
ಕೋಲ್ಕತಾ, ಸೆಪ್ಟೆಂಬರ್ 3: ಐಐಟಿ ಖರಗ್‌ಪುರ ಸಂಸ್ಥೆಯು (IIT Kharagpur) 75ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಕೋಲ್ಕತಾದಿಂದ 120 ಕಿಮೀ ದೂರದಲ್ಲಿರುವ ಇದು ಭಾರತದ ಮೊದಲ ಐಐಟಿ ಎನ್ನುವ ಹೆಗ್ಗಳಿಕೆ ಹೊಂದಿದೆ. 1951ರಲ್ಲಿ ಶುರುವಾದ ಈ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಓದಿ ಎಂಜಿನಿಯರುಗಳಾದವರು ಇವತ್ತು ದೊಡ್ಡ ಉದ್ದಿಮೆಗಳನ್ನು ಕಟ್ಟಿದ್ದಾರೆ, ದೊಡ್ಡ ಹೆಸರು ಮಾಡಿದ್ದಾರೆ. ಅಂಥವರಲ್ಲಿ ಅತ್ಯಂತ ಯಶಸ್ಸು ಪಡೆದವರು ಗೂಗಲ್ ಸಿಇಒ ಸುಂದರ್ ಪಿಚೈ (Sundar Pichai). ತಾವು ಓದಿದ ಐಐಟಿ ಖರಗ್ಪುರ್ನ 75ನೆ ವಾರ್ಷಿಕೋತ್ಸವದ ವಿಶೇಷ ಸಂದರ್ಭದಲ್ಲಿ ಸುಂದರ್ ಪಿಚೈ ಅವರು ವಿಡಿಯೋ ಸಂದೇಶವವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಅ ಕಾಲೇಜು ದಿನಗಳನ್ನು ಮೆಲುಕುಹಾಕಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಐಐಟಿ ಖರಗ್‌ಪುರ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿದ ಪಿಚೈ, ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ ದಿನಗಳು ತಮ್ಮ ಜೀವನದ ಹಾದಿಯನ್ನೇ ಬದಲಾಯಿಸಿದವು ಎಂದು ಭಾವನಾತ್ಮಕವಾಗಿ ಸ್ಮರಿಸಿದ್ದಾರೆ.
“ಐಐಟಿ ಖರಗ್‌ಪುರ ಕ್ಯಾಂಪಸ್ ಎಂದರೆ ನನಗೆ ಹಲವು ಸಿಹಿ ನೆನಪುಗಳ ಸಮ್ಮಿಲನ. ಇದೇ ಕ್ಯಾಂಪಸ್‌ನಲ್ಲಿ ನಾನು ನನ್ನ ಹೆಂಡತಿ ಅಂಜಲಿಯನ್ನು ಮೊದಲ ಬಾರಿಗೆ ಭೇಟಿಯಾಗಿದ್ದು. ಅಲ್ಲದೇ, ನಾನು ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಕಲಿತಿದ್ದು, ಕೈಯಲ್ಲಿ ಫ್ಲಾಪಿ ಡಿಸ್ಕ್ ಹಿಡಿದು ಕ್ಯಾಂಪಸ್‌ನಲ್ಲಿ ಓಡಾಡುತ್ತಾ ಮೊದಲ ಬಾರಿಗೆ ಕಂಪ್ಯೂಟರ್ ಬಳಸುವ ಅವಕಾಶ ಪಡೆದಿದ್ದು ಸಹ ಇಲ್ಲೇ” ಎಂದು ಪಿಚೈ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಎಸ್ಬಿಐ ಗ್ರಾಹಕರ ಗಮನಕ್ಕೆ; ಉಚಿತ ಎಟಿಎಂ ಟ್ರಾನ್ಸಾಕ್ಷನ್ ಮಿತಿ ಅರ್ಧದಷ್ಟು ಇಳಿಕೆ; ಅಕ್ಟೋಬರ್ನಿಂದ ಹೊಸ ನಿಯಮ ಜಾರಿ
ಎರಡು ದಶಕಗಳಿಗೂ ಹಿಂದೆ ಸಿಡಿಗಳು ಬರುವ ಮುನ್ನ ಕಂಪ್ಯೂಟರುಗಳಲ್ಲಿ ಡಾಟಾ ಕಾಪಿ ಮಾಡಲು ಫ್ಲಾಪಿ ಡಿಸ್ಕ್ಗಳ ಬಳಕೆ ಇತ್ತು. ತೊಂಬತ್ತರ ದಶಕದಲ್ಲಿ ಅದರ ಅಸ್ತಿತ್ವ ಇತ್ತು.
ತಮ್ಮ ವಿದ್ಯಾರ್ಥಿ ಜೀವನದ ಮೋಜಿನ ದಿನಗಳನ್ನೂ ಪಿಚೈ ಮೆಲಕುಹಾಕಿದರು. ಕ್ಯಾಂಪಸ್‌ನ ‘ಹ್ಯಾರಿಸ್’ ಮೆಸ್‌ನಲ್ಲಿ ಸವಿಯುತ್ತಿದ್ದ ಊಟ, ದೀಪಾವಳಿ ವೇಳೆ ನಡೆಯುತ್ತಿದ್ದ ಪ್ರಸಿದ್ಧ ‘ಇಲ್ಲೂ’ (Illu Festival) ಹಬ್ಬದ ಸಂಭ್ರಮ, B308 ರೂಮ್‌ನಲ್ಲಿ ರಾತ್ರಿಯಿಡೀ ಕುಳಿತು ಮಾಡುತ್ತಿದ್ದ ಅಭ್ಯಾಸ, ಹಾಸ್ಟೆಲ್ ಸ್ನೇಹಿತರೊಂದಿಗಿನ ಒಡನಾಟ ಹಾಗೂ ತಮ್ಮ ಮೇಲೆ ಆಳವಾದ ಪ್ರಭಾವ ಬೀರಿದ ಪ್ರಾಧ್ಯಾಪಕರನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು.
ತಮ್ಮ ಶಿಕ್ಷಣದ ಕುರಿತು ಮಾತನಾಡುತ್ತಾ ಗೂಗಲ್ ಸಿಇಒ ಅವರು, ಐಐಟಿ ಖರಗ್‌ಪುರ ನೀಡಿದ ಶಿಕ್ಷಣವು ನನಗೆ ದೊರೆತ ದೊಡ್ಡ ಕೊಡುಗೆ. ಇದು ಜಗತ್ತನ್ನು ನೋಡುವ ನನ್ನ ದೃಷ್ಟಿಕೋನವನ್ನೇ ರೂಪಿಸಿತು ಮತ್ತು ಗೂಗಲ್‌ನಲ್ಲಿ ತಂತ್ರಜ್ಞಾನದ ಮೂಲಕ ಜನರ ಜೀವನ ಸುಲಭಗೊಳಿಸುವ ದಾರಿಗೆ ನನ್ನನ್ನು ಕರೆದೊಯ್ಯಿತು ಎಂದರು.
ಇದನ್ನೂ ಓದಿ: Philips S7221 5G: ಭಾರತದಲ್ಲಿ ತನ್ನ ಮೊದಲ 5G ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ ಪಿಲಿಪ್ಸ್: ಹೇಗಿದೆ ನೋಡಿ
ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ಪ್ರಯೋಗಾಲಯಗಳಿಂದ ಹೊರಬಂದು ರೈತರು, ಹೆಲ್ತ್‌ಕೇರ್ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳ ಕೈಗೆ ತಲುಪಲಿದೆ. ನವ ಭಾರತದ ಯುವಜನತೆಯ ಆಶಾವಾದ ಮತ್ತು ತಂತ್ರಜ್ಞಾನ ಸಾಮರ್ಥ್ಯವು ಜಾಗತಿಕ ಮಟ್ಟದಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂದು ಸುಂದರ್ ಪಿಚೈ ವಿಶ್ವಾಸ ವ್ಯಕ್ತಪಡಿಸಿದರು.
ಸುಂದರ್ ಪಿಚೈ ಅವರ ವಿಡಿಯೋ ಮೆಸೇಜ್ ಇದು
A message from a global icon. A proud moment for@IITKgp.
As IIT Kharagpur celebrates 75 years of excellence, innovation and nation-building, we were honoured to receive a special message from our distinguished alumnus @sundarpichai, CEO of @Google and Alphabet, marking this… pic.twitter.com/c4Zca3LKgk
— IIT Kharagpur (@IITKgp) September 2, 2026
ಸುಂದರ್ ಪಿಚೈ ಅವರ ವಿಡಿಯೋ ಸಂದೇಶವನ್ನು ಐಐಟಿ ಖರಗ್ಪುರ್ ಹೆಮ್ಮೆಯಿಂದ ಸ್ವಾಗತಿಸಿದೆ. ದೇಶ ಹಾಗೂ ಜಗತ್ತಿಗೆ ಒಳಿತು ಮಾಡಬಲ್ಲ ಐಡಿಯಾಗಳನ್ನು ಕಾಪಿಟ್ಟುಕೊಳ್ಳಲು, ತಲೆಮಾರುಗಳನ್ನು ಪ್ರೇರೇಪಿಸಲು, ಪರಿಹಾರ ಸೃಷ್ಟಿಸಲು ಹೊಸ ಉತ್ಸಾಹದಿಂದ ಹೆಜ್ಜೆ ಇಡುತ್ತೇವೆ ಎಂದು ಭಾರತದ ಮೊದಲ ಐಐಟಿ ಸಂಸ್ಥೆಯು ಹೇಳಿಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ