
ನವದೆಹಲಿ, ಮೇ 6: ಭಾರತ ಸದ್ಯದಲ್ಲೇ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸಲಿದೆ. ಐಎಂಎಂಫ್ ವರದಿ ಪ್ರಕಾರ ಈ ಕನಸು ಈ ವರ್ಷದಲ್ಲೇ ನನಸಾಗಲಿದೆ. ಈಗಾಗಲೇ ಭಾರತದ ಆರ್ಥಿಕತೆಯ ಗಾತ್ರ (India economy size) 4 ಟ್ರಿಲಿಯನ್ ಗಡಿ ದಾಟಿದೆ. 2025ರ ವರ್ಷ ಮುಗಿಯುವುದರೊಳಗೆ ಜಿಡಿಪಿ ಗಾತ್ರದಲ್ಲಿ ಜಪಾನ್ ಅನ್ನು ಭಾರತ ಹಿಂದಿಕ್ಕಲಿದೆಯಂತೆ. ಐಎಂಎಫ್ ಅಂದಾಜು ಮಾಡಿರುವ ಪ್ರಕಾರ 2025ರಲ್ಲಿ ಭಾರತದ ಆರ್ಥಿಕತೆ 4.187 ಟ್ರಿಲಿಯನ್ ಡಾಲರ್ನಷ್ಟಾಗಬಹುದು. ಅದೇ ವೇಳೆ, ಜಪಾನ್ನ ಜಿಡಿಪಿ 4.186 ಟ್ರಿಲಿಯನ್ ಡಾಲರ್ ಆಗಬಹುದು. ಇದರೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಎನಿಸಿದ್ದ ಜಪಾನ್ ಅನ್ನು ಭಾರತ 2025ರಲ್ಲಿ ಹಿಂದಿಕ್ಕಬಹುದು.
ಇದನ್ನೂ ಓದಿ: ಭಾರತದ ಜೊತೆ ಹೀಗೆ ಕಿತ್ತಾಡ್ತಿದ್ರೆ ನಾಶವಾಗಿಬಿಡ್ತೀರಿ: ಪಾಕಿಸ್ತಾನಕ್ಕೆ ಮೂಡೀಸ್ ಎಚ್ಚರಿಕೆ
ನಿರೀಕ್ಷೆಯಂತೆ ಅಮೆರಿಕ ಮತ್ತು ಚೀನಾ ದೇಶಗಳು ಅಗ್ರಸ್ಥಾನವನ್ನು ಸಾಕಷ್ಟು ವರ್ಷ ಕಾಲ ಕಾಯ್ದುಕೊಳ್ಳಲಿವೆ. ಅಮೆರಿಕದ ಜಿಡಿಪಿ ಈ ವರ್ಷ 30 ಟ್ರಿಲಿಯನ್ ಡಾಲರ್ ಗಡಿ ದಾಟಲಿದೆ. ಚೀನಾದ ಜಿಡಿಪಿ 20 ಟ್ರಿಲಿಯನ್ ಡಾಲರ್ ಸಮೀಪಕ್ಕೆ ಹೋಗುತ್ತದೆ.
ಜಪಾನ್ ಅನ್ನು ಹಿಂದಿಕ್ಕುತ್ತಿರುವ ಭಾರತಕ್ಕೆ ಈಗ ಜರ್ಮನಿಯು ಕೈಗೆಟುಕು ಅಂತರದಲ್ಲೇ ಇದೆ. 2027ಕ್ಕೆ ಜರ್ಮನಿಯ ಜಿಡಿಪಿಗೆ ಭಾರತ ಸರಿಸಮಾನವಾಗಿರುತ್ತದೆ. 2028ರಲ್ಲಿ ಭಾರತ 3ನೇ ಅತಿದೊಡ್ಡ ಆರ್ಥಿಕತೆ ಎನಿಸಲಿದೆ ಎಂದು ಹೇಳಲಾಗುತ್ತಿದೆ. 2025ರಲ್ಲಿ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿರುವ ಭಾರತವು 5 ಟ್ರಿಲಿಯನ್ ಡಾಲರ್ ಗಾತ್ರ ಮುಟ್ಟಲು ಇನ್ನೆರಡು ವರ್ಷ ಬೇಕಾಗಬಹುದು. 2028ರಲ್ಲಿ ಭಾರತದ ಜಿಡಿಪಿ 5.584 ಟ್ರಿಲಿಯನ್ ಡಾಲರ್ ಆಗಬಹುದು ಎಂಬುದು ಐಎಂಎಫ್ ಅಂದಾಜು.
ಭಾರತ ಬಹಳ ವೇಗದಲ್ಲಿ ಆರ್ಥಿಕ ಬೆಳವಣಿಗೆ ಹೊಂದುತ್ತಿದೆ. ಅದೇ ವೇಳೆ, ಜಪಾನ್ ಜಿಡಿಪಿ ದರ ಶೇ. 1ಕ್ಕಿಂತಲೂ ಕಡಿಮೆ ಇದೆ. ಜರ್ಮನಿ ಕೂಡ ಶೇ. 2ರ ಆಸುಪಾಸಿನ ದರದಲ್ಲಿ ಆರ್ಥಿಕ ಬೆಳವಣಿಗೆ ಕಾಣುತ್ತಿದೆ. ಹೀಗಾಗಿ, ಭಾರತವು ಈ ದೇಶಗಳನ್ನು ಸುಲಭವಾಗಿ ಹಿಂದಿಕ್ಕುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಮೇ 9ರಂದು ಕಾದಿದೆಯಾ ಆಪತ್ತು? ಐಎಂಎಫ್ಗೆ ಭಾರತದ ಪ್ರತಿನಿಧಿಯಾಗಿ ಪಿ ಅಯ್ಯರ್ ಆಯ್ಕೆ
ಮೇಲೆ ಹೇಳಿರುವ ಜಿಡಿಪಿ ಮೊತ್ತವು ನಾಮಿನಲ್ನದ್ದಾಗಿದೆ. ನಾಮಿನಲ್ ಜಿಡಿಪಿ ಎಂದರೆ ಒಂದು ದೇಶದಲ್ಲಿ ಸೃಷ್ಟಿಯಾದ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವಾಗಿರುತ್ತದೆ. ಈಗಿನ ದರದಲ್ಲಿ ಇವುಗಳ ಮೌಲ್ಯವನ್ನು ಗಣಿಸಲಾಗುತ್ತದೆ.
ಹಾಗೆಯೇ, ರಿಯಲ್ ಜಿಡಿಪಿಯ ಲೆಕ್ಕಾಚಾರವೂ ಬಳಕೆಯಲ್ಲಿದೆ. ರಿಯಲ್ ಜಿಡಿಪಿಯಲ್ಲೂ ಎಲ್ಲಾ ಸರಕು ಮತ್ತು ಸೇವೆಗಳ ಮೌಲ್ಯವನ್ನು ಗಣಿಸಲಾಗುತ್ತದಾದರೂ ಬೆಲೆ ವ್ಯತ್ಯಯವನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಹೀಗಾಗಿ, ಒಂದು ಆರ್ಥಿಕತೆಯ ಬದಲಾವಣೆಯನ್ನು ರಿಯಲ್ ಜಿಡಿಪಿಯಲ್ಲಿ ಅಳೆಯುವುದು ಹೆಚ್ಚು ಸಮಂಜಸ ಎಂದು ಹೇಳಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ