
ನವದೆಹಲಿ, ಆಗಸ್ಟ್ 27: ಚಿನ್ನ ಮತ್ತು ಬೆಳ್ಳಿಯ ಆಮದು ಸುಂಕಕ್ಕೆ (Import Duty) ಸಂಬಂಧಿಸಿದಂತೆ ಭಾರತ ಸರ್ಕಾರವು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಪರಿಶೀಲಿಸುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಚಿನ್ನ ಮತ್ತು ಬೆಳ್ಳಿಗೆ ಆಮದು ಸುಂಕವನ್ನು ಶೇ 15ಕ್ಕೆ ಏರಿಸಿದ್ದ ಸರ್ಕಾರ ಇದೀಗ ಅದನ್ನು ಶೇ. 6ಕ್ಕೆ ಇಳಿಸಲು ಯೋಜಿಸಿದೆ. ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಸದ್ಯ ಇರುವ 15% ರಿಂದ 6% ಗೆ ಕಡಿಮೆ ಮಾಡುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎನ್ನುವಂತಹ ವರದಿಗಳು ಬಂದಿವೆ.
ಕಳ್ಳಸಾಗಣೆ ತಡೆಗಟ್ಟುವಿಕೆ: ಚಿನ್ನ ಹಾಗು ಬೆಳ್ಳಿಯ ಆಮದನ್ನು ಕಡಿಮೆ ಗೊಳಿಸಲೆಂದು 2026ರ ಮೇ 13 ರಂದು ಸರ್ಕಾರವು ಆಮದು ಸುಂಕವನ್ನು ಶೇ. 15ಕ್ಕೆ ಏರಿಸಿತು. ಆದರೆ, ಚಿನ್ನದ ಆಮದು ಮಾತ್ರ ಕಡಿಮೆಗೊಳ್ಳಲಿಲ್ಲ. ಇನ್ನೊಂದೆಡೆ, ವಿದೇಶಗಳು ಹಾಗೂ ಭಾರತದಲ್ಲಿರುವ ಚಿನ್ನದ ಬೆಲೆಯಲ್ಲಿ ಅಗಾಧ ವ್ಯತ್ಯಾಸ ಇದ್ದುದ್ದರಿಂದ ಸ್ಮಗ್ಲಿಂಗ್ ಅಥವಾ ಕಳ್ಳಸಾಗಣೆ (Gold Smuggling) ಹೆಚ್ಚಾಗತೊಡಗಿರುವುದು ಗಮನಕ್ಕೆ ಬಂದಿದೆ.
ಇದನ್ನೂ ಓದಿ: Gold Rates 27 Aug: ಚಿನ್ನದ ಬೆಲೆ 70 ರೂ ಇಳಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ
ಈ ಹಿಂದೆ ಇದೇ ಸ್ಮಗ್ಲಿಂಗ್ ಅನ್ನು ತಪ್ಪಿಸಲು ಸರ್ಕಾರವು ಚಿನ್ನ, ಬೆಳ್ಳಿ ಮೇಲೆ ಆಮದು ಸುಂಕವನ್ನು ಕಡಿಮೆಗೊಳಿಸಿತ್ತು. ಈಗ ಮತ್ತೊಮ್ಮೆ ಅದೇ ಕ್ರಮ ಕೈಗೊಳ್ಳಲು ಸರ್ಕಾರ ಯೋಜಿಸುತ್ತಿದೆ ಎನ್ನಲಾಗಿದೆ.
24 ಕ್ಯಾರಟ್ ಚಿನ್ನದ ಬೆಲೆ ಭಾರತದಲ್ಲಿ ಗ್ರಾಮ್ಗೆ 16,298 ರೂ ಇದೆ. ಅಂತಾರಾಷ್ಟ್ರೀಯ ಸ್ಪಾಟ್ ಗೋಲ್ಡ್ ಬೆಲೆ 148 ಡಾಲರ್ (ಸುಮಾರು 14,170 ರೂ) ಇದೆ. ಹೆಚ್ಚಿನ ದೇಶಗಳಲ್ಲಿ ಚಿನ್ನದ ಬೆಲೆ 14,250 ರೂನಿಂದ 15,000 ರೂ ಶ್ರೇಣಿಯಲ್ಲಿದೆ. ಭಾರತ ಹಾಗೂ ಇತರ ದೇಶಗಳ ನಡುವೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ಒಂದೂವರೆ ಸಾವಿರ ರುಗಳಷ್ಟು ವ್ಯತ್ಯಾಸ ಇದೆ. ಬೆಳ್ಳಿ ಬೆಲೆಯಲ್ಲೂ 50 ರೂಗಳ ವ್ಯತ್ಯಾಸ ಇದೆ. ಹೀಗಾಗಿ, ಕಳ್ಳಸಾಗಾಣಿಕೆ ಮಾಡಲು ಹೆಚ್ಚು ಪ್ರೇರಣೆ ಸಿಕ್ಕಂತಾಗುತ್ತದೆ.
ಒಂದು ವೇಳೆ ಸರ್ಕಾರವು ಆಮದು ಸುಂಕವನ್ನು ಶೇ. 6ಕ್ಕೆ ಇಳಿಸಿದ್ದೇ ಆದಲ್ಲಿ ಶುದ್ಧ ಚಿನ್ನದ ಬೆಲೆ 16,298 ರೂನಿಂದ 15,000 ರೂ ಆಸುಪಾಸಿಗೆ ತಗ್ಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಇರಾನ್ನ ಕರೆನ್ಸಿ ಮಹಾಕುಸಿತ; ಒಂದು ಡಾಲರ್ಗೆ 20 ಲಕ್ಷ ರಿಯಾಲ್; ಇರಾನ್ ಆರ್ಥಿಕತೆ ತತ್ತರ
ಕೈಗಾರಿಕೆಗಳ ಮೇಲಿನ ಪ್ರಭಾವ: ಕೇವಲ ಚಿನ್ನ ಮಾತ್ರವಲ್ಲದೆ ಬೆಳ್ಳಿ ಮತ್ತು ಪ್ಲಾಟಿನಂ ಮೇಲಿನ ಸುಂಕವನ್ನು ಕಡಿಮೆ ಮಾಡುವುದರಿಂದ ಸೌರಶಕ್ತಿ (Solar Energy), ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ ಕ್ಷೇತ್ರಗಳ ಮೇಲಿನ ಉತ್ಪಾದನಾ ವೆಚ್ಚ ತಗ್ಗಲಿದೆ.
ಈ ಸುಂಕ ಇಳಿಕೆ ಕುರಿತು ಸಂಬಂಧಪಟ್ಟ ಸಚಿವಾಲಯಗಳು ಮತ್ತು ಅಧಿಕಾರಿಗಳು ಚರ್ಚಿಸುತ್ತಿದ್ದು, ಶೀಘ್ರದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ