
ನವದೆಹಲಿ, ಮೇ 27: ಭಾರತದ ಒಟ್ಟಾರೆ ರಫ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ 1 ಟ್ರಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತೀಯ ರಫ್ತು ಸಂಘಟನೆಗಳ ಮಹಾ ಒಕ್ಕೂಟದ (FIEO) ಪ್ರಕಾರ 2025-26ರ ಹಣಕಾಸು ವರ್ಷದಲ್ಲಿ ಭಾರತದ ರಫ್ತು 1 ಟ್ರಿಲಿಯನ್ ಡಾಲರ್ ತಲುಪುವ ನಿರೀಕ್ಷೆ ಇದೆ. ಇಲ್ಲಿ ಸರಕು ಮತ್ತು ಸೇವೆಗಳೆರಡರ ರಫ್ತನ್ನೂ ಒಳಗೊಳ್ಳಲಾಗಿದೆ. ಕಳೆದ ಕೆಲ ವರ್ಷಗಳಿಂದ ರಫ್ತು ಗಣನೀಯವಾಗಿ ಏರಿಕೆ ಆಗುತ್ತಾ ಬಂದಿರುವುದು ಗಮನಾರ್ಹ.
2023ರಲ್ಲಿ ಭಾರತದ ರಫ್ತು 776 ಬಿಲಿಯನ್ ಡಾಲರ್ ಇತ್ತು. 2024-25ರಲ್ಲಿ ಅದು 825 ಬಿಲಿಯನ್ ಡಾಲರ್ಗೆ ಏರಿದೆ. ಈ ಹಣಕಾಸು ವರ್ಷದಲ್ಲಿ ಒಂದು ಟ್ರಿಲಿಯನ್ ಡಾಲರ್ ಮುಟ್ಟುವ ಸಂಭಾವ್ಯತೆ ಹೆಚ್ಚಿದೆ. ಅತಿ ಹೆಚ್ಚು ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ 2023ರಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ 2024ರಲ್ಲಿ 8ನೇ ಸ್ಥಾನಕ್ಕೇರಿದೆ. ಭಾರತಕ್ಕಿಂತ ಪಟ್ಟಿಯಲ್ಲಿ ಮೇಲಿರುವ ಜಪಾನ್ ಮತ್ತು ನೆದರ್ಲ್ಯಾಂಡ್ಸ್ ದೇಶಗಳ ರಫ್ತು ಇತ್ತೀಚೆಗೆ ಕುಸಿಯುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ 2025ರಲ್ಲಿ ಭಾರತವು ರಫ್ತು ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದರೆ ಅಚ್ಚರಿ ಇರುವುದಿಲ್ಲ.
ಇದನ್ನೂ ಓದಿ: ವಿಶ್ವದ ಅತಿದೊಡ್ಡ ಏರ್ಕ್ರಾಫ್ಟ್ ಕಂಪನಿ ಏರ್ಬಸ್ನ ಎಚ್125 ಹೆಲಿಕಾಪ್ಟರ್ ಘಟಕ ಕರ್ನಾಟಕಕ್ಕೆ
ರಫ್ತು ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಸಿ. ರಲ್ಹಾನ್ ಪ್ರಕಾರ 2025-26ರಲ್ಲಿ ಭಾರತದ ಸರಕು ರಫ್ತು 437 ಬಿಲಿಯನ್ ಡಾಲರ್ನಿಂದ 535 ಬಿಲಿಯನ್ ಡಾಲರ್ಗೆ ಏರಬಹುದು. ಸರ್ವಿಸ್ ರಫ್ತು 465-475 ಬಿಲಿಯನ್ ಡಾಲರ್ನಷ್ಟು ಆಗಬಹುದು ಎಂದಿದ್ಧಾರೆ. ಇದಾದರೆ ಭಾರತದ ಒಟ್ಟಾರೆ ರಫ್ತು 1 ಟ್ರಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಬಹುದು.
ಇದನ್ನೂ ಓದಿ: ಐದನೇ ತಲೆಮಾರಿನ ಫೈಟರ್ ಜೆಟ್ ನಿರ್ಮಿಸಲು ಎಎಂಸಿಎ ಯೋಜನೆಗೆ ಸರ್ಕಾರ ಚಾಲನೆ
ಕಳೆದ ಕೆಲ ವರ್ಷಗಳಿಂದ ಪೆಟ್ರೋಲಿಯಂ ಉತ್ಪನ್ನಗಳು ಭಾರತದ ಅತಿದೊಡ್ಡ ರಫ್ತು ಸರಕಾಗಿವೆ. ಈಗ ಸ್ಮಾರ್ಟ್ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ದಾಖಲೆ ಬರೆಯುತ್ತಿವೆ. ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೆಷಿನರಿ, ರಾಸಾಯನಿಕ, ಔಷಧ, ಪೆಟ್ರೋಲಿಯಂ, ಉಡುಗೆ, ಒಡವೆ, ಕೃಷಿ ಉತ್ಪನ್ನಗಳು ಭಾರತದ ರಫ್ತನ್ನು ಈ ವರ್ಷ ಹೆಚ್ಚಾಗುವಂತೆ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Tue, 27 May 25