Devyani International: ಹೂಡಿಕೆದಾರರಿಗೆ ಬಂಪರ್; ದೇವಯಾನಿ ಇಂಟರ್ನ್ಯಾಷನಲ್ ಲಿಸ್ಟಿಂಗ್ ಶೇ 55ರಷ್ಟು ಗಳಿಕೆ
ದೇವಯಾನಿ ಇಂಟರ್ನ್ಯಾಷನಲ್ ಸೋಮವಾರದಂದು ಲಿಸ್ಟಿಂಗ್ ಆಗಿದ್ದು, ಶೇ 55ರಷ್ಟು ಪ್ರೀಮಿಯಂ ಜತೆಗೆ 140.90 ರೂಪಾಯಿಗೆ ಮಾರುಕಟ್ಟೆಗೆ ಬಿಡುಗಡೆ ಆಗಿದೆ.
ಭಾರತದಲ್ಲಿ ಕೋಸ್ಟಾ ಕಾಫೀ, ಕೆಎಫ್ಸಿ, ಪಿಜ್ಜಾ ಹಟ್ನ ಅತಿ ಡೊಡ್ಡ ಫ್ರಾಂಚೈಸಿ ದೇವಯಾನಿ ಇಂಟರ್ನ್ಯಾಷನಲ್ ಸೋಮವಾರದಂದು ಷೇರು ಮಾರಕಟ್ಟೆಯ ಸೂಚ್ಯಂಕ ಎನ್ಎಸ್ಇಯಲ್ಲಿ 140.9 ರೂಪಾಯಿಗೆ ಲಿಸ್ಟಿಂಗ್ ಆಗಿದ್ದು, 90 ರೂಪಾಯಿಗೆ ವಿತರಣೆ ಮಾಡಲಾಗಿತ್ತು. ಈ ಮಧ್ಯೆ Krsnaa ಡಯಾಗ್ನೋಸ್ಟಿಕ್ಸ್ ಷೇರು ಶೇ 5ರ ಪ್ರೀಮಿಯಂನೊಂದಿಗೆ ಪ್ರತಿ ಷೇರಿಗೆ ರೂ. 1005.5ರೊಂದಿಗೆ ಲಿಸ್ಟಿಂಗ್ ಆಯಿತು. ಈ ಷೇರನ್ನು ಸಾರ್ವಜನಿಕ ರಿಗೆ 954 ರೂಪಾಯಿಗೆ ವಿತರಿಸಲಾಗಿತ್ತು. Windlas Biotech ಶೇ 5ರ ರಿಯಾಯಿತಿಗೆ (ಕಡಿಮೆ ಬೆಲೆಗೆ) ಹಾಗೂ ಎಕ್ಸಾರೋ ಶೇ 5ರಷ್ಟು ಬೆಲೆ ಏರಿಕೆಯೊಂದಿಗೆ ಲಿಸ್ಟಿಂಗ್ ಆಗಿದೆ.
ದೇವಯಾನಿ ಇಂಟರ್ನ್ಯಾಷನಲ್ ಐಪಿಒ ಆಗಸ್ಟ್ 6ನೇ ತಾರೀಕಿಗೆ ಸಬ್ಸ್ಕ್ರಿಪ್ಷನ್ ಕೊನೆಯಾಗಿತ್ತು. ಅಂದಹಾಗೆ ಈ ಷೇರು 116.71 ಪಟ್ಟು ಹೆಚ್ಚು ಸಬ್ಸ್ಕ್ರೈಬ್ ಆಗಿತ್ತು. 1,838 ಕೋಟಿಯ 11,25,69,719 ಷೇರುಗಳಿಗೆ ಆಫರ್ ಮಾಡಲಾಗಿದ್ದು, 13,13,77,91,700 ಷೇರುಗಳಿಗೆ ಬೇಡಿಕೆ ಬಂದಿತ್ತು. ಐಪಿಒ ಪೂರ್ವಭಾವಿಯಾಗಿ ಕಂಪೆನಿಯು ಆ್ಯಂಕರ್ ಹೂಡಿಕೆದಾರರಿಂದ 825 ಕೋಟಿ ರೂಪಾಯಿ ಸಂಗ್ರಹ ಮಾಡಿತ್ತು.
ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ (QSR) ಕಂಪೆನಿಯ ಐಪಿಒ ಹೊಸ ವಿತರಣೆ 440 ಕೋಟಿ ರೂಪಾಯಿ ಮತ್ತು ಷೇರುದಾರರು ಹಾಗೂ ಪ್ರವರ್ತಕರ ಷೇರುಗಳ ಆಫರ್ ಫಾರ್ ಸೇಲ್ (ಒಎಫ್ಎಸ್) ಮೂಲಕ 155.33 ಮಿಲಿಯನ್ ಷೇರುಗಳು ಮಾರಾಟಕ್ಕಿವೆ. ಹೊಸದಾದ ಷೇರು ವಿತರಣೆಯಿಂದ ಬರುವ ಮೊತ್ತವನ್ನು ಸಾಲದ ಅಸಲನ್ನು ತೀರಿಸುವುಕ್ಕಾಗಿ ಹಾಗೂ ಕಾರ್ಪೊರೇಟ್ ಉದ್ದೇಶಕ್ಕಾಗಿ ಬಳಸಲಾಗುತ್ತದೆ.
ಭಾರತದಲ್ಲಿ ಕ್ವಿಕ್ ಸರ್ವೀಸ್ ರೆಸ್ಟೋರೆಂಟ್ಸ್ (QSR) ಜಾಲದ ಅತಿದೊಡ್ಡ ಆಪರೇಟರ್ ದೇವಯಾನಿ ಇಂಟರ್ನ್ಯಾಷನಲ್. ನಾನ್ ಎಕ್ಸ್ಕ್ಲೂಸಿವ್ ಆಧಾರದಲ್ಲಿ ಭಾರತ, ನೇಪಾಳ ಮತ್ತು ನೈಜಿರೀಯಾದಲ್ಲಿ ಜೂನ್ 30, 2021ಕ್ಕೆ 735 ಸ್ಟೋರ್ಗಳನ್ನು ಹೊಂದಿವೆ. ದೇವಯಾನಿ ಇಂಟರ್ನ್ಯಾಷನಲ್ ಎಂಬುದು ಆರ್ಜೆ ಕಾರ್ಪ್ನ ಸಹವರ್ತಿ ಕಂಪೆನಿ. ಫುಡ್ ಅಂಡ್ ಬಿವರೇಜಸ್ (F&B) ಪ್ರಮುಖ ಕಂಪೆನಿ ಪೆಪ್ಸಿಕೋದ ಬಾಟ್ಲಿಂಗ್ ಪಾರ್ಟನರ್. ಇದನ್ನು ಆರ್ಜೆ ಕಾರ್ಪ್ ಪ್ರವರ್ತಕ ರವಿಕಾಂತ್ ಜೈಪುರಿಯಾ ಮತ್ತು ಅಧ್ಯಕ್ಷ ಹಾಗೂ ಸಿಇಒ ವಿರಾಗ್ ಜೋಶಿ ಮುನ್ನಡೆಸುತ್ತಾರೆ.
ದೇವಯಾನಿ ಇಂಟರ್ನ್ಯಾಷನಲ್ ಕಂಪೆನಿಯು ಪ್ರಮುಖ ಬ್ರ್ಯಾಂಡ್ ಪಿಜ್ಜಾ ಹಟ್, ಕೆಎಫ್ಸಿ, ಕೋಸ್ಟಾ ಕಾಫೀ ಇವುಗಳಿಗೆ ಫ್ರಾಂಚೈಸಿ ಆಗಿದೆ. ಇನ್ನು ವಾಂಗೋ, ಫುಡ್ ಸ್ಟ್ರೀಟ್, ಮಸಾಲ ಟ್ವಿಸ್ಟ್ ಮೊದಲಾದ ಸ್ವಂತ ಬ್ರ್ಯಾಂಡ್ಗಳಿವೆ.
ಇದನ್ನೂ ಓದಿ: 1 ಲಕ್ಷ ಹೂಡಿಕೆ ಮಾಡಿದ ಈ ಷೇರುದಾರನಿಗೆ ಸಿಕ್ತು 40 ಲಕ್ಷ; ಅಬ್ಬಾ ಯಾವುದೀ ಷೇರು
(Devyani International IPO Listing With 55 Percent Premium At Rs 141)
Published On - 1:24 pm, Mon, 16 August 21