ಡೆಲಿವರಿ ಬಾಯ್ ಆಗಿದ್ದವ ಇವತ್ತು ವಾಟ್ಸಾಪ್ ಬಾಸ್; ಕುಟುಂಬ ದಿವಾಳಿ ಎದ್ದರೂ ಜಗ್ಗದೆ ಗೆಲ್ಲಲು ಹೊರಟ ಸ್ಟ್ರೀಟ್ಸ್ಮಾರ್ಟ್ ಹುಡುಗ ಕುನಾಲ್ ಶಾ
Kunal Shah's inspiring story: ಫ್ರೀಚಾರ್ಜ್, ಕ್ರೆಡ್ ಸ್ಟಾರ್ಪಟ್ಗಳ ಸ್ಥಾಪಕರಾದ ಕುನಾಲ್ ಇವತ್ತು ವಾಟ್ಸಪ್ನ ಗ್ಲೋಬಲ್ ಹೆಡ್ ಆಗಿ ನೇಮಕಗೊಂಡಿದ್ದಾರೆ. 2010ರಲ್ಲಿ ಫ್ರೀಚಾರ್ಜ್ ಸ್ಥಾಪಿಸುವ ಮುನ್ನ ಅವರು ಪಟ್ಟ ಶ್ರಮ, ಪ್ರಯೋಗ, ಕಷ್ಟಕೋಟಲೆಗಳು ನಿಜಕ್ಕೂ ಗಮನಾರ್ಹವೆನಿಸುತ್ತವೆ. ದಿವಾಳಿ ಎದ್ದ ಕುಟುಂಬವು ಬೀದಿಗೆ ಬೀಳಬಾರದೆಂದು ಸಣ್ಣ ವಯಸ್ಸಲ್ಲೇ ಡೆಲಿವರಿ ಬಾಯ್, ಡಾಟಾ ಎಂಟ್ರಿ ಆಪರೇಟರ್ ಇತ್ಯಾದಿ ಕೆಲಸ ಮಾಡುತ್ತಿದ್ದ ಅವರು ಈ ಮಟ್ಟಕ್ಕೆ ಬಂದ ಅಚ್ಚರಿಯ ಕಥೆ ಇಲ್ಲಿದೆ.

ಮೊನ್ನೆಯಿಂದ ಕುನಾಲ್ ಶಾ (Kunal Shah) ಟ್ರೆಂಡಿಂಗ್ನಲ್ಲಿದ್ದಾರೆ. ಫ್ರೀಚಾರ್ಜ್, ಕ್ರೆಡ್ ಎನ್ನುವ ಕಂಪನಿಗಳನ್ನು ಬೆಂಗಳೂರಿನಲ್ಲಿ ಹುಟ್ಟುಹಾಕಿ ಹೆಸರುವಾಸಿಯಾಗಿರುವ ಕುನಾಲ್ ಅವರ ಹಿಂದೆ, ಹೆಸರುವಾಸಿಯಾಗದ ಮತ್ತು ಎಲೆಮರೆಕಾಯಿಯಾಗಿರುವ ಅನೇಕ ಗಹನ ಸಂಗತಿಗಳಿವೆ. ಅವೆಲ್ಲವೂ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಕುನಾಲ್ ಶಾ ಅವರು ತಮ್ಮ ಕ್ರೆಡ್ ಕಂಪನಿಗೆ ಮೆಟಾದಿಂದ ಬರೋಬ್ಬರಿ 8,500 ಕೋಟಿ ರೂ ಮೌಲ್ಯದಷ್ಟು ಬಂಡವಾಳ ಆಕರ್ಷಿಸಿದೆ. ಅಷ್ಟು ಮಾತ್ರವಲ್ಲ, ಮೆಟಾದ ವಾಟ್ಸಾಪ್ ಪ್ಲಾಟ್ಫಾರ್ಮ್ಗೆ ಕುನಾಲ್ ಮುಖ್ಯಸ್ಥರಾಗಿದ್ದಾರೆ. ವಿಶ್ವದ ಅತಿದೊಡ್ಡ ಮೆಸೇಜಿಂಗ್ ಪ್ಲಾಟ್ಫಾರ್ಮ್ಗೆ ಕುನಾಲ್ ಬಾಸ್ ಆಗಿದ್ದಾರೆ. ಕುನಾಲ್ ಈ ಹಂತಕ್ಕೆ ಬರುವ ಮುನ್ನ, ಬರುವ ಹಾದಿಯಲ್ಲಿ ಬಹಳಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಸಾಧನೆಗೆ ತಡೆಯಾಗಿರುವುದು ಹಣವನ್ನ, ಬದಲಾಗಿ ಮನಸ್ಥಿತಿ ಎಂಬುದನ್ನು ಜಗತ್ತಿಗೆ ತೋರಿಸಿದವರು ಅವರು.
15ನೇ ವಯಸ್ಸಿನಲ್ಲಿ ಡೆಲಿವರಿ ಬಾಯ್ ಆಗಿದ್ದ ಕುನಾಲ್
ಮುಂಬೈನವರಾದ ಕುನಾಲ್ ಶಾ ಅವರು ಹುಟ್ಟು ಬಡವರಲ್ಲ. ಅವರ ತಂದೆ ಬ್ಯುಸಿನೆಸ್ಮ್ಯಾನ್ ಆಗಿದ್ದರು. ಆದರೆ, ಕುನಾಲ್ ಶಾಲೆ ಮುಗಿಸುವ ಹಂತದಲ್ಲಿದ್ದಾಗ ಅವರ ತಂದೆ ಬ್ಯುಸಿನೆಸ್ನಲ್ಲಿ ದಿವಾಳಿ ಎದ್ದಿದ್ದರು. ಪಾಪರ್ ಆಗಿ ಹೋಗಿತ್ತು ಅವರ ಕುಟುಂಬ. ಆಗ ಕುನಾಲ್ಗೆ 15 ವರ್ಷ. ಜೀವನೋಪಾಯಕ್ಕೆ ಅವರು ಓದಿನ ಜೊತೆಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡತೊಡಗಿದರು.
ಡೆಲಿವರಿ ಬಾಯ್ ಕೆಲಸ, ಡಾಟಾ ಆಪರೇಟರ್ ಕೆಲಸ ಮಾಡುತ್ತಿದ್ದರು. ಹೋಗುತ್ತಾ ಹೋಗುತ್ತಾ ಅವರು ಇನ್ನೂ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಾ ಹೋದರು. ಮೆಹಂದಿ ಕೋನ್ಗಳ ಮಾರಾಟ, ಸೈಬರ್ ಕೆಫೆ ಆಪರೇಟರ್, ಪೈರೇಟೆಡ್ ಸಿಡಿ ಮಾರಾಟ, ಕಂಪ್ಯೂಟರ್ ಟೂಟರ್, ಹೀಗೆ ಕೆಲಸ ಮಾಡುತ್ತಾ ಅವರು ಹಣ ಗಳಿಸುವ ಉಮೇದಿಗೆ ಬಿದ್ದರು.
ಇದನ್ನೂ ಓದಿ: ಎಐನಿಂದ ಉದ್ಯೋಗ ನಷ್ಟದ ಭೀತಿ ಬೇಡ; ಇನ್ಫೋಸಿಸ್ನಂತಹ ಕಂಪನಿಗಳಿಗೆ ಹಾನಿಯೂ ಇಲ್ಲ: ನಂದನ್ ನಿಲೇಕಣಿ
ಹಣ ಸಂಪಾದನೆಯಲ್ಲಿದ್ದ ಕುನಾಲ್, ಫಿಲಾಸಫಿ ಸೇರಿದ ಕಥೆ
ಇವತ್ತಿನ ಕಾರ್ಪೊರೇಟ್ ಜಗತ್ತಿನಲ್ಲಿ ಬಹುತೇಕ ಎಲ್ಲಾ ಕಂಪನಿಗಳ ಸಿಇಒಗಳು ಐಐಟಿ ಅಥವಾ ಐಐಎಂಗಳಲ್ಲಿ ಓದಿದವರೇ ಆಗಿದ್ಧಾರೆ. ಆದರೆ, ಕುನಾಲ್ ಶಾ ಪೂರ್ಣ ಓದಿದ್ದು ಬಿಎ ಮಾತ್ರ. ಎಂಬಿಎ ಒಂದು ವರ್ಷಕ್ಕೇ ತಿಲಾಂಜಲಿ ಹಾಡಿ ಹೊರಬಂದಿದ್ದರು. ಬಿಎನಲ್ಲಿ ಅವರು ತೆಗೆದುಕೊಂಡಿದ್ದು ಫಿಲಾಸಫಿ. ಈ ಸಬ್ಜೆಕ್ಟ್ ತೆಗೆದುಕೊಳ್ಳುವುದರ ಹಿಂದೆ ಇವರ ವೈಯಕ್ತಿಕ ವ್ಯಾಮೋಹ ಇರಲಿಲ್ಲ. ಡೆಲಿವರಿ ಬಾಯ್, ಡಾಟಾ ಎಂಟ್ರಿ ಆಪರೇಟರ್ ಕೆಲಸಗಳಿಗೆ ಹೊಂದಿಕೆಯಾಗುವ ಸಮಯ ಇತ್ತು ಎನ್ನುವ ಕಾರಣಕ್ಕೆ ಬಿಎನಲ್ಲಿ ಫಿಲಾಸಫಿ ತೆಗೆದುಕೊಂಡರಂತೆ. ಬೆಳಗ್ಗೆ 8ರಿಂದ 10ರವರೆಗೆ ಕ್ಲಾಸ್ಗಳಿದ್ದವು. ಅದನ್ನು ಮುಗಿಸಿ ಇವರು ತಮ್ಮ ಕಾಯಕ ಮಾಡಿಕೊಂಡು ಹಣ ಸಂಪಾದಿಸುತ್ತಿದ್ದರು.
ಪದವಿಗೆ ಬೆಲೆ ಕೊಡದ ಕುನಾಲ್ ಶಾ
ಕುನಾಲ್ ಶಾ ಅವರು ಕಷ್ಟ ಮೆಟ್ಟಿಕೊಂಡು ಬೆಳೆದವರು. ಓದಿನಿಂದ ಮಾತ್ರವೇ ಯಶಸ್ಸು ಸಿಗುತ್ತದೆ ಎನ್ನುವ ಸಿದ್ಧಾಂತವನ್ನು ಮುರಿದವರು. ತಮ್ಮ ಕಂಪನಿಗೆ ನೇಮಕಾತಿ ಮಾಡಿಕೊಳ್ಳುವಾಗಲೂ ಅವರದ್ದು ಇದೇ ಧೋರಣೆ. ಅಭ್ಯರ್ಥಿಗಳ ಡಿಗ್ರಿಗಿಂತ ಹೆಚ್ಚಾಗಿ ಪ್ರತಿಭೆಯನ್ನು ಗುರುತಿಸಿ ಕೆಲಸ ಕೊಡುತ್ತಿದ್ದಂತೆ. ಕ್ರೆಡ್ ಕಂಪನಿಯಲ್ಲಿ ನಾಯಕತ್ವದ ಹುದ್ದೆಯಲ್ಲಿದ್ದ ಒಬ್ಬ ವ್ಯಕ್ತಿ ಓದಿದ್ದು 10ನೇ ಕ್ಲಾಸ್ ಮಾತ್ರ.
ಕಚೇರಿಯಲ್ಲಿ ಗಾಂಭೀರ್ಯತೆಯ ವಾತಾವರಣ ಬಯಸುವ ಜಾಯಮಾನದವರಾಗಿರಲಿಲ್ಲ ಕುನಾಲ್. ಕ್ರೆಡ್ನಲ್ಲಿ ಉದ್ಯೋಗಿಗಳು ಪರಸ್ಪರ ಕಾಲೆಳೆಯಲು, ಮೀಮ್ಸ್ ಮಾಡಲು ಸ್ವಾತಂತ್ರ್ಯ ಹೊಂದಿದ್ದರು.
250-300 ಕಂಪನಿಗಳಿಗೆ ಏಂಜೆಲ್ ಇನ್ವೆಸ್ಟರ್
ಕುನಾಲ್ ಶಾ ಸಾಧನೆ ಫ್ರೀಚಾರ್ಜ್ ಮತ್ತು ಕ್ರೆಡ್ ಕಂಪನಿಗಳನ್ನು ಕಟ್ಟಿದ್ದಷ್ಟೇ ಅಲ್ಲ, ಅವರೊಬ್ಬ ಅದ್ಭುತ ಏಂಜೆಲ್ ಇನ್ವೆಸ್ಟರ್. ಬಹುತೇಕ 300 ಕಂಪನಿಗಳನ್ನು ಬಂಡವಾಳ ಮೂಲಕ ಪೋಷಿಸಿದ್ದಾರೆ. ಏಂಜೆಲ್ ಇನ್ವೆಸ್ಟರ್ ಎಂದರೆ ತಮ್ಮ ವೈಯಕ್ತಿಕ ಹಣವನ್ನು ಸ್ಟಾರ್ಟಪ್ಗಳಿಗೆ ಸೀಡ್ ಕ್ಯಾಪಿಟಲ್ ಅಥವಾ ಆರಂಭಿಕ ಬಂಡವಾಳವಾಗಿ ನೀಡುವುದು. ಈ ಬಂಡವಾಳದ ಬದಲಾಗಿ, ಆ ಸ್ಟಾರ್ಟಪ್ನಲ್ಲಿ ಷೇರುಪಾಲು ಪಡೆಯುತ್ತಾರೆ.
ಇದನ್ನೂ ಓದಿ: ಯುಎಇಯಲ್ಲಿ ಬರಲಿದೆ ಮೊದಲ ಪ್ಯಾಸೆಂಜರ್ ರೈಲು; ಮುಂದುವರಿದ ದೇಶಕ್ಕೆ ತಡವಾಗಿ ಬಂತಾ ರೈಲು? ಇಲ್ಲಿದೆ ವಾಸ್ತವ
ಇನ್ಫೋಸಿಸ್, ವಿಪ್ರೋದಂಥ ಕಂಪನಿಗಳಲ್ಲಿ ಫ್ರೆಶರ್ ಕೆಲಸವೂ ಕುನಾಲ್ಗೆ ಸಿಗುತ್ತಿರಲಿಲ್ಲ
ಕಾರ್ಪೊರೇಟ್ ಜಗತ್ತಿನಲ್ಲಿ ಇವತ್ತೂ ಕೂಡ ನೇಮಕಾತಿ ವೇಳೆ ಪದವಿಗಳನ್ನು ನೋಡುವವರು ಹೆಚ್ಚಿದ್ದಾರೆ. ಸ್ಟಾರ್ಟಪ್ವೊಂದರ ಸ್ಥಾಪಕಿ ರಿಯಾ ಉಪ್ರೇತಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿ, ಕುನಾಲ್ ಅವರಿಗೆ ಹೋಲಿಕೆ ಮಾಡಿದ್ದಾರೆ.
‘ಕುನಾಲ್ ಶಾ ಅವರು ಐಐಟಿ ಅಥವಾ ಐಐಎಂ ಡಿಗ್ರಿ ಹೊಂದಿಲ್ಲ. ಅವರಲ್ಲಿ ಬಿಎ ಡಿಗ್ರಿ ಇದೆ. ಇವತ್ತು ಅವರು ಪ್ರಾಡಕ್ಟ್ ಮ್ಯಾನೇಜರ್ ಹುದ್ದೆಗೆ, ಅಥವಾ ಫ್ರೆಶರ್ ಹುದ್ದೆಗೂ ಅರ್ಜಿ ಸಲ್ಲಿಸಿದರೆ, ಟಿಸಿಎಸ್, ಇನ್ಫೋಸಿಸ್ನಂತಹ ಕಂಪನಿಗಳು ಅವರನ್ನು ಶಾರ್ಟ್ಲಿಸ್ಟ್ ಕೂಡ ಮಾಡುವುದಿಲ್ಲ. ಇವತ್ತು ಕುನಾಲ್ ಅವರು ವಾಟ್ಸಾಪ್ನ ಮುಖ್ಯಸ್ಥರಾಗಿದ್ದಾರೆ’ ಎಂದು ಉಪ್ರೇತಿ ಅವರು ಟ್ವೀಟ್ ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Wed, 24 June 26




