ ಸ್ಟಾಂಡರ್ಡ್ ಚಾರ್ಟರ್ಡ್, ಡ್ಯೂಶೆ ಬ್ಯಾಂಕ್, ಜೆಪಿ ಮಾರ್ಗನ್ ಇತ್ಯಾದಿ ಇನ್ವೆಸ್ಟ್​ಮೆಂಟ್ ಬ್ಯಾಂಕುಗಳು ಅನುಕ್ರಮವಾಗಿವೆ. ಈ ಎಲ್ಲಾ ವಿದೇಶೀ ಬ್ಯಾಂಕುಗಳು ಭಾರತದಲ್ಲಿ ಹೊಂದಿರುವ ಆಸ್ತಿ ಶೇ. 6ಕ್ಕಿಂತ ಹೆಚ್ಚೇನಿಲ್ಲ. ಫೋರೆಕ್ಸ್ ಮಾರುಕಟ್ಟೆಯಲ್ಲಿ ಇವುಗಳ ಹೆಚ್ಚಿನ ಬಂಡವಾಳ ಇರುವುದು. ಹೀಗಾಗಿ, ಬೇರೆ ವಿದೇಶೀ ಬ್ಯಾಂಕುಗಳೂ ತಮ್ಮ ಬಂಡವಾಳ ವಾಪಸ್ ಪಡೆಯಲು ಯತ್ನಿಸಿದರೆ ಭಾರತಕ್ಕೆ ದೊಡ್ಡ ಮಟ್ಟದ ಅಪಾಯ ತರುವುದಿಲ್ಲ ಎನ್ನುವುದು ಭಾರತದ ಉದ್ಯಮವಲಯ ತಜ್ಞರ ಅನಿಸಿಕೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ