HDFC FY22 Q4 Results: FY22 ನಾಲ್ಕನೇ ತ್ರೈಮಾಸಿಕದಲ್ಲಿ ಎಚ್‌ಡಿಎಫ್‌ಸಿ ನಿವ್ವಳ ಲಾಭ 3700 ಕೋಟಿ ರೂ.; 30 ರೂ. ಡಿವಿಡೆಂಡ್
ಎಚ್ಡಿಎಫ್ಸಿಯಿಂದ ಜನವರಿಯಿಂದ ಮಾರ್ಚ್ ತನಕ ತ್ರೈಮಾಸಿಕಕ್ಕೆ 3700 ಕೋಟಿ ರೂಪಾಯಿ ನಿವ್ವಳ ಲಾಭ ಘೋಷಣೆ ಮಾಡಿದ್ದು, 30 ರೂಪಾಯಿ ಡಿವಿಡೆಂಟ್ ಶಿಫಾರಸು ಮಾಡಲಾಗಿದೆ.
ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (HDFC) ಮಾರ್ಚ್ ಅಂತ್ಯದ ತ್ರೈಮಾಸಿಕಕ್ಕೆ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇ 16.4ರಷ್ಟು ಜಾಸ್ತಿಯಾಗಿ, 3,700 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಮೇ 2ರಂದು ವರದಿ ಮಾಡಲಾಗಿದೆ. ಇದು ವಿಶ್ಲೇಷಕರು ಅಂದಾಜು ಮಾಡಿದ್ದ 3,306.7 ಕೋಟಿ ರೂಪಾಯಿಗಿಂತ ಹೆಚ್ಚಿದೆ. ನಿವ್ವಳ ಬಡ್ಡಿ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಶೇ 14ರಷ್ಟು ಬೆಳವಣಿಗೆಯನ್ನು, ಅಂದರೆ 4,601 ಕೋಟಿ ರೂಪಾಯಿ ವರದಿ ಮಾಡಿದೆ. ಇದು ಪೇಟೆ ನಿರೀಕ್ಷೆ ಮಾಡಿದ್ದ 4,358.3 ಕೋಟಿ ರೂಪಾಯಿಗಿಂತ ಹೆಚ್ಚಿದೆ. ಒಂದು ವರ್ಷದ ಹಿಂದೆ ನಿವ್ವಳ ಬಡ್ಡಿ ಆದಾಯ 4027 ಕೋಟಿ ರೂಪಾಯಿ ಎಂದು ವರದಿ ಮಾಡಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿರುವ ಎಚ್‌ಡಿಎಫ್‌ಸಿ, ಕೊವಿಡ್ ಸೋಂಕಿನ ಪ್ರಕರಣಗಳು ಕಡಿಮೆಯಾದ ಕಾರಣ ಮತ್ತು ಅನೇಕ ರಾಜ್ಯಗಳು ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ಗ್ರಾಹಕರ ವೆಚ್ಚದಲ್ಲಿ ಚೇತರಿಕೆ ಮೂಲಕ ಗೃಹ ಸಾಲಗಳಿಗೆ ಬಲವಾದ ಬೇಡಿಕೆಯನ್ನು ಕಂಡಿದೆ. ಕೈಗೆಟುಕುವ ವಸತಿ ಮತ್ತು ಹೈ ಎಂಡ್ ಆಸ್ತಿಗಳಿಗೆ ಸಾಲ ನೀಡುವ ಮೂಲಕ ಸಾಲದ ಪುಸ್ತಕವು ವರ್ಷದಿಂದ ವರ್ಷಕ್ಕೆ ಶೇ 15ರಷ್ಟು ಬೆಳವಣಿಗೆಯನ್ನು ಕಂಡು, ರೂ. 5.55 ಲಕ್ಷ ಕೋಟಿ ಆಗಿದೆ.
ವರದಿ ಮಾಡಿದ ತ್ರೈಮಾಸಿಕದಲ್ಲಿ ಎಚ್ಡಿಎಫ್ಸಿಯು ಆರ್ಥಿಕವಾಗಿ ದುರ್ಬಲ ವಿಭಾಗ (EWS) ಮತ್ತು ಕಡಿಮೆ ಆದಾಯದ ಗುಂಪಿನ (LIG) ಗ್ರಾಹಕರಿಗೆ ಪರಿಮಾಣದ (volume) ಪರಿಭಾಷೆಯಲ್ಲಿ ಶೇ 29ರಷ್ಟು ಮತ್ತು ಮೌಲ್ಯದ (value) ಪರಿಭಾಷೆಯಲ್ಲಿ ಶೇ 13ರಷ್ಟು ಗೃಹ ಸಾಲಗಳನ್ನು ಅನುಮೋದಿಸಿದೆ. ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷಕ್ಕೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ವೈಯಕ್ತಿಕ ಅನುಮೋದನೆಗಳು ಮತ್ತು ವಿತರಣೆಗಳು ಕ್ರಮವಾಗಿ ಶೇ 38 ಮತ್ತು ಶೇ 37ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ. ಭೋಗ್ಯ ಬಾಡಿಗೆ ರಿಯಾಯಿತಿ (lease rental discount) ಮತ್ತು ನಿರ್ಮಾಣ ಹಣಕಾಸು ಸಾಲಗಳ ಉತ್ತಮ ಪೈಪ್‌ಲೈನ್ ಮೂಲಕ ಈ ತ್ರೈಮಾಸಿಕದಲ್ಲಿ ವೈಯಕ್ತಿಕವಲ್ಲದ ಸಾಲದ ಪುಸ್ತಕವು ಬೆಳವಣಿಗೆಯನ್ನು ದಾಖಲಿಸಿದೆ, ಎಂದು ಸೇರಿಸಲಾಗಿದೆ.
“2022ರ ಮಾರ್ಚ್ನಲ್ಲಿ ಎಚ್‌ಡಿಎಫ್‌ಸಿ ತನ್ನ ಅತಿ ಹೆಚ್ಚು ಮಾಸಿಕ ವೈಯಕ್ತಿಕ ವಿತರಣೆಗಳನ್ನು ದಾಖಲಿಸಿದೆ. ಇದು ಹಿಂದಿನ ವರ್ಷ ಕೆಲವು ರಾಜ್ಯಗಳಲ್ಲಿ ರಿಯಾಯಿತಿಯ ಮುದ್ರಾಂಕ ಶುಲ್ಕದ ಪ್ರಯೋಜನಗಳನ್ನು ಹೊಂದಿದ್ದರೂ ಪ್ರಸ್ತುತ ವರ್ಷದಲ್ಲಿ ಆ ರಿಯಾಯಿತಿ ಇಲ್ಲ. ಗೃಹ ಸಾಲಗಳಿಗೆ ಬೇಡಿಕೆ ಮತ್ತು ಸಾಲದ ಅರ್ಜಿಗಳ ಪೈಪ್‌ಲೈನ್ ಬಲವಾಗಿ ಮುಂದುವರಿದಿದೆ. ಗೃಹ ಸಾಲಗಳ ಬೆಳವಣಿಗೆಯು ಕೈಗೆಟುಕುವ ವಸತಿ ವಿಭಾಗ ಮತ್ತು ಹೈ ಎಂಡ್ ಆಸ್ತಿಗಳೆರಡರಲ್ಲೂ ಕಂಡುಬಂದಿದೆ. ಹೆಚ್ಚುತ್ತಿರುವ ಮಾರಾಟದ ವೇಗ ಮತ್ತು ಹೊಸ ಯೋಜನೆಯು ಗೃಹ ಕ್ಷೇತ್ರಕ್ಕೆ ಉತ್ತಮವಾದ ಉತ್ತೇಜನವಾಗಿದೆ,” ಎಂದು ಎಚ್‌ಡಿಎಫ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಸ್ಥೆಯು ತ್ರೈಮಾಸಿಕದಲ್ಲಿ ಬ್ಯಾಡ್ ಲೋನ್ಗಳಿಗೆ 400 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಅನುಕ್ರಮವಾಗಿ 390 ಕೋಟಿ ರೂಪಾಯಿ ಮತ್ತು ಕಳೆದ ವರ್ಷ 720 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಒಂದು ತ್ರೈಮಾಸಿಕ ಹಿಂದೆ ಶೇ 2.32ರಿಂದ ಒಟ್ಟು ಎನ್ಪಿಎ ಶೇ 1.91ಕ್ಕೆ ಸುಧಾರಿಸಿದೆ. ಒಟ್ಟು ವೈಯಕ್ತಿಕ ಅನುತ್ಪಾದಕ ಸಾಲಗಳು (NPLಗಳು) ವೈಯಕ್ತಿಕ ಪೋರ್ಟ್‌ಫೋಲಿಯೊದ ಶೇ 0.99 ಮತ್ತು ಶೇ 1.44ರಷ್ಟಿದ್ದರೆ, ಒಟ್ಟಾರೆಯಾಗಿ ಎನ್ಪಿಎ ವೈಯಕ್ತಿಕವಲ್ಲದ ಸಾಲಗಳು ತ್ರೈಮಾಸಿಕ ಹಿಂದೆ ಶೇ 5.04ರ ವಿರುದ್ಧ ವೈಯಕ್ತಿಕವಲ್ಲದ ಪೋರ್ಟ್‌ಫೋಲಿಯೊದ ಶೇ 4.76ರಷ್ಟಿದೆ.
ಮಂಡಳಿಯು ರೂ. 1.25 ಲಕ್ಷ ಕೋಟಿ ಡಿಬೆಂಚರ್ ವಿತರಿಸಲು ಅನುಮೋದಿಸಿತು. ಮಾರ್ಚ್ 31, 2022ಕ್ಕೆ ಕೊನೆಗೊಂಡ ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ 30 ರೂಪಾಯಿ ಲಾಭಾಂಶವನ್ನು ಶಿಫಾರಸು ಮಾಡಿದೆ.
ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: HDFC Bank: ಡಿಜಿಟಲ್ ಆರಂಭವೂ ಸೇರಿದಂತೆ ಎಚ್‌ಡಿಎಫ್‌ಸಿ ಬ್ಯಾಂಕ್ ಮೇಲಿನ ಎಲ್ಲ ನಿರ್ಬಂಧ ತೆರವುಗೊಳಿಸಿದ ಆರ್ಬಿಐ