ನವದೆಹಲಿ: ಕೇಂದ್ರ ಸರ್ಕಾರ (Central Government) ಮತ್ತು ಗುಜರಾತ್ (Gujarat) ಸೇರಿದಂತೆ ಮೂರು ರಾಜ್ಯಗಳು 2019-20ರಲ್ಲಿ ಉದ್ಯೋಗಿಗಳಿಗೆ ವೇತನ (Salary) ನೀಡಲು ವ್ಯಯಿಸಿರುವ ವೆಚ್ಚಕ್ಕಿಂತಲೂ ಪಿಂಚಣಿ ನೀಡಲು ಮಾಡಿರುವ ವೆಚ್ಚ ಹೆಚ್ಚಾಗಿದೆ ಎಂಬುದು ಸಿಎಜಿ (CAG) ವರದಿಯಿಂದ ತಿಳಿದುಬಂದಿದೆ. ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ವ್ಯವಸ್ಥೆ (OPS) ಜಾರಿ ಮಾಡುವುದಾಗಿ ರಾಜಕೀಯ ಪಕ್ಷಗಳು ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ಭರವಸೆ ನೀಡಿರುವ ಬೆನ್ನಲ್ಲೇ ಈ ವರದಿ ಬಹಿರಂಗವಾಗಿದೆ.
ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನ ಮತ್ತು ಛತ್ತೀಸ್ಗಡ ರಾಜ್ಯಗಳು ಈಗಾಗಲೇ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಿವೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಭರವಸೆ ನೀಡಿವೆ.
ಇದನ್ನೂ ಓದಿ: ನೀವು ಇಪಿಎಸ್ ಪಿಂಚಣಿದಾರರೇ? ಇನ್ನು ಯಾವಾಗ ಬೇಕಾದರೂ ಜೀವನ ಪ್ರಮಾಣಪತ್ರ ಸಲ್ಲಿಸಬಹುದು
2019-20ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು 9.78 ಲಕ್ಷ ಕೋಟಿ ರೂ. ವ್ಯಯಿಸಿತ್ತು. ಇದು ಸರ್ಕಾರದ ಒಟ್ಟು ಆದಾಯ 26.15 ಲಕ್ಷ ಕೋಟಿ ರೂ.ಗಳ ಶೇಕಡಾ 37ರಷ್ಟಾಗಿದೆ. ಇದರಲ್ಲಿ 1.39 ಲಕ್ಷ ಕೋಟಿ ವೇತನಕ್ಕೆ ಮಾಡಿದ ವೆಚ್ಚವಾದರೆ 1.83 ಲಕ್ಷ ಕೋಟಿ ಪಿಂಚಣಿಗೆ ಮಾಡಿದ ವೆಚ್ಚವಾಗಿತ್ತು. ಬಡ್ಡಿ ಪಾವತಿ ಮತ್ತು ಸಾಲಕ್ಕಾಗಿ 6.55 ಲಕ್ಷ ಕೋಟಿ ವ್ಯಯಿಸಿತ್ತು. ಸಾಲದ ಸೇವೆ ಮತ್ತು ಬಡ್ಡಿಗಾಗಿ ಮಾಡಿದ ವೆಚ್ಚ ಶೇಕಡಾ 67ರಷ್ಟಾಗಿತ್ತು. ಉಳಿದ ಶೇಕಡಾ 19 ಮತ್ತು 14ರಷ್ಟು ವೆಚ್ಚ ಪಿಂಚಣಿ ಹಾಗೂ ವೇತನಕ್ಕೆ ವ್ಯಯಿಸಲಾಗಿತ್ತು. ಇದು ಸರ್ಕಾರವು ವೇತನಕ್ಕಿಂತ ಪಿಂಚಣಿಗೇ ಹೆಚ್ಚು ವ್ಯಯಿಸುತ್ತಿರುವುದನ್ನು ತೋರಿಸುತ್ತದೆ ಎಂದು 2019-20ನೇ ವರ್ಷಕ್ಕೆ ಸಂಬಂಧಿಸಿದ ‘ಯೂನಿಯನ್ ಆ್ಯಂಡ್ ಸ್ಟೇಟ್ ಫೈನಾನ್ಸಸ್ ಎಟ್ ಗ್ಲಾನ್ಸ್’ ಎಂಬ ವರದಿಯಲ್ಲಿ ಸಿಎಜಿ ಉಲ್ಲೇಖಿಸಿದೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಪಿಂಚಣಿಗೆ ಹೆಚ್ಚು ವೆಚ್ಚ; ಕರ್ನಾಟಕವೂ ಹೊರತಲ್ಲ
ವೇತನಕ್ಕಿಂತ ಪಿಂಚಣಿಗೇ ಹೆಚ್ಚು ವ್ಯಯಿಸಿದ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ. 2019-20ರಲ್ಲಿ ಕರ್ನಾಟಕ, ಗುಜರಾತ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಸಂಬಳ ನೀಡಲು ಮಾಡಿದ್ದಕ್ಕಿಂತ ಹೆಚ್ಚು ಖರ್ಚನ್ನು ಪಿಂಚಣಿ ನೀಡಲು ಮಾಡಿವೆ ಎಂದು ವರದಿ ಉಲ್ಲೇಖಿಸಿದೆ. ಕರ್ನಾಟಕವು ಪಿಂಚಣಿಗೆ 18,404 ಕೋಟಿ ರೂ. ವ್ಯಯಿಸಿದ್ದರೆ ವೇತನಕ್ಕೆ 14,573 ಕೋಟಿ ರೂ. ವ್ಯಯಿಸಿದೆ. ಪಶ್ಚಿಮ ಬಂಗಾಳ ಪಿಂಚಣಿಗೆ 17,462 ಕೋಟಿ ರೂ. ವೆಚ್ಚ ಮಾಡಿದ್ದರೆ ಸಂಬಳ ನೀಡಲು 16,915 ಕೋಟಿ ರೂ. ವ್ಯಯಿಸಿತ್ತು. ಗುಜರಾತ್ನಲ್ಲಿ ಪಿಂಚಣಿ ಕಾಯ್ದೆ ಅನ್ವಯ 17,663 ಕೋಟಿ ರೂ. ವೆಚ್ಚ ಮಾಡಿದ್ದರೆ, ವೇತನಕ್ಕೆ 11,126 ಕೋಟಿ ರೂ. ವೆಚ್ಚ ಮಾಡಲಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ