Oil Imports: ರಷ್ಯಾದಿಂದ ಭಾರತಕ್ಕೆ ಕಚ್ಛಾ ತೈಲ ಪೂರೈಕೆ ಇನ್ನಷ್ಟು ಹೆಚ್ಚಳ; ಪೆಟ್ರೋಲಿಯಂ ಕಂಪನಿಗಳಿಗೆ ಸುಗ್ಗಿಯೋ ಸುಗ್ಗಿ
India Continues To Get Russian Cheap Crude Oil: ಉಕ್ರೇನ್ ಯುದ್ಧಕ್ಕೆ ಮುನ್ನ ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿದ್ದ ಕಚ್ಛಾ ತೈಲ ಶೇ. 2ಕ್ಕಿಂತ ಹೆಚ್ಚಿರಲಿಲ್ಲ. ಈಗ ಶೇ. 35ಕ್ಕಿಂತಲೂ ಹೆಚ್ಚು ತೈಲವನ್ನು ಭಾರತ ರಷ್ಯಾದಿಂದ ಪಡೆಯುತ್ತಿದೆ.
ನವದೆಹಲಿ: ರಷ್ಯಾದಿಂದ ಕಡಿಮೆ ಬೆಲೆಗೆ ಸಿಗುತ್ತಿರುವ ಕಚ್ಛಾ ತೈಲವನ್ನು ಭಾರತ ಯಥೇಚ್ಛವಾಗಿ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದೆ. ದಿನೇ ದಿನೇ ರಷ್ಯಾದ ಕಚ್ಛಾ ತೈಲ ಆಮದನ್ನು (Crude Oil Imports) ಭಾರತ ಹೆಚ್ಚಿಸುತ್ತಿದೆ. ಫೆಬ್ರುವರಿ ತಿಂಗಳಲ್ಲಿ ಭಾರತ ಒಂದು ದಿನಕ್ಕೆ 16 ಲಕ್ಷ ಬ್ಯಾರಲ್ಗಳಷ್ಟು ಕ್ರೂಡ್ ಆಯಿಲ್ ಅನ್ನು ಆಮದು ಮಾಡಿಕೊಂಡಿದೆ. ಇದು ಹೊಸ ದಾಖಲೆಯೇ ಆಗಿದೆ. ಒಂದೆಡೆ ರಷ್ಯಾ ಮತ್ತು ಉ್ರಕೇಜ್ ಯುದ್ಧದಿಂದ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳ ಆರ್ಥಿಕತೆಗೆ ಹಿನ್ನಡೆ ತಂದಿದೆ. ಇನ್ನೊಂದೆಡೆ ಈ ಬಿಕ್ಕಟ್ಟು ಭಾರತದಂತಹ ಕೆಲ ದೇಶಗಳಿಗೆ ವರದಾನದಂತೆಯೂ ಆಗಿದೆ.
ಉಕ್ರೇನ್ ಯುದ್ಧಕ್ಕೆ ಮುನ್ನ ರಷ್ಯಾದಿಂದ ಭಾರತ ಆಮದು ಮಾಡಿಕೊಳ್ಳುತ್ತಿದ್ದ ಕಚ್ಛಾ ತೈಲ ಶೇ. 2ಕ್ಕಿಂತ ಹೆಚ್ಚಿರಲಿಲ್ಲ. ಈಗ ಶೇ. 35ಕ್ಕಿಂತಲೂ ಹೆಚ್ಚು ತೈಲವನ್ನು ಭಾರತ ರಷ್ಯಾದಿಂದ ಪಡೆಯುತ್ತಿದೆ. ಸತತ ಐದು ತಿಂಗಳಿಂದಲೂ ರಷ್ಯಾದಿಂದ ಭಾರತ ಮೂರನೇ ಒಂದು ಭಾಗದಷ್ಟು ಆಮದು ಮಾಡಿಕೊಳ್ಳುತ್ತಾ ಬರುತ್ತಿದೆ. ಫೆಬ್ರುವರಿ ತಿಂಗಳಲ್ಲಿ ಇದು ಇನ್ನೂ ಹೆಚ್ಚಾಗಿ ಹೋಗಿದೆ.
ಉಕ್ರೇನ್ ಯುದ್ಧಕ್ಕೆ ಮೊದಲು ಇರಾಕ್, ಸೌದಿ ಅರೇಬಿಯಾದಿಂದ ಅತಿಹೆಚ್ಚು ಕಚ್ಛಾ ತೈಲ ಪಡೆಯುತ್ತಿತ್ತು. ಭಾರತದ ಶೇ. 60ಕ್ಕಿಂತಲೂ ಹೆಚ್ಚು ಕಚ್ಛಾ ತೈಲ ಆಮದು ಅರಬ್ ದೇಶಗಳಿಂದ ಆಗುತ್ತಿತ್ತು. ಅಮೆರಿಕ, ಪಶ್ಚಿಮ ಆಫ್ರಿಕನ್ ದೇಶಗಳಿಂದಲೂ ಭಾರತಕ್ಕೆ ಬಹಳಷ್ಟು ತೈಲ ಪೂರೈಕೆ ಆಗುತ್ತಿತ್ತು.
ಇದನ್ನೂ ಓದಿ: China Loan: ಚೀನೀ ಬ್ಯಾಂಕ್ನಿಂದ ಪಾಕಿಸ್ತಾನಕ್ಕೆ ಕೊನೆಗೂ ಸಿಕ್ತು ಸಾಲ; ಆಪತ್ಕಾಲಕ್ಕೆ ಬಂತು ನೆರವು
ಈಗ ಸಮೀಕರಣ ಬದಲಾಗಿದೆ. ಭಾರತಕ್ಕೆ ಅತಿಹೆಚ್ಚು ತೈಲ ಪೂರೈಕೆ ಮಾಡುವ ದೇಶಗಳಲ್ಲಿ ರಷ್ಯಾ ನಂಬರ್ ಒನ್ ಸ್ಥಾನಕ್ಕೇರಿದೆ. ಅಷ್ಟೇ ಅಲ್ಲ, ಇರಾಕ್ ಮತ್ತು ಸೌದಿ ಅರೇಬಿಯಾ ಎರಡೂ ದೇಶಗಳು ಭಾರತಕ್ಕೆ ಪೂರೈಸುವ ಒಟ್ಟು ಕಚ್ಛಾ ತೈಲಕ್ಕಿಂತ ಹೆಚ್ಚು ಪ್ರಮಾಣವನ್ನು ರಷ್ಯಾ ಒದಗಿಸುತ್ತಿದೆ.
ರಷ್ಯಾಗೆ ಅನಿವಾರ್ಯ
ಉಕ್ರೇನ್ ಯುದ್ಧದ ಕಾರಣಕ್ಕೆ ಐರೋಪ್ಯ ದೇಶಗಳು ರಷ್ಯಾವನ್ನು ಬಹಿಷ್ಕರಿಸಿವೆ. ರಷ್ಯಾವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಸಲುವಾಗಿ ತೈಲ ಆಮದು ನಿಲ್ಲಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿವೆ. ಬೇರೆ ದೇಶಗಳು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳದಂತೆ ನೇರವಾಗಿ ಮತ್ತು ಪರೋಕ್ಷವಾಗಿ ಅಮೆರಿಕ, ಯೂರೋಪ್ ಮತ್ತಿತರ ಗುಂಪುಗಳು ಬೆದರಿಕೆ ಹಾಕಿವೆ. ಹೀಗಾಗಿ, ರಷ್ಯಾದಿಂದ ತೈಲ ಕೊಳ್ಳಲು ಹಲವು ದೇಶಗಳು ಹಿಂದೇಟು ಹಾಕಿವೆ. ರಷ್ಯಾ ಕಡಿಮೆ ಬೆಲೆಗೆ ಕಚ್ಛಾ ತೈಲ ಪೂರೈಸುವುದು ಅನಿವಾರ್ಯ. ಭಾರತ ಈ ಪರಿಸ್ಥಿತಿಯ ಲಾಭ ಪಡೆದು ರಷ್ಯಾದಿಂದ ಯಥೇಚ್ಛವಾಗಿ ತೈಲ ಆಮದು ಮಾಡಿಕೊಳ್ಳುತ್ತಿದೆ. ಅಚ್ಚರಿ ಎಂಬಂತೆ ಅಮೆರಿಕ ಕೂಡ ಇದಕ್ಕೆ ಅನುಮತಿಸಿದೆ.
ಇದನ್ನೂ ಓದಿ: Forex Decrease- ಭಾರತದ ಫಾರೆಕ್ಸ್ ಹಣ ಮತ್ತೆ ಕುಸಿತ; ಈಗೆಷ್ಟಿದೆ ವಿದೇಶಿ ವಿನಿಮಯ ಮೀಸಲು ನಿಧಿ?
ಪೆಟ್ರೋಲಿಯಂ ಕಂಪನಿಗಳಿಗೆ ಹಿಗ್ಗು
ಭಾರತದ ತೈಲ ಸಂಸ್ಕರಣ ಕಂಪನಿಗಳಿಗೆ ಈಗ ದೊಡ್ಡ ಸುಗ್ಗಿ. ರಷ್ಯಾದಿಂದ ಕಡಿಮೆ ಬೆಲೆಗೆ ಸಿಗುತ್ತಿರುವ ಕಚ್ಛಾ ತೈಲವನ್ನು ಸಂಸ್ಕರಿಸಿ ಇವು ಪೆಟ್ರೋಲ್, ಡೀಸೆಲ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸುತ್ತಿವೆ. ಹೆಚ್ಚಿನ ಭಾಗವನ್ನು ಅಮೆರಿಕ ಮತ್ತಿತರ ಕೆಲ ದೇಶಗಳಿಗೆ ಮಾರಾಟ ಮಾಡಲಾಗುತ್ತದೆ. ಈ ಪೆಟ್ರೋಲಿಯಂ ಕಂಪನಿಗಳಿಗೆ ಒಳ್ಳೆಯ ಲಾಭದ ಮಾರ್ಜಿನ್ ಕೂಡ ಇದೆ. ರಷ್ಯಾಗೆ ಅಮೆರಿಕ ಮೈತ್ರಿಪಡೆಗಳು ಆರ್ಥಿಕ ದಿಗ್ಬಂಧನ ಹಾಕಿದ್ದರೂ ಭಾರತದ ಮೂಲಕ ಪರೋಕ್ಷವಾಗಿ ರಷ್ಯಾ ತೈಲವನ್ನು ಅಮೆರಿಕ ಸರಬರಾಜು ಮಾಡಿಸಿಕೊಳ್ಳುತ್ತಿರುವುದು ಕುತೂಹಲದ ಸಂಗತಿಯೇ.
ಅಮೆರಿಕ, ಚೀನಾ ನಂತರ ಭಾರತವೇ ವಿಶ್ವದಲ್ಲಿ ಅತಿ ಹೆಚ್ಚು ಕಚ್ಛಾ ತೈಲ ಆಮದು ಮಾಡಿಕೊಳ್ಳುವುದು. ಭಾರತಕ್ಕೆ ಅಗತ್ಯ ಇರುವ ಕಚ್ಛಾ ತೈಲದಲ್ಲಿ ಶೇ. 84ಕ್ಕಿಂತಲೂ ಹೆಚ್ಚು ಪ್ರಮಾಣವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈಗ್ಗೆ ಐದಾರು ತಿಂಗಳಿಂದ ಪೆಟ್ರೋಲ್ಗೆ ಅರಬ್ ದೇಶಗಳ ಮೇಲಿನ ಅವಲಂಬನೆಯನ್ನು ಭಾರತ ಬಹಳ ತಗ್ಗಿಸಿದೆ.