ಗ್ರಾಹಕರನ್ನು ವಂಚಿಸುವ ಡಾರ್ಕ್ ಪ್ಯಾಟರ್ನ್ಸ್; ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
Govt war on dark patterns that undermine trust on digital platforms: ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಗ್ರಾಹಕರನ್ನು ವಂಚಿಸುವ ಪ್ರಮುಖ 13 ವಿಧದ ಡಾರ್ಕ್ ಪ್ಯಾಟರ್ನ್‌ಗಳನ್ನು ಸರ್ಕಾರ ಗುರುತಿಸಿದೆ. ಇವುಗಳಿಗೆ ಕಡಿವಾಣ ಹಾಕುವ ಮಾರ್ಗೋಪಾಯ ಹುಡುಕಲು ಮೇ 28ರಂದು ಉನ್ನತ ಮಟ್ಟದ ಸಭೆ ನಡೆಯಲಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ ಪ್ರಮುಖ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ನವದೆಹಲಿ, ಮೇ 27: ಡಿಜಿಟಲ್ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಯಾಮಾರಿಸುವ ಹಲವು ವಿಧದ ವಂಚನೆಗಳು ಬೆಳಕಿಗೆ ಬರುತ್ತಲೇ ಇವೆ. ಗ್ರಾಹಕರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುವುದು, ಪ್ರಲೋಬನೆಯೊಡ್ಡಿ ವಂಚನೆ ಮಾಡುವುದು ಇತ್ಯಾದಿ ಘಟನೆಗಳು ಸಾಕಷ್ಟು ವರದಿಯಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಟ್ಟುನಿಟ್ಟಾದ ಕ್ರಮ ಕಂಡುಕೊಳ್ಳಲು ಮುಂದಾಗಿದೆ. ಗ್ರಾಹಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದಾದ 13 ಡಾರ್ಕ್ ಪ್ಯಾಟರ್ನ್‌ಗಳನ್ನು (Dark Patterns) ಸರ್ಕಾರ ಗುರುತಿಸಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ನೇತೃತ್ವದಲ್ಲಿ ದೆಹಲಿಯಲ್ಲಿ ನಾಳೆ (ಮೇ 28) ಉನ್ನತ ಮಟ್ಟದ ಸಭೆ ನಡೆಯಲಿದೆ.
ಇ ಕಾಮರ್ಸ್ ವೇದಿಕೆಗಳಲ್ಲಿನ ವ್ಯಾಪಾರ-ವಹಿವಾಟುಗಳ ಬಗ್ಗೆ ವಿವಿಧ ರೀತಿಯ ದೂರುಗಳು ಬರುತ್ತಿವೆ. ಕೆಲವವೊಂದು ಕರಾಳ ಮಾದರಿಗಳ (ಡಾರ್ಕ್ ಪ್ಯಾಟರ್ನ್) ಬಗ್ಗೆ ಗ್ರಾಹಕರಲ್ಲಿ ತೀವ್ರ ಅಸಮಾಧಾನ ಮೂಡಿದೆ. ಹಾಗಾಗಿ ಗ್ರಾಹಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಂಶಗಳ ಕುರಿತು ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆ: ಚೀನಾದ ಶಿಯೋಮಿಯನ್ನು ಹಿಂದಿಕ್ಕಿದ ಐಫೋನ್
ಆಹಾರ, ಪ್ರಯಾಣ, ಸೌಂದರ್ಯ ವರ್ಧಕಗಳು, ಔಷಧಾಲಯ, ರೀಟೇಲ್, ಬಟ್ಟೆ ಮತ್ತು ಎಲೆಕ್ಟ್ರಾನಿಕ್ಸ್ ವಲಯಗಳಲ್ಲಿನ ಪ್ರಮುಖ ಇ-ಕಾಮರ್ಸ್ ವೇದಿಕೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಮೆಜಾನ್, ಫ್ಲಿಪ್‌ಕಾರ್ಟ್, 1mg.com, ಆಪಲ್, ಬಿಗ್‌ಬಾಸ್ಕೆಟ್, ಮಿಶೋ (Meesho), ಮೆಟಾ, ಮೇಕ್ ಮೈಟ್ರಿಪ್, ಪೇಟಿಎಂ, ಓಲಾ, ರಿಲಯನ್ಸ್ ರಿಟೇಲ್ ಲಿಮಿಟೆಡ್, ಸ್ವಿಗ್ಗಿ, ಜೊಮಾಟೊ, ಯಾತ್ರಾ, ಊಬರ್, ಟಾಟಾ, ಈಸ್‌ಮೈಟ್ರಿಪ್, ಕ್ಲಿಯರ್ ಟ್ರಿಪ್, ಇಂಡಿಯಾ ಮಾರ್ಟ್, ಇಂಡಿಗೊ ಏರ್‌ಲೈನ್ಸ್, ಕ್ಸಿಗೊ, ಜಸ್ಟೀಸ್ ಡಿಯಲ್, ಮೆಡಿಕಾ ಬಜಾರ್, ನೆಟ್‌ಮೆಡ್ಸ್, ಒಎನ್‌ಡಿಸಿ, ಥಾಮಸ್ ಕುಕ್ ಮೊದಲಾದ ಪ್ರಮುಖ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಮುಖ ಕೈಗಾರಿಕಾ ಸಂಸ್ಥೆಗಳು, ಸ್ವಯಂ ಸೇವಾ ಗ್ರಾಹಕ ಸಂಸ್ಥೆಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಉನ್ನತ ಮಟ್ಟದ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದು, ಪಾರದರ್ಶಕ ವಹಿವಾಟು ಹಾಗೂ ಡಾರ್ಕ್ ಪ್ಯಾಟರ್ನ್‌ಗಳ ಬಗ್ಗೆ ಗ್ರಾಹಕರಲ್ಲಿರುವ ಕಳವಳ ನಿವಾರಣೆ, ಸಂಶೋಧನೆ, ನಿಯಂತ್ರಣ ಮತ್ತು ಪರಿಹಾರ ಕ್ರಮ ರೂಪಿಸುವ ನಿಟ್ಟಿನಲ್ಲಿ ಅಮೂಲ್ಯ ಸಲಹೆ, ಮಾರ್ಗದರ್ಶನ ನೀಡಲಿವೆ ಎಂದಿದ್ದಾರೆ.
ಇದನ್ನೂ ಓದಿ: ಸದ್ದಿಲ್ಲದೆ ಅನಿಲ್ ಅಂಬಾನಿ ಕಂಬ್ಯಾಕ್; ಪವರ್, ಇನ್ಫ್ರಾ, ಡಿಫೆನ್ಸ್, ಫೈನಾನ್ಸ್ ಭರ್ಜರಿ ಬ್ಯುಸಿನೆಸ್
ಏನಿದು ಡಾರ್ಕ್ ಪ್ಯಾಟರ್ನ್?
ನೀವು ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಶಾಪಿಂಗ್ ಮಾಡುವಾಗ ಏನೋ ಖರೀದಿಸಲು ಹೋಗಿ ಇನ್ನೇನೋ ಖರೀದಿಸಿರುವ ಸಂದರ್ಭಗಳು ಇರಬಹುದು. ಆಕರ್ಷಕ ಚಿತ್ರ, ಆಫರ್ ಹೆಸರಿನಲ್ಲಿ ನಿಮಗೆ ಬೇರೆಯೇ ರೀತಿಯ ಚಿತ್ರಣ ನೀಡಿ, ನಿಮಗೆ ಅಗತ್ಯವೇ ಇಲ್ಲದ ಬೇರೆಯೇ ಉತ್ಪನ್ನ ಖರೀದಿಸುವಂತೆ ಮಾಡುವ ತಂತ್ರವನ್ನೇ ಡಾರ್ಕ್ ಪ್ಯಾಟರ್ನ್ ಎನ್ನುತ್ತಾರೆ. ಇದು ಕೇವಲ ಉತ್ಪನ್ನ ಮಾರಾಟ ಮಾತ್ರವಲ್ಲ, ಎಲ್ಲಾ ವಿಧದ ವಂಚನೆಗಳೂ ಅನ್ವಯ ಆಗುತ್ತದೆ.
ಈ ರೀತಿ ವಂಚನೆಗೊಳಗಾದ ಗ್ರಾಹಕರು ಅಂತಿಮವಾಗಿ ಡಿಜಿಟಲ್ ಪ್ಲಾಟ್ಫಾರ್ಮ್ಗಳಿಂದಲೇ ದೂರವಾಗಬಹುದು. ಇದರಿಂದ ಇಕಾಮರ್ಸ್ ಮಾರುಕಟ್ಟೆಗೆ ಘಾಸಿಯಾಗಬಹುದು. ಹೀಗಾಗಿ, ಈ ವಂಚನೆಗಳಿಗೆ ಕಡಿವಾಣ ಹಾಕಲು ಸಮಗ್ರ ಕ್ರಮ ಅನ್ವೇಷಣೆಗೆ ಸರ್ಕಾರವು ಉನ್ನತ ಮಟ್ಟದ ಸಭೆ ನಡೆಸುತ್ತಿದೆ.
ಕೇಂದ್ರ ಗ್ರಾಹಕ ಇಲಾಖೆ 2023ರ ನವೆಂಬರ್ 30ರಂದು ಡಾರ್ಕ್ ಪ್ಯಾಟರ್ನ್‌ಗಳ ತಡೆಗಟ್ಟುವಿಕೆ ಕುರಿತು ಸಮಗ್ರ ಮಾರ್ಗಸೂಚಿ ಹೊರಡಿಸಿದೆ. ಇ ಕಾಮರ್ಸ್ ವೇದಿಕೆಗಳಲ್ಲಿ ಪ್ರಮುಖವಾಗಿ 13 ವಿಧದ ಡಾರ್ಕ್ ಪ್ಯಾಟರ್ನ್‌ಗಳನ್ನು ಗುರುತಿಸಿದೆ. ಫಾಲ್ಸ್ ಅರ್ಜೆನ್ಸಿ (False Urgency), ಬಾಸ್ಕೆಟ್ ಸ್ನೀಕಿಂಗ್ (Basket Sneaking), ಕನ್ಫರ್ಮ್ ಶೇಮಿಂಗ್ (Confirm Shaming), ಫೋರ್ಸ್ಡ್ ಆಕ್ಷನ್ (Forced Action), ಸಬ್‌ಸ್ಕ್ರಿಪ್ಷನ್ ಟ್ರಾಪ್ (Subscription Trap), ಇಂಟರ್‌ಫೇಸ್ ಹಸ್ತಕ್ಷೇಪ (Interface Intervention), ಬೈಟ್ ಮತ್ತು ಸ್ವಿಚ್ (Bait and Switch), ಡ್ರಿಪ್ ಪ್ರೈಸಿಂಗ್ (Drip Pricing), ಡಿಸ್ಗೈಸ್ಡ್ ಜಾಹೀರಾತು (Disguised Advertisement), ನಗ್ಗಿಂಗ್ (Nugging), ಟ್ರಿಕ್ ಪ್ರಶ್ನೆ (Trick Query), ಸಾಸ್ ಬಿಲ್ಲಿಂಗ್ (Sauce Billing) ಮತ್ತು ರೋಗ್ ಮಾಲ್‌ವೇರ್‌ಗಳು (Rogue Malware) ಒಳಗೊಂಡಿವೆ.
ಇದನ್ನೂ ಓದಿ: ಬ್ಯಾಂಕ್ ಬಿದ್ದರೂ ಮುಳಗಲ್ಲ ನಿಮ್ಮ ಹಣ; ಇನ್ಷೂರೆನ್ಸ್ ಗ್ಯಾರಂಟಿಯನ್ನು 10 ಲಕ್ಷ ರೂಗೆ ಏರಿಸಲಿದೆ ಸರ್ಕಾರ
ಈ ಎಲ್ಲವೂಗಳ ಬಗ್ಗೆಯೂ ಉನ್ನತ ಮಟ್ಟದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಮತ್ತಷ್ಟು ಕಟ್ಟುನಿಟ್ಟಿನ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವ ಪ್ರಲ್ಹಾದ್ ಜೋಷಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ