
ಎಲ್ಲಾ ಸರಕುಗಳಂತೆ ಚಿನ್ನದ ಬೆಲೆಯೂ ಕೂಡ ಬೇಡಿಕೆ ಮತ್ತು ಪೂರೈಕೆ ಆಧಾರಿತವಾಗಿರುತ್ತದೆ. ಆದರೆ, ಇಲ್ಲಿ ಚಿನ್ನದ ಹೆಚ್ಚಿನ ಗ್ರಾಹಕರು ಭಾರತೀಯರಂತೆ ಆಭರಣ ಮಾಡಿಸುವುದಕ್ಕೆ ಚಿನ್ನ ಖರೀದಿಸುವುದಿಲ್ಲ. ಚಿನ್ನದ ಮೇಲೆ ಹೂಡಿಕೆ ಮಾಡುವವರು ಹೆಚ್ಚು. ಅದರಲ್ಲೂ ದೀರ್ಘಾವಧಿಗಿಂತ ಅಲ್ಪಾವಧಿಗೆ ಹೂಡಿಕೆ ಮಾಡಿ, ಲಾಭ ಪಡೆಯುವವರು ಹೆಚ್ಚು. ಹೀಗಾಗಿ, ಬಂಗಾರದ ಬೆಲೆಯ ಏರಿಳಿತವು ಸಹಜವಾಗಿ ಆಗುತ್ತಿಲ್ಲ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಂಡನ್, ಕಾಮೆಕ್ಸ್, ಶಾಂಘೈ ಇತ್ಯಾದಿ ಸರಕು ವಿನಿಮಯ ಕೇಂದ್ರಗಳಲ್ಲಿ ಚಿನ್ನ, ಬೆಳ್ಳಿ ಇತ್ಯಾದಿಗಳ ವಹಿವಾಟು ನಡೆಯುತ್ತದೆ. ಸ್ಪಾಟ್ ಮತ್ತು ಫ್ಯೂಚರ್ಸ್ ಟ್ರೇಡಿಂಗ್ ನಡೆಯುತ್ತವೆ. ಸ್ಪಾಟ್ ಟ್ರೇಡಿಂಗ್ ಎಂದರೆ ತತ್ಕ್ಷಣವೇ ಚಿನ್ನದ ಮಾರಾಟ ಮತ್ತು ಖರೀದಿ ನಡೆಯುತ್ತದೆ. ಫ್ಯೂಚರ್ಸ್ ಎಂದರೆ ಭವಿಷ್ಯದ ಒಂದು ನಿಗದಿತ ದಿನಾಂಕದಲ್ಲಿ ಚಿನ್ನ ಪಡೆಯಬಹುದಾದ ಬೆಲೆ.
ಇದನ್ನೂ ಓದಿ: ಒಂದು ಸವರನ್ ಚಿನ್ನದ ಬೆಲೆಯಲ್ಲಿ 2,158 ರೂ ಕುಸಿತ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಡಾಲರ್ನಲ್ಲಿ ಇರುತ್ತದೆ. ಭಾರತದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ರುಪಾಯಿಯಲ್ಲಿ ಇರುತ್ತದೆ. ಆವತ್ತಿನ ಡಾಲರ್ ಎದುರು ರುಪಾಯಿ ಮೌಲ್ಯ ಎಷ್ಟಿದೆ ಎಂದು ಗಣಿಸಲಾಗುತ್ತದೆ. ಜೊತೆಗೆ, ಸರ್ಕಾರ ವಿಧಿಸಿರುವ ಆಮದು ಸುಂಕ, ಬೇರೆ ಬೇರೆ ಸೆಸ್ಗಳು, ಜಿಎಸ್ಟಿ ಇತ್ಯಾದಿ ಸೇರ್ಪಡೆಯಾಗಿ ಬೆಲೆ ನಿಗದಿ ಆಗುತ್ತದೆ. ರುಪಾಯಿ ಮೌಲ್ಯ ಕಡಿಮೆಗೊಂಡಾಗ, ಅಂತಾರಾಷ್ಟ್ರೀಯ ಚಿನ್ನದ ದರದಲ್ಲಿ ಬದಲಾವಣೆ ಆಗದಿದ್ದರೂ ಭಾರತದಲ್ಲಿ ಬೆಲೆ ತುಸು ಏರುತ್ತದೆ.
ಹೆಚ್ಚಿನ ಒಡವೆ ಅಂಗಡಿಯವರು ಭಾರತೀಯ ಒಡವೆ ವ್ಯಾಪಾರಿಗಳ ಸಂಘವಾದ ಐಬಿಜೆಎ ಪ್ರಕಟಿಸುವ ದರಗಳನ್ನು ರೆಫರೆನ್ಸ್ ಆಗಿ ಇಟ್ಟುಕೊಳ್ಳುತ್ತಾರೆ. ಬ್ಯಾಂಕುಗಳಿಗೂ ಕೂಡ ಇದೇ ರೆಫರೆನ್ಸ್ ದರ. ಭಾರತದಲ್ಲಿರುವ ಸ್ಪಾಟ್ ಚಿನ್ನ, ಬೆಳ್ಳಿ ದರಗಳ ಆಧಾರದ ಮೇಲೆ ಐಬಿಜೆಎ ದಿನಕ್ಕೆ ಎರಡು ಬಾರಿ ದರ ಪರಿಷ್ಕರಣೆ ಮಾಡುತ್ತದೆ. ಐಬಿಜೆಎ ದರಗಳು ಸಾರ್ವತ್ರಿಕವಾಗಿ ಲಭ್ಯ ಇರುವುದಿಲ್ಲ. ಅದಕ್ಕೆ ಸಬ್ಸ್ಕ್ರೈಬ್ ಆದವರಿಗೆ ಲೈವ್ ಆಗಿ ದರಗಳು ಕಾಣಸಿಗುತ್ತವೆ.
ಕೆಲವೊಮ್ಮೆ ಸ್ಥಳೀಯ ಜ್ಯುವೆಲರಿ ಸಂಘಗಳೂ ಕೂಡ ಪ್ರತ್ಯೇಕ ದರ ನಿಗದಿ ಮಾಡಬಹುದು. ಚಿನ್ನದ ಸಾಗಣೆ, ಇನ್ಷೂರೆನ್ಸ್ ಇತ್ಯಾದಿ ಹೆಚ್ಚುವರಿ ವೆಚ್ಚಗಳನ್ನು ಸೇರಿಸಲಾಗುತ್ತದೆ.
ಇದನ್ನೂ ಓದಿ: ಮೋದಿಯ ಚಿನ್ನದಂಥ ಆಶಯದಿಂದ 7 ತಿಂಗಳಲ್ಲಿ ಭಾರತಕ್ಕಾಯ್ತು ದೊಡ್ಡ ಅನುಕೂಲ; ಬಂಗಾರದ ಬೆಲೆ ಇಳಿಯಲು ಪ್ರಮುಖ ಕಾರಣಗಳಿವು
ಆಭರಣ ಅಂಗಡಿಯವರು ಚಿನ್ನದ ಮೇಲೆ ಪ್ರತ್ಯೇಕವಾಗಿ ಬೇರೆ ಬೇರೆ ಶುಲ್ಕ ಹಾಕುತ್ತವೆ. ಅದರಲ್ಲಿ ಪ್ರಮುಖವಾದುದು ಮೇಕಿಂಗ್ ಚಾರ್ಜಸ್. ಚಿನ್ನವನ್ನು ಆಭರಣವಾಗಿ ಮಾಡಲು ಕೈಕುಸೂತಿ ಕೆಲಸ ಬೇಕಾಗುತ್ತದೆ. ಒಡವೆಯ ವಿನ್ಯಾಸ ಸಂಕೀರ್ಣಗೊಂಡಷ್ಟೂ ಕೈಕೆಲಸ ಹೆಚ್ಚುತ್ತದೆ. ಹೀಗಾಗಿ, ಅದರ ಮೇಕಿಂಗ್ ಚಾರ್ಜ್ ಕೂಡ ಹೆಚ್ಚುತ್ತದೆ. ಸಾಮಾನ್ಯವಾಗಿ ಮೇಕಿಂಗ್ ಚಾರ್ಜ್ ಒಡವೆ ಮೌಲ್ಯದ ಮೇಲೆ ಶೇ. 5ರಿಂದ 25ರಷ್ಟು ಇರುತ್ತದೆ.
ಜಿಎಸ್ಟಿ ದರ: ಒಡವೆ ಮೌಲ್ಯ ಮತ್ತು ಮೇಕಿಂಗ್ ಚಾರ್ಜ್ ಮೌಲ್ಯ ಸೇರಿದ ಮೊತ್ತಕ್ಕೆ ಜಿಎಸ್ಟಿ ಹಾಕಲಾಗುತ್ತದೆ. ಸದ್ಯ ಚಿನ್ನಕ್ಕೆ ಜಿಎಸ್ಟಿ ಶೇ. 3 ಇದೆ.
ಇನ್ನು, ಪ್ರತೀ ಒಡವೆಯ ಮೇಲೂ ಹಾಲ್ಮಾರ್ಕ್ ಹಾಕುವುದು ಕಡ್ಡಾಯ. ಮಾನ್ಯ ಮಾಡಲಾದ ಬಿಐಎಸ್ ಹಾಲ್ಮಾರ್ಕಿಂಗ್ ಸೆಂಟರ್ನಲ್ಲಿ ಈ ಗುರುತು ಹಾಕಿಸಲಾಗುತ್ತದೆ. ಇದಕ್ಕೆ ತಗುಲುವ ವೆಚ್ಚವನ್ನು ಅಂಗಡಿಯವರು ಗ್ರಾಹಕರಿಗೆ ವರ್ಗಾಯಿಸುತ್ತಾರೆ. ಹೀಗಾಗಿ, ಚಿನ್ನದ ಮೇಲೆ ಮೇಕಿಂಗ್ ಚಾರ್ಜಸ್, ಜಿಎಸ್ಟಿ ಜೊತೆಗೆ ಹಾಲ್ಮಾರ್ಕಿಂಗ್ ಶುಲ್ಕವೂ ಸೇರಿಸಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ