ಹೋಟೆಲ್, ಮುಂಗಟ್ಟುಗಳಿಗೆ ನಿರಾಳ ಸುದ್ದಿ; ರಾಜ್ಯಗಳಿಗೆ ಕಮರ್ಷಿಯಲ್ ಎಲ್​ಪಿಜಿ ಪೂರೈಕೆ ಶೇ. 50ಕ್ಕೆ ಏರಿಕೆ

Govt raises Commercial LPG allocation for states to 50pc: ರಾಜ್ಯಗಳಿಗೆ ಕೇಂದ್ರವು ಎಲ್​ಪಿಜಿ ಕಮರ್ಷಿಯಲ್ ಸಿಲಿಂಡರ್​ಗಳ ಪೂರೈಕೆಯನ್ನು ಹೆಚ್ಚಿಸಿದೆ. ಕಮರ್ಷಿಯಲ್ ಗ್ಯಾಸ್ ಅಲೋಕೇಶನ್ ಅನ್ನು ಶೇ. 30ರಿಂದ ಶೇ. 50ಕ್ಕೆ ಹೆಚ್ಚಿಸಿದೆ. ವಾಣಿಜ್ಯ ಎಲ್​ಪಿಜಿ ಅವಶ್ಯಕತೆಯ ಅರ್ಧದಷ್ಟನ್ನು ಸರ್ಕಾರ ಪೂರೈಸುತ್ತಿದೆ. ಸದ್ಯ ಗೃಹಬಳಕೆ ಅಡುಗೆ ಅನಿಲ, ಪಿಎನ್​ಜಿ ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಯ ಆಗದಂತೆ ಸರ್ಕಾರ ಜಾಗ್ರತೆ ವಹಿಸಿದೆ.

ಹೋಟೆಲ್, ಮುಂಗಟ್ಟುಗಳಿಗೆ ನಿರಾಳ ಸುದ್ದಿ; ರಾಜ್ಯಗಳಿಗೆ ಕಮರ್ಷಿಯಲ್ ಎಲ್​ಪಿಜಿ ಪೂರೈಕೆ ಶೇ. 50ಕ್ಕೆ ಏರಿಕೆ
ಕಮರ್ಷಿಯಲ್ ಎಲ್​ಪಿಜಿ

Updated on: Mar 22, 2026 | 1:00 PM

ನವದೆಹಲಿ, ಮಾರ್ಚ್ 22: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಎಲ್​ಪಿಜಿ ಪೂರೈಕೆಯನ್ನು ಶೇ 50ಕ್ಕೆ ಹೆಚ್ಚಿಸಿದೆ. ರೆಸ್ಟೋರೆಂಟ್, ಹೊಟೆಲ್, ಕೈಗಾರಿಕಾ ಕ್ಯಾಂಟೀನ್, ಆಹಾರ ಸಂಸ್ಕರಣಾ ಘಟಕಗಳು ಮತ್ತು ಸಮುದಾಯ ಅಡುಗೆಮನೆಗಳಿಗೆ ಆದ್ಯತೆ ಕೊಟ್ಟು ಕಮರ್ಷಿಯಲ್ ಎಲ್​ಪಿಜಿ ನಿಯೋಜನೆಯನ್ನು (LPG Allocation) ಶೇ. 20ಕ್ಕೆ ಏರಿಸಲಾಗಿದೆ. ಇದರೊಂದಿಗೆ ಒಟ್ಟು ನಿಯೋಜನೆ ಶೇ. 50ಕ್ಕೆ ಏರಿಕೆಯಾಗಿದೆ. ಅಂದರೆ, ಕಮರ್ಷಿಯಲ್ ಎಲ್​ಪಿಜಿಗೆ ಇರುವ ಬೇಡಿಕೆ ಮತ್ತು ಅವಶ್ಯಕತೆಯ ಶೇ. 50ರಷ್ಟನ್ನು ಪೂರೈಸಲಾಗುತ್ತದೆ.

ಎಲ್​ಪಿಜಿ ಬಿಕ್ಕಟ್ಟು ಉದ್ಭವವಾದಾಗ ಕಮರ್ಷಿಯಲ್ ಎಲ್​ಪಿಜಿ ಪೂರೈಕೆಯನ್ನು ನಿಲ್ಲಿಸಲಾಯಿತು. ಗೃಹಬಳಕೆ ಗ್ಯಾಸ್​ಗಳ ಸರಬರಾಜು ಮಾತ್ರ ಅಬಾಧಿತವಾಗಿತ್ತು. ನಂತರ, ಕಮರ್ಷಿಯಲ್ ಗ್ಯಾಸ್ ಬಳಕೆದಾರರಿಗೆ ಶೇ. 20ರಷ್ಟು ಪೂರೈಕೆಗೆ ವ್ಯವಸ್ಥೆ ಮಾಡಲಾಯಿತು. ನಂತರ ಶೇ. 10 ಹೆಚ್ಚಿಸಲಾಯಿತು. ಇದೀಗ ಮತ್ತಷ್ಟು ಶೇ. 20 ಪೂರೈಕೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಟಿಕೆಟ್ ದರ ಮಿತಿ ಕ್ರಮ ಹಿಂತೆಗೆತ, ಜೆಟ್ ಫುಯಲ್ ಬೆಲೆ ಹೆಚ್ಚಳ ಪರಿಣಾಮ ಏ. 1ರಿಂದ ವಿಮಾನ ಟಿಕೆಟ್ ದರ ಏರಿಕೆ?

ರೆಸ್ಟೋರೆಂಟ್, ಕ್ಯಾಂಟೀನ್ ಇತ್ಯಾದಿಗಳಿಗೆ ಈ ಕಮರ್ಷಿಯಲ್ ಎಲ್​ಪಿಜಿ ಪೂರೈಕೆ ಆದ್ಯತೆ ಮೇಲೆ ಆಗುತ್ತದೆ. ಆಯಾ ತೈಲ ಮಾರುಕಟ್ಟೆ ಕಂಪನಿಗಳು ಸರ್ಕಾರ ನಿಗದಿ ಮಾಡಿದ ಬ್ಯುಸಿನೆಸ್​ಗಳನ್ನು ಗುರುತಿಸಿ ಆ ಗ್ರಾಹಕರಿಗೆ ಸೀಮಿತ ಪ್ರಮಾಣದಲ್ಲಿ ಎಲ್​ಪಿಜಿ ಪೂರೈಕೆ ಮಾಡುತ್ತವೆ.

ಪಿಎನ್​ಜಿಗೆ ಒತ್ತು

ಸರ್ಕಾರವು ವಿವಿಧ ಕಮರ್ಷಿಯಲ್ ಕಂಪನಿಗಳಿಗೆ ಎಲ್​ಪಿಜಿ ಬದಲು ಪಿಎನ್​ಜಿಗೆ ವರ್ಗವಾಗುವಂತೆ ಉತ್ತೇಜಿಸುತ್ತಿದೆ. ಹೋಟೆಲ್, ರೆಸ್ಟೋರೆಂಟ್ ಇತ್ಯಾದಿ ಕಮರ್ಷಿಯಲ್ ಸಂಸ್ಥೆಗಳು ತೈಲ ಕಂಪನಿಗಳೊಂದಿಗೆ ಪಿಎನ್​ಜಿ ಕನೆಕ್ಷನ್​ಗೆ ನೊಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ: ಕೈಗಾರಿಕಾ ಡೀಸಲ್ ಬೆಲೆಯಲ್ಲಿ ಶೇ. 25ರಷ್ಟು ಏರಿಕೆ; ಯಾರ ಮೇಲಾಗಲಿದೆ ಇದರ ಪರಿಣಾಮ?

ಎಲ್​ಪಿಜಿ ಪೂರೈಕೆಯಲ್ಲಿ ಕೊರತೆ ಇಲ್ಲ ಎನ್ನುತ್ತಿದೆ ಸರ್ಕಾರ

ಸದ್ಯಕ್ಕೆ ಎಲ್​ಪಿಜಿ ಪೂರೈಕೆ ಸ್ಥಿರವಾಗಿದ್ದು, ಎಲ್ಲಿಯೂ ಕೊರತೆ ಇಲ್ಲ ಎಂದು ಸರ್ಕಾರ ಹೇಳಿದೆ. ಪ್ಯಾನಿಕ್ ಬುಕಿಂಗ್​ಗಳು ಕಡಿಮೆ ಆಗಿವೆ. ಪೆಟ್ರೋಲ್ ಮತ್ತು ಡೀಸಲ್ ಪೂರೈಕೆಯೂ ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಎಲ್​ಪಿಜಿ ಸಿಲಿಂಡರ್​ಗಳನ್ನು ಅಕ್ರಮವಾಗಿ ದಾಸ್ತಾನು ಮಾಡುತ್ತಿರುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಎಲ್​ಪಿಜಿ ವಿತರಣೆ ಸರಿಯಾಗಿ ಆಗುತ್ತಿರುವುದನ್ನು ಖಚಿತಪಡಿಸಲು ರಾಜ್ಯ ಸರ್ಕಾರಗಳು ಮೇಲ್ವಿಚಾರಣಾ ಸಮಿತಿ ಮತ್ತು ಕಂಟ್ರೋಲ್ ರೂಮ್​ಗಲನ್ನು ಸ್ಥಾಪಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us