
ಮುಂಬೈ: ಐಡಿಎಫ್ಸಿ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಇಒ ಆದ ವಿ.ವೈದ್ಯನಾಥನ್ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಇವರು ಈ ಹಿಂದೆ ಯಾವಾಗ ಸುದ್ದಿಯಲ್ಲಿದ್ದರು ಅಂತ ಕೇಳ್ತೀರಾ? ತಮ್ಮ ಗಣಿತದ ಮೇಷ್ಟ್ರಿಗೆ 1 ಲಕ್ಷ ಷೇರುಗಳನ್ನು ಕೊಟ್ಟು ಭಾರೀ ಮೆಚ್ಚುಗೆಗೆ ಪಡೆದಿದ್ದ ವ್ಯಕ್ತಿ ಇವರೇ. ಈಗ ಕೂಡ ಮೂರು ಜನರಿಗೆ ತಲಾ 1.5 ಲಕ್ಷ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಷೇರುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅಲ್ಲಿಗೆ ಒಟ್ಟು 4.5 ಲಕ್ಷ ಷೇರುಗಳಾದವು. ವೈದ್ಯನಾಥನ್ ಅವರಿಗೆ ಸೇರಿದ್ದ ಈ ಷೇರುಗಳನ್ನು ಎಂ.ಸೆಲ್ವರಾಜ್, ಅಲೆಕ್ಸಿಯಾ ಸೆಲ್ವರಾಜ್ ಮತ್ತು ಉತ್ಕರ್ಷ ತೋಡಂಕರ್ ಅವರಿಗೆ ಮನೆ ಖರೀದಿ ಮಾಡುವುದಕ್ಕಾಗಿ ಉಡುಗೊರೆಯಾಗಿ ನೀಡಿದ್ದಾರೆ ಎಂದು ಬ್ಯಾಂಕ್ನಿಂದ ಸ್ಟಾಕ್ ಎಕ್ಸ್ಚೇಂಜ್ಗಳಿಗೆ ಮಾಹಿತಿ ನೀಡಲಾಗಿದೆ. ಅಂದ ಹಾಗೆ, ಶುಕ್ರವಾರದ ದಿನದ ಕೊನೆಗೆ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಷೇರಿನ ಬೆಲೆ ಒಂದಕ್ಕೆ 54.15 ಇತ್ತು. ಅಂದರೆ 4.5 ಲಕ್ಷ ಷೇರಿನ ಬೆಲೆ 2.43 ಕೋಟಿ ರೂಪಾಯಿ ಆಯಿತು.
ಕಂಪೆನಿ ಕಾಯ್ದೆ ಅಥವಾ ಸೆಬಿ ನಿಯಮಾವಳಿ ಪ್ರಕಾರ, ಈ ಷೇರುಗಳನ್ನು ಪಡೆದವರು ವೈದ್ಯನಾಥನ್ಗೆ ಹೇಗೂ ಸಂಬಂಧಪಟ್ಟವರಲ್ಲ. ಈ ಮೇಲ್ಕಂಡ ವಹಿವಾಟಿನಲ್ಲಿ ಯಾವುದೇ ಹಣಕಾಸು ಒಳಗೊಂಡಿಲ್ಲ ಎಂದು ಕಂಪೆನಿಯಿಂದ ಎಕ್ಸ್ಚೇಂಜ್ಗೆ ನೋಟಿಸ್ ಮೂಲಕ ತಿಳಿಸಲಾಗಿದೆ. ಅಂದಹಾಗೆ ಮಾರ್ಚ್ ಕೊನೆ ಹೊತ್ತಿಗೆ ವೈದ್ಯನಾಥನ್ ಅವರ ಬಳಿ ಇದ್ದ ಐಡಿಎಫ್ಸಿ ಷೇರುಗಳು ಎಷ್ಟು ಗೊತ್ತಾ? 2,48,60,000 ಅಥವಾ 2.49 ಕೋಟಿ ಷೇರುಗಳು. ಐಇಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿ ಶೇ 0.44ರಷ್ಟು ಪಾಲು ಇವರ ಬಳಿ ಇತ್ತು.
ಮೊದಲೇ ಹೇಳಿದ ಹಾಗೆ ವೈದ್ಯನಾಥನ್ ಷೇರನ್ನು ನೀಡುತ್ತಿರುವುದು ಇದು ಮೊದಲ ಸಲ ಏನಲ್ಲ. 2020ರ ಅಕ್ಟೋಬರ್ನಲ್ಲಿ 30 ಲಕ್ಷ ಮೌಲ್ಯದ 1 ಲಕ್ಷ ಷೇರನ್ನು ತಮಗೆ ಗಣಿತ ಮೇಷ್ಟ್ರಾಗಿದ್ದ ಗುರುದಿಯಾಲ್ ಸೈನಿ ಅವರಿಗೆ ನೀಡಿದ್ದರು. ಅದಕ್ಕೆ ಕಾರಣ ಏನು ಗೊತ್ತಾ? ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಮೆಸ್ರಾ) ಪ್ರವೇಶ ಸಿಕ್ಕಿದ್ದ ವೈದ್ಯನಾಥನ್ಗೆ ಸಂದರ್ಶನದಲ್ಲಿ ಭಾಗವಹಿಸಲು ಅಲ್ಲಿಗೆ ಹೋಗಬೇಕಿತ್ತು. ಆದರೆ ಆ ಕೌನ್ಸೆಲಿಂಗ್ ನಿಯಮಾವಳಿಗಳನ್ನು ಪೂರೈಸುವುದಕ್ಕೆ ಹಣವೇ ಇರಲಿಲ್ಲ. ಅಂಥ ಸಂದರ್ಭದಲ್ಲಿ ಸಂದರ್ಶನಕ್ಕೆ ಹೋಗಲು ಸೈನಿ 500 ರೂಪಾಯಿ ನೀಡಿದ್ದರಂತೆ.
2018ರ ನವೆಂಬರ್ನಲ್ಲಿ ವೈದ್ಯನಾಥನ್ ಕ್ಯಾಪಿಟಲ್ ಫಸ್ಟ್ ಲಿಮಿಟೆಡ್ ಅಧ್ಯಕ್ಷರಾಗಿದ್ದಾಗ 20 ಕೋಟಿ ಮೌಲ್ಯದ 4.3 ಲಕ್ಷ ಷೇರುಗಳನ್ನು ಇಬ್ಬರು ಚಾಲಕಕರು, ಮೂವರು ಮನೆಕೆಲಸದವರು, ಕೆಲವು ಸಹೋದ್ಯೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ನೀಡಿದ್ದರು. ಇದು ಐಡಿಎಫ್ಸಿ ಬ್ಯಾಂಕ್ ಜತೆ ಕ್ಯಾಪಿಟಲ್ ಫಸ್ಟ್ ವಿಲೀನ ಆಗುವ ಮುಂಚಿನ ಸಂಗತಿ.
ಇದನ್ನೂ ಓದಿ: ಮನೆ ಕೆಲಸದಾಕೆಗೆ ಹೊಸ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ ನಟಿ ರೊಮಾನಾ
(IDFC First bank CEO V Vaidyanathan gifted 1.5 lakh each shares, total worth of Rs 2.43 crore to 3 people to buy house)