ಬ್ಯಾಂಕ್ನಲ್ಲಿ ಠೇವಣಿ ಇಡುವ ಯೋಚನೆ ಹೊಂದಿದ್ದರೆ ಇನ್ನೂ ಹೆಚ್ಚು ಬಡ್ಡಿ ನಿರೀಕ್ಷಿಸಬಹುದು!
ಸಾಲದ ಮೇಲಿನ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಬ್ಯಾಂಕ್ಗಳು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ನವದೆಹಲಿ: ಆರ್ಬಿಐ (RBI) ರೆಪೊ ದರಕ್ಕೆ ಅನುಗುಣವಾಗಿ ಅನೇಕ ಬ್ಯಾಂಕ್ಗಳು ಈಗಾಗಲೇ ಸಾಲ ಮತ್ತು ಠೇವಣಿಗಳ (Deposit) ಮೇಲಿನ ಬಡ್ಡಿ ದರವನ್ನು (Interest Rate) ಹೆಚ್ಚಿಸಿವೆ. ಆದಾಗ್ಯೂ ಸಾಲದ ಮೇಲಿನ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಬ್ಯಾಂಕ್ಗಳು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. ಸಾಲದ ಬೇಡಿಕೆ ಹೆಚ್ಚಳ ಮತ್ತು ಹಣಕಾಸು ಹರಿವು ಬಿಗಿಯಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ಗಳು ಠೇವಣಿಗಳಿಗೆ 50ರಿಂದ 75 ಮೂಲಾಂಶದಷ್ಟು ಬಡ್ಡಿ ಹೆಚ್ಚಿಸುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.
ಬ್ಯಾಂಕ್ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸುವ ನಿರೀಕ್ಷೆ ಇದೆ ಎಂದು ಸುಂದರಂ ಫೈನಾನ್ಸ್ನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಲೋಚನ್ ತಿಳಿಸಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಈಗಾಗಲೇ ಮೂರು ವರ್ಷಗಳವರೆಗಿನ ಠೇವಣಿಗೆ ಶೇಕಡಾ 7.3ರ ವರೆಗೆ ಬಡ್ಡಿ ನೀಡುತ್ತಿರುವ ಸಂಸ್ಥೆಗಳು ಶೇಕಡಾ 7.9ರ ವರೆಗೂ ಹೆಚ್ಚಿಸುವ ಸಾಧ್ಯತೆ ಇದೆ. ಶೇಕಡಾ 8ರ ವರೆಗೆ ಹೆಚ್ಚಿಸಿದರೂ ಅಚ್ಚರಿಪಡಬೇಕಾಗಿಲ್ಲ ಎಂದು ರಾಜೀವ್ ಲೋಚನ್ ಹೇಳಿದ್ದಾರೆ.
ಹಣಕಾಸು ಹರಿವು ಹೆಚ್ಚಳಕ್ಕಾಗಿ ಕ್ರಮ
ಸಾಲಕ್ಕೆ ಬೇಡಿಕೆ ಹೆಚ್ಚಿದಾಗ ಠೇವಣಿಯನ್ನೂ ಸಮತೋಲನದಲ್ಲಿ ಇಟ್ಟುಕೊಳ್ಳಲು ಬ್ಯಾಂಕ್ಗಳು ಪ್ರಯತ್ನಿಸುತ್ತವೆ. ಸೂಕ್ತ ಪ್ರಮಾಣದಲ್ಲಿ ಹಣಕಾಸಿನ ಹರಿವು ಇರುವಂತೆ ನೋಡಿಕೊಳ್ಳಬೇಕಾದ್ದು ಬ್ಯಾಂಕ್ಗಳಿಗೆ ಅನಿವಾರ್ಯವಾಗುತ್ತದೆ. ಹೀಗಾಗಿ ಠೇವಣಿಗಳ ಮೇಲಿನ ಬಡ್ಡಿ ಹೆಚ್ಚಳದ ಮೂಲಕ ತಮ್ಮ ಬ್ಯಾಲೆನ್ಸ್ಶೀಟ್ನಲ್ಲಿನ ಸಮತೋಲನ ಕಾಯ್ದುಕೊಳ್ಳಲು ಬ್ಯಾಂಕ್ಗಳು ಯತ್ನಿಸುತ್ತವೆ ಎಂದು ಹಣಕಾಸು ತಜ್ಞರು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: ಆರೋಗ್ಯ ವಿಮೆ ಪೋರ್ಟ್ ಮಾಡುವುದು ಹೇಗೆ, ಪ್ರಯೋಜನವೇನು? ಇಲ್ಲಿದೆ ವಿವರ
ಜೂನ್ ಹಾಗೂ ಅಕ್ಟೋಬರ್ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) 2-3 ವರ್ಷಗಳ ಹಿಂದಿನ ಮಟ್ಟಕ್ಕೆ ಬಡ್ಡಿ ದರವನ್ನು ಹೆಚ್ಚಿಸಿತ್ತು. ಜೂನ್ನಲ್ಲಿ ಶೇಕಡಾ 5.35 ಇದ್ದುದನ್ನು ಅಕ್ಟೋಬರ್ ವೇಳೆಗೆ ಶೇಕಡಾ 6.25ಕ್ಕೆ ಹೆಚ್ಚಿಸಿತ್ತು. ಕಳೆದ ವಾರವಷ್ಟೇ ಕೆಲವು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಶೇಕಡಾ 7.4ರ ಬಡ್ಡಿಯ ವಿಶೇಷ ಠೇವಣಿ ಯೋಜನೆ ಘೋಷಿಸಿದ್ದವು.
ಈ ಮಧ್ಯೆ, ಸಾಲದ ಬೇಡಿಕೆ ಹೀಗೆಯೇ ಮುಂದುವರಿದರೆ ಠೇವಣಿಗೂ ಪೈಪೋಟಿ ಆರಂಭವಾಗಲಿದೆ ಎಂದು ಆದಿತ್ಯ ಬಿರ್ಲಾ ಸನ್ಲೈಫ್ ಎಎಂಸಿ ಸಿಇಒ ಎ. ಬಾಲಸುಬ್ರಮಣಿಯನ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ