ಭಾರತಕ್ಕೆ ಪೆಟ್ರೋಲ್, ಡೀಸಲ್ ಸಮಸ್ಯೆ ವಕ್ಕರಿಸಲಿಲ್ಲ ಯಾಕೆ? ಸರ್ಕಾರದ ಈ ಕೆಲ ಕ್ರಮಗಳೇ ಕಾರಣವಾ?

How India handling oil crisis: ಇರಾನ್ ಯುದ್ಧದಿಂದ ಇಡೀ ಜಗತ್ತೇ ತೈಲ ಬಿಕ್ಕಟ್ಟಿಗೆ ನಲುಗಿಹೋದರೂ ಭಾರತ ಇದ್ದುದರಲ್ಲೇ ಪರಿಸ್ಥಿತಿ ನಿಭಾಯಿಸಿದೆ. ಕೋವಿಡ್ ಸಂದರ್ಭದಲ್ಲಿ ತೋರಿದ ಜಾಣ್ಮೆ ಮತ್ತು ಜಾಗ್ರತೆಯನ್ನು ಭಾರತ ಈಗಲೂ ತೋರಿದೆ. ತೈಲ ಪೂರೈಕೆ ಸುಗಮಗೊಳಿಸಲು ಮತ್ತು ಪೆಟ್ರೋಲಿಯಂ ಸಂಗ್ರಹ ಹೆಚ್ಚಿಸಲು ಮತ್ತು ಪರ್ಯಾಯ ಇಂಧನ ವ್ಯವಸ್ಥೆ ಮಾಡಲು ಸರ್ಕಾರ ತೆಗೆದುಕೊಂಡ ಕೆಲ ಕ್ರಮಗಳು ಭಾರತಕ್ಕೆ ನೆರವಾಗಿವೆ.

ಭಾರತಕ್ಕೆ ಪೆಟ್ರೋಲ್, ಡೀಸಲ್ ಸಮಸ್ಯೆ ವಕ್ಕರಿಸಲಿಲ್ಲ ಯಾಕೆ? ಸರ್ಕಾರದ ಈ ಕೆಲ ಕ್ರಮಗಳೇ ಕಾರಣವಾ?
ಪೆಟ್ರೋಲಿಯಂ
Image Credit source: PTI

Updated on: Apr 09, 2026 | 3:03 PM

ನವದೆಹಲಿ, ಏಪ್ರಿಲ್ 9: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವು ಜಾಗತಿಕವಾಗಿ ದೊಡ್ಡ ಬಿಕ್ಕಟ್ಟನ್ನೇ ಸೃಷ್ಟಿಸಿದೆ. ಜಗತ್ತಿನ ಶೇ. 20ರಷ್ಟು ತೈಲ ಸರಬರಾಜು ಆಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದ ಹಿನ್ನೆಲೆಯಲ್ಲಿ ಅನೇಕ ದೇಶಗಳಿಗೆ ಪೆಟ್ರೋಲ್, ಡೀಸಲ್ ಪೂರೈಕೆ ಕಡಿಮೆ ಆಗಿತ್ತು. ಅದರಲ್ಲೂ ಏಷ್ಯನ್ ರಾಷ್ಟ್ರಗಳು ತತ್ತರಿಸಿವೆ. ಭಾರತದಂತಹ ಕೆಲ ದೇಶಗಳು ಈ ಬಿಕ್ಕಟ್ಟನ್ನು (oil crisis) ತಕ್ಕಮಟ್ಟಿಗೆ ನಿರ್ವಹಿಸಲು ಯಶಸ್ವಿಯಾಗಿವೆ. ಭಾರತ ಈ ಬಿಕ್ಕಟ್ಟನ್ನು ನಿಭಾಯಿಸಲು ಹೇಗೆ ಸಾಧ್ಯವಾಯಿತು? ಇಲ್ಲಿದೆ ಮಾಹಿತಿ.

ಏಳು ವರ್ಷಗಳ ನಂತರ ಇರಾನ್​ನಿಂದ ತೈಲ ಆಮದು

ಇರಾನ್ ಜೊತೆ ಭಾರತಕ್ಕೆ ಮೊದಲಿಂದಲೂ ಉತ್ತಮ ಸಂಬಂಧ ಇದೆ. ಆದರೆ, ಅಮೆರಿಕದ ನಿಷೇಧ ಕ್ರಮದ ಕಾರಣ 2019ರಿಂದ ಇರಾನ್​ನಿಂದ ಭಾರತ ತೈಲ ಪಡೆದಿಲ್ಲ. ಈಗ ಯುದ್ಧ ಶುರುವಾದ ಬಳಿಕ ಅಮೆರಿಕವು ತೈಲ ನಿಷೇಧವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದರಿಂದ ಇರಾನ್​ನಿಂದ ಸಾಕಷ್ಟು ತೈಲದ ಪೂರೈಕೆ ಪಡೆಯಿತು.

ತೈಲ ಪೂರೈಕೆ ಜಾಲ ವಿಸ್ತಾರ

ಭಾರತ ತೈಲ ಪೂರೈಕೆ ವಿಚಾರದಲ್ಲಿ ನಾಲ್ಕೈದು ದೇಶಗಳನ್ನು ನಂಬಿ ಕುಳಿತುಕೊಳ್ಳಲಿಲ್ಲ. ಇರಾನ್, ರಷ್ಯಾ, ಗಲ್ಫ್ ರಾಷ್ಟ್ರಗಳು, ಆಫ್ರಿಕನ್ ದೇಶಗಳು, ಅಮೆರಿಕನ್ ದೇಶಗಳು ಹೀಗೆ ಬೇರೆ ಬೇರೆ ಮೂಲಗಳಿಂದ ಭಾರತವು ಕಚ್ಚಾ ತೈಲದ ಪೂರೈಕೆ ಪಡೆಯುತ್ತಿದೆ. ಹೀಗಾಗಿ, ಭಾರತಕ್ಕೆ ಪೆಟ್ರೋಲ್, ಡೀಸಲ್ ಬಿಕ್ಕಟ್ಟು ಸೃಷ್ಟಿಯಾಗಲಿಲ್ಲ.

ಇದನ್ನೂ ಓದಿ: ಮೂರು ತಿಂಗಳಲ್ಲಿ 80,000 ಟೆಕ್ಕಿಗಳ ಲೇ ಆಫ್; ಮುಂದೈತೆ ಇನ್ನೂ ದೊಡ್ಡ ಬಲಿ

ಪೆಟ್ರೋಲಿಯಂ ಸಂಗ್ರಹದಲ್ಲಿ ಹೆಚ್ಚಳ

ಭಾರತವು ಕಚ್ಛಾ ತೈಲವನ್ನು ಆಮದು ಮಾಡಿಕೊಂಡು ಅದನ್ನು ಸಂಸ್ಕರಿಸಿ, ತನಗೆ ಬೇಕಾದ ಪೆಟ್ರೋಲ್, ಡೀಸಲ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾಡಿಕೊಳ್ಳುತ್ತದೆ. ಇವನ್ನು ಬೇರೆ ದೇಶಗಳಿಗೂ ರಫ್ತುಮಾಡುತ್ತದೆ. ಹಾಗೆಯೇ, ಅಂಡರ್​ಗ್ರೌಂಡ್ ಸಂಗ್ರಹಗಾರಗಳಲ್ಲೂ ತೈಲ ಮತ್ತು ಪೆಟ್ರೋಲಿಯಂ ಅನ್ನು ಶೇಖರಿಸಿ ಇಡುತ್ತದೆ. ಈ ರೀತಿಯ ಪೆಟ್ರೋಲಿಯಂ ಸಂಗ್ರಹವು ಭಾರತಕ್ಕೆ ಹಲವು ವಾರಗಳಿಗೆ ಆಗುವಷ್ಟು ಇದೆ. ತೈಲ ಪೂರೈಕೆ ತೀರಾ ನಿಂತುಬಿಟ್ಟರೂ ಒಂದಷ್ಟು ದಿನಗಳ ಬಳಕೆಗೆ ಸಾಕಾಗುವಷ್ಟು ಪೆಟ್ರೋಲ್ ಸಂಗ್ರಹ ಇದೆ.

ನೌಕಾದಳ ಬಳಸಿ ಹಡಗುಗಳಿಗೆ ಭದ್ರತೆ

ಇರಾನ್ ಯುದ್ಧದ ವೇಳೆ ಹಾರ್ಮುಜ್ ಜಲಸಂಧಿ ಬಹುತೇಕ ಬಂದ್ ಆಗಿತ್ತು. ಇರಾನ್ ಈ ಜಲಮಾರ್ಗವನ್ನು ತಡೆದು ನಿಲ್ಲಿಸಿತ್ತು. ಭಾರತದ ಪ್ರಯತ್ನಗಳ ಫಲವಾಗಿ ಕೆಲ ಭಾರತೀಯ ಗ್ಯಾಸ್ ಹಡಗುಗಳಿಗೆ ಹೊರಹೋಗಲು ಅವಕಾಶ ಕೊಡಲಾಯಿತು. ಭಾರತದ ನೌಕಾದಳದ ಹಡಗುಗಳ ಬೆಂಗಾವಲಿನಲ್ಲಿ ಈ ಎಲ್​ಪಿಜಿ ಟ್ಯಾಂಕರ್​ಗಳು ಭಾರತವನ್ನು ತಲುಪಿದವು.

ಪರ್ಯಾಯ ಇಂಧನಕ್ಕೆ ಪ್ರಯತ್ನ

ಎಲ್​ಪಿಜಿ ಬಿಕ್ಕಟ್ಟನ್ನು ಕಡಿಮೆ ಮಾಡಲು ಭಾರತ ನ್ಯಾಚುರಲ್ ಗ್ಯಾಸ್ ಬಳಕೆ ಹೆಚ್ಚಿಸಲು ಕ್ರಮ ತೆಗೆದುಕೊಂಡಿತು. ದೇಶೀಯವಾಗಿ ನೈಸರ್ಗಿಕ ಅನಿಲ ಉತ್ಪಾದನೆ ಹೆಚ್ಚಿಸಿ, ಪಿಎನ್​ಜಿ ಪೂರೈಕೆ ಮಾಡುತ್ತಿದೆ. ಬೇರೆ ಬೇರೆ ದೇಶಗಳಿಂದ ಎಲ್​ಎನ್​ಜಿ ಪೂರೈಕೆ ಪಡೆದು ಅದನ್ನು ಪಿಎನ್​ಜಿಯಾಗಿ ಸರಬರಾಜು ಮಾಡುತ್ತಿದೆ.

ಇದನ್ನೂ ಓದಿ: ಧೋಬಿ ಎಲ್ಲಿ ಡೈಮಂಡ್ ಡೀಲ್ಸ್ ಎಲ್ಲಿ? ಬಟ್ಟೆ ಒಗೆಯುವವನಿಗೆ 598 ಕೋಟಿ ರೂ ಟ್ಯಾಕ್ಸ್ ನೋಟೀಸ್ ಬಂದಿದ್ದು ಯಾಕೆ?

ಬೆಲೆ ಕಡಿಮೆ ಇದ್ದಾಗ ಹೆಚ್ಚಿನ ಖರೀದಿ…

ಅಮೆರಿಕ ಇರಾನ್ ಮಧ್ಯೆ ಕದನ ವಿರಾಮ ಏರ್ಪಟ್ಟಾಗ ತೈಲ ಬೆಲೆ ನಿನ್ನೆ ದಿಢೀರನೇ ಕುಸಿದುಹೋಯಿತು. ಈ ಸಂದರ್ಭದಲ್ಲಿ ಭಾರತ ಹೆಚ್ಚಿನ ಮೊತ್ತದ ತೈಲವನ್ನು ಖರೀದಿಸಿದೆ. ಇದು ಮುಂದೆ ಸಹಾಯಕ್ಕೆ ಬರುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us