
ನವದೆಹಲಿ, ಅಕ್ಟೋಬರ್ 9: ಜಾಗತಿಕವಾಗಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು, ಮಧ್ಯಪ್ರಾಚ್ಯದಲ್ಲಿನ ಅಸ್ಥಿರತೆ ಹಾಗೂ ತೈಲ ದರಗಳ ಏರಿಕೆಯ ಹಿನ್ನೆಲೆಯಲ್ಲಿ 2026 ರಲ್ಲಿ ಜಾಗತಿಕ ಆರ್ಥಿಕ ಪ್ರಗತಿಯ ವೇಗ (Global Economic Growth) ಮಂದಗೊಳ್ಳಬಹುದು ಎಂದು ವಿಶ್ವಸಂಸ್ಥೆಯ ವಾಣಿಜ್ಯ ಮತ್ತು ಅಭಿವೃದ್ಧಿ ಸಂಸ್ಥೆ (UNCTAD) ಅಂದಾಜಿಸಿದೆ. ಈ ಗ್ಲೋಬಲ್ ಏಜೆನ್ಸಿ ಪ್ರಕಾರ, ಜಾಗತಿಕವಾಗಿ ಈ ಕ್ಯಾಲೆಂಡರ್ ವರ್ಷ (ಜನವರಿಯಿಂದ ಡಿಸೆಂಬರ್) ಜಿಡಿಪಿ ಶೇ. 2.6 ರಷ್ಟು ಮಾತ್ರ ಬೆಳವಣಿಗೆ ಹೊಂದಬಹುದು.
ವಿಶ್ವ ಆರ್ಥಿಕತೆ ನಿಧಾನಗೊಳ್ಳಲು ಯುಎನ್ಸಿಟಿಎಡಿ ಕೆಲ ಪ್ರಮುಖ ಕಾರಣಗಳನ್ನು ಪ್ರಸ್ತಾಪಿಸಿದೆ. ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ಯುದ್ಧ ಸನ್ನಿವೇಶದಿಂದಾಗಿ ಬ್ರೆಂಟ್ ಕಚ್ಚಾ ತೈಲ (Brent Crude) ಬೆಲೆಯು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಇಂಧನ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ತೀವ್ರ ಹಣದುಬ್ಬರ ಹಾಗೂ ವೆಚ್ಚದ ಒತ್ತಡವನ್ನು ಹೇರಿರುವುದು ಒಂದು ಕಾರಣವಾಗಿದೆ.
ಜಾಗತಿಕ ಬಡ್ಡಿದರಗಳು ಉನ್ನತ ಮಟ್ಟದಲ್ಲೇ ಮುಂದುವರಿದಿರುವುದು ಮತ್ತು ಬಂಡವಾಳ ಹರಿವಿನ ಅಸ್ಥಿರತೆಯು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೂಡಿಕೆ ನಿಧಿ ಕ್ರೋಡೀಕರಿಸುವುದನ್ನು ಕಷ್ಟಕರವಾಗಿಸಿದೆ. ಇದು ಆರ್ಥಿಕತೆಗೆ ಹಿನ್ನಡೆ ತರಬಹುದು ಎಂದು ಈ ಏಜೆನ್ಸಿ ಶಂಕಿಸಿದೆ.
ಜಾಗತಿಕವಾಗಿ ಮಂದಗತಿ ಕಂಡುಬಂದರೂ, 2026 ರ ಒಟ್ಟು ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಏಷ್ಯಾ ಖಂಡವೇ ಶೇ. 59 ರಷ್ಟು ಪ್ರಮುಖ ಕೊಡುಗೆ ನೀಡಲಿದೆ ಎಂದು ವರದಿ ಹೇಳಿದೆ.
ಭಾರತೀಯ ಆರ್ಥಿಕತೆಯ ಮಿಂಚು: ಪ್ರಮುಖ ಪ್ರಗತಿಪರ ದೇಶಗಳಲ್ಲಿ ಭಾರತವು ಶೇ. 7.3 ರಷ್ಟು ಆರ್ಥಿಕ ಪ್ರಗತಿ ಸಾಧಿಸುವ ಮೂಲಕ ಜಾಗತಿಕ ಮಟ್ಟದಲ್ಲೇ ಮುಂಚೂಣಿಯಲ್ಲಿರಲಿದೆ ಎಂದು ಅಂದಾಜಿಸಲಾಗಿದೆ.
ಇತರೆ ಪ್ರಮುಖ ದೇಶಗಳಲ್ಲಿ ಇಂಡೋನೇಷ್ಯಾ ಶೇ. 5.2 ಹಾಗೂ ಚೀನಾ ಶೇ. 4.5 ರಷ್ಟು ಪ್ರಗತಿ ದಾಖಲಿಸುವ ನಿರೀಕ್ಷೆಯಿದೆ.
ಸರಕುಗಳ ನಿಜವಾದ ಮಾರಾಟದ ಪ್ರಮಾಣಕ್ಕಿಂತಲೂ (Trade Volume) ಇಂಧನ ಬೆಲೆ ಏರಿಕೆಯಿಂದಾಗಿ ಆಮದು-ರಫ್ತುಗಳ ಸರಾಸರಿ ಮೌಲ್ಯದ ಸೂಚ್ಯಂಕ (Trade Value Index) ತೀವ್ರವಾಗಿ ಹೆಚ್ಚಾಗಿದೆ. ಇದು ನೈಜ ವಹಿವಾಟು ಹೆಚ್ಚಾಗುವುದಕ್ಕಿಂತಲೂ ಹಣದುಬ್ಬರದ ಕಾರಣದಿಂದಾಗಿ ವ್ಯಾಪಾರ ವೆಚ್ಚ ಹೆಚ್ಚಿರುವುದನ್ನು ಸೂಚಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ