Centi-Millionaires: ದಶಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನಕ್ಕೇರಿದ ಭಾರತ, ಚೀನಾವನ್ನೂ ಹಿಂದಿಕ್ಕುವ ನಿರೀಕ್ಷೆ
ಬಡತನ, ಹಣದುಬ್ಬರ, ಹಸಿವಿನ ಸೂಚ್ಯಂಕಗಳಲ್ಲಿ ಕುಸಿತದ ಹೊರತಾಗಿಯೂ ದಶಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಭಾರತ ಮೂರನೇ ಸ್ಥಾನಕ್ಕೇರಿದೆ.
ನವದೆಹಲಿ: ಬಡತನ (poverty), ಹಣದುಬ್ಬರ (inflation), ಹಸಿವಿನ ಸೂಚ್ಯಂಕಗಳಲ್ಲಿ ಕುಸಿತದ ಹೊರತಾಗಿಯೂ ದಶಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಭಾರತ (India) ಮೂರನೇ ಸ್ಥಾನಕ್ಕೇರಿದೆ. ದೇಶದ ದಶಕೋಟ್ಯಧಿಪತಿಗಳ ಬಳಿ ಒಟ್ಟು 830 ಕೋಟಿ ರೂ. ಆಸ್ತಿ ಇದೆ ಎಂದು ವರದಿಯಾಗಿದೆ. ವಿಶ್ವದಾದ್ಯಂತ 25,490 ದಶಕೋಟ್ಯಧಿಪತಿಗಳಿದ್ದಾರೆ. ಈ ಪೈಕಿ ಭಾರತದಲ್ಲಿ 1,132 ಮಂದಿ ಇದ್ದಾರೆ.
ಹೀಗೆಯೇ ಮುಂದುವರಿದರೆ ಮುಂದಿನ ಕೆಲ ವರ್ಷಗಳಲ್ಲಿ ದಶಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಚೀನಾವನ್ನೂ (China) ಭಾರತ ಹಿಂದಿಕ್ಕಲಿದೆ ಎನ್ನಲಾಗಿದೆ. ಯುಕೆ, ರಷ್ಯಾ, ಸ್ವಿಜರ್ಲ್ಯಾಂಡ್ನಂಥ ದೇಶಗಳನ್ನು ಈಗಾಗಲೇ ಭಾರತ ಹಿಂದಿಕ್ಕಿದೆ. ಟೆಕ್, ಹಣಕಾಸು, ಬಹುರಾಷ್ಟ್ರೀಯ ಕಂಪನಿಗಳ ಸಿಇಒಗಳ ವೇಗವಾದ ಆರ್ಥಿಕ ಬೆಳವಣಿಗೆಯಿಂದಾಗಿ ಸಂಪತ್ತುಳ್ಳವರ ಸಂಖ್ಯೆ ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ಹೂಡಿಕೆ ಹೂಡಿಕೆ ವಲಸೆ ಸಲಹಾ ಸಂಸ್ಥೆ ಹೆನ್ಲೆ ಆ್ಯಂಡ್ ಪಾರ್ಟ್ನರ್ಸ್ (Henley & Partners) ವರದಿ ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರು ಈಗ ಶ್ರೀಮಂತರ ನಗರ: ವಿಶ್ವದಲ್ಲೇ ಅತಿಹೆಚ್ಚು ಶ್ರೀಮಂತರಿರುವ ಟಾಪ್ 25 ನಗರಗಳಲ್ಲಿ ಬೆಂಗಳೂರಿಗೆ 16ನೇ ಸ್ಥಾನ
2032ರ ವೇಳೆಗೆ ದಶಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಚೀನಾವನ್ನು ಭಾರತ ಹಿಂದಿಕ್ಕಲಿದೆ. ದಶಕೋಟ್ಯಧಿಪತಿಗಳ ಪ್ರಮಾಣದಲ್ಲಿ ಶೇಕಡಾ 80ರ ಬೆಳವಣಿಗೆ ನಿರೀಕ್ಷಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
‘ದಶಕೋಟ್ಯಧಿಪತಿಗಳ ಪ್ರಮಾಣದಲ್ಲಿ ಶೇಕಡಾ 57ರ ಬೆಳವಣಿಗೆಯೊಂದಿಗೆ ಮುಂದಿನ ದಶಕದಲ್ಲಿ ಯುರೋಪ್ ಮತ್ತು ಅಮೆರಿಕವನ್ನು ಏಷ್ಯಾ ಹಿಂದಿಕ್ಕಲಿದೆ. ಏಷ್ಯಾದ ಪೈಕಿ ಚೀನಾ ಮತ್ತು ಭಾರತದಲ್ಲೇ ಕೇಂದ್ರೀಕೃತವಾಗಿರುವ ಈ ದಶಕೋಟ್ಯಧಿಪತಿಗಳು ಯುರೋಪ್ ಮತ್ತು ಅಮೆರಿಕದ ಶ್ರೀಮಂತರನ್ನು ಹಿಂದಿಕ್ಕಲು ಸಜ್ಜಾಗಿದ್ದಾರೆ ಎಂದು ಹಣಕಾಸು ಪತ್ರಕರ್ತ ಮತ್ತು ವರದಿಯ ಲೇಖಕ ಮಿಶಾ ಗ್ಲೆನ್ನಿ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ವಿಶ್ವದ ಅತಿಹೆಚ್ಚಿನ ದಶಕೋಟ್ಯಧಿಪತಿಗಳಿರುವ ದೇಶಗಳ ಸಾಲಿನಲ್ಲಿ ಅಮೆರಿಕದ ಮೊದಲ ಸ್ಥಾನದಲ್ಲಿದೆ. ಆ ದೇಶದಲ್ಲಿ 25,490 ದಶಕೋಟ್ಯಧಿಪತಿಗಳಿದ್ದಾರೆ. 2,021 ದಶಕೋಟ್ಯಧಿಪತಿಗಳನ್ನು ಹೊಂದಿರುವ ಚೀನಾ ಎರಡನೇ ಸ್ಥಾನದಲ್ಲಿದ್ದರೆ, 1,132 ದಶಕೋಟ್ಯಧಿಪತಿಗಳೊಂದಿಗೆ ಭಾರತ ಮೂರನೇ ಸ್ಥಾನದಲ್ಲಿದೆ.
ಯುಕೆ ನಾಲ್ಕನೇ ಸ್ಥಾನದಲ್ಲಿದೆ (968 ದಶಕೋಟ್ಯಧಿಪತಿಗಳು). ಜರ್ಮನಿ (966) ಐದನೇ ಸ್ಥಾನದಲ್ಲಿದೆ. ಸ್ವಿಜರ್ಲ್ಯಾಂಡ್ (808), ಜಪಾನ್ (765), ಕೆನಡಾ (541), ಆಸ್ಟ್ರೇಲಿಯಾ (463) ಹಾಗೂ ರಷ್ಯಾ (435) ನಂತರದ ಸ್ಥಾನಗಳಲ್ಲಿವೆ.
ಭಾರತದ ಐಟಿ ಮತ್ತು ಸ್ಟಾರ್ಟ್ಅಪ್ ಹಬ್ ಎಂಬ ಖ್ಯಾತಿ ಪಡೆದಿರುವ ಬೆಂಗಳೂರು 2022ರಲ್ಲಿ ವೇಗವಾಗಿ ಬೆಳೆಯುತ್ತಿರುವ ಶ್ರೀಮಂತ ಜನಸಂಖ್ಯೆಯನ್ನು ಹೊಂದಿರುವ ವಿಶ್ವದ ಅಗ್ರ 25 ನಗರಗಳಲ್ಲಿ 16ನೇ ಸ್ಥಾನ ಪಡೆದಿದೆ ಎಂದು ಕಳೆದ ತಿಂಗಳು ಪ್ರಕಟಿಸಿದ್ದ ವರದಿಯಲ್ಲಿ ಹೆನ್ಲೆ ಆ್ಯಂಡ್ ಪಾರ್ಟ್ನರ್ಸ್ ತಿಳಿಸಿತ್ತು. ಬೆಂಗಳೂರಿನಲ್ಲಿ 12,600ಕ್ಕಿಂತ ಹೆಚ್ಚಿನ ನಿವ್ವಳ ಆಸ್ತಿ ಮೌಲ್ಯದ ವ್ಯಕ್ತಿಗಳು ಇದ್ದು, 10 ಲಕ್ಷ ಅಮೆರಿಕನ್ ಡಾಲರ್ಗಿಂತಲೂ ಹೆಚ್ಚಿನ ಸಂಪತ್ತು ಹೊಂದಿದ್ದಾರೆ ಎಂದು ವರದಿ ಹೇಳಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ