
ನವದೆಹಲಿ, ಜುಲೈ 3: ಪೆಪ್ಸಿಕೋದ ಮಾಜಿ ಅಧ್ಯಕ್ಷೆ ಮತ್ತು ಸಿಇಒ ಇಂದ್ರಾ ನೂಯಿ (Indra Nooyi) ಅವರು ಇತ್ತೀಚೆಗೆ ನೀಡಿರುವ ಕೆಲ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಭಾರತ ಅಸ್ತವ್ಯಸ್ತ ದೇಶ ಎಂದು ಅವರು ಹೇಳಿದ್ದು ಮೊನ್ನೆ ಭಾರೀ ಟೀಕೆಗೆ ಕಾರಣವಾಗಿತ್ತು. ಇದೀಗ ಅವರ ಮತ್ತೊಂದು ಹೇಳಿಕೆ ನೆಟ್ಟಿಗರ ಗಮನಕ್ಕೆ ಬಂದಿದೆ. ಅಮೆರಿಕದಂತಹ ದೇಶದಲ್ಲಿ ಮಾತ್ರ ತಾನು ಸಿಇಒ ಆಗಲು ಸಾಧ್ಯವಿತ್ತು, ಭಾರತ ಸೇರಿದಂತೆ ಜಗತ್ತಿನ ಬೇರೆ ಯಾವುದೇ ದೇಶದಲ್ಲಿ ಇದು ಅಸಾಧ್ಯವಾಗಿತ್ತು ಎಂಬ ಅವರ ವಾದಕ್ಕೆ ಹಲವರು ತಗಾದೆ ವ್ಯಕ್ತಪಡಿಸಿದ್ದಾರೆ.
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹೂವರ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕಿ ಹಾಗು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿಯಾದ ಕಾಂಡೋಲಿಜಾ ರೈಸ್ (Condoleeza Rice) ಅವರೊಂದಿಗಿನ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಾ ಇಂದ್ರಾ ನೂಯಿ ಅವರು ತಮ್ಮ ಸಾಧನೆ ಮೆಟ್ಟಿಲುಗಳನ್ನು ಮೆಲುಕು ಹಾಕಿದರು. ಈ ವೇಳೆ, ಅಮೆರಿಕದ ವ್ಯವಸ್ಥೆಯ ಬಗ್ಗೆ ಬಹಳಷ್ಟು ಪ್ರಶಂಸೆ ವ್ಯಕ್ತಪಡಿಸಿದರು. ಭಾರತದ ಕೆಲ ನೂನ್ಯತೆಗಳನ್ನೂ ಎತ್ತಿತೋರಿಸುವ ಪ್ರಯತ್ನ ಮಾಡಿದ್ದಾರೆ.
“ಅಮೆರಿಕಾದಲ್ಲಿ ಮಾತ್ರ ಅರ್ಹತೆಗೆ (meritocracy) ಹೆಚ್ಚಿನ ಬೆಲೆ ಇದೆ. ಇಲ್ಲಿ ಮೆಂಟರ್‌ಗಳು ನೀವು ಪುರುಷರೇ ಅಥವಾ ಮಹಿಳೆಯರೇ ಎಂದು ನೋಡುವುದಿಲ್ಲ, ಬದಲಾಗಿ ಅತ್ಯುತ್ತಮ ಪ್ರತಿಭೆಗೆ ಮನ್ನಣೆ ನೀಡುತ್ತಾರೆ. ನಾನು ಅಮೆರಿಕಕ್ಕೆ ಬಂದು ಶೂನ್ಯದಿಂದ ಆರಂಭಿಸಿ, ಒಂದು ಪ್ರತಿಷ್ಠಿತ ಕಂಪನಿಯ ಸಿಇಒ ಆಗಲು ಸಾಧ್ಯವಾಯಿತು. ಆದರೆ ಭಾರತ ಸೇರಿದಂತೆ ಪ್ರಪಂಚದ ಬೇರೆ ಯಾವುದೇ ದೇಶದಲ್ಲಿ ಇದು ಸಾಧ್ಯವಿರಲಿಲ್ಲ,” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿಕಸಿತ ಭಾರತ ಉದ್ಯೋಗ ಖಾತ್ರಿ ಯೋಜನೆ ವಿಬಿ-ಜಿ-ರಾಮ್-ಜಿಗೆ ನೊಂದಣಿ ಹೇಗೆ? ಕೆಲಸ ಸಿಗದಿದ್ದರೆ ಎಷ್ಟು ಭತ್ಯೆ?
ಇದೇ ವೇಳೆ ನೂಯಿ ಭಾರತ ಮತ್ತು ಚೀನಾವನ್ನು ಹೋಲಿಸುತ್ತಾ, ಚೀನಾವನ್ನು ಅರ್ಥಮಾಡಿಕೊಳ್ಳುವುದು ಸುಲಭ ಆದರೆ ಭಾರತದಲ್ಲಿ ವ್ಯವಸ್ಥೆಯು ಅಸ್ತವ್ಯಸ್ತವಾಗಿದೆ (chaotic) ಎಂದು ಅಭಿಪ್ರಾಯಪಟ್ಟಿದ್ದಾರೆ. “ಚೀನಾ ಒಂದು ರೀತಿಯಲ್ಲಿ ಸಂಘಟಿತವಾಗಿದೆ, ಆದರೆ ಭಾರತವು ಅಸ್ತವ್ಯಸ್ತವಾಗಿದೆ. ಈ ಅಸ್ತವ್ಯಸ್ತತೆಯೇ ಭಾರತದ ಸೌಂದರ್ಯ, ಆದರೆ ಅಚ್ಚುಕಟ್ಟಾದ ಜೀವನ ಇಷ್ಟಪಡುವವರಿಗೆ ಭಾರತದಲ್ಲಿ ಕೆಲಸ ಮಾಡುವುದು ಕಷ್ಟ,” ಎಂದು ಅವರು ತಿಳಿಸಿದ್ದಾರೆ.
ಕಾಂಡೊಲೀನಾ ರೈಸ್ ಅವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ನೂಯಿ ಅವರು ವ್ಯಕ್ತಪಡಿಸಿದ ಕೆಲ ಅಭಿಪ್ರಾಯಗಳನ್ನು ಅನೇಕರು ಒಪ್ಪುತ್ತಿಲ್ಲ. ಭಾರತದಲ್ಲಿ ತಾನು ಸಿಇಒ ಆಗಲು ಸಾಧ್ಯವಿಲ್ಲ ಎನ್ನುವ ಹೇಳಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ನೆಟ್ಟಿಗರು ಭಾರತದ ಮಹಿಳಾ ಸಾಧಕರನ್ನು ಉದಾಹರಣೆಯಾಗಿ ನೀಡುತ್ತಿದ್ದಾರೆ.
ಕನ್ವಲ್ ಸಿಬಲ್ ಎನ್ನುವವರ ಎಕ್ಸ್ ಪೋಸ್ಟ್
You couldn’t become CEO in India? Why give a wrong picture of India?
Many women have become CEOs in India. Amongst them;
•Falguni Nayar: Founder and CEO of Nykaa.
•Kiran Mazumdar-Shaw: Executive Chairperson and founder Biocon.
•Vibha Padalkar: CEO and MD of HDFC Life… https://t.co/Htgrwz09Kc— Kanwal Sibal (@KanwalSibal) July 2, 2026
ಕಿರಣ್ ಮಜುಂದಾರ್ ಶಾ (ಬಯೋಕಾನ್), ಫಲ್ಗುಣಿ ನಾಯರ್ (ನೈಕಾ), ಚಂದಾ ಕೊಚ್ಚರ್ (ಐಸಿಐಸಿಐ), ವಿಭಾ ಪಾದಲ್ಕರ್ (ಎಚ್‌ಡಿಎಫ್‌ಸಿ ಲೈಫ್ ಇನ್ಷೂರೆನ್ಸ್), ಪ್ರಿಯಾ ನಾಯರ್ (ಹಿಂದೂಸ್ತಾನ್ ಯುನಿಲಿವರ್), ದೀಪಾಲಿ ಗೋಯಂಕಾ (ವೆಲ್ಸ್ಪನ್ ಇಂಡಿಯಾ), ರಾಧಿಕಾ ಗುಪ್ತಾ (ಎಡೆಲ್ವೇಸ್ ಮ್ಯೂಚುವಲ್ ಫಂಡ್), ಪ್ರಭಾ ನರಸಿಂಹನ್ (ಕೋಲ್ಗೇಟ್ ಪಾಮೊಲಿವ್ ಇಂಡಿಯಾ) ಮುಂತಾದವರ ಹೆಸರನ್ನು ಒಬ್ಬರು ಎತ್ತಿ ತೋರಿಸುತ್ತಾ, ಭಾರತದಲ್ಲೂ ಮಹಿಳೆಯರಿಗೆ ಉನ್ನತ ಹುದ್ದೆಗೇರಲು ಅವಕಾಶವಿರುವುದನ್ನು ತೋರಿಸಿದ್ದಾರೆ.
ಇದನ್ನೂ ಓದಿ: ಮೆಷೀನ್ಗಿಂತ ಮನುಷ್ಯರೇ ವಾಸಿ; ಎಐ ಕಾರಣ ನೀಡಿ ಮನೆಗೆ ಕಳುಹಿಸಿದ್ದ ಉದ್ಯೋಗಿಗಳನ್ನು ವಾಪಸ್ ಕರೆಸಿಕೊಂಡ ದೊಡ್ಡ ಕಂಪನಿಗಳು
ಅಮೆರಿಕದ ವ್ಯವಸ್ಥೆಯನ್ನು ನೂಯಿ ಹೊಗಳಿದ್ದರೂ, ಭಾರತದ ಇಂದಿನ ಕಾರ್ಪೊರೇಟ್ ವಲಯದಲ್ಲಿ ನಡೆದಿರುವ ಬದಲಾವಣೆಗಳನ್ನು ಮತ್ತು ಮಹಿಳಾ ಸಾಧಕರನ್ನು ಅವರು ಗಮನಿಸಿಲ್ಲ ಎಂಬುದು ನೆಟ್ಟಿಗರ ಮುಖ್ಯ ವಾದವಾಗಿದೆ.
ಮಹಿಳಾ ಸ್ವಾತಂತ್ರ್ಯ ವಿಚಾರದಲ್ಲಿ ಅಮೆರಿಕಕ್ಕಿಂತ ಭಾರತವೇ ಎಷ್ಟೋ ವಾಸಿ ಎಂದು ಕೆಲವರು ವಾದಿಸಿದ್ದಾರೆ. ಅಮೆರಿಕ ಸ್ವಾತಂತ್ರ್ಯ ಪಡೆದು ಶತಮಾನಗಳ ಬಳಿಕ ಮಹಿಳೆಯರಿಗೆ ಮತದಾನ ಹಕ್ಕು ಸಿಕ್ಕಿತು. ಭಾರತದಲ್ಲಿ ಸ್ವಾತಂತ್ರ್ಯ ಬರುತ್ತಲೇ ಆ ಹಕ್ಕು ಕೊಡಲಾಗಿತ್ತು. ಅಮೆರಿಕದ ಕಾರ್ಪೊರೇಟ್ ಕಂಪನಿಗಳಲ್ಲಿ ಅತ್ಯುಚ್ಚ ಹುದ್ದೆ ಪಡೆದ ಮಹಿಳೆಯರು ಶೇ. 10ಕ್ಕಿಂತಲೂ ಕಡಿಮೆ ಎನ್ನುವ ಸಂಗತಿಯನ್ನೂ ಕೆಲವರು ಎತ್ತಿತೋರಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Fri, 3 July 26