PAN-Aadhaar Linking: ಪ್ಯಾನ್-ಆಧಾರ್ ಜೋಡಣೆಗೆ ಮಾರ್ಚ್ 31 ಕೊನೆ ದಿನ; ಜವಾಬ್ದಾರಿ ಪೂರೈಸದಿದ್ದಲ್ಲಿ 500ರಿಂದ 1000 ರೂ. ದಂಡ
ಪ್ಯಾನ್ ಜತೆಗೆ ಆಧಾರ್ ಅನ್ನು ಮಾರ್ಚ್ 31, 2022ರೊಳಗೆ ಪಾವತಿ ಮಾಡದಿದ್ದಲ್ಲಿ 500ರಿಂದ ಸಾವಿರ ರೂಪಾಯಿ ದಂಡ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಒಂದು ವೇಳೆ ಗಡುವಿನೊಳಗೆ, ಅಂದರೆ ಮಾರ್ಚ್ 31, 2022ರ ಒಳಗಾಗಿ ನಿಮ್ಮ ಪರ್ಮನೆಂಟ್ ಅಕೌಂಟ್ ನಂಬರ್ (PAN) ಮತ್ತು ಆಧಾರ್ ಅನ್ನು ಜೋಡಣೆ ಮಾಡಲು ವಿಫಲರಾದರೆ ರೂ. 500ರಿಂದ ರೂ. 1,000ವರೆಗೆ ದಂಡ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಜವಾಬ್ದಾರಿಯನ್ನು ಪೂರ್ಣಗೊಳಿಸಲು ಮಾರ್ಚ್ 31, 2022 ಕೊನೆ ದಿನಾಂಕವಾಗಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT)ಯು ನೀವು ಈ ಗಡುವನ್ನು ತಪ್ಪಿಸಿಕೊಂಡರೆ ರೂ. 500 ದಂಡವನ್ನು ವಿಧಿಸಲು ನಿರ್ಧರಿಸಿದ್ದು, ಮೂರು ತಿಂಗಳೊಳಗೆ ಜೋಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದಲ್ಲಿ – ಅಂದರೆ ಜೂನ್ 30, 2022ರೊಳಗೆ ಆಗಿರಬೇಕು. ಹಾಗೊಂದು ವೇಳೆ ನೀವು ಮಾಡಲು ಸಾಧ್ಯವಾಗದಿದ್ದರೆ ದಂಡದ ಶುಲ್ಕದ ದುಪ್ಪಟ್ಟು ವಿಧಿಸಲಾಗುತ್ತದೆ. ಆದರೆ, ಆಧಾರ್ ಜತೆಗೆ ಜೋಡಣೆ ಮಾಡದ PAN ಮಾರ್ಚ್ 31, 2023ರ ವರೆಗೆ ಮಾನ್ಯವಾಗಿರುತ್ತದೆ ಎಂದು CBDT ಸ್ಪಷ್ಟಪಡಿಸಿದೆ. ಜೋಡಣೆ ಮಾಡುವ ಪ್ರಕ್ರಿಯೆಯು ಪೂರ್ಣಗೊಳ್ಳದಿದ್ದರೆ ಈ ದಿನಾಂಕದ ನಂತರ ನಿಮ್ಮ PAN ನಿಷ್ಕ್ರಿಯಗೊಳ್ಳುತ್ತದೆ.
“ಆಧಾರ್- ಪ್ಯಾನ್ ಜೋಡಣೆ ಮಾಡುವುದರಲ್ಲಿನ ಯಾವುದೇ ವೈಫಲ್ಯವು ಪ್ಯಾನ್ ನಿಷ್ಕ್ರಿಯಗೊಳ್ಳಲು ಕಾರಣ ಆಗಬಹುದು. ಅಂದರೆ ಒಬ್ಬ ವ್ಯಕ್ತಿಯು ಆದಾಯ ತೆರಿಗೆ ಉದ್ದೇಶಗಳಿಗಾಗಿ ಯಾವುದೇ ಪ್ಯಾನ್ ಅನ್ನು ಹೊಂದಿಲ್ಲ ಎಂಬಂತಾಗುತ್ತದೆ. ತೆರಿಗೆ ಪಾವತಿದಾರರು ಆದಾಯ ತೆರಿಗೆ ಪೋರ್ಟಲ್ ಅನ್ನು ಪರಿಶೀಲಿಸಬೇಕು ಮತ್ತು ಆಧಾರ್ ಮತ್ತು ಪ್ಯಾನ್ ಅನ್ನು ಜೋಡಣೆ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ ಆಧಾರ್ ಇಲ್ಲದಿರುವುದರಿಂದ ಎನ್‌ಆರ್‌ಐಗಳು ಆತಂಕ ಗೊಂಡಿರಬಹುದು,” ಎಂದು ತೆರಿಗೆ ಮತ್ತು ಸಲಹಾ ಸಂಸ್ಥೆಯ ಎಕೆಎಂ ಗ್ಲೋಬಲ್‌ನ ತೆರಿಗೆ ಪಾಲುದಾರ ಅಮಿತ್ ಮಹೇಶ್ವರಿ ಹೇಳಿದ್ದಾರೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.
ನಿಷ್ಕ್ರಿಯ ಪ್ಯಾನ್ನಿಂದಾಗಿ ಹಲವಾರು ಹಣಕಾಸಿನ ವಹಿವಾಟುಗಳಿಗೆ ಸಮಸ್ಯೆಯಾಗಬಹುದು. ಚಾರ್ಟರ್ಡ್ ಕ್ಲಬ್‌ನ ಸಂಸ್ಥಾಪಕ ಚಾರ್ಟರ್ಡ್ ಅಕೌಂಟೆಂಟ್ ಕರಣ್ ಬಾತ್ರಾ ಅವರು ಮಾತನಾಡಿ, “ಯಾರಿಗೆ ಆಗಲಿ ಪ್ಯಾನ್ ಇಲ್ಲದೆ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ,” ಎಂದಿದ್ದಾರೆ. ಅಲ್ಲದೆ, ಮ್ಯೂಚುವಲ್ ಫಂಡ್ SIP ವಹಿವಾಟುಗಳು ನಡೆಯುವುದಿಲ್ಲ. ಪ್ಯಾನ್ ಅನ್ನು ಆಧಾರ್‌ನೊಂದಿಗೆ ಜೋಡಣೆ ಮಾಡದಿರುವುದು ಮ್ಯೂಚುವಲ್ ಫಂಡ್ ವಹಿವಾಟಿನ ಮೇಲೂ ಪರಿಣಾಮ ಬೀರುತ್ತದೆ. ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಈ ಹಿಂದೆ ಆಧಾರ್‌ಗೆ ಪ್ಯಾನ್ ಅನ್ನು ಮ್ಯಾಪ್ ಮಾಡಿದ ಹೂಡಿಕೆದಾರರ ಹೂಡಿಕೆಗಳು ಮಾತ್ರ ಕಾರ್ಯ ನಿರ್ವಹಿಸುತ್ತವೆ ಎಂದು ಹೇಳಿತ್ತು. ನಿಮ್ಮ ಪ್ಯಾನ್ ಮತ್ತು ಆಧಾರ್ ಜೋಡಣೆ ಮಾಡದ ಹೊರತು ಹೊಸ ಬ್ರೋಕಿಂಗ್ ಅಥವಾ ಡಿಮ್ಯಾಟ್ ಖಾತೆಯನ್ನು ತೆರೆಯಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: Aadhaar- PAN Linking: ಆಧಾರ್ ಜತೆ ಪ್ಯಾನ್ ಕಾರ್ಡ್ ಮಾರ್ಚ್ 31ರೊಳಗೆ ಜೋಡಣೆ ಆಗದಿದ್ದಲ್ಲಿ ಹೆಚ್ಚಿನ ಟಿಡಿಎಸ್