ಜಾಗತಿಕ ವ್ಯಾಪಾರ ವರ್ಷಕ್ಕೆ ಶೇ. 5 ಏರುತ್ತದೆ, ನೀವು ಶೇ. 5-10 ಹೆಚ್ಚಳಕ್ಕೆ ತೃಪ್ತರಾಗಬೇಡಿ: ಭಾರತೀಯ ಉದ್ಯಮಗಳಿಗೆ ಪಿಯೂಶ್ ಗೋಯಲ್ ಕರೆ
Don't be satisfied with 5-10pc export growth, Piyush Goyal tells Indian industry: ಜಾಗತಿಕ ವ್ಯಾಪಾರ ವಹಿವಾಟು ವರ್ಷಕ್ಕೆ ಶೇ. 4-5ರ ದರದಲ್ಲಿ ಏರುತ್ತಿದೆ. ಭಾರತೀಯ ಉದ್ಯಮಗಳು ಶೇ. 5-10ರ ರಫ್ತು ಹೆಚ್ಚಳಕ್ಕೆ ತೃಪ್ತರಾಗಬಾರದು. ಭಾರತದ ಸ್ವಾವಲಂಬನೆಯ ಗುರಿ ಮುಟ್ಟಬೇಕಾದರೆ ರಫ್ತು ಇನ್ನೂ ವೇಗದಲ್ಲಿ ಹೆಚ್ಚಬೇಕು ಎಂದು ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಕರೆ ನೀಡಿದ್ದಾರೆ.

ಮುಖ್ಯಾಂಶಗಳು
- ಜಾಗತಿಕ ವ್ಯಾಪಾರ ವಹಿವಾಟು ವರ್ಷಕ್ಕೆ ಶೇ. 4-5ರ ದರದಲ್ಲಿ ಏರುತ್ತಿದೆ.
- ಭಾರತೀಯ ಉದ್ಯಮಗಳು ಶೇ. 5-10ರ ರಫ್ತು ಹೆಚ್ಚಳಕ್ಕೆ ತೃಪ್ತರಾಗಬಾರದು: ಗೋಯಲ್
- ಭಾರತದ ಸ್ವಾವಲಂಬನೆಯ ಗುರಿ ಮುಟ್ಟಬೇಕಾದರೆ ರಫ್ತು ಇನ್ನೂ ವೇಗದಲ್ಲಿ ಹೆಚ್ಚಬೇಕು
ಲಂಡನ್, ಜೂನ್ 26: ಜಾಗತಿಕ ಆರ್ಥಿಕ ಸವಾಲುಗಳ ನಡುವೆಯೂ ಭಾರತದ ರಫ್ತು ವಲಯವು ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ, ಕಾರ್ಪೊರೇಟ್ ಕಂಪನಿಗಳ ರಫ್ತು ಪ್ರಗತಿ ಬಗ್ಗೆ ಸರ್ಕಾರಕ್ಕೆ ಹೆಚ್ಚು ಸಮಾಧಾನ ಇದ್ದಂತಿಲ್ಲ. ಲಂಡನ್ನಲ್ಲಿ ವಾಣಿಜ್ಯ ಸಮಾವೇಶವೊಂದರಲ್ಲಿ (Business Plenary Session) ಮಾತನಾಡುತ್ತಿದ್ದ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ (Piyush Goyal) ಪ್ರಕಾರ, ಶೇ. 5-10 ರಫ್ತು ಸಾಧಾರಣ ಏರಿಕೆಯಷ್ಟೇ. ‘ಭಾರತೀಯ ಉದ್ಯಮಗಳು ಕೇವಲ ಶೇಕಡಾ 5 ರಿಂದ 10 ರಷ್ಟು ವಾರ್ಷಿಕ ರಫ್ತು ಬೆಳವಣಿಗೆಯನ್ನು ಕಂಡು “ಆರಾಮವಾಗಿ” (Comfortable) ಇರಬಾರದು; ಬದಲಿಗೆ ಇನ್ನೂ ದೊಡ್ಡ ಗುರಿಗಳನ್ನು ಹೊಂದಬೇಕು’ ಎಂದು ಸಚಿವರು ಆಗ್ರಹಿಸಿದ್ದಾರೆ.
ಜಾಗತಿಕ ವ್ಯಾಪಾರ ವಹಿವಾಟು ವಾರ್ಷಿಕವಾಗಿ ಶೇ. 4-5ರ ದರದಲ್ಲಿ ಹೆಚ್ಚುತ್ತದೆ. ಹೀಗಿರುವ ಭಾರತದ ಉದ್ದಿಮೆಗಳು ಐದು, ಏಳು, ಹತ್ತು ಪ್ರತಿಶತ ರಫ್ತು ಹೆಚ್ಚಳಕ್ಕೆ ತೃಪ್ತಿ ಪಟ್ಟುಕೊಂಡರೆ ಹೇಗೆ? ಇಷ್ಟು ಸಣ್ಣ ಮೊತ್ತಕ್ಕೆ ತೃಪ್ತಿ ಪಟ್ಟುಕೊಂಡರೆ ದೇಶದ ಸಾಮರ್ಥ್ಯಕ್ಕೆ ತಕ್ಕಂತಹ ಸಾಧನೆ ಬರಲು ಆಗುವುದಿಲ್ಲ ಎನ್ನುವುದು ಗೋಯಲ್ ಅವರ ಅನಿಸಿಕೆ. ಭಾರತವು ಪ್ರಸ್ತುತ ವರ್ಷದಲ್ಲಿ $1 ಟ್ರಿಲಿಯನ್ ರಫ್ತು ಗುರಿಯನ್ನು ತಲುಪಲು ಯತ್ನಿಸುತ್ತಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಇದನ್ನು $2 ಟ್ರಿಲಿಯನ್ ಜಾಗತಿಕ ರಫ್ತು ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ. ಇದನ್ನು ಸಾಧಿಸಲು ಉದ್ಯಮಗಳು ತಮ್ಮ ವೇಗವನ್ನು ಹೆಚ್ಚಿಸಬೇಕು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕೊರಿಯಾದ ಶೇರು ಮಾರುಕಟ್ಟೆ ಧೂಳೀಪಟ; ಮಹಾಕುಸಿತಕ್ಕೆ ಕೋಸ್ಪಿ ಕಕ್ಕಾಬಿಕ್ಕಿ; ಜಪಾನ್, ಚೀನಾ ಮಾರುಕಟ್ಟೆಗಳೂ ತತ್ತರ
ಪ್ರಸ್ತುತ ಭಾರತದ ರಫ್ತು ಪ್ರಗತಿ
ಪ್ರಸ್ತುತ ಹಣಕಾಸು ವರ್ಷದ ಏಪ್ರಿಲ್ 1 ರಿಂದ ಜೂನ್ 14 ರವರೆಗಿನ ಅವಧಿಯಲ್ಲಿ ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಸರಕು ರಫ್ತು (Merchandise Exports) ಶೇ. 15 ರಷ್ಟು ಭಾರಿ ಬೆಳವಣಿಗೆ ದಾಖಲಿಸಿದೆ. ಮೇ ತಿಂಗಳಿನಲ್ಲಿ ರಫ್ತು ಆರು ತಿಂಗಳ ಗರಿಷ್ಠ ಮಟ್ಟವಾದ 18% ಕ್ಕೆ ($45.2 ಬಿಲಿಯನ್) ತಲುಪಿತ್ತು.
ಸ್ವದೇಶಿ ಮತ್ತು ಆಮದು ಪರ್ಯಾಯ
ಭಾರತದಲ್ಲಿ ಮಧ್ಯಮ ವರ್ಗದ ವಿಸ್ತರಣೆಯಿಂದಾಗಿ ಬಳಕೆ (Consumption) ವೇಗವಾಗಿ ಬೆಳೆಯುತ್ತಿದೆ. ದೇಶದ ಉದ್ಯಮಗಳು ಈ ಬೇಡಿಕೆಯನ್ನು ಸ್ಥಳೀಯವಾಗಿಯೇ ಪೂರೈಸದಿದ್ದರೆ ಆಮದು ಹೆಚ್ಚಾಗಲಿದೆ. ಹೀಗಾಗಿ, ಪ್ರತಿಯೊಬ್ಬರೂ ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಮತ್ತು ಪ್ರಸ್ತುತ ಆಮದು ಮಾಡಿಕೊಳ್ಳುತ್ತಿರುವ ಬಂಡವಾಳ ಸರಕುಗಳನ್ನು (Capital Goods) ಭಾರತದಲ್ಲೇ ತಯಾರಿಸಲು ಮುಂದಾಗಬೇಕು ಎಂದು ವಾಣಿಜ್ಯ ಸಚಿವರು ಕರೆ ನೀಡಿದ್ದಾರೆ.
ಮುಕ್ತ ವ್ಯಾಪಾರ ಒಪ್ಪಂದಗಳ (FTA) ಲಾಭ
ಕಳೆದ ಮೂರೂವರೆ ವರ್ಷಗಳಲ್ಲಿ ಭಾರತವು ಸುಮಾರು 38 ಮುಂದುವರಿದ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳ ಕುರಿತು ಮಾತುಕತೆ ನಡೆಸಿದೆ. ಇದು ಭಾರತೀಯ ರಫ್ತುದಾರರಿಗೆ ಕಡಿಮೆ ಆಮದು ಸುಂಕದೊಂದಿಗೆ ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲು ದೊಡ್ಡ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಪಿಯೂಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ವೋಕ್ಸ್‌ವ್ಯಾಗನ್ ಶಾಕ್; ಒಂದು ಲಕ್ಷ ಉದ್ಯೋಗ ಕಡಿತ; ಪ್ರಮುಖ ಕಾರ್ಖಾನೆಗಳನ್ನೇ ಮುಚ್ಚಲುಹೊರಟ ವಾಹನ ತಯಾರಕ ಸಂಸ್ಥೆ
ಜಾಗತಿಕ ಮಾರುಕಟ್ಟೆಯನ್ನು ಆಳಬೇಕಾದರೆ ಭಾರತೀಯ ಉತ್ಪನ್ನಗಳ ಗುಣಮಟ್ಟ (Quality), ಪ್ಯಾಕೇಜಿಂಗ್ ಮತ್ತು ಉತ್ಪಾದಕತೆ (Productivity) ಅತ್ಯುತ್ತಮ ಮಟ್ಟದಲ್ಲಿರಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಸದಾ ಗುಣಮಟ್ಟದ ಮಾನದಂಡಗಳಿಗೆ ಒತ್ತು ನೀಡುತ್ತಾರೆ ಎಂಬುದನ್ನು ಸಚಿವರು ನೆನಪಿಸಿದ್ದಾರೆ.
ಕೃಷಿ ಮತ್ತು ನವೋದ್ಯಮಗಳ ಪಾತ್ರ
ಭಾರತದ ಕೃಷಿ ಮತ್ತು ಮತ್ಸ್ಯೋದ್ಯಮ (Fisheries) ರಫ್ತು ಈಗಾಗಲೇ ಸುಮಾರು ₹5 ಲಕ್ಷ ಕೋಟಿ ದಾಟಿದೆ. ಆದರೆ, ಇದರಲ್ಲಿ ಮೌಲ್ಯವರ್ಧನೆ (Value Addition) ಕಡಿಮೆಯಿದೆ. ಯುವ ಉದ್ಯಮಿಗಳು ಮತ್ತು ನವೋದ್ಯಮಗಳು (Startups) ಆಹಾರ ಸಂಸ್ಕರಣಾ (Food Processing) ಘಟಕಗಳನ್ನು ಸ್ಥಾಪಿಸುವ ಮೂಲಕ ಈ ವಲಯದಲ್ಲಿ ದೊಡ್ಡ ಕ್ರಾಂತಿ ಮಾಡಬಹುದು ಎಂದು ಗೋಯಲ್ ಆಶಯ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:40 pm, Fri, 26 June 26




