ಬಾಸ್ಮತಿ ಅಕ್ಕಿ ರಫ್ತು ನಿರ್ಬಂಧ; ರೈತರು, ವರ್ತಕರ ಆಕ್ಷೇಪ ಹಿನ್ನೆಲೆ, ಕನಿಷ್ಠ ರಫ್ತು ಬೆಲೆ ಇಳಿಸಲು ಸರ್ಕಾರ ಆಲೋಚನೆ

|

Updated on: Oct 24, 2023 | 5:06 PM

Basmati Rice MEP: ಬಾಸ್ಮತಿ ಅಕ್ಕಿಯ ಕನಿಷ್ಠ ರಫ್ತು ಬೆಲೆಯಾಗಿ ಮೆಟ್ರಿಕ್ ಟನ್​ಗೆ 1,200 ರೂ ನಿಗದಿ ಮಾಡಿರುವುದರಿಂದ ರೈತರು ಮತ್ತು ವರ್ತಕರಿಗೆ ಬಹಳ ನಷ್ಟವಾಗುತ್ತಿದೆ ಎಂಬ ಆಕ್ಷೇಪಣೆಗಳು ಹೆಚ್ಚಾಗಿ ಕೇಳಿಬರುತ್ತಿವೆ. ಈ ಕಾರಣಕ್ಕೆ ಕನಿಷ್ಠ ರಫ್ತು ಬೆಲೆಯನ್ನು ತಗ್ಗಿಸಲು ಸರ್ಕಾರ ನಿರ್ಧರಿಸಿದೆ ಎಂದು ಸರ್ಕಾರಿ ಮೂಲಗಳು ಹೇಳಿದ್ದು, ಮೆಟ್ರಿಕ್ ಟನ್​ಗೆ ಕನಿಷ್ಠ ರಫ್ತು ಬೆಲೆಯನ್ನು 950 ರೂಗೆ ಇಳಿಸಬಹುದು ಎನ್ನಲಾಗಿದೆ.

ಬಾಸ್ಮತಿ ಅಕ್ಕಿ ರಫ್ತು ನಿರ್ಬಂಧ; ರೈತರು, ವರ್ತಕರ ಆಕ್ಷೇಪ ಹಿನ್ನೆಲೆ, ಕನಿಷ್ಠ ರಫ್ತು ಬೆಲೆ ಇಳಿಸಲು ಸರ್ಕಾರ ಆಲೋಚನೆ
ಬಾಸ್ಮತಿ ಅಕ್ಕಿ
Follow us on

ನವದೆಹಲಿ, ಅಕ್ಟೋಬರ್ 24: ರೈತರು ಮತ್ತು ರಫ್ತುದಾರರ ಆಕ್ಷೇಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಾಸ್ಮತಿ ಅಕ್ಕಿಗೆ ನಿಗದಿಪಡಿಸಲಾದ ಕನಿಷ್ಠ ರಫ್ತು ಬೆಲೆಯನ್ನು (Floor Price or MEP- Minimum Export Price) ಇಳಿಸುವ ಸಾಧ್ಯತೆ ಇದೆ ಎಂದು ಸರ್ಕಾರ ಮತ್ತು ಉದ್ಯಮ ಮೂಲಗಳನ್ನು ಉಲ್ಲೇಖಿಸಿ ದಿ ಮಿಂಟ್ ಪತ್ರಿಕೆ ವರದಿ ಮಾಡಿದೆ. ಸದ್ಯ ಬಾಸ್ಮತಿ ಅಕ್ಕಿಯ ರಫ್ತಿಗೆ ಒಂದು ಮೆಟ್ರಿಕ್ ಟನ್​ಗೆ 1,200 ಡಾಲರ್​ನಷ್ಟು (ಒಂದು ಲಕ್ಷ ರೂ) ಕನಿಷ್ಠ ಬೆಲೆಯಾಗಿ ನಿಗದಿ ಮಾಡಲಾಗಿದೆ. ಅಂದರೆ, ಬಾಸ್ಮತಿ ಅಕ್ಕಿ ರಫ್ತು ಮಾಡುವವರು ಸುಮಾರು 1,00,000 ರೂಗಿಂತ ಕಡಿಮೆ ಬೆಲೆಗೆ ರಫ್ತು ಮಾಡುವಂತಿಲ್ಲ. ಈಗ ಈ ಕನಿಷ್ಠ ರಫ್ತು ಬೆಲೆಯನ್ನು 950 ಡಾಲರ್​ಗೆ (79,000 ರೂ) ಇಳಿಸುವ ನಿರೀಕ್ಷೆ ಇದೆ.

ಬಾಸ್ಮತಿ ಅಕ್ಕಿಯ ಕನಿಷ್ಠ ರಫ್ತು ಬೆಲೆಯಾಗಿ ಮೆಟ್ರಿಕ್ ಟನ್​ಗೆ 1,200 ರೂ ನಿಗದಿ ಮಾಡಿರುವುದರಿಂದ ರೈತರು ಮತ್ತು ವರ್ತಕರಿಗೆ ಬಹಳ ನಷ್ಟವಾಗುತ್ತಿದೆ ಎಂಬ ಆಕ್ಷೇಪಣೆಗಳು ಹೆಚ್ಚಾಗಿ ಕೇಳಿಬರುತ್ತಿವೆ. ಈ ಕಾರಣಕ್ಕೆ ಕನಿಷ್ಠ ರಫ್ತು ಬೆಲೆಯನ್ನು ತಗ್ಗಿಸಲು ಸರ್ಕಾರ ನಿರ್ಧರಿಸಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ಇದನ್ನೂ ಓದಿ: ಜಿಎಸ್​ಟಿ ಇನ್ವಾಯ್ಸ್ ಅಪ್​ಲೋಡ್ ಮಾಡುವ ಡೆಡ್​ಲೈನ್ ಸೇರಿದಂತೆ ನವೆಂಬರ್​ನಲ್ಲಿ ಐದು ಪ್ರಮುಖ ಬದಲಾವಣೆಗಳಿವು…

ಹೊಸ ಫಸಲು ಬಂದ ಬಳಿಕ ಕನಿಷ್ಠ ರಫ್ತು ಬೆಲೆಯನ್ನು ಇಳಿಸಬಹುದೆಂದು ರೈತರು ನಿರೀಕ್ಷಿಸಿದ್ದರು. ಆದರೆ, ಈ ದರವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದುವರಿಸಲಾಗುತ್ತದೆ ಎಂದು ಸರ್ಕಾರ ಅಕ್ಟೋಬರ್ 14ರಂದು ತಿಳಿಸಿತ್ತು. ಇದರಿಂದ ರಫ್ತುದಾರರು ಮತ್ತು ರೈತರು ವ್ಯಗ್ರಗೊಂಡಿದ್ದರು. ಅದಕ್ಕೆ ಕಾರಣವೂ ಇದೆ. ಹೊಸ ಭತ್ತದ ಆವಕಗಳಿಂದಾಗಿ ಭಾರತದ ಮಾರುಕಟ್ಟೆಗಳಲ್ಲಿ ಬಾಸ್ಮತಿ ಅಕ್ಕಿಯ ಬೆಲೆ ಕುಸಿದುಹೋಗಿದೆ. ಇದರಿಂದ ಅಕ್ಕಿ ಉತ್ಪಾದಕರಾದ ರೈತರಿಗೆ ಮತ್ತು ರಫ್ತುದಾರರಿಗೆ ನಷ್ಟವಾಗಿದೆ. ಅದರಲ್ಲೂ ರೈತರಿಗೆ ಬಹಳ ಹೊಡೆತ ಬಿದ್ದಿದೆ. ಕನಿಷ್ಠ ರಫ್ತು ಬೆಲೆ ಅಧಿಕವಿದ್ದರಿಂದ ರಫ್ತುದಾರರು ರೈತರಿಂದ ಬಾಸ್ಮತಿ ಅಕ್ಕಿ ಕೊಳ್ಳುವುದನ್ನೇ ನಿಲ್ಲಿಸಿದ್ದರು.

ಇರಾನ್, ಇರಾಕ್, ಯೆಮೆನ್, ಸೌದಿ ಅರೇಬಿಯಾ, ಯುಎಇ, ಅಮೆರಿಕ ಮೊದಲಾದ ದೇಶಗಳು ಹೆಚ್ಚಾಗಿ ಬಾಸ್ಮತಿ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತವೆ. ಆದರೆ, ಈ ವಿಧದ ಅಕ್ಕಿಯನ್ನು ಭಾರತ ಮತ್ತು ಪಾಕಿಸ್ತಾನದಲ್ಲಿ ಮಾತ್ರವೇ ಬೆಳೆಯಲಾಗುತ್ತದೆ. ಭಾರತ ಒಂದ ವರ್ಷದಲ್ಲಿ 40 ಲಕ್ಷ ಮೆಟ್ರಿಕ್ ಟನ್​ಗಳಷ್ಟು ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡುತ್ತದೆ.

ಇದನ್ನೂ ಓದಿ: ಬೆಂಗಳೂರು-ಸಿಂಗಾಪುರಕ್ಕೆ ಏರ್ ಇಂಡಿಯಾ ನಾನ್ ಸ್ಟಾಪ್ ಫ್ಲೈಟ್; ಸಮಯ, ಟಿಕೆಟ್ ಬೆಲೆ ಇತ್ಯಾದಿ ವಿವರ

ಬಾಸ್ಮತಿ ಅಕ್ಕಿ ಮಾತ್ರವಲ್ಲ, ಇತರ ಎಲ್ಲಾ ರೀತಿಯ ಅಕ್ಕಿಯ ರಫ್ತಿಗೂ ಭಾರತ ನಿರ್ಬಂಧ ಹಾಕಿದೆ. ದೇಶದಲ್ಲಿ ಅಕ್ಕಿ ಬೆಲೆ ಕೈಮೀರಿ ಹೋಗಬಾರದೆಂಬ ಉದ್ದೇಶಕ್ಕೆ ಈ ಕ್ರಮ ಕೈಗೊಳ್ಳಲಾಗಿರುವುದು ತಿಳಿದುಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ