
ನವದೆಹಲಿ, ಜೂನ್ 5: ಮುಂಬರುವ ಪ್ರಬಲ ‘ಎಲ್ ನಿನೊ’ (El Nino) ಹವಾಮಾನ ವೈಪರೀತ್ಯದಿಂದಾಗಿ ಭಾರತಕ್ಕೆ ಬರೋಬ್ಬರಿ 1 ಟ್ರಿಲಿಯನ್ ಡಾಲರ್ (ಸುಮಾರು 83 ಲಕ್ಷ ಕೋಟಿ ರೂಪಾಯಿ) ಭಾರಿ ಆರ್ಥಿಕ ನಷ್ಟ ಉಂಟಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ನಿನ್ನೆ ವಿಶ್ವ ಪರಿಸರ ದಿನದ ಭಾಗವಾಗ ಎಕನಾಮಿಕ್ ಟೈಮ್ಸ್ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಅಮೆರಿಕದ ಡಾರ್ಟ್ಮೌತ್ ಕಾಲೇಜಿನ ಭೂಗೋಳ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಜಸ್ಟಿನ್ ಎಸ್ ಮ್ಯಾನ್ಕಿನ್ ಮಾತನಾಡುತ್ತಾ, ಜಾಗತಿಕವಾಗಿ ಎಲ್ ನಿನೋ ಮಾಡುವ ಪರಿಣಾಮಗಳನ್ನು ವಿಶ್ಲೇಷಿಸಿದರು.
ಎಲ್ ನಿನೊ ಎನ್ನುವುದು ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ಅಸಹಜವಾಗಿ ಬಿಸಿಯಾಗುವ ಒಂದು ಹವಾಮಾನ ಪ್ರಕ್ರಿಯೆ. ದಕ್ಷಿಣ ಅಮೆರಿಕದ ಪೆರು ದೇಶದ ಸಮೀಪದ ಪೂರ್ವ ಉಷ್ಣವಲಯ ಪೆಸಿಫಿಕ್ ಸಾಗರದ ಮೇಲ್ಮೈ ನೀರಿನ ಉಷ್ಣಾಂಶವು ಸರಾಸರಿಗಿಂತ ಹೆಚ್ಚು ಬಿಸಿಯಾಗಿದ್ದರೆ ಅದನ್ನು ಎಲ್ ನಿನೊ ಎನ್ನುತ್ತಾರೆ. ಸ್ಪ್ಯಾನಿಷ್ ಭಾಷೆಯಲ್ಲಿ ‘ಎಲ್ ನಿನೊ’ ಎಂದರೆ “ಬಾಲ ಯೇಸು” (Little Boy / Christ Child) ಎಂದರ್ಥ. ಸಾಮಾನ್ಯವಾಗಿ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ (ಡಿಸೆಂಬರ್) ದಕ್ಷಿಣ ಅಮೆರಿಕಾದ ಪೆರು ದೇಶದ ಕರಾವಳಿಯಲ್ಲಿ ಈ ಬದಲಾವಣೆ ಕಾಣಿಸಿಕೊಳ್ಳುವುದರಿಂದ ಇದಕ್ಕೆ ಈ ಹೆಸರು ಬಂದಿದೆ.
ಸಾಮಾನ್ಯ ದಿನಗಳಲ್ಲಿ, ಪೆಸಿಫಿಕ್ ಮಹಾಸಾಗರದ ಮೇಲೆ ಬೀಸುವ ಬಲವಾದ ಮಾರುತಗಳು (Trade Winds) ಸಮುದ್ರದ ಮೇಲ್ಮೈಯಲ್ಲಿರುವ ಬಿಸಿ ನೀರನ್ನು ಏಷ್ಯಾದ ಕಡೆಗೆ (ಪಶ್ಚಿಮಕ್ಕೆ) ತಳ್ಳುತ್ತವೆ. ಇದರಿಂದಾಗಿ ಇಂಡೋನೇಷ್ಯಾ ಮತ್ತು ಭಾರತದ ಸುತ್ತಮುತ್ತಲಿನ ಸಮುದ್ರದ ನೀರು ಬಿಸಿಯಾಗಿ ಇಲ್ಲಿ ಉತ್ತಮ ಮಳೆಯಾಗುತ್ತದೆ.
ಆದರೆ ಎಲ್ ನಿನೊ ವರ್ಷದಲ್ಲಿ, ಈ ಮಾರುತಗಳು ದುರ್ಬಲಗೊಳ್ಳುತ್ತವೆ. ಆಗ ಏಷ್ಯಾದ ಕಡೆಗೆ ಹೋಗಬೇಕಾದ ಬಿಸಿ ನೀರು ದಕ್ಷಿಣ ಅಮೆರಿಕಾದ (ಪೆರು ಮತ್ತು ಈಕ್ವೆಡಾರ್) ಕರಾವಳಿಯಲ್ಲೇ ಉಳಿದುಕೊಳ್ಳುತ್ತದೆ. ಸಮುದ್ರದ ಬಿಸಿನೀರು ಇರುವ ಜಾಗ ಬದಲಾಗುವುದರಿಂದ, ಜಾಗತಿಕವಾಗಿ ಮಳೆ ತರುವ ಮೋಡಗಳ ಚಲನೆ ಮತ್ತು ಹವಾಮಾನದ ಚಕ್ರವೇ ತಲೆಕೆಳಗಾಗುತ್ತದೆ.
ಇದನ್ನೂ ಓದಿ: ಸಿಮ್ ಸ್ವಾಪಿಂಗ್ ಹುಷಾರ್..! ದಿಢೀರನೇ ಸಿಮ್ ಡೀಆ್ಯಕ್ಟಿವೇಟ್ ಆಯ್ತು, ನೋಡನೋಡುತ್ತಿದ್ದಂತೆ ಬ್ಯಾಂಕ್ ಖಾತೆಯಿಂದ ಹಣ ಮಾಯ ಆಯ್ತು
ಎಲ್ ನಿನೊ ಈ ಬಾರಿ ಭಾರತದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಮುಂಗಾರು ಮಳೆ ಕ್ಷೀಣಿಸುತ್ತದೆ. ಉಷ್ಣಗಾಳಿ ತೀವ್ರವಾಗುತ್ತದೆ. ಈ ಹವಾಮಾನ ವೈಪರೀತ್ಯಗಳಿಂದ ಆರ್ಥಿಕ ಚಟುವಟಿಕೆಗಳಿಗೆ ಧಕ್ಕೆ ಆಗುತ್ತದೆ. ಅದು ಆರ್ಥಿಕ ಬೆಳವಣಿಗೆಗೆ ಹಿನ್ನಡೆ ತರುತ್ತದೆ. ಜಸ್ಟಿನ್ ಮ್ಯಾನ್ಕಿನ್ ಪ್ರಕಾರ ಭಾರತದ ಆರ್ಥಿಕತೆಗೆ ಇದು ಉಂಟು ಮಾಡುವ ನಷ್ಟ 1 ಟ್ರಿಲಿಯನ್ ಡಾಲರ್ ಇರಬಹುದು.
ಇದನ್ನೂ ಓದಿ: ಆರ್ಥಿಕತೆಯಲ್ಲಿ ಭರ್ಜರಿ ಕ್ಯಾಷ್ ಇದ್ದರೂ ಎಟಿಎಂಗಳಲ್ಲಿ ಇಲ್ಲ ಹೆಚ್ಚು ನೋಟು; ಕರ್ನಾಟಕದಲ್ಲೇ ಅತಿಹೆಚ್ಚು ಕೊರತೆ; ಯಾಕೆ ಈ ಕಥೆ?
ಈ ಭೀಕರ ಆರ್ಥಿಕ ರಿಸ್ಕ್ ಎದುರಿಸಲು ಭಾರತ ಸರ್ಕಾರ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಬೇಳೆಕಾಳುಗಳ ಬಫರ್ ಸ್ಟಾಕ್ (ದಾಸ್ತಾನು) ಅನ್ನು ದಾಖಲೆ ಮಟ್ಟದ 43 ಲಕ್ಷ ಟನ್‌ಗಳಿಗೆ ಹೆಚ್ಚಿಸಿದೆ. ಇದು ಎಲ್ ನಿನೊದ ಆರಂಭಿಕ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗದಂತೆ ತಡೆಯಲು ಸಹಕಾರಿಯಾಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ