
ನವದೆಹಲಿ, ಜೂನ್ 24: ಭಾರತ ಮತ್ತು ಅಮೆರಿಕ ನಡುವೆ ಮುಕ್ತ ವ್ಯಾಪಾರ ಒಪ್ಪಂದ (India US trade agreement) ಏರ್ಪಡಲು ಪ್ರಯತ್ನಗಳು ನಡೆಯುತ್ತಿವೆ. ಅಮೆರಿಕದ ಕೆಲ ಬೇಡಿಕೆಗಳು, ಮತ್ತು ಭಾರತದ ಕೆಲ ಬೇಡಿಕೆಗಳು ಪರಸ್ಪರ ಸಮ್ಮತವಾಗುವ ರೀತಿಯಲ್ಲಿ ಸಂಧಾನಗಳು, ಮಾತುಕತೆಗಳು ನಡೆಯುತ್ತಿವೆ. ಈ ಮಧ್ಯೆ ಭಾರತವು ಒಪ್ಪಂದದಲ್ಲಿ ತನ್ನದೇ ಕೆಲ ಬೇಡಿಕೆಗಳನ್ನು ಇಟ್ಟುಕೊಂಡು ಮಾತುಕತೆ ನಡೆಸುತ್ತಿದೆ. ಒಪ್ಪಂದದಲ್ಲಿ ಸನ್‌ಸೆಟ್ ಕ್ಲಾಸ್ನ (Sunset Clause) ಅವಕಾಶ ಸೇರಿಸುವಂತೆ ಭಾರತ ಡಿಮ್ಯಾಂಡ್ ಇಟ್ಟಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ನಿಯಮವನ್ನು ಬಯಸುತ್ತಿರುವುದು ಭಾರತ ಮಾತ್ರವಲ್ಲ, ವಿಶ್ವದ ಹಲವು ದೇಶಗಳು ವ್ಯಾಪಾರ ಒಪ್ಪಂದಗಳಲ್ಲಿ ಈ ಅಂಶ ಸೇರಿಸಿರುವುದುಂಟು.
‘ಸನ್‌ಸೆಟ್ ಕ್ಲಾಸ್’ (Sunset Clause) ಎಂದರೆ ಯಾವುದೇ ಒಂದು ಕಾನೂನು, ನಿಯಮ ಅಥವಾ ಒಪ್ಪಂದವು ನಿರ್ದಿಷ್ಟ ವಾಯಿದೆವರೆಗೂ ಜಾರಿಯಲ್ಲಿರುತ್ತವೆ. ಎರಡೂ ಕಡೆಯವರು ಮತ್ತೆ ಅದನ್ನು ನವೀಕರಿಸುವವರೆಗೂ ಅವು ಆಟೊಮ್ಯಾಟಿಕ್ ಆಗಿ ಸ್ಥಗಿತಗೊಂಡಿರುತ್ತವೆ. ವ್ಯಾಪಾರ ಒಪ್ಪಂದಗಳಲ್ಲಿ ಸನ್‌ಸೆಟ್ ಕ್ಲಾಸ್ ಇಲ್ಲದಾಗ, ಆ ಒಪ್ಪಂದ ಇರುವವರೆಗೂ ಎಲ್ಲಾ ಒಳ ನಿಯಮಗಳು ಚಾಲನೆಯಲ್ಲಿರುತ್ತವೆ. ಸನ್‌ಸೆಟ್ ಕ್ಲಾಸ್ ಇದ್ದಾಗ, ನಿಯಮಗಳಿಗೆ ಸಮಯಾವಧಿ ನಿರ್ದಿಷ್ಟಪಡಿಸಬಹುದು. ಆ ಅವಧಿ ಮುಗಿದಾಗ, ಬೇಕೆಂದರೆ ಅದನ್ನು ನವೀಕರಿಸಬಹುದು.
ಅಮೆರಿಕದ ವ್ಯಾಪಾರ ಮತ್ತು ಸುಂಕದ (Tariff) ನೀತಿಗಳಲ್ಲಿ ಪದೇ ಪದೇ ಬದಲಾವಣೆಗಳಾಗುತ್ತಿರುವುದರಿಂದ ಭಾರತ ಈ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲು ಯೋಚಿಸುತ್ತಿದೆ. ಕೆಲ ನಿಯಮಗಳು, ಕ್ರಮಗಳು ನಿರ್ದಿಷ್ಟ ಅವಧಿಗೆ ಮಾತ್ರ ಸೂಕ್ತವಾಗಿರುತ್ತವೆ. ಆ ಬಳಿಕ ಅದು ಅಪ್ರಸ್ತುತವೆನಿಸಬಹುದು, ಅಥವಾ ಅನನುಕೂಲ ಎನಿಸಬುದು. ಆಗ ಅದನ್ನು ಪರಿಷ್ಕರಿಸಲು ಸನ್‌ಸೆಟ್ ಕ್ಲಾಸ್ ಉಪಯುಕ್ತವೆನಿಸುತ್ತದೆ.
ಇತ್ತೀಚೆಗೆ ಯುರೋಪಿಯನ್ ಪಾರ್ಲಿಮೆಂಟ್ ಕೂಡ ಅಮೆರಿಕದೊಂದಿಗಿನ ತನ್ನ ವ್ಯಾಪಾರ ಒಪ್ಪಂದದಲ್ಲಿ ಇಂತಹದ್ದೇ ಒಂದು ಸನ್‌ಸೆಟ್ ಕ್ಲಾಸ್ ಅನ್ನು ಸೇರಿಸಿದೆ. ಅದರ ಪ್ರಕಾರ ಆ ಒಪ್ಪಂದವು ಡಿಸೆಂಬರ್ 31, 2029 ಕ್ಕೆ ಕೊನೆಗೊಳ್ಳಲಿದೆ. ಅದಕ್ಕೂ ಮುನ್ನವೇ ಒಪ್ಪಂದದಿಂದ ಉಂಟಾದ ಲಾಭ-ನಷ್ಟಗಳನ್ನು ಪರಿಶೀಲಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇದೇ ಮಾದರಿಯನ್ನು ಭಾರತವೂ ಕೂಡ ಅಮೆರಿಕದೊಂದಿಗಿನ ಪ್ರಸ್ತಾಪಿತ ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿ ಬಳಸಿಕೊಳ್ಳಲು ಆಸಕ್ತಿ ತೋರಿದೆ.
ಇದನ್ನೂ ಓದಿ: ಎಐನಿಂದ ಉದ್ಯೋಗ ನಷ್ಟದ ಭೀತಿ ಬೇಡ; ಇನ್ಫೋಸಿಸ್ನಂತಹ ಕಂಪನಿಗಳಿಗೆ ಹಾನಿಯೂ ಇಲ್ಲ: ನಂದನ್ ನಿಲೇಕಣಿ
ಅಮೆರಿಕದ ಕಠಿಣ ವ್ಯಾಪಾರ ನೀತಿಗಳಿಂದ ಭವಿಷ್ಯದಲ್ಲಿ ಭಾರತೀಯ ಉದ್ಯಮಗಳಿಗೆ, ಕೃಷಿ ವಲಯಕ್ಕೆ ಅಥವಾ ಸಣ್ಣ ಉದ್ಯಮಗಳಿಗೆ ತೊಂದರೆಯಾದರೆ, ಒಪ್ಪಂದಕ್ಕೆ ಸಿಲುಕಿ ಒದ್ದಾಡುವ ಬದಲು, ಸುಲಭವಾಗಿ ಒಪ್ಪಂದವನ್ನು ಮರುಪರಿಶೀಲಿಸಲು ಈ ‘ಸನ್‌ಸೆಟ್ ಕ್ಲಾಸ್’ ಭಾರತಕ್ಕೆ ಒಂದು ಸುರಕ್ಷತಾ ಕವಚದಂತೆ ಕೆಲಸ ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Wed, 24 June 26