
ನ್ಯೂಯಾರ್ಕ್, ಆಗಸ್ಟ್ 17: ಐದು ವರ್ಷದ ಹಿಂದೆ (2021 ರಲ್ಲಿ) ಕೋವಿಡ್ ಪೀಕ್ ಇದ್ದಾಗ ಝೂಮ್ (Zoom) ಕಾಲ್ ಮೂಲಕ ಏಕಾಏಕಿ 900 ಉದ್ಯೋಗಿಗಳನ್ನು ವಜಾಗೊಳಿಸಿದ ಘಟನೆ ಹಲವರಿಗೆ ನೆನಪಿರಬಹುದು. ಆ ಕೆಲಸ ಮಾಡಿದ್ದು ಭಾರತ ಮೂಲದ ವ್ಯಕ್ತಿ ವಿಶಾಲ್ ಗರ್ಗ್ (Vishal Garg). ಅಮೆರಿಕದ ‘ಬೆಟರ್ ಹೋಮ್ & ಫೈನಾನ್ಸ್’ (Better Home & Finance) ಕಂಪನಿಯ ಸಿಇಒ ಆಗಿದ್ದಾಗ ಒಂದು ವಿಡಿಯೋ ಕಾಲ್ನಲ್ಲಿ 900 ಉದ್ಯೋಗಿಗಳೆಲ್ಲರನ್ನೂ ಟರ್ಮಿನೇಟ್ ಮಾಡಿದ್ದರು. ಕರ್ಮ ರಿಟರ್ನ್ಸ್ ಎನ್ನುವಂತೆ, ಇದೀಗ ಆ ಕಂಪನಿಯ ಮಂಡಳಿ ಸದಸ್ಯರೇ ಸೇರಿಕೊಂಡು ವಿಶಾಲ್ ಗರ್ಗ್ ಅವರನ್ನು ಕೆಲಸದಿಂದ ಟರ್ಮಿನೇಟ್ ಮಾಡಿದ್ದಾರೆ.
ವಿಶಾಲ್ ಗರ್ಗ್ ಅವರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ (judgment), ಸ್ವಭಾವ (temperament) ಮತ್ತು ನಂಬಿಕಾರ್ಹತೆಯ (credibility) ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ಕಂಪನಿಯ ಆಡಳಿತ ಮಂಡಳಿಯು (Board of Directors) ಅವರನ್ನು ಹುದ್ದೆಯಿಂದ ವಜಾಗೊಳಿಸಲು ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ಭಾರತ ಮೂಲದ ಲಕ್ಷ್ಮೀ ಮಿತ್ತಲ್ ಅವರ ಕಾರ್ಖಾನೆ ಮೇಲೆ ರಷ್ಯನ್ ದಾಳಿ; ಇಬ್ಬರು ಬಲಿ
ವಿಶಾಲ್ ಗರ್ಗ್ ನಾಯಕತ್ವದಲ್ಲಿ ಕಂಪನಿಯು 2022 ರಿಂದ $1.5 ಬಿಲಿಯನ್ (ಸುಮಾರು ₹14,000 ಕೋಟಿಗೂ ಹೆಚ್ಚು) ನಿವ್ವಳ ನಷ್ಟ ಅನುಭವಿಸಿದೆ. ಅಲ್ಲದೆ ಕಂಪನಿಯ ಶೇರು ಮೌಲ್ಯವು ಶೇ. 90 ಕ್ಕಿಂತ ಹೆಚ್ಚು ಕುಸಿತ ಕಂಡಿದೆ.
2021 ರ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ಹಬ್ಬಕ್ಕೂ ಕೆಲ ದಿನಗಳ ಮುನ್ನ ವಿಶಾಲ್ ಗಾರ್ಗ್ ಕೇವಲ 3 ನಿಮಿಷಗಳ ಝೂಮ್ ವೆಬಿನಾರ್‌ನಲ್ಲಿ 900 ಕ್ಕೂ ಹೆಚ್ಚು ಉದ್ಯೋಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿದ್ದರು. ಈ ಘಟನೆ ಜಾಗತಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕಂಪನಿಯ ಅನೇಕ ಹಿರಿಯರು ಕೂಡ ತೊರೆದುಹೋದರು. ಕಂಪನಿಯ ಬ್ರ್ಯಾಂಡ್ ಇಮೇಜ್ಗೆ ಧಕ್ಕೆ ಬಂದಿತ್ತು. ವಿಶಾಲ್ ಗರ್ಗ್ ತಮ್ಮ ವರ್ತನೆಗೆ ಕ್ಷಮೆ ಯಾಚಿಸಿದರೂ ಪ್ರತಿಷ್ಠೆಗೆ ಆಗಿದ್ದ ಧಕ್ಕೆ ಸುಧಾರಿಸಲಿಲ್ಲ. ಬ್ಯುಸಿನೆಸ್ ಕೂಡ ಕುಸಿಯುತ್ತಾ ಬಂದಿತು. ಒಂದೆಡೆ, ವ್ಯವಹಾರ ನಷ್ಟ, ಇನ್ನೊಂದೆಡೆ ಶೇರು ಮೌಲ್ಯ ನಷ್ಟ. ಇವೆರಡೂ ಸೇರಿ ವಿಶಾಲ್ ಗರ್ಗ್ ಅವರಿಗೆ ಕುತ್ತು ತಂದಿದೆ.
ಬೆಟರ್ ಹೋಮ್ ಸಂಸ್ಥೆಯು ಡೇನಿಯಲ್ ಲೂಯಿಸ್ (Daniel Lewis) ಎಂಬುವವರನ್ನು ಹಂಗಾಮಿ ಸಿಇಒ ಆಗಿ ನೇಮಿಸಿದೆ. ಈ ಡೇನಿಯಲ್ ಅವರನ್ನು ಕಂಪನಿಯ ಒಳಗೆ ಬಿಟ್ಟುಕೊಂಡಿದ್ದೇ ವಿಶಾಲ್ ಗರ್ಗ್. ಝೂಮ್ ಕಾಲ್ ಘಟನೆ ಬಳಿಕ ಕಂಪನಿಯ ಇಮೇಜ್ಗೆ ಧಕ್ಕೆಯಾದಾಗ ಡೇನಿಯಲ್ ಅವರು ಸಾರ್ವಜನಿಕವಾಗಿ ಕಂಪನಿ ಬಗ್ಗೆ ಸಕಾರಾತ್ಮಕವಾಗಿ ಮಾತನಾಡುತ್ತಿದ್ದರು. ಹೋಗುತ್ತಾ ಹೋಗುತ್ತಾ ವಿಶಾಲ್ ಗರ್ಗ್ ಅವರ ವಿಶ್ವಾಸ ಕುದುರಿಸಿದ್ದರು. ಬಳಿಕ ಅವರನ್ನು ನಿರ್ದೇಶಕರ ಮಂಡಳಿಗೆ ಸೇರಿಸಿಕೊಳ್ಳಲಾಯಿತು. ನೇಮಕವಾಗಿ ಒಂದು ವಾರಕ್ಕೆ ಇತರ ನಿರ್ದೇಶಕರನ್ನು ಲೂಯಿಸ್ ಅವರು ವಿಶಾಲ್ ಗರ್ಗ್ ಉಚ್ಚಾಟನೆಗೆ ಮನವೊಲಿಸಿಬಿಟ್ಟಿದ್ದರು.
ಇದನ್ನೂ ಓದಿ: 2040ರಲ್ಲಿ ಅಮೆರಿಕ, ಯೂರೋಪ್ಗಿಂತ ದಕ್ಷಿಣ ಏಷ್ಯಾದಲ್ಲಿ ಕಡಿಮೆ ಬಡವರು?; ವಿಶ್ವಬ್ಯಾಂಕ್ ದತ್ತಾಂಶ ಅಚ್ಚರಿ ಎನಿಸಿದರೂ ಸತ್ಯ
ಇದೀಗ ವಿಶಾಲ್ ಗರ್ಗ್ ತಮ್ಮನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ಪ್ರಸಿದ್ಧ ವಕೀಲರನ್ನು ನೇಮಿಸಿಕೊಂಡು ಕಾನೂನು ಸಮರ ಆರಂಭಿಸಿದ್ದಾರೆ. ಕಂಪನಿಯನ್ನು ಲಾಭಕ್ಕೆ ತರುವವರೆಗೆ ವರ್ಷಕ್ಕೆ ಕೇವಲ 1 ಡಾಲರ್ ವೇತನಕ್ಕೆ ಕೆಲಸ ಮಾಡಲು ಸಿದ್ಧವಿರುವುದಾಗಿ ಹೇಳಿ ತಮ್ಮ ಹುದ್ದೆಯನ್ನು ಮರಳಿ ಪಡೆಯಲು ಯತ್ನಿಸುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ