AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ 2047ಕ್ಕೆ ಉನ್ನತ ಆದಾಯದ ದೇಶವಾಗಲು ಏನೇನು ಮಾಡಬೇಕು? ವಿಶ್ವಬ್ಯಾಂಕ್ ಸಲಹೆಗಳಿವು…

World Bank's recommendations for India to become high income country: ಭಾರತ 2047ರೊಳಗೆ ಶ್ರೀಮಂತ ದೇಶವಾಗಬೇಕೆಂದರೆ ಅದರ ಜಿಎನ್​ಐ ತಲಾದಾಯ ಎಂಟು ಪಟ್ಟು ಹೆಚ್ಚಾಗಬೇಕು. ಹಾಗಾಗಬೇಕಾದರೆ, ಮುಂದಿನ 22 ವರ್ಷ ಭಾರತದ ಜಿಡಿಪಿ ಸರಾಸರಿ ಶೇ. 7.8ರ ದರದಲ್ಲಿ ಬೆಳೆಯಬೇಕು ಎನ್ನುತ್ತದೆ ವಿಶ್ವಬ್ಯಾಂಕ್. ಮುಂಬರುವ ವರ್ಷಗಳಲ್ಲಿ ಹೂಡಿಕೆ, ಉದ್ಯೋಗ, ಉತ್ಪನ್ನಶೀಲತೆ ಹೆಚ್ಚಬೇಕು. ಮೂಲಸೌಕರ್ಯಗಳು ಮತ್ತಷ್ಟು ಸುಧಾರಣೆಗೊಳ್ಳಬೇಕು. ಇವೇ ಮುಂತಾದ ಕೆಲ ಸಲಹೆಗಳನ್ನು ವಿಶ್ವಬ್ಯಾಂಕ್ ನೀಡಿದೆ.

ಭಾರತ 2047ಕ್ಕೆ ಉನ್ನತ ಆದಾಯದ ದೇಶವಾಗಲು ಏನೇನು ಮಾಡಬೇಕು? ವಿಶ್ವಬ್ಯಾಂಕ್ ಸಲಹೆಗಳಿವು...
ಭಾರತದ ಆರ್ಥಿಕತೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 03, 2025 | 1:21 PM

Share

ನವದೆಹಲಿ, ಮಾರ್ಚ್ 3: 2047ನೇ ಇಸವಿ ಭಾರತಕ್ಕೆ ಒಂದು ಮೈಲಿಗಲ್ಲು. ಅಂದು ಭಾರತಕ್ಕೆ ಸ್ವಾತಂತ್ರ್ಯದ ಶತಮಾನೋತ್ಸವದ ಸಂಭ್ರಮ. ಅಷ್ಟರೊಳಗೆ ಭಾರತ ಮುಂದುವರಿದ ದೇಶವಾಗಬೇಕು (developed country) ಎನ್ನುವುದು ಸರ್ಕಾರದ ಮಹತ್ವಾಕಾಂಕ್ಷಿ ಗುರಿ. ಈ ವಿಚಾರದಲ್ಲಿ ವಿವಿಧ ಅಭಿಪ್ರಾಯಭೇದಗಳಿವೆ. ಕೆಲವರು ಭಾರತಕ್ಕೆ ಇಷ್ಟು ಬೇಗ ಮುಂದುವರಿದ ದೇಶವಾಗಲು ಸಾಧ್ಯವಿಲ್ಲ ಎನ್ನುತ್ತಾರೆ. ಇನ್ನೂ ಕೆಲವರು, ಉನ್ನತ ಆದಾಯದ ದೇಶವಾಗಬಹುದು (High income country) ಎನ್ನುತ್ತಾರೆ.

ಒಂದು ದೇಶವು ಉನ್ನತ ಆದಾಯದ ದೇಶ ಎನಿಸಿಕೊಳ್ಳಬೇಕಾದರೆ ಪ್ರಮುಖ ಮಾನದಂಡವೆಂದರೆ ಅದು ತಲಾದಾಯ ಮಟ್ಟದ್ದು. ವಿಶ್ವಬ್ಯಾಂಕ್ ಪ್ರಕಾರ ಜಿಎನ್​ಐ ತಲಾದಾಯ (GNI per capita) ಕನಿಷ್ಠ 14,005 ಡಾಲರ್ ಇರಬೇಕು. ಅಂದರೆ, ದೇಶದ ಒಬ್ಬ ವ್ಯಕ್ತಿಯ ಸರಾಸರಿ ಆದಾಯ ಎಷ್ಟೆಂಬುದನ್ನು ಇದು ಸೂಚಿಸುತ್ತದೆ. ಭಾರತದ ಜಿಎನ್​ಐ ತಲಾದಾಯ 2,500 ಡಾಲರ್ ಆಸುಪಾಸಿನ ಮಟ್ಟದಲ್ಲಿ ಇದೆ. ಇದು ಕನಿಷ್ಠ ಎಂಟು ಪಟ್ಟಾದರೂ ಹೆಚ್ಚಾಗಬೇಕು.

ಇದನ್ನೂ ಓದಿ: ಇನ್ನೂ ಬಾಕಿ ಇದೆ ಮಾರುಕಟ್ಟೆ ಕುಸಿತ; ವಾಹನ, ಎಫ್​ಎಂಸಿಜಿ, ಬ್ಯಾಂಕ್ ಸೆಕ್ಟರ್ ಹುಷಾರ್: ಜೈ ಬಾಲಾ

ಭಾರತಕ್ಕೆ ಈ ಗುರಿ ತಲುಪಲು ಸಾಧ್ಯವಾ?

ವಾಸ್ತವದಲ್ಲಿ ಇದು ಸಾಧ್ಯವೇ? ವಿಶ್ವಬ್ಯಾಂಕ್ ಪ್ರಕಾರ ಭಾರತ 2047ರೊಳಗೆ ಹೈ ಇನ್ಕಮ್ ದೇಶ ಎನಿಸಬೇಕಾದರೆ ವರ್ಷಕ್ಕೆ ಸರಾಸರಿ ಶೇ. 7.8ರ ದರದಲ್ಲಿ ಆರ್ಥಿಕತೆ ಬೆಳವಣಿಗೆ ಹೊಂದಬೇಕು. ಹಾಗಾದಲ್ಲಿ ಮಾತ್ರ ಉತ್ತಮ ಆದಾಯ ಮಟ್ಟದ ದೇಶ ಎನಿಸಬಹುದು.

2000 ವರ್ಷದಿಂದ 2024ರವರೆಗೂ ಭಾರತದ ಆರ್ಥಿಕ ಬೆಳವಣಿಗೆಯ ಸರಾಸರಿ ವೇಗ ಶೇ. 6.3ರಷ್ಟಿದೆ. ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ವೇಗದಲ್ಲಿ ಸ್ಥಿರವಾಗಿ ಬೆಳವಣಿಗೆ ಸಾಧ್ಯವಾದಲ್ಲಿ ಗುರಿ ಮುಟ್ಟಲು ಸಾಧ್ಯಿ ಎನ್ನುವುದು ತಜ್ಞರ ಅನಿಸಿಕೆ.

ಇದನ್ನೂ ಓದಿ: ಬೈಜುಸ್​ನಿಂದ ವಂಚನೆ ಎಂದ ಅಮೆರಿಕದ ಕೋರ್ಟ್; ಎಲ್ಲಾ ಸೇರಿ ಸಂಚು ರೂಪಿಸಿದ್ರು, ತನಿಖೆ ಆಗಲಿ ಎಂದ ಸಿಇಒ ಬೈಜು ರವೀಂದನ್

ಭಾರತದ ಗುರಿ ಈಡೇರಿಕೆ ಸಾಧ್ಯವಾಗಿಸಲು ವಿಶ್ವಬ್ಯಾಂಕ್ ಸಲಹೆಗಳಿವು..

  1. ಮುಂದಿನ 22 ವರ್ಷ ಭಾರತದ ಜಿಡಿಪಿ ದರ ಸರಾಸರಿ ಶೇ. 7.8ರಷ್ಟಿರಬೇಕು.
  2. ಒಟ್ಟಾರೆ ಹೂಡಿಕೆಯು ಸದ್ಯ ಜಿಡಿಪಿಯ ಶೇ. 33.5ರಷ್ಟಿದೆ. 2035ರೊಳಗೆ ಇದು ಶೇ. 40ಕ್ಕೆ ಏರಿಕೆ ಆಗಬೇಕು.
  3. ಕಾರ್ಮಿಕರು, ಅಥವಾ ಉದ್ಯೋಗಿಗಳ ಪ್ರಮಾಣ ಈಗ ಶೇ. 56.4 ಇದೆ. ಇದು ಶೇ. 65ಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ಏರಬೇಕು. ಮಹಿಳಾ ಉದ್ಯೋಗಿಗಳು ಹೆಚ್ಚಬೇಕು.
  4. ಎಲ್ಲಾ ಸೆಕ್ಟರ್​ಗಳಲ್ಲೂ ಉತ್ಪನ್ನಶೀಲತೆ ಹೆಚ್ಚುವಂತಾಗಲು ರಚನಾತ್ಮಕ ಸುಧಾರಣೆಗಳನ್ನು ಜಾರಿಗೆ ತರಬೇಕು.
  5. ಆಮದು ಸುಂಕವನ್ನು ಇಳಿಸಬೇಕು. ಮುಕ್ತ ವ್ಯಾಪಾರಕ್ಕೆ ಉತ್ತೇಜನ ನೀಡಬೇಕು.
  6. ಹೂಡಿಕೆ ಸ್ನೇಹಿ ವಾತಾವರಣ ನಿರ್ಮಿಸಬೇಕು. ಉದ್ಯಮ ಮತ್ತು ವ್ಯವಹಾರಗಳಿಗೆ ಆಡಳಿತಾತ್ಮಕ ಸಂಕೀರ್ಣ ನಿಯಮಗಳು ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಸರಳ ಆಡಳಿತ ವ್ಯವಸ್ಥೆ ಇರಬೇಕು.
  7. ರಸ್ತೆ, ರೈಲ್ವೆ, ಬಂದರು, ಏರ್ಪೋರ್ಟ್ ಇತ್ಯಾದಿ ಇನ್​ಫ್ರಾಸ್ಟ್ರಕ್ಚರ್ ಅನ್ನು ಉತ್ತಮಪಡಿಸುವುದರಿಂದ ಜಾಗತಿಕ ಮ್ಯಾನುಫ್ಯಾಕ್ಚರಿಂಗ್ ಉದ್ದಿಮೆಗಳನ್ನು ಆಕರ್ಷಿಸಬಹುದು. ಭಾರತವು ಜಾಗತಿಕ ಸರಬರಾಜು ಸರಪಳಿಯ ಪ್ರಮುಖ ಭಾಗವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ