ಚೀನಾದಿಂದ ಬ್ಯಾಕ್ಟೀರಿಯಾ ಬಳಸಿ ಬ್ಯಾಟರಿ; ಭಾರತದಿಂದ ಗಾಳಿಯಿಂದಲೇ ಬ್ಯಾಟರಿ; ಹೊಸ ಆವಿಷ್ಕಾರ?
Zinc-Air battery tech by IISc scientists: ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಸಂಶೋಧಕರು ವಿನೂತನ ಬ್ಯಾಟರಿಯೊಂದನ್ನು ಆವಿಷ್ಕರಿಸಿದ್ದಾರೆ. ಇದು ಜಿಂಕ್ ಮತ್ತು ಆಕ್ಸಿಜನ್ ರಿಯಾಕ್ಷನ್ ಬಳಸಿ ವಿದ್ಯುತ್ ಶಕ್ತಿ ಒದಗಿಸಬಲ್ಲುದು. ಈ ಬ್ಯಾಟರಿಯ ವಿಶೇಷತೆ ಎಂದರೆ, ಇದು ಉಪ ಉತ್ಪನ್ನವಾಗಿ ನೀರಿನ ಬದಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಒದಗಿಸುತ್ತದೆ.

ಬೆಂಗಳೂರು, ಸೆಪ್ಟೆಂಬರ್ 11: ಚೀನಾ ವಿಜ್ಞಾನಿಗಳು ಬ್ಯಾಕ್ಟಿಯಾಗಳನ್ನು ಬಳಸಿ ಪರಿಸರಕ್ಕೆ ಹೆಚ್ಚು ಹಾನಿಯಾಗದಂತಹ ಬ್ಯಾಟರಿಯನ್ನು ಕಂಡು ಹಿಡಿದಿರುವ ಸುದ್ದಿ ವಿಜ್ಞಾನ ವಲಯದಲ್ಲಿ ಅಚ್ಚರಿ ಮೂಡಿಸಿತ್ತು. ಬೆಂಗಳೂರಿನ ಐಐಎಸ್ಸಿ ವಿಜ್ಞಾನಿಗಳು (IISc scientists) ಗಾಳಿಯನ್ನು ಬಳಸಿ ಪರಿಸರಸ್ನೇಹಿ ಎನಿಸುವ ಬ್ಯಾಟರಿ ಕಂಡು ಹಿಡಿದಿದ್ದಾರೆ. ಜಿಂಕ್ ಮತ್ತು ಗಾಳಿಯನ್ನು (Zinc-air) ಬಳಸಿ ಇದನ್ನು ತಯಾರಿಸಲಾಗಿದೆ. ಈ ಬ್ಯಾಟರಿ ಪ್ರಕ್ರಿಯೆಯಲ್ಲಿ ಹೊರಬರುವ ಬೈಪ್ರಾಡಕ್ಟ್ ನೀರು ಬದಲು ಹೈಡ್ರೋಜನ್ ಪೆರಾಕ್ಸೈಡ್ (H2O2 – Hydrogen Peroxide) ಆಗಿರುತ್ತದೆ ಎಂಬುದು ಈ ಬ್ಯಾಟರಿಯ ವಿಶೇಷತೆ ಆಗಿದೆ.
ಗಾಳಿಯಿಂದ ಬ್ಯಾಟರಿ ಶಕ್ತಿ ಹೇಗೆ ಸಾಧ್ಯ?
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಸಂಶೋಧಕಿ ಅನಿಂದಾ ಜೆ ಭಟ್ಟಾಚಾರ್ಯ ಮತ್ತವರ ತಂಡದವರು ಜಿಂಕ್ ಮತ್ತು ಗಾಳಿ ಸಹಾಯದಿಂದ ಬ್ಯಾಟರಿ ಅಭಿವೃದ್ಧಿಪಡಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ.
ಇದನ್ನೂ ಓದಿ: ಎಚ್ಎಎಲ್ಗೆ ಹೊಸ ಜಿಇ-404 ಎಂಜಿನ್; ಭಾರತೀಯ ಸೇನೆಗೆ ಸದ್ಯದಲ್ಲೇ ಹೊಸ ತೇಜಸ್ ಎಂಕೆ1ಎ ಯುದ್ಧವಿಮಾನಗಳು
ಈ ಬ್ಯಾಟರಿಯಲ್ಲಿ ಜಿಂಕ್ ಅನ್ನು ಆನೋಡ್ ಆಗಿಯೂ, ಗಾಳಿಯಲ್ಲಿರುವ ಆಮ್ಲಜನಕವನ್ನು ಕ್ಯಾತೋಡ್ ಆಗಿಯೂ ಬಳಸಿಕೊಳ್ಳಲಾಗುತ್ತದೆ. ಬ್ಯಾಟರಿ ಡಿಸ್ಚಾರ್ಜ್ ಆದಾಗ ಕ್ಯಾತೋಡ್ನಲ್ಲಿರುವ ಆಕ್ಸಿಜನ್ ತಗ್ಗುತ್ತದೆ. ಸಾಮಾನ್ಯವಾಗಿ ಇದು ನೀರಾಗಿ ಪರಿವರ್ತಿತವಾಗುತ್ತದೆ. ಐಐಎಸ್ಸಿ ವಿಜ್ಞಾನಿಗಳು ಕೆಲ ಕೆಟಲಿಸ್ಟ್ಗಳನ್ನು ಬಳಸಿ, ಆಕ್ಸಿಜನ್ನ ಕೆಲ ಭಾಗವು ಹೈಡ್ರೋಜನ್ ಪೆರಾಕ್ಸೈಡ್ ಆಗಿ ಪರಿವರ್ತನೆಗೊಳ್ಳುವಂತೆ ಮಾಡುತ್ತದೆ. ಇದು ಈ ಬ್ಯಾಟರಿಯ ವಿಶೇಷತೆ.
ಹೈಡ್ರೋಜನ್ ಪೆರಾಕ್ಸೈಡ್ ಆದರೆ ಏನು ಉಪಯೋಗ?
ನೀರಿನ ಶುದ್ಧೀಕರಣ, ಜವಳಿ ತ್ಯಾಜ್ಯ ಶುದ್ಧೀಕರಣ ಇತ್ಯಾದಿ ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಈ ಹೈಡ್ರೋಜನ್ ಪೆರಾಕ್ಸೈಡ್ ಪಡೆಯಲು ಪಲ್ಲಾಡಿಯಂ ಇತ್ಯಾದಿ ದುಬಾರಿ ಮತ್ತು ಅಮೂಲ್ಯ ಲೋಹಗಳ ಅವಶ್ಯಕತೆ ಇರುತ್ತದೆ. ಆದರೆ, ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಬ್ಯಾಟರಿಯು ಪಲ್ಲಾಡಿಯಂ ಬಳಕೆ ಇಲ್ಲದೇ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಉಪ ಉತ್ಪನ್ನವಾಗಿ ನೀಡುತ್ತದೆ.
ಇದನ್ನೂ ಓದಿ: ಇಲಾನ್ ಮಸ್ಕ್ ಔಟ್; ಮೊದಲ ಬಾರಿಗೆ ವಿಶ್ವದ ನಂಬರ್ ಒನ್ ಶ್ರೀಮಂತ ಎನಿಸಿದ ಲ್ಯಾರಿ ಎಲಿಸನ್
ಈ ಜಿಂಕ್-ಏರ್ ಬ್ಯಾಟರಿ ಮಾರುಕಟ್ಟೆಗೆ ಬಂದಿದೆಯಾ?
ಇಲ್ಲ, ಜಿಂಕ್ ಮತ್ತು ಗಾಳಿ ಸಹಾಯದಿಂದ ಬ್ಯಾಟರಿ ನಿರ್ಮಾಣ ಮಾಡುವುದನ್ನು ವಿಜ್ಞಾನಿಗಳು ಇನ್ನೂ ಲ್ಯಾಬ್ ಹಂತದಲ್ಲಿ ಆವಿಷ್ಕರಿಸಿದ್ಧಾರೆ. ಈ ಸಾಧ್ಯತೆ ಇರುವುದು ದೃಢಪಟ್ಟಿದೆ. ಆದರೆ, ಇನ್ನೂ ಸಾಕಷ್ಟು ಪ್ರಾಯೋಗಿಕ ಪರೀಕ್ಷೆಗಳಾಗಬೇಕಿದೆ. ಆದರೆ, ಇದೇನಾದರೂ ಯಶಸ್ವಿಯಾದಲ್ಲಿ ಹೊಸ ತಂತ್ರಜ್ಞಾನ ಆವಿಷ್ಕಾರದಲ್ಲಿ ಭಾರತವೂ ಗಂಭೀರ ಆಟಗಾರ ಎನಿಸಿಕೊಳ್ಳಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




