Go First: ಗೋ ಫಸ್ಟ್ ಬಿಕ್ಕಟ್ಟು; ಒನ್ಟೈಮ್ ಸೆಟಲ್ಮೆಂಟ್ ಸಾಧ್ಯತೆ; ಮೇ 15ರವರೆಗೂ ಫ್ಲೈಟ್ ಟಿಕೆಟ್ ಬುಕಿಂಗ್ ರದ್ದು
Go First Flights Canceled Till May 15th: ಇನ್ಸಾಲ್ವೆನ್ಸಿ ನಿರ್ಣಯಕ್ಕೆ ಮೊರೆ ಹೋಗಿರುವ ಗೋ ಫಸ್ಟ್ ಇದೀಗ ಮೇ 15ರವರೆಗೂ ತನ್ನ ಫ್ಲೈಟ್ ಟಿಕೆಟ್ ಬುಕಿಂಗ್ ರದ್ದುಗೊಳಿಸಿದೆ. ಇದೇ ವೇಳೆ, ಬ್ಯಾಂಕುಗಳಿಗೆ ತಾನು ಉಳಿಸಿಕೊಂಡಿರುವ ಸಾಲದ ಮೊತ್ತವನ್ನು ಒಮ್ಮೆಗೇ ಪಾವತಿಸುವ ಅವಕಾಶವನ್ನು ಗೋ ಫಸ್ಟ್ ಪಡೆಯಬಹುದು.
ನವದೆಹಲಿ: ಹಣಕಾಸು ಬಿಕ್ಕಟ್ಟಿಗೆ ಸಿಲುಕಿ ಪ್ರಾಧಿಕಾರದ ಸಹಾಯಕ್ಕೆ ಮೊರೆ ಹೋಗಿರುವ ಗೋ ಫಸ್ಟ್ (Go First Airline) ಇದೀಗ ತನ್ನೆಲ್ಲಾ ವಿಮಾನ ಹಾರಾಟವನ್ನು ಇನ್ನಷ್ಟು ದಿನಗಳ ಕಾಲ ರದ್ದು ಮಾಡಿದೆ. ಮೇ 3ರಿಂದ 5ರವರೆಗೂ ಗೋ ಫಸ್ಟ್ ಫ್ಲೈಟ್ ಟಿಕೆಟ್ ಬುಕಿಂಗ್ಗಳು ರದ್ದಾಗಿದ್ದವು. ಬಳಿಕ ಮೇ 9ರವರೆಗೂ ಟಿಕೆಟ್ ಬುಕಿಂಗ್ ರದ್ದು ಮಾಡಲಾಗಿದೆ ಎಂದು ಕೆಲ ವರದಿಗಳು ಹೇಳಿವೆ. ಇನ್ನೂ ಕೆಲ ವರದಿಗಳ ಪ್ರಕಾರ ಮೇ 15ರವರೆಗೂ ಗೋ ಫಸ್ಟ್ ವಿಮಾನ ಹಾರಾಟ ಇರುವುದಿಲ್ಲ ಎನ್ನಲಾಗುತ್ತಿದೆ. ಟಿಕೆಟ್ ಬುಕಿಂಗ್ ರದ್ದುಗೊಂಡ ಪ್ರಯಾಣಿಕರಿಗೆ ಅವರ ಹಣ ವಾಪಸ್ ಕೊಡಲು ಗೋ ಫಸ್ಟ್ ಮುಂದಾಗಿದೆ. ಮೇ 15ರ ಬಳಿಕವಾದರೂ ಗೋ ಫಸ್ಟ್ ವಿಮಾನಗಳು ಗಗನಕ್ಕೇರುತ್ತವಾ ಎಂಬುದು ಖಾತ್ರಿ ಇಲ್ಲ. ಈ ಕಾರಣಕ್ಕೆ ಮೇ 15ರ ನಂತರ ದಿನಗಳಿಗೆ ಫ್ಲೈಟ್ ಟಿಕೆಟ್ ಬುಕ್ ಮಾಡಿರುವ ಗೋ ಫಸ್ಟ್ ಪ್ರಯಾಣಿಕರು ಈಗಲೇ ಟಿಕೆಟ್ ರದ್ದು ಮಾಡಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ ಎನ್ನುವ ಸಲಹೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ.
ಒನ್ಟೈಮ್ ಸೆಟಲ್ಮೆಂಟ್ ಆಫರ್ಗೆ ವಾಡಿಯಾ ಗ್ರೂಪ್ ಆಲೋಚನೆ
ವಾಡಿಯಾ ಗ್ರೂಪ್ ಒಡೆತನದ ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆ ದಿವಾಳಿ ಎಂದು ಘೋಷಿಸಿಕೊಂಡಿಲ್ಲ. ಇನ್ಸಾಲ್ವೆನ್ಸಿ ರೆಸಲ್ಯೂಷನ್ ಮಾತ್ರ ಕೈಗೊಂಡಿದೆ. ವಿಮಾನ ಹಾರಾಟ ಸೇವೆಯಿಂದ ಕಾಲ್ತೆಯುವುದಿಲ್ಲ ಎಂದು ವಾಡಿಯಾ ಗ್ರೂಪ್ ಹೇಳಿದೆ.
ಇದನ್ನೂ ಓದಿ: Manappuram: ಮಣಪ್ಪುರಂ ಮುಖ್ಯಸ್ಥರ 143 ಕೋಟಿ ಆಸ್ತಿ ಮುಟ್ಟುಗೋಲು; ಕಾಲುಭಾಗದಷ್ಟು ಮಣ್ಣುಪಾಲಾದ ಷೇರುಸಂಪತ್ತು; ಏನು ಕಾರಣ?
ಗೋ ಫಸ್ಟ್ ಸಂಸ್ಥೆ ವಿವಿಧ ಬ್ಯಾಂಕುಗಳಿಗೆ 6,521 ಕೋಟಿ ರೂ ಸಾಲ ಬಾಕಿ ಉಳಿಸಿಕೊಂಡಿದೆ. ಈ ಹಣವನ್ನು ಒಟ್ಟಿಗೆ ಪಾವತಿಸಲು ಗೋ ಫಸ್ಟ್ ಮುಂದಾಗಬಹುದು. ಗೋ ಫಸ್ಟ್ ಸಂಸ್ಥೆ ಇನ್ಸಾಲ್ವೆನ್ಸಿ ಮತ್ತು ಬ್ಯಾಂಕ್ರಪ್ಟ್ಸಿ ಅರ್ಜಿಯನ್ನು ಸೆಕ್ಷನ್ 7 ಮತ್ತು 9ರ ಬದಲು ಸೆಕ್ಷನ್ 10ರ ಅಡಿಯಲ್ಲಿ ಸಲ್ಲಿಸಿದೆ. ಸೆಕ್ಷನ್ 7 ಮತ್ತು 9ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರೆ ಸಾಲ ನೀಡಿದವರು ಎನ್ಸಿಎಲ್ಟಿ ಮೂಲಕ ಗೋ ಫಸ್ಟ್ನಿಂದ ಸಾಲ ವಸೂಲಾತಿ ಮಾಡಬಹುದಿತ್ತು. ಆದರೆ, ಸೆಕ್ಷನ್ 10ರ ಅಡಿಯಲ್ಲಿ ಅರ್ಜಿ ಹಾಕಲಾಗಿದ್ದು, ಇದರಲ್ಲಿ ಗೋ ಫಸ್ಟ್ ಖುದ್ದಾಗಿ ಪರಿಹಾರ ಕಂಡುಕೊಳ್ಳಲು ಅವಕಾಶ ಸಿಗುತ್ತದೆ. ಹೀಗೆಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.
ಗೋ ಫಸ್ಟ್ ವಿಮಾನ ಯಾಕೆ ಬಿಕ್ಕಟ್ಟಿಗೆ ಸಿಲುಕಿದೆ?
ಗೋ ಫಸ್ಟ್ ಕಡಿಮೆ ಬೆಲೆಯಲ್ಲಿ ವಿಮಾನ ಹಾರಾಟ ಸೇವೆ ನಡೆಸುತ್ತಿರುವ ಸಂಸ್ಥೆ. 17 ವರ್ಷಗಳಿಂದ ಈ ಕ್ಷೇತ್ರದಲ್ಲಿರುವ ಗೋ ಫಸ್ಟ್ನ ವಿಮಾನಗಳಲ್ಲಿ ದಿನವೂ 30,000 ಪ್ರಯಾಣಿಕರು ಸಂಚರಿಸುತ್ತಾರೆ. ಹೇಳಿಕೊಳ್ಳುವಂಥ ಲಾಭ ಅಥವಾ ನಷ್ಟ ಇಲ್ಲದ ಗೋ ಫಸ್ಟ್ ಏರ್ಲೈನ್ಸ್ಗೆ ಕಂಟಕವಾಗಿದ್ದು ಅದರ ಎಂಜಿನ್. ಅಮೆರಿಕದ ಪ್ರಾಟ್ ಅಂಡ್ ವಿಟ್ನಿ ಕಂಪನಿಯ ಎಂಜಿನ್ಗಳು ಗೋ ಫಸ್ಟ್ಗೆ ಭಾರೀ ಸಮಸ್ಯೆ ತಂದಿಟ್ಟಿವೆ. ಎಂಜಿನ್ ವೈಫಲ್ಯದಿಂದ 28 ವಿಮಾನಗಳು ಸ್ಥಗಿತಗೊಂಡಿವೆ. ಹೊಸ ಅಥವಾ ಬದಲೀ ಎಂಜಿನ್ಗಳನ್ನು ಒದಗಿಸುವಂತೆ ಎಷ್ಟೇ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಬಹಳ ದಿನಗಳಿಂದ ಈ 28 ವಿಮಾನಗಳು ನಿಂತುಹೋಗಿರುವುದರಿಂದ ಗೋ ಫಸ್ಟ್ ಏರ್ಲೈನ್ಸ್ಗೆ ಹಣಕಾಸು ಸಂಕಷ್ಟ ತಂದಿಟ್ಟಿದೆ.
ಕುತೂಹಲವೆಂದರೆ ಇದೇ ಪಿ ಅಂಡ್ ಡಬ್ಲ್ಯು ಕಂಪನಿಯ ಎಂಜಿನ್ಗಳು ಲುಫ್ತಾನ್ಸ ಏರ್ಲೈನ್ಸ್ ಸಂಸ್ಥೆಗೂ ತಲೆನೋವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಲುಫ್ತಾನ್ಸ ಏರ್ಲೈನ್ಸ್ನ ಹಲವು ವಿಮಾನಗಳು ಎಂಜಿನ್ ವೈಫಲ್ಯದಿಂದ ಸ್ಥಗಿತಗೊಂಡಿವೆ. ಎಂಜಿನ್ಗಳ ದುರಸ್ತಿಗೆ ಬೇಕಾದ ಬಿಡಿಭಾಗ ಇತ್ಯಾದಿ ಯಾವುದೂ ಪೂರೈಕೆ ಅಗುತ್ತಿಲ್ಲ. ಈ ಸಮಸ್ಯೆ ಗೋ ಫಸ್ಟ್, ಲುಫ್ತಾನ್ಸಾಗೆ ಮಾತ್ರವಲ್ಲ ವಿಶ್ವದ ಹಲವು ಏರ್ಲೈನ್ಸ್ ಸಂಸ್ಥೆಗಳಿಗೆ ಕಾಡುತ್ತಿದೆ. ಪಿ ಅಂಡ್ ಡಬ್ಲ್ಯೂ ಯಾವುದೋ ನಗಣ್ಯ ಸಂಸ್ಥೆಯಲ್ಲ. ಅಮೆರಿಕದ ಮಿಲಿಟರಿಯಿಂದ ಹಿಡಿದು ವಿಶ್ವದ ಹಲವು ಏರ್ಲೈನ್ಸ್ ಸಂಸ್ಥೆಗಳಿಗೆ ಎಂಜಿನ್ ಪೂರೈಕೆ ಮಾಡುತ್ತದೆ. ಇತ್ತೀಚೆಗೆ ಅದರ ಎಂಜಿನ್ ವೈಫಲ್ಯದ ಬಗ್ಗೆ ದೂರುಗಳು ಹೆಚ್ಚಾಗಿ ಬರುತ್ತಿವೆ.