ದಶಕಗಳಲ್ಲಿ ಆದ ಬದಲಾವಣೆ… ಹಿಂದುಳಿದಿದ್ದ ಕರ್ನಾಟಕ ಈಗ ಹೇಗಿದೆ? ಸಿರಿತನವಿದ್ದ ಬಂಗಾಳ ಈಗ ಏನಾಗಿದೆ?; ಇದು ಭಾರತದ ರಾಜ್ಯಗಳ ಕಥೆ

|

Updated on: Sep 18, 2024 | 2:38 PM

EAC-PM working paper on Indian states growth story: ಸಿಕ್ಕ ಅವಕಾಶಗಳನ್ನು ಯಾರು ಸದುಪಯೋಗಪಡಿಸಿಕೊಳ್ಳುತ್ತಾರೋ ಅವರು ಜೀವನದಲ್ಲಿ ಮುಂದುವರಿಯುತ್ತಾರೆ ಎಂಬುದು ಜಾಣರ ನುಡಿ. ಅಂತೆಯೇ, ಉದಾರೀಕರಣದ ನೀತಿಗಳನ್ನು ಚೆನ್ನಾಗಿ ಬಳಸಿಕೊಂಡ ದಕ್ಷಿಣ ರಾಜ್ಯಗಳು ಹುಲುಸಾಗಿ ಬೆಳೆದವು. ಸಾಂಪ್ರದಾಯಿಕವಾಗಿ ಮುಂದುವರಿದ ಇತರ ರಾಜ್ಯಗಳು ಸರಿಯಾದ ದಾರಿ ಸವೆಸದೆ ಹಿಂದುಳಿದವು. ಇದು ಪ್ರಧಾನಿಗಳ ಎಕನಾಮಿಕ್ ಅಡ್ವೈಸರಿ ಕೌನ್ಸಿಲ್​ನ ವರದಿಯೊಂದರಲ್ಲಿ ಹೇಳಲಾಗಿದೆ.

ದಶಕಗಳಲ್ಲಿ ಆದ ಬದಲಾವಣೆ... ಹಿಂದುಳಿದಿದ್ದ ಕರ್ನಾಟಕ ಈಗ ಹೇಗಿದೆ? ಸಿರಿತನವಿದ್ದ ಬಂಗಾಳ ಈಗ ಏನಾಗಿದೆ?; ಇದು ಭಾರತದ ರಾಜ್ಯಗಳ ಕಥೆ
ಭಾರತ
Follow us on

ನವದೆಹಲಿ, ಸೆಪ್ಟೆಂಬರ್ 18: ಭಾರತದಲ್ಲಿ ತೊಂಬತ್ತರ ದಶಕದಿಂದ ಉದಾರೀಕರಣ ಮತ್ತು ಜಾಗತೀಕರಣದ ಪರಿಣಾಮವಾಗಿ ಸಾಕಷ್ಟು ಬೆಳವಣಿಗೆ ಆಗಿದೆಯಾದರೂ, ಪ್ರಾದೇಶಿಕ ಸಮತೋಲನದಲ್ಲಿ ಬದಲಾವಣೆಗಳಾಗಿವೆ. ಕೆಲ ರಾಜ್ಯಗಳು ಆರ್ಥಿಕ ಬೆಳವಣಿಗೆಯ ಮಾರ್ಗಗಳನ್ನು ಚೆನ್ನಾಗಿ ಉಪಯೋಗಿಸಿಕೊಂಡಿವೆ. ಇನ್ನೂ ಕೆಲ ರಾಜ್ಯಗಳು ಆಧುನಿಕ ವಿಧಾನಗಳನ್ನು ಕಡೆಗಣಿಸಿ ಹಿಂದುಳಿದಿವೆ. ಪ್ರಧಾನಿಗಳ ಆರ್ಥಿಕ ಸಲಹಾ ಮಂಡಳಿ (ಇಎಸಿ ಪಿಎಂ) ನಿನ್ನೆ (ಸೆ. 17) ಬಿಡುಗಡೆ ಮಾಡಿದ ವರದಿಯೊಂದರಲ್ಲಿ ಭಾರತೀಯ ರಾಜ್ಯಗಳ ನಡುವೆ ಇರುವ ಆರ್ಥಿಕ ಏರುಪೇರುಗಳನ್ನು ಎತ್ತಿ ತೋರಿಸಿದೆ. ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಕೊಡುಗೆ ಎಷ್ಟು ಗಮನಾರ್ಹವಾಗಿದೆ ಎನ್ನುವುದನ್ನು ಈ ವರದಿ ನಿಚ್ಚಳವಾಗಿ ತೋರಿಸಿದೆ.

ಸರಾಸರಿಗಿಂತ ಕಡಿಮೆ ಇದ್ದ ದಕ್ಷಿಣ ರಾಜ್ಯಗಳು ಹೈಜಂಪ್ ಮಾಡಿರುವುದು ಹೇಗೆ?

2024ರ ಮಾರ್ಚ್​ನಲ್ಲಿ ದಕ್ಷಿಣ ಭಾರತದ ಐದು ರಾಜ್ಯಗಳು ಭಾರತದ ಜಿಡಿಪಿಗೆ ಶೇ. 30ರಷ್ಟು ಕೊಡುಗೆ ನೀಡುತ್ತಿವೆ. ನಂಬಲು ಕಷ್ಟವಾಗಬಹುದು, 1991ರಲ್ಲಿ ದಕ್ಷಿಣ ಭಾರತದ ಐದು ಪ್ರಮುಖ ರಾಜ್ಯಗಳ ತಲಾದಾಯವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇತ್ತು. ಇದರಲ್ಲಿ ಕರ್ನಾಟಕವೂ ಒಳಗೊಂಡಿದೆ. ಈಗ ಮೂರು ರಾಜ್ಯಗಳು ತಲಾದಾಯದಲ್ಲಿ ಟಾಪ್ 5 ಪಟ್ಟಿಯಲ್ಲಿವೆ.

1991ರಲ್ಲಿ ಉದಾರೀಕರಣ ನೀತಿ ಜಾರಿಗೆ ಬಂದ ಬಳಿಕ ಐಟಿ ಕ್ಷೇತ್ರ ಬೆಂಗಳೂರಿನಲ್ಲಿ ಬೆಳವಣಿಗೆ ಕಾಣತೊಡಗಿತು. ಜೊತೆಗೆ ಬಿಇಎಲ್, ಬಿಎಚ್​ಇಎಲ್, ಎಚ್​ಎಎಲ್, ಎಚ್​ಎಂಟಿ, ಎನ್​ಜಿಇಎಫ್ ಇತ್ಯಾದಿ ದೊಡ್ಡ ದೊಡ್ಡ ಉದ್ದಿಮೆಗಳು ಬೆಂಗಳೂರನ್ನು ಬೆಳೆಸಿದವು.

ಇದನ್ನೂ ಓದಿ: ಇಪಿಎಫ್ ಬದಲಾವಣೆ ಗಮನಿಸಿ; ಪಿಎಫ್ ವಿತ್​ಡ್ರಾಯಲ್ ಮಿತಿ ಹೆಚ್ಚಳ; ಒಮ್ಮೆಗೆ 1 ಲಕ್ಷ ರೂವರೆಗೆ ಹಣ ಹಿಂಪಡೆಯಲು ಅವಕಾಶ

ತಮಿಳುನಾಡಿನಲ್ಲಿ ಸಾಕಷ್ಟು ಕೈಗಾರಿಕೆಗಳು ಬೆಳೆದವು. ಹೈದರಾಬಾದ್​ನಲ್ಲೂ ಉದ್ಯಮ ವಲಯ ಬೆಳೆಯಿತು. ಇದರ ಪರಿಣಾಮವಾಗಿ ಕರ್ನಾಟಕ, ತಮಿಳುನಾಡು, ತೆಲಂಗಾಣ/ಆಂದ್ರ ರಾಜ್ಯಗಳ ಜಿಡಿಪಿ ಸಖತ್ತಾಗಿ ಹಿಗ್ಗಿತು.

ಮಹಾರಾಷ್ಟ್ರ ಅಗ್ರಜ

ವಾಣಿಜ್ಯ ನಗರಿ ಮುಂಬೈ ಇರುವ ಕಾರಣಕ್ಕೆ ಮಹಾರಾಷ್ಟ್ರ ರಾಜ್ಯ ಮೊದಲಿಂದಲೂ ಜಿಡಿಪಿಗೆ ಅತಿಹೆಚ್ಚು ಕೊಡುಗೆ ಕೊಡುತ್ತಾ ಬಂದಿದೆ. ಶೇ. 15ರಷ್ಟಿದ್ದ ಅದರ ಕೊಡುಗೆ ಈಗ ಶೇ. 13.3ಕ್ಕೆ ಇಳಿದಿದೆಯಾದರೂ ಈಗಲೂ ಕೂಡ ನಂಬರ್ ಒನ್ ಎನಿಸಿದೆ. ಆದರೆ, ಜಿಡಿಪಿ ಎಷ್ಟೇ ಬೆಳೆದರೂ ಆ ರಾಜ್ಯದ ತಲಾದಾಯವು ಟಾಪ್-5ನಲ್ಲಿ ಇಲ್ಲ.

ಹಿಂದುಳಿದ ಪಶ್ಚಿಮ ಬಂಗಾಳ

ಇಎಸಿ ವರದಿಯಲ್ಲಿ ಎದ್ದು ಕಾಣುವುದು ಪಶ್ಚಿಮ ಬಂಗಾಳ ರಾಜ್ಯ. ಐದಾರು ದಶಕಗಳ ಹಿಂದಿನವರೆಗೂ ಬಂಗಾಳ ರಾಜ್ಯ ಮತ್ತು ಅದರ ರಾಜಧಾನಿ ಕಲ್ಕತ್ತಾ ಬಹಳ ಮೆಚ್ಚುಗೆ ಪಡೆದಿದ್ದ ಪ್ರದೇಶಗಳಾಗಿದ್ದವು. 1960-61ರಲ್ಲಿ ದೇಶದ ಜಿಡಿಪಿಗೆ ಪಶ್ಚಿಮ ಬಂಗಾಳದ ಕೊಡುಗೆ ಶೇ. 10.5 ಇತ್ತು. ಈಗ ಅದು ಶೇ. 5.6ಕ್ಕೆ ಇಳಿದಿದೆ. ಅರ್ಧದಷ್ಟು ಇಳಿದಿದೆ. ಅದರ ತಲಾದಾಯ ಶೇ. 127.5 ಇದ್ದದ್ದು ಶೇ. 83.7ಕ್ಕೆ ಕುಸಿದಿದೆ. ರಾಜಸ್ಥಾನ, ಒಡಿಶಾ ಮೊದಲಾದ ರಾಜ್ಯಗಳಿಗಿಂತ ಹಿಂದುಳಿದಿದೆ. ಬಂಗಾಳದ ಈ ಕುಸಿತಕ್ಕೆ ಸ್ಪಷ್ಟ ಕಾರಣಗಳಿಲ್ಲ. ರಾಜಕೀಯ ವಾತಾವರಣದ ಏರುಪೇರು ಇದಕ್ಕೆ ಕಾರಣವಿದ್ದಿರಬಹುದು.

ಇದನ್ನೂ ಓದಿ: ಹೆಣ್ಮಕ್ಕಳ ನೆಚ್ಚಿನ ಟಪ್ಪರ್​ವೇರ್ ಬ್ರ್ಯಾಂಡ್ ಇತಿಹಾಸಪುಟ ಸೇರುತ್ತಾ? ದಿವಾಳಿ ತಡೆಗೆ ನೆರವು ಕೋರಿದ ಅಮೆರಿಕನ್ ಸಂಸ್ಥೆ

ಅಕ್ಕಪಕ್ಕದ ಪಂಜಾಬ್, ಹರ್ಯಾಣದ ವಿಭಿನ್ನ ಕಥೆ

ಪಂಜಾಬ್ ಒಂದು ಕಾಲಘಟ್ಟದಲ್ಲಿ ಹಸಿರು ಕ್ರಾಂತಿಯಿಂದ ದೊಡ್ಡ ಪ್ರಯೋಜನ ಪಡೆದು ಶ್ರೀಮಂತ ರಾಜ್ಯಗಳ ಸಾಲಿಗೆ ಸೇರಿತ್ತು. 1971ರಲ್ಲಿ ಅದರ ತಲಾದಾಯ ಶೇ. 169ರಲ್ಲಿತ್ತು. ಈಗ ಅದು ಶೇ. 106ಕ್ಕೆ ಇಳಿದಿದೆ.

ಪಕ್ಕದ ಹರ್ಯಾಣ ರಾಜ್ಯ ಇದಕ್ಕೆ ತದ್ವಿರುದ್ಧ ಹಾದಿ ಸವೆಸಿದೆ. ಪಂಜಾಬ್​ಗಿಂತ ಬಹಳ ಹಿಂದಿದ್ದ ಅದು 2000ದ ಬಳಿಕ ಗಣನೀಯವಾಗಿ ಬೆಳವಣಿಗೆ ಕಂಡಿದೆ. ಈಗ ಅದರ ತಲಾದಾಯ ಶೇ. 176.8ಕ್ಕೆ ಏರಿರುವುದು ಗಮನಾರ್ಹ ಸಂಗತಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ