ಮೊದಲ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಭರ್ಜರಿ ಶೇ. 7.8 ಏರಿಕೆ; ಅದ್ಭುತ ಸಾಧನೆ ಎಂದ ಪ್ರಧಾನಿ ಮೋದಿ

PM Modi hails India's GDP growth of 7.8pc growth in 2026 April-June quarter: ಭಾರತದ ಆರ್ಥಿಕತೆಯು ಮೊದಲ ತ್ರೈಮಾಸಿಕವಾದ ಏಪ್ರಿಲ್-ಜೂನ್ ಅವಧಿಯಲ್ಲಿ ಶೇ. 7.8ರಷ್ಟು ಅಚ್ಚರಿ ಬೆಳವಣಿಗೆ ಸಾಧಿಸಿದೆ. ಇದು ಆರ್​ಬಿಐ ಒಳಗೊಂಡಂತೆ ಹೆಚ್ಚಿನ ಏಜೆನ್ಸಿಗಳು, ಆರ್ಥಿಕ ತಜ್ಞರು ನಿರೀಕ್ಷಿಸಿದುದಕ್ಕಿಂತಲೂ ಉತ್ತಮ ಬೆಳವಣಿಗೆ ದರವಾಗಿದೆ. ಕಳೆದ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್​ನಲ್ಲಿ ಕಂಡ ಬೆಳವಣಿಗೆಯೇ ವರ್ಷದ ಮೊದಲ ಕ್ವಾರ್ಟರ್​ನಲ್ಲಿ ದಾಖಲಾಗಿದೆ.

ಮೊದಲ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಭರ್ಜರಿ ಶೇ. 7.8 ಏರಿಕೆ; ಅದ್ಭುತ ಸಾಧನೆ ಎಂದ ಪ್ರಧಾನಿ ಮೋದಿ
ನರೇಂದ್ರ ಮೋದಿ
Image Credit source: Getty Images and Youtube

Updated on: Aug 31, 2026 | 6:14 PM

ನವದೆಹಲಿ, ಆಗಸ್ಟ್ 31: ಪ್ರಸಕ್ತ 2026-27ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಭಾರತದ ಆರ್ಥಿಕತೆಯು ಶೇ. 7.8 ರಷ್ಟು ಜಿಡಿಪಿ (GDP) ಬೆಳವಣಿಗೆ ಸಾಧಿಸುವ ಮೂಲಕ ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. ಜಾಗತಿಕವಾಗಿ ಯುದ್ಧ, ಆರ್ಥಿಕ ಹಿನ್ನಡೆ ಹಾಗೂ ವಿವಿಧ ಬಿಕ್ಕಟ್ಟುಗಳ ನಡುವೆಯೂ ಭಾರತ ನಿರೀಕ್ಷೆಮೀರಿದ ವೇಗದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸಿದೆ. ಭಾರತದ ಆರ್ಥಿಕತೆ ತೋರಿದ ಬೆಳವಣಿಗೆ ಬಗ್ಗೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ವಿನಾಶವಾಗುತ್ತೆಂದು ಹೇಳುತ್ತಿದ್ದವರೇ ವಿನಾಶವಾದರು ಎಂದು ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ (2025ರ ಏಪ್ರಿಲ್-ಜೂನ್) ಭಾರತದ ಜಿಡಿಪಿ ಶೇ. 6.9ರಷ್ಟು ಏರಿತ್ತು. ಹಿಂದಿನ ಕ್ವಾರ್ಟರ್​ನಲ್ಲಿ (2026ರ ಜನವರಿ-ಮಾರ್ಚ್) ಜಿಡಿಪಿ ಬೆಳವಣಿಗೆ ದರ ಶೇ. 7.8ರಷ್ಟು ಇತ್ತು. ಅದೇ ದರವನ್ನು ಹೊಸ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಕಾಯ್ದುಕೊಂಡಿದೆ.

ಇದನ್ನೂ ಓದಿ: ಜೊಮಾಟೊದಲ್ಲಿ ‘ಅನಲಾಗ್ ಡೈರಿ’ ಆಹಾರ ಪದಾರ್ಥಗಳಿಗೆ ನಿಷೇಧ: ಗ್ರಾಹಕರು ಮತ್ತು ರೆಸ್ಟೋರೆಂಟ್‌ಗಳ ಮೇಲಾಗುವ ಪರಿಣಾಮಗಳು

ಇನ್ನು, ಜಿವಿಎ (Gross Value Added) ಅಥವಾ ಸಮಗ್ರ ಆರ್ಥಿಕ ಮೌಲ್ಯವು ಶೇ. 8.2ರಷ್ಟಿದೆ. ಜಿವಿಎ ಎಂಬುದು, ತೆರಿಗೆ ಹಾಗೂ ಸಬ್ಸಿಡಿಗಳನ್ನು ಕಳೆದು ಉಳಿಯುವ ಆರ್ಥಿಕ ಮೌಲ್ಯ. ಇದು ಹಿಂದಿನ ತ್ರೈಮಾಸಿಕಕ್ಕಿಂತ 50 ಮೂಲಾಂಕಗಳಷ್ಟು ಕಡಿಮೆ ಆಗಿದ್ದರೂ, ಹಿಂದಿನ ವರ್ಷದಕ್ಕೆ ಹೋಲಿಸಿದರೆ ಉತ್ತಮ ಬೆಳವಣಿಗೆ ಸಾಧಿಸಿದೆ.

ಬಲವಾದ ಸೇವಾ ಮತ್ತು ತಯಾರಿಕಾ ವಲಯ: ಸೇವಾ ವಲಯ (Services Sector) ಮತ್ತು ತಯಾರಿಕಾ ರಂಗದಲ್ಲಿ (Manufacturing Sector) ಕಂಡುಬಂದ ಬಲವಾದ ಚೇತರಿಕೆಯು ಈ ಭಾರಿ ಜಿಡಿಪಿ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ.

ಖಾಸಗಿ ಬಳಕೆ ಮತ್ತು ಮೂಲಸೌಕರ್ಯ ಹೂಡಿಕೆ: ದೇಶೀಯ ಮಾರುಕಟ್ಟೆಯಲ್ಲಿ ಖಾಸಗಿ ಬಳಕೆ ಹೆಚ್ಚಾಗಿರುವುದು ಹಾಗೂ ಕೇಂದ್ರ ಸರ್ಕಾರವು ಮೂಲಸೌಕರ್ಯ (Infrastructure) ಅಭಿವೃದ್ಧಿಗೆ ಭಾರಿ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವುದು ಆರ್ಥಿಕತೆಗೆ ಬಲ ನೀಡಿದೆ.

ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ಎಲ್ಲಾ ವ್ಯಕ್ತಿಗಳಿಗೂ ಉಚಿತ ಎಐ ಸೇವೆ; ಟೋಕನ್​ಗಳಿಗೂ ಮಿತಿ ಇಲ್ಲ

ದೇಶೀಯ ಮತ್ತು ಜಾಗತಿಕ ಸವಾಲುಗಳ ನಡುವೆಯೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಂದಾಜಿಸಿದ್ದಕ್ಕಿಂತ ಹೆಚ್ಚಿನ ದರದಲ್ಲಿ ಭಾರತದ ಜಿಡಿಪಿ ವೃದ್ಧಿಯಾಗಿದೆ. ಪ್ರಪಂಚದ ಪ್ರಮುಖ ದೊಡ್ಡ ಆರ್ಥಿಕತೆಗಳು ಹಿಂಜರಿತದ ಭೀತಿಯಲ್ಲಿದ್ದರೆ, ಭಾರತದ ಈ ಕ್ಷಿಪ್ರ ಪ್ರಗತಿಯು ಜಾಗತಿಕ ಹೂಡಿಕೆದಾರರ ಗಮನ ಸೆಳೆದಿದೆ.

ಈ ದೃಢವಾದ ಆರ್ಥಿಕ ಬೆಳವಣಿಗೆಯು ಮುಂದಿನ ತ್ರೈಮಾಸಿಕಗಳಲ್ಲೂ ದೇಶದ ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕಾ ಪ್ರಗತಿಗೆ ಧನಾತ್ಮಕ ವೇಗ ನೀಡಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಿಡಿಪಿ ಬೆಳವಣಿಗೆ ಬಗ್ಗೆ ನರೇಂದ್ರ ಮೋದಿ ಸಮಾಧಾನ

‘ಭಾರತ ಸಾಧಿಸಿದ ಶೇ. 7.8 ಜಿಡಿಪಿ ಬೆಳವಣಿಗೆ ಅಸಾಧಾರಣವಾದುದು. ತೈಲ ಬೆಲೆ ಆಘಾತ, ಪೂರೈಕೆ ಸರಪಳಿ ಸಮಸ್ಯೆ ನಡುವೆ ಭಾರತ ಈ ಪರಿ ಬೆಳವಣಿಗೆ ಸಾಧಿಸಲು ಜನತೆಯ ಬಲ ಕಾರಣ. ಆರ್ಥಿಕತೆ ಬಗ್ಗೆ ವಿನಾಶದ ಮಾತುಗಳನ್ನಾಡುತ್ತಿರುವವರು ವಿನಾಶವಾಗಿದ್ದಾರೆ. ಭಾರತ ಮತ್ತೆ ಅರಳಿದೆ’ ಎಂದು ಪ್ರಧಾನಿಗಳು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:49 pm, Mon, 31 August 26

Loading...
Unable to load recommendations.
Follow Us