ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಲ್ಲಿರುವ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ?

Inactive EPF account and refund: ಮೂರು ವರ್ಷಗಳಿಂದ ಪ್ರೀಮಿಯಮ್ ಕೊಡುಗೆ ಇಲ್ಲದ ಇಪಿಎಫ್ ಅಕೌಂಟ್​ಗಳು ಇನಾಪರೇಟಿವ್ ಎಂದು ವರ್ಗೀಕರಣಗೊಳ್ಳುತ್ತವೆ. ಇಂಥ ಅಕೌಂಟ್​ಗಳಲ್ಲಿರುವ ಹಣ ಒಂದು ಸಾವಿರ ರೂಗಿಂತ ಕಡಿಮೆ ಇದ್ದಲ್ಲಿ ಅವನ್ನು ನೇರವಾಗಿ ರೀಫಂಡ್ ಮಾಡಲಾಗುತ್ತದೆ. ಇಪಿಎಫ್ ಅಕೌಂಟ್​ಗೆ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್​ಗೆ ನೇರವಾಗಿ ಹಣ ರೀಫಂಡ್ ಆಗುತ್ತದೆ.

ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಲ್ಲಿರುವ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ?
ಇಪಿಎಫ್​ಒ

Updated on: Feb 24, 2026 | 12:56 PM

ನವದೆಹಲಿ, ಫೆಬ್ರುವರಿ 24: ಇಪಿಎಫ್​ಒದಲ್ಲಿ (EPFO) ನಿಷ್ಕ್ರಿಯವಾಗಿರುವ ಪಿಎಫ್ ಅಕೌಂಟ್​ಗಳ ಸಂಖ್ಯೆ ಬಹಳ ಇದೆ. ಹೊಸ ಪಿಎಫ್ ಖಾತೆಗೆ ವರ್ಗಾವಣೆ ಆಗದ, ಹಾಗೂ ಮೂರು ವರ್ಷಗಳಿಂದ ಪ್ರೀಮಿಯಮ್ ಸಂದಾಯ ಆಗದೇ ಇರುವ ಖಾತೆಗಳು ಇನ್ಯಾಕ್ಟಿವ್ ಎನಿಸುತ್ತವೆ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಮಹತ್ವದ ತೀರ್ಮಾನ ಕೈಗೊಂಡಿದ್ದು, ಒಂದು ಸಾವಿರ ರೂವರೆಗೆ ಬ್ಯಾಲನ್ಸ್ ಇರುವ ನಿಷ್ಕ್ರಿಯ ಇಪಿಎಫ್ ಖಾತೆಯಲ್ಲಿರುವ ಹಣವನ್ನು ನೇರವಾಗಿ ರೀಫಂಡ್ ಮಾಡಲಿದೆ.

ಸರ್ಕಾರದ ಈ ಆಲೋಚನೆ ಉಪಯುಕ್ತವೆನಿಸಬಹುದು. ಒಂದು ಸಾವಿರ ರೂವರೆಗೆ ಬ್ಯಾಲನ್ಸ್ ಇರುವ ಇನಾಪರೇಟಿವ್ ಅಕೌಂಟ್​ಗಳ ಸಂಖ್ಯೆ 6 ಲಕ್ಷಕ್ಕಿಂತಲೂ ಹೆಚ್ಚಿದೆ. ಅವು ನಿರುಪಯುಕ್ತವಾಗಿ ಇರುವುದರ ಬದಲು ರೀಫಂಡ್ ಪಡೆದರೆ ಇಪಿಎಫ್ ಸದಸ್ಯರಿಗೆ ಅಲ್ಪ ಸಹಾಯವಾಗಬಹುದು.

ಇದನ್ನೂ ಓದಿ: ಷೇರುಪೇಟೆ ಕುಸಿತ; ಹೂಡಿಕೆದಾರರಿಗೆ 4 ಲಕ್ಷ ಕೋಟಿ ನಷ್ಟ; ಮಾರುಕಟ್ಟೆ ಕುಸಿಯಲು ಏನು ಕಾರಣ?

ರೀಫಂಡ್ ಪಡೆಯಲು ಏನೂ ಮಾಡಬೇಕಿಲ್ಲ…

ನಿಮ್ಮ ನಿಷ್ಕ್ರಿಯ ಇಪಿಎಫ್ ಅಕೌಂಟ್​ನಲ್ಲಿ ಹಣದ ಬ್ಯಾಲನ್ಸ್ 1,000 ರೂಗಿಂತ ಕಡಿಮೆ ಇದ್ದಲ್ಲಿ ಯೋಚನೆ ಬೇಡ. ತನ್ನಂತಾನೆ ಹಣವು ನಿಮ್ಮ ಬ್ಯಾಂಕ್ ಖಾತೆಗೆ ಬಂದು ಬೀಳುತ್ತದೆ. ನಿಮ್ಮ ಇಪಿಎಫ್ ಅಕೌಂಟ್​ಗೆ ಜೋಡಿತವಾದ ಬ್ಯಾಂಕ್ ಅಕೌಂಟ್​ಗೆ ಆ ಹಣ ಹೋಗುತ್ತದೆ. ಆ ಬ್ಯಾಂಕ್ ಅಕೌಂಟ್​ಗೆ ಆಧಾರ್ ಲಿಂಕ್ ಆಗಿರಬೇಕು.

ಇಪಿಎಫ್ ಅಕೌಂಟ್​ನಲ್ಲಿ ಹಣವು ಒಂದು ಸಾವಿರ ರೂಗಿಂತ ಹೆಚ್ಚಿದ್ದರೆ ಆಗ ಆಟೊಮ್ಯಾಟಿಕ್ ರೀಫಂಡ್ ಸಿಗುವುದಿಲ್ಲ. ಇಂಥ ಸಂದರ್ಭದಲ್ಲಿ ನೀವು ಹಣ ವಿತ್​ಡ್ರಾಗೆ ಅರ್ಜಿ ಸಲ್ಲಿಸಬೇಕಾಗಬಹುದು. ನೀವು ಸಕ್ರಿಯ ಇಪಿಎಫ್ ಅಕೌಂಟ್ ಹೊಂದಿದ್ದರೆ ಆಗ ಹಳೆಯ ನಿಷ್ಕ್ರಿಯ ಅಕೌಂಟ್ ಅನ್ನು ಸಕ್ರಿಯ ಅಕೌಂಟ್​ಗೆ ವಿಲೀನಗೊಳಿಸಬಹುದು.

ಇದನ್ನೂ ಓದಿ: ಐಡಿಯಾ ಯಾರದು ಅನ್ನೋದು ಮುಖ್ಯ ಅಲ್ಲ, ಅದನ್ನು ಜಾರಿಗೆ ತರೋನೇ ಜಾಣ: ಚ್ಯಾಟ್​ಜಿಪಿಟಿ ರೂವಾರಿ ಸ್ಯಾಮ್ ಆಲ್ಟ್​ಮ್ಯಾನ್ ಸಲಹೆ ಕೇಳಿ

ನಿಮ್ಮ ಇಪಿಎಫ್ ಖಾತೆ ನಿಷ್ಕ್ರಿಯವಾಗಿದೆಯಾ, ಪರಿಶೀಲಿಸುವ ಕ್ರಮ

  • ಇಪಿಎಫ್​ಒ ವೆಬ್​ಸೈಟ್​ಗೆ ಹೋಗಿ ‘ಸರ್ವಿಸಸ್’ – ‘ಫಾರ್ ಎಂಪ್ಲಾಯೀಸ್’ ಆಯ್ಕೆ ಮಾಡಿ.
  • ಯುಎಎನ್ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಆಗಿ
  • ‘ವ್ಯೂ ಪಾಸ್​ಬುಕ್’ ನೋಡಿ.

ಇಲ್ಲಿ ಮೂರು ವರ್ಷ ಕಾಲ ಕಂಪನಿ ವತಿಯಿಂದ ಯಾವುದೇ ಪ್ರೀಮಿಯಮ್ ಕೊಡುಗೆ ಬಂದಿಲ್ಲ ಎಂದಾದರೆ ಅದು ಇನಾಪರೇಟಿವ್ ಎನಿಸುತ್ತದೆ.

ಹಾಗೆಯೇ, ಉಮಾಂಗ್ ಆ್ಯಪ್​ನಲ್ಲೂ ನೀವು ಪಾಸ್ಬುಕ್ ವೀಕ್ಷಿಸಿ ಪರಿಶೀಲನೆ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us