
ನವದೆಹಲಿ, ನವೆಂಬರ್ 24: ಎಪತ್ತರ ದಶಕದಿಂದ ಹಿಡಿದು ತೊಂಬತ್ತರ ದಶಕದವರೆಗಿನ ಅವಧಿಯಲ್ಲಿ ಬಾಲ್ಯ ಮತ್ತು ಯೌವನ ಕಂಡವರಿಗೆ ಗೋಲ್ಡ್ ಸ್ಪಾಟ್ ಬ್ರ್ಯಾಂಡ್ ಹೆಸರು ಗೊತ್ತಿರಬಹುದು. “ದಿ ಜಿಂಗ್ ಥಿಂಗ್” (The Zing Thing) ಎಂಬ ಘೋಷವಾಕ್ಯದೊಂದಿಗೆ ಮನೆಮಾತಾಗಿದ್ದ ಕಿತ್ತಳೆಹಣ್ಣಿನ ರುಚಿಯ ತಂಪು ಪಾನೀಯ ‘ಗೋಲ್ಡ್ ಸ್ಪಾಟ್’ ಮತ್ತೆ ಭಾರತೀಯ ಮಾರುಕಟ್ಟೆಗೆ ಮರಳಲು ಸಿದ್ಧವಾಗಿದೆ. 26 ವರ್ಷದ ಹಿಂದೆ ಗೋಲ್ಡ್ ಸ್ಪಾಟ್ ಅನ್ನು ಸಮಾಧಿ ಮಾಡಿದ್ದ ಕೋಕಾಕೋಲಾ ಈಗ ಮರುಪರಿಚಯಿಸಲು ಹೊರಟಿದೆ.
1952ರಲ್ಲಿ ಪಾರ್ಲೆ (Parle) ಸಮೂಹದಿಂದ ಪರಿಚಯಿಸಲ್ಪಟ್ಟ ಈ ಬ್ರ್ಯಾಂಡ್ ಅನ್ನು 1993ರಲ್ಲಿ ಕೋಕಾ-ಕೋಲಾ ಕಂಪನಿಯು ಥಮ್ಸ್ ಅಪ್, ಲಿಮ್ಕಾ ಮತ್ತು ಮಾಜಾ ಜೊತೆಗೆ ಸುಮಾರು 40 ಮಿಲಿಯನ್ ಡಾಲರ್‌ಗೆ ಖರೀದಿಸಿತ್ತು. ಆದರೆ, ತನ್ನದೇ ಆದ ‘ಫ್ಯಾಂಟಾ’ (Fanta) ಬ್ರ್ಯಾಂಡ್‌ಗೆ ಮಾರುಕಟ್ಟೆ ವಿಸ್ತರಿಸಲು 2000ನೇ ಇಸವಿಯಲ್ಲಿ ಗೋಲ್ಡ್ ಸ್ಪಾಟ್ ಉತ್ಪಾದನೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ಓದಿ: ವಾಟ್ಸಾಪ್ ವೆಬ್ ಬಳಸುತ್ತಿದ್ದೀರಾ? ಸರ್ಕಾರದ ಈ ಅಡ್ವೈಸರಿ ತಪ್ಪದೇ ನೋಡಿ; ಸೈಬರ್ ಕ್ರಿಮಿನಲ್ಗಳ ಗಾಳಕ್ಕೆ ಬೀಳದಿರಿ
ಪ್ರಸ್ತುತ ಗ್ರಾಹಕರ ಆರೋಗ್ಯ ಕಾಳಜಿ ಮತ್ತು ಬದಲಾಗುತ್ತಿರುವ ಅಭಿರುಚಿಗೆ ತಕ್ಕಂತೆ, ಕೋಕಾ-ಕೋಲಾ ಕಂಪನಿಯು ಗೋಲ್ಡ್ ಸ್ಪಾಟ್ ಅನ್ನು ‘ಕಡಿಮೆ ಸಕ್ಕರೆ’ ಅಥವಾ ‘ಸಕ್ಕರೆ ರಹಿತ’ (low-sugar or no-sugar) ಪಾನೀಯವಾಗಿ ಮರುಪರಿಚಯಿಸಲು ಯೋಜಿಸಿದೆ.
ಗೋಲ್ಡ್ ಸ್ಪಾಟ್ ಕಂಬ್ಯಾಕ್
ಇದರಿಂದ ಫ್ಯಾಂಟಾದೊಂದಿಗೆ ನೇರ ಪೈಪೋಟಿ ತಪ್ಪಿಸುವುದರ ಜೊತೆಗೆ, ಹಳೆಯ ಬ್ರ್ಯಾಂಡ್‌ಗಳ ಭಾವನಾತ್ಮಕ ಸೆಳೆತವನ್ನು (nostalgia) ಬಳಸಿಕೊಂಡು ರಿಲಯನ್ಸ್‌ನ ‘ಕ್ಯಾಂಪಾ’ (Campa) ಮುಂತಾದ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡುವುದು ಕಂಪನಿಯ ಉದ್ದೇಶವಾಗಿದೆ.
ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಧೋನಿ ಅವರ ಮುಂದೆ ಗೋಲ್ಡ್ ಸ್ಪಾಟ್ ಕ್ಯಾನ್‌ಗಳು ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮರುಬಿಡುಗಡೆಯ ಸುದ್ದಿಗೆ ಭಾರಿ ವೇಗ ನೀಡಿದೆ.
ಇದನ್ನೂ ಓದಿ: ನಿಮ್ಮ ಪಿಎಫ್ ಹಣದಿಂದ ಮಾಸಿಕ ಆದಾಯ ಸೃಷ್ಟಿಸಲು ದಾರಿ; ಇಪಿಎಫ್ಒದ ಹೊಸ ಪ್ಲಾನ್ ಬಗ್ಗೆ ಮಾಹಿತಿ
ಕಂಪನಿಯಿಂದ ಅಧಿಕೃತ ಘೋಷಣೆ ಇನ್ನೂ ಬಾಕಿಯಿದ್ದರೂ, 90ರ ದಶಕದ ಮಕ್ಕಳು ತಮ್ಮ ಬಾಲ್ಯದ ಸವಿನೆನಪುಗಳನ್ನು ಹಂಚಿಕೊಳ್ಳುತ್ತಿದ್ದು, ಹಳೆಯ ರುಚಿಯಂತೆಯೇ ಹೊಸ ಪಾನೀಯವೂ ಇರಲಿ ಎಂದು ಆಶಿಸುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:47 pm, Tue, 24 November 26