ವರ್ಲ್ಡ್‌ಸ್ಕಿಲ್ಸ್ ಶಾಂಘೈ 2026: 10ನೇ ಸ್ಥಾನಕ್ಕೆ ಜಿಗಿದ ಭಾರತ- 6 ಬೆಳ್ಳಿ ಹಾಗೂ 20 ಪದಕ ಗೆದ್ದು ಐತಿಹಾಸಿಕ ಸಾಧನೆ

ಚೀನಾದ ಶಾಂಘೈನಲ್ಲಿ ನಡೆದ 48ನೇ 'ವರ್ಲ್ಡ್‌ಸ್ಕಿಲ್ಸ್ 2026' ಜಾಗತಿಕ ಕೌಶಲ್ಯ ಸ್ಪರ್ಧೆಯಲ್ಲಿ ಭಾರತಕ್ಕೆ 10ನೇ ಸ್ಥಾನ ಲಭಿಸಿದೆ. 6 ಬೆಳ್ಳಿ ಪದಕಗಳು ಮತ್ತು 20 ಶ್ರೇಷ್ಠ ಪದಕಗಳನ್ನು (Medallions for Excellence) ಗೆಲ್ಲುವ ಮೂಲಕ ಭಾರತದ ಯುವ ಪಡೆ ಐತಿಹಾಸಿಕ ಸಾಧನೆ ಮಾಡಿದೆ. 70 ದೇಶಗಳಿಂದ 1,400 ಸ್ಪರ್ಧಿಗಳು ಪಾಲ್ಗೊಂಡಿದ್ದ ಈ ಕೂಟದಲ್ಲಿ ಭಾರತದಿಂದ 70 ಸ್ಪರ್ಧಾಳುಗಳು ಭಾಗವಹಿಸಿದ್ದರು.

ವರ್ಲ್ಡ್‌ಸ್ಕಿಲ್ಸ್ ಶಾಂಘೈ 2026: 10ನೇ ಸ್ಥಾನಕ್ಕೆ ಜಿಗಿದ ಭಾರತ- 6 ಬೆಳ್ಳಿ ಹಾಗೂ 20 ಪದಕ ಗೆದ್ದು ಐತಿಹಾಸಿಕ ಸಾಧನೆ
ವರ್ಲ್ಡ್‌ಸ್ಕಿಲ್ಸ್ ಶಾಂಘೈ ಕೂಟದಲ್ಲ ಪಾಲ್ಗೊಂಡ ಭಾರತೀಯ ತಂಡ
Image Credit source: Press Release

Updated on: Sep 27, 2026 | 9:20 PM

ಶಾಂಘೈ, ಸೆಪ್ಟೆಂಬರ್ 27: ಚೀನಾದ ಶಾಂಘೈನಲ್ಲಿ ನಡೆದ ಪ್ರತಿಷ್ಠಿತ 48ನೇ ವರ್ಲ್ಡ್‌ಸ್ಕಿಲ್ಸ್ (WorldSkills Shanghai 2026) ಅಂತರರಾಷ್ಟ್ರೀಯ ಕೌಶಲ್ಯ ಸ್ಪರ್ಧೆಯಲ್ಲಿ ಭಾರತವು 10ನೇ ಸ್ಥಾನವನ್ನು ಪಡೆದುಕೊಂಡಿದೆ. ಇಡೀ ಸ್ಪರ್ಧೆಯಲ್ಲಿ ಭಾರತದ ಸ್ಪರ್ಧಿಗಳು 6 ಬೆಳ್ಳಿ ಪದಕಗಳು (Silver Medals) ಮತ್ತು 20 ಮೆಡಾಲಿಯನ್ ಫಾರ್ ಎಕ್ಸಲೆನ್ಸ್ (Medallions for Excellence) ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

2024 ರ ‘ವರ್ಲ್ಡ್‌ಸ್ಕಿಲ್ಸ್ ಲಿಯಾನ್’ ಸ್ಪರ್ಧೆಯಲ್ಲಿ 13ನೇ ಸ್ಥಾನದಲ್ಲಿದ್ದ (4 ಕಂಚು ಪದಕ ಮತ್ತು 12 ಮೆಡಾಲಿಯನ್) ಭಾರತವು, ಈ ಬಾರಿ 10ನೇ ಸ್ಥಾನಕ್ಕೆ ಏರಿರುವುದು ದೇಶದ ಕೌಶಲ್ಯ ವಲಯದ ಬೆಳವಣಿಗೆಗೆ ಪ್ರಮುಖ ಮೈಲಿಗಲ್ಲಾಗಿದೆ.

ವರ್ಲ್ಡ್‌ಸ್ಕಿಲ್ಸ್ 2026: ಭಾರತದ ಪ್ರಮುಖ ಸಾಧನೆಗಳು ಮತ್ತು ಪದಕ ವಿಜೇತರು

ಭಾರತಕ್ಕೆ ಒಟ್ಟು 6 ಬೆಳ್ಳಿ ಪದಕಗಳು ಲಭಿಸಿದ್ದು, ವಿಜೇತರ ವಿವರ ಹೀಗಿದೆ:

  1. ಬೇಕರಿ (Bakery): ಸ್ಮೃತಿ ನಂಬಿಯಾರ್ (‘ಬೆಸ್ಟ್ ಆಫ್ ನೇಷನ್’ ಗೌರವಕ್ಕೂ ಭಾಜನರಾಗಿದ್ದಾರೆ)
  2. ಡೆಂಟಲ್ ಪ್ರೊಸ್ಥೆಟಿಕ್ಸ್ (Dental Prosthetics): ಮೊಹಮ್ಮದ್ ಸಲಾಮ್
  3. ಡಿಜಿಟಲ್ ಇಂಟರಾಕ್ಟಿವ್ ಮೀಡಿಯಾ ಡಿಸೈನ್: ಕೋವಿದ್ ಅಜಯ್ ಗಂಗ್ರಾಡೆ
  4. ಇಂಡಸ್ಟ್ರಿಯಲ್ ಡಿಸೈನ್ ಟೆಕ್ನಾಲಜಿ: ಪಾರ್ಥ್ ವೋಹ್ರಾ
  5. ಲಾಜಿಸ್ಟಿಕ್ಸ್ ಅಂಡ್ ಫ್ರೈಟ್ ಫಾರ್ವರ್ಡಿಂಗ್: ಮೆಹರುನ್ನಿಸಾ ಬೇಗಂ
  6. ರಿಟೇಲ್ ಸೇಲ್ಸ್ (Retail Sales): ಸಾನಿಯಾ ಜೋಶಿ

ಇದನ್ನೂ ಓದಿ: ಗಾಂಧಿ ಜಯಂತಿಯಂದು ‘ನೋ ಯುಪಿಐ ಡೇ’ ಕರೆ ನೀಡಿರುವ ಸುದ್ದಿ ಸುಳ್ಳು: ವರ್ತಕರ ಒಕ್ಕೂಟ ಸ್ಪಷ್ಟನೆ

ಇದರೊಂದಿಗೆ ಮೆಕಾಟ್ರಾನಿಕ್ಸ್, ರೊಬೊಟಿಕ್ಸ್, ಕೆಮಿಕಲ್ ಲ್ಯಾಬೊರೇಟರಿ, ಆಟೋಮೊಬೈಲ್, ಮತ್ತು ಆಡಿಟಿವ್ ಮ್ಯಾನುಫ್ಯಾಕ್ಚರಿಂಗ್ ಸೇರಿದಂತೆ ವಿವಿಧ ತಾಂತ್ರಿಕ ವಲಯಗಳಲ್ಲಿ ಭಾರತವು 20 ಮೆಡಾಲಿಯನ್ ಫಾರ್ ಎಕ್ಸಲೆನ್ಸ್ ಪದಕಗಳನ್ನು ಜಯಿಸಿದೆ.

India Ranks 10th at WorldSkills Shanghai 2026, Wins 6 Silver Medals and 20 Medallions for Excellence

ವರ್ಲ್ಡ್‌ಸ್ಕಿಲ್ಸ್ ಶಾಂಘೈ 2026 ಕೂಟದಲ್ಲಿ ಸ್ಪರ್ಧಾಳು ಮತ್ತು ಜಡ್ಜ್​ಗಳು

ಶಾಂಘೈ ಸ್ಪರ್ಧೆಯ ಮುಖ್ಯಾಂಶಗಳು

  • ದೊಡ್ಡ ತಂಡ: ಸೆಪ್ಟೆಂಬರ್ 22 ರಿಂದ 27 ರವರೆಗೆ ನಡೆದ ಈ ಅಂತರರಾಷ್ಟ್ರೀಯ ಕೂಟದಲ್ಲಿ 70 ದೇಶಗಳ 1,400 ಕ್ಕೂ ಹೆಚ್ಚು ಯುವಕರು, ಯುವತಿಯರು ಭಾಗವಹಿಸಿದ್ದರು. ಭಾರತದಿಂದ ಅದರ ಸಾರ್ವಕಾಲಿಕ ದೊಡ್ಡ ತಂಡವಾದ 70 ಸ್ಪರ್ಧಿಗಳು 63 ವಿಭಿನ್ನ ಕೌಶಲ್ಯ ಕ್ಷೇತ್ರಗಳಲ್ಲಿ ಭಾಗವಹಿಸಿದ್ದರು.
  • ಹೊಸ ಕ್ಷೇತ್ರಗಳಲ್ಲಿ ಪದಾರ್ಪಣೆ: ಈ ಬಾರಿ ಡ್ರೋನ್ ಸಿಸ್ಟಮ್ಸ್ (Unmanned Aerial Systems), ಇಂಟೆಲಿಜೆಂಟ್ ಸೆಕ್ಯುರಿಟಿ, ಸಾಫ್ಟ್‌ವೇರ್ ಟೆಸ್ಟಿಂಗ್, ಮತ್ತು ಏರ್‌ಕ್ರಾಫ್ಟ್ ಮೇಂಟೆನೆನ್ಸ್ ಸೇರಿದಂತೆ 11 ನೂತನ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತೀಯ ಸ್ಪರ್ಧಿಗಳು ಪ್ರಥಮ ಬಾರಿಗೆ ಸ್ಪರ್ಧಿಸಿದ್ದರು.
  • ಮಹಿಳಾ ಪ್ರಾತಿನಿಧ್ಯ: ಕೆಮಿಕಲ್ ಲ್ಯಾಬ್, ಲಾಜಿಸ್ಟಿಕ್ಸ್, ಫ್ಯಾಷನ್ ಟೆಕ್ನಾಲಜಿ ಮತ್ತು ಹೆಲ್ತ್ ಕೇರ್ ವಲಯಗಳಲ್ಲಿ ಮಹಿಳಾ ಸ್ಪರ್ಧಿಗಳ ಭಾಗವಹಿಸುವಿಕೆ ಪ್ರಮುಖ ಆಕರ್ಷಣೆಯಾಗಿತ್ತು.

ಇದನ್ನೂ ಓದಿ: ಭಾರತಕ್ಕೆ ಬರಲಿದೆ ಆಪಲ್ ಪೇ; ಯುಪಿಐ ಇಲ್ಲದೆ ಇದು ಹೇಗೆ ಕೆಲಸ ಮಾಡಲಿದೆ?

ಭಾರತೀಯ ತಂಡದ ಈ ಐತಿಹಾಸಿಕ ಸಾಧನೆಯನ್ನು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಕೇಂದ್ರ ಸಚಿವ ಜಯಂತ್ ಚೌಧರಿ ಅವರು ಶ್ಲಾಘಿಸಿದ್ದಾರೆ.

“ವರ್ಲ್ಡ್‌ಸ್ಕಿಲ್ಸ್ ಶಾಂಘೈ 2026 ರಲ್ಲಿ 6 ಬೆಳ್ಳಿ ಪದಕ ಮತ್ತು 20 ಮೆಡಾಲಿಯನ್ ಗಳಿಸಿರುವುದು ಜಾಗತಿಕ ಮಟ್ಟದಲ್ಲಿ ನಮ್ಮ ಕೌಶಲ್ಯ ಪಯಣದ ದೊಡ್ಡ ಜಿಗಿತವಾಗಿದೆ. ಪದಕಗಳಿಗಿಂತ ಮಿಗಿಲಾಗಿ ನಮ್ಮ ಯುವಕರು ಪ್ರದರ್ಶಿಸಿದ ಆತ್ಮವಿಶ್ವಾಸ ಮತ್ತು ಕೌಶಲ್ಯದ ನಿಖರತೆ ಹೆಮ್ಮೆ ತಂದಿದೆ. ಭವಿಷ್ಯದ ತಂತ್ರಜ್ಞಾನಗಳಿಗೆ ಸೂಕ್ತವಾದ ಕೌಶಲ್ಯ ವ್ಯವಸ್ಥೆಯನ್ನು ಭಾರತದಲ್ಲಿ ಕಟ್ಟಲು ಇದು ಪ್ರೇರಣೆಯಾಗಿದೆ” ಎಂದು ಸಚಿವರು ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (MSDE) ಅಡಿಯಲ್ಲಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮವು (NSDC) ಈ ನಿಯೋಗದ ಸಂಪೂರ್ಣ ಉಸ್ತುವಾರಿಯನ್ನು ವಹಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us