
ನವದೆಹಲಿ, ಮಾರ್ಚ್ 5: ಹಾರ್ಮುಜ್ ಜಲಸಂಧಿಯಲ್ಲಿ ತೈಲ ನೌಕೆಗಳನ್ನು ಸಾಗಲು ಬಿಡುವುದಿಲ್ಲ ಎಂದು ಹೇಳಿ ತಡೆ ಹಾಕಿದ್ದ ಇರಾನ್ ದೇಶ ಈಗ ತನ್ನ ನಿಲುವನ್ನು ಸಡಿಲಿಸಿದೆ. ಅಮೆರಿಕ, ಇಸ್ರೇಲ್, ಯೂರೋಪ್ ಹಾಗೂ ಅವರ ಇತರ ಪಶ್ಚಿಮ ಮಿತ್ರರಿಗೆ ಮಾತ್ರ ಈ ಮಾರ್ಗದಿಂದ ತೈಲ ಪೂರೈಕೆಗೆ ಅವಕಾಶ ಕೊಡುವುದಿಲ್ಲ ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್ ಸೇನೆ ಹೇಳಿದೆ.
ಇದರೊಂದಿಗೆ, ಭಾರತ ಹಾಗೂ ಇತರ ಹಲವು ದೇಶಗಳು ತುಸು ನಿರಾಳಗೊಂಡಂತಾಗಿದೆ. ಹಾರ್ಮುಜ್ ಜಲಸಂಧಿಯು ಪಶ್ಚಿಮ ಏಷ್ಯಾ ಭಾಗದಲ್ಲಿ ಇರಾನ್ ಮತ್ತು ಓಮನ್ ನಡುವಿನ ಸಮುದ್ರ ಭಾಗ. ಇದು ಪರ್ಷಿಯನ್ ಕೊಲ್ಲಿ ಹಾಗೂ ಅರೇಬಿಯನ್ ಸಮುದ್ರವನ್ನು ಇದು ಸಂಪರ್ಕಿಸುತ್ತದೆ. ಬಹಳ ಕಿರಿದಾಗಿರುವ ಈ ಜಲಸಂಧಿಯಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಹಡಗುಗಳು ಸಾಗುತ್ತವೆ. ಗಲ್ಫ್ ರಾಷ್ಟ್ರಗಳ ತೈಲ ನೌಕೆಗಳು ಬೇರೆ ದೇಶಗಳನ್ನು ತಲುಪಬೇಕಾದರೆ ಇಲ್ಲಿಂದಲೇ ಹೊರಗೆ ಹೋಗಬೇಕು. ವಿಶ್ವದ ಶೇ. 20ಕ್ಕಿಂತ ಹೆಚ್ಚು ತೈಲ ಪೂರೈಕೆ ಈ 33 ಕಿಮೀ ಕಿರಿದಾದ ಜಲಸಂಧಿ ಮೂಲಕ ಹೋಗಬೇಕು. ಇದಕ್ಕೆ ತಡೆ ಹಾಕುವುದು ಇರಾನ್ಗೆ ಸುಲಭ.
ಇದನ್ನೂ ಓದಿ: ಇಂಧನಕ್ಕೆ ಯಾವ ತೊಂದರೆ ಇಲ್ಲ, ಸಾಕಷ್ಟು ದಾಸ್ತಾನು ಇದೆ; ದಿನವೂ ಭರಿಸುತ್ತಿದ್ದೇವೆ: ಸರ್ಕಾರದ ಮೂಲಗಳು
ಅಮೆರಿಕ ಮತ್ತು ಇಸ್ರೇಲ್ ಶನಿವಾರ ಇರಾನ್ ಮೇಲೆ ಜಂಟಿಯಾಗಿ ದಾಳಿ ಆರಂಭಿಸಿದಾಗಿನಿಂದ ಈ ಜಲಸಂಧಿಗೆ ತಡೆ ಬಿದ್ದಿದೆ. ಈ ಮಾರ್ಗದಲ್ಲಿ ಶೇ. 90ರಷ್ಟು ಹಡಗುಗಳ ಸಾಗಣೆ ಕಡಿಮೆ ಆಗಿದೆ. ಪರಿಣಾಮವಾಗಿ ಬ್ಯಾರಲ್ಗೆ 65 ಡಾಲರ್ ಆಸುಪಾಸಿನಲ್ಲಿದ್ದ ತೈಲ ಬೆಲೆ 80 ಡಾಲರ್ಗಿಂತಲೂ ಮೇಲೆ ಹೋಗಿದೆ.
ಮೊನ್ನೆ ಮಂಗಳವಾರ ಇರಾನ್ ದೇಶವು ಚೀನೀ ಹಡಗುಗಳಿಗೆ ಮಾತ್ರವೇ ಸಾಗಲು ಅವಕಾಶ ಕೊಡುವುದಾಗಿ ಹೇಳಿತ್ತು. ಈಗ ಅಮೆರಿಕ ಹಾಗೂ ಅದರ ಮಿತ್ರ ದೇಶಗಳನ್ನು ಬಿಟ್ಟು ಉಳಿದ ದೇಶಗಳಿಗೆ ಹಾರ್ಮುಜ್ ಜಲಸಂಧಿ ದಾಟಲು ಅವಕಾಶ ಕೊಡುವುದಾಗಿ ಹೇಳುತ್ತಿದೆ.
ಇದನ್ನೂ ಓದಿ: ಬೇರೆಡೆಗೆ ಹೋಗುತ್ತಿದ್ದ ರಷ್ಯನ್ ತೈಲ ಟ್ಯಾಂಕರ್ಗಳು ಭಾರತದ ಕಡೆಗೆ; ಆಪತ್ಕಾಲದಲ್ಲಿ ಭಾರತಕ್ಕೆ ದಕ್ಕಿದ ನೆರವು
ಹಾರ್ಮುಜ್ ಜಲಸಂಧಿಗೆ ಈ ರೀತಿ ಹಡಗು ಸಾಗಣೆಗೆ ನಿರ್ಬಂಧ ಬಿದ್ದಿದ್ದು ಇದೇ ಪ್ರಥಮ ಬಾರಿಗೆ. ಹಿಂದೆ ಇರಾಕ್ ಅಮೆರಿಕ ಯುದ್ಧದ ಸಂದರ್ಭದಲ್ಲೂ ಇಲ್ಲಿ ಅನಿರ್ಬಂಧಿತವಾಗಿ ತೈಲ ನೌಕೆಗಳ ಸಾಗಣೆ ಆಗುತ್ತಿತ್ತು. ಈಗ ನಿರ್ಬಂಧವನ್ನು ಕೆಲವೇ ದೇಶಗಳಿಗೆ ಸೀಮಿತಗೊಳಿಸಿರುವುದು ಭಾರತ, ಚೀನಾದಂತಹ ದೇಶಗಳು ನಿರಾಳಗೊಳ್ಳುವಂತಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ